ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಲ್ಸ್‌ ಸೀಲಿಂಗ್‌ ಬೆಳಕು, ತಂಪು

Last Updated 10 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಅಂದದ ಮನೆ ನಮ್ಮದಾಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವ ಕೆಲಸ ದೊಡ್ಡದಲ್ಲ. ಆದರೆ ಮನೆಯನ್ನು ಆಧುನಿಕತೆಗೆ ತಕ್ಕಂತೆ ವಿನ್ಯಾಸಗೊಳಿಸುವುದು ಮುಖ್ಯ. ಈ ಕಾಲದ ಮಂದಿ ಅಗತ್ಯಕ್ಕಿಂತ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಮನೆ ಕಟ್ಟುವಾಗಲೇ ಒಳಾಂಗಣ ವಿನ್ಯಾಸದ ತಯಾರಿಗೆಂದೇ ಒಂದಷ್ಟು ಬಂಡವಾಳವನ್ನು ತೆಗೆದಿರಿಸಿರುತ್ತಾರೆ. 


ಮನೆಯು ಹೊರಗಡೆ ಸುಂದರವಾಗಿ ಕಾಣುವುದಲ್ಲದೇ ಒಳಗೆ ಕೂಡ ಆಕರ್ಷಕವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಂದಿನ ಮಂದಿ ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಹಿಂದೆ ಹುಲ್ಲಿನ ಹಾಸು ಹಾಕಿ ಮನೆಯ ಮೇಲ್ಚಾವಣಿಯನ್ನು ಮುಚ್ಚುತ್ತಿದ್ದರು. ನಂತರ ಆ ಜಾಗಕ್ಕೆ ನಾಡ ಹೆಂಚುಗಳು ಬಂದವು. ಆಮೇಲೆ ಸಿಮೆಂಟಿನಿಂದ ಮೇಲ್ಚಾವಣಿ ನಿರ್ಮಾಣ ಮಾಡಿದರು.

ಈ ಚಾವಣಿಗೆ ಇನ್ನಷ್ಟು ರೂಪು ನೀಡಲು ಕಾಫರ್ಡ್ ಸೀಲಿಂಗ್, ಫಿಲ್ಲರ್ಸ್‌ ಸ್ಲ್ಯಾಬ್‌ ಹೀಗೆ ಅನೇಕ ವಿಧಗಳ ಚಾವಣಿ (ಸೀಲಿಂಗ್‌) ಸಿದ್ಧಗೊಂಡವು. ಹೀಗೆ ಚಾವಣಿಗೆ ಇನ್ನಷ್ಟು, ಮತ್ತಷ್ಟು ಮೆರುಗು ನೀಡಲು ಬಂದಿರುವುದೇ ‘ಫಾಲ್ಸ್‌ ಸೀಲಿಂಗ್‌’. ಫಾಲ್ಸ್ ಸೀಲಿಂಗ್ ಅನ್ನು ‘ಡ್ರಾಪ್ಡ್‌ ಸೀಲಿಂಗ್’ ಎಂದೂ ಕರೆಯಲಾಗುತಿತ್ತು. ಮೊದಲ ಬಾರಿಗೆ ಈ ಫಾಲ್ಸ್ ಸೀಲಿಂಗ್ ಅನ್ನು ಜಪಾನ್‌ನಲ್ಲಿ ನಿರ್ಮಿಸಲಾಗಿತ್ತು. ಮೊದಲು ಫಾಲ್ಸ್ ಸೀಲಿಂಗ್  ಕೇವಲ ಒಂದೇ ರೂಪದಲ್ಲಿತ್ತು. ಜಿಪ್ಸಂ ಬೋರ್ಡ್‌ಗಳ ಮೂಲಕ ಫಾಲ್ಸ್‌ ಸೀಲಿಂಗ್ ಮಾಡಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಫಾಲ್ಸ್ ಸೀಲಿಂಗ್ ರೂಪ ಕೂಡ ಬದಲಾಯಿತು.

ಫಾಲ್ಸ್ ಸೀಲಿಂಗ್‌
ಮನೆಯ ಟೆರೇಸಿನ ಕೆಳಗೆ ಮತ್ತೊಂದು ಹೊದಿಕೆ ನಿರ್ಮಿಸುವುದು ಫಾಲ್ಸ್ ಸೀಲಿಂಗ್‌. ಮೊದಲು ಸುಮ್ಮನೆ ಮನೆಯ ಮೇಲ್ಚಾವಣಿಗೆ ವಿದ್ಯುತ್ ತಂತಿಗಳನ್ನು ಅಳವಡಿಸುವ ಸಲುವಾಗಿ ಫಾಲ್ಸ್ ಸೀಲಿಂಗ್ ಮಾಡುತ್ತಿದ್ದರು. ಆದರೆ ತಂತ್ರಜ್ಞಾನ ಹಾಗೂ ತಾಂತ್ರಿಕತೆ ಬೆಳೆದಂತೆ ಫಾಲ್ಸ್ ಸೀಲಿಂಗ್ ಹೊಸ ರೂಪವನ್ನೇ ತಾಳಿತು. ನೆಲ ಹಾಗೂ ಟೇರೆಸಿನ ನಡುವಿನ ಅಂತರವನ್ನು  ಕೂಡ ಫಾಲ್ಸ್ ಸೀಲಿಂಗ್‌ನಿಂದ ಕಡಿಮೆ ಮಾಡಬಹುದು.

ಫಾಲ್ಸ್ ಸೀಲಿಂಗ್ ಅನ್ನು ಮುಖ್ಯವಾಗಿ ಶಬ್ದ ನಿಯಂತ್ರಣಕ್ಕಾಗಿ ಅಳವಡಿಸಲಾಗುವುದು. ಧ್ವನಿ ನಿಯಂತ್ರಣ, ಫೈರ್ ಸೇಫ್ಟಿ, ಕನ್‌ಸೀಲಿಂಗ್ ವೈರ್‌, ಇಂಧನ ದಕ್ಷತೆ, ತೇವಾಂಶ ಹಾಗೂ ಉಷ್ಣಾಂಶ ನಿಯಂತ್ರಣಕ್ಕಾಗಿ  ಮನೆಯ ಮೇಲ್ಚಾವಣಿಗೆ ಫಾಲ್ಸ್‌ ಸೀಲಿಂಗ್ ಮಾಡಲಾಗುತ್ತದೆ. ತಂತ್ರಜ್ಞಾನದ ಬೆಳವಣಿಗೆಯಾದಂತೆ ವಿವಿಧ ಫಾಲ್ಸ್ ಸೀಲಿಂಗ್‌ಗಳು ಒಳಾಂಗಣ ವಿನ್ಯಾಸದ ಅಂದ ಹೆಚ್ಚಿಸುತ್ತಿವೆ.

ಮೊದಲು ಕೇವಲ ಹವಾನಿಯಂತ್ರಣ ಅಳವಡಿಕೆ, ತಂತಿ ಹಾಗೂ ಎಲ್‌ಇಡಿ ತಂತಿಗಳನ್ನು ಅಳವಡಿಸುವುದಕ್ಕಾಗಿ ಮಾಡುತ್ತಿದ್ದ ಫಾಲ್ಸ್ ಸೀಲಿಂಗ್ ಇಂದು ಅಲಂಕಾರದ ಭಾಗವಾಗಿದೆ. ಮನೆಯ ಒಳಾಂಗಣ ವಿನ್ಯಾಸಕ್ಕೆ ಹೊಸತೊಂದು ರೂಪವನ್ನು ನೀಡಬಹುದು ಎಂಬ ಉದ್ದೇಶದಿಂದ ಇಂದು ಅನೇಕರು ಮನೆಗಳಲ್ಲಿ ಫಾಲ್ಸ್ ಸೀಲಿಂಗ್ ಮೆರುಗು ನೀಡುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

ಮರದ ವಿನ್ಯಾಸದಿಂದ ಗ್ಲಾಸ್‌ವರೆಗೆ ಮತ್ತು ಫೈಬರ್‌ ವಸ್ತುಗಳಿಂದ ಪ್ಲಾಸ್ಟಿಕ್‌ವರೆಗೆ ಫಾಲ್ಸ್‌ ಸೀಲಿಂಗ್‌ಗೆ ಉಪಯೋಗಿಸುವ ವಸ್ತುಗಳು ಬದಲಾಗುತ್ತಿವೆ. ಫಾಲ್ಸ್‌ ಸೀಲಿಂಗ್‌ ಮನೆ ಅಥವಾ ಕಚೇರಿಯ ಒಳಾಂಗಣ ನೋಟಕ್ಕೊಂದು ಹೊಸ ರೂಪವನ್ನೇ ನೀಡುತ್ತದೆ. ಫಾಲ್ಸ್ ಸೀಲಿಂಗ್ ಅಳವಡಿಸುವುದರಿಂದ ಕೊಠಡಿಯಿಂದ ಶಬ್ದ ಹಾಗೂ ಧ್ವನಿಯ ಕಂಪನದ ಅಲೆ ಹೊರಗೆ ಹೋಗುವುದನ್ನು ತಪ್ಪಿಸಬಹುದು. ಮನೆಯ ಒಳಗೆ ಎರಡು ಮೂರು ಟ್ಯೂಬ್ ಲೈಟ್‌ಗಳನ್ನು ಅಳವಡಿಸುವದಕ್ಕಿಂತ ಫಾಲ್ಸ್ ಸೀಲಿಂಗ್ ಮಾಡಿ, ಎಲ್‌ಇಡಿ ಬಣ್ಣದ ದೀಪಗಳ ಮೂಲಕ ಮನೆಯನ್ನು ಅಲಂಕರಿಸಬಹುದು. 

ಫಾಲ್ಸ್ ಸೀಲಿಂಗ್ ಅನ್ನು ಶಾಖ ನಿರೋಧಕವಾಗಿ ಕೂಡ ಬಳಸಲಾಗುತ್ತದೆ. ಮರ, ಪ್ಲಾಸ್ಟರ್ ಆಫ್ ಪ್ಯಾರಿಸ್‌, ಪ್ಲೈವುಡ್‌, ಜಿಪ್ಸಮ್‌ ಹೀಗೆ ನಮ್ಮ ಬಂಡವಾಳ ಹಾಗೂ ಅಗತ್ಯಕ್ಕೆ ತಕ್ಕಂತೆ ಬಳಸಬಹುದು.  ಮೇಲ್ಚಾವಣಿ ಹಾಗೂ ಫಾಲ್ಸ್‌ ಸೀಲಿಂಗ್ ನಡುವೆ ಅಂತರವಿದ್ದು, ಗಾಳಿ ಕೋಣೆಯಲ್ಲಿ ಹರಡಿ, ಕೋಣೆಯೊಳಗಿನ ಉಷ್ಣಾಂಶವನ್ನು ತಗ್ಗಿಸುತ್ತದೆ. ಬಲ್ಬ್‌ಗಳ ಬದಲು ಎಲ್‌ಇಡಿ ಲೈಟ್‌ಗಳನ್ನು ಹೆಚ್ಚು ಬಳಸುವುದರಿಂದ ವಿದ್ಯುತ್‌ ಬಿಲ್ ಅನ್ನು ಕೂಡ ಕಡಿತಗೊಳಿಸಬಹುದು. ಏರ್ ಕಂಡೀಷನಿಂಗ್ ಅನ್ನು ಉತ್ತಮಗೊಳಿಸಲು ಕೂಡ ಫಾಲ್ಸ್ ಸೀಲಿಂಗ್ ಒಂದು ಉತ್ತಮ ವಿಧಾನ. ಫಾಲ್ಸ್ ಸೀಲಿಂಗ್ ಮನೆಯ ಒಳಾಂಗಣಕ್ಕೆ ಹೊಸದೊಂದು ಆಯಾಮವನ್ನು ಸೃಷ್ಟಿಸುವುದರೊಂದಿಗೆ, ಹೊಸ ಹಾಗೂ ವಿಭಿನ್ನ ವಿನ್ಯಾಸವನ್ನು ನೀಡುತ್ತದೆ.

ಖರ್ಚು ವೆಚ್ಚಗಳು
ಫಾಲ್ಸ್ ಸೀಲಿಂಗ್‌ನಲ್ಲಿ ಕಡಿಮೆ ಮೊತ್ತದ್ದೆಂದರೆ ಅಲ್ಯುಮಿನಿಯಮ್‌ ಬಳಸಿ ಮಾಡಲಾದ ಥರ್ಮಾಕೋಲ್‌ ಫಾಲ್ಸ್‌ ಸೀಲಿಂಗ್‌. ಇದು ಚದರ ಮೀಟರ್‌ ಒಂದಕ್ಕೆ ₹20ರಿಂದ ₹26 ಬೆಲೆಯಲ್ಲಿ ಲಭ್ಯವಿದೆ. ಆದರೆ ಇದು ಅಷ್ಟೊಂದು ಬಾಳಿಕೆ ಬರುವುದಿಲ್ಲ  ಎನ್ನುವುದು ತಜ್ಞರ ಅಭಿಪ್ರಾಯ. ಹೆಚ್ಚು ಹಣ ವ್ಯಯಿಸಲು ಸಿದ್ಧರಿರುವವರಿಗೆ ಹೊರದೇಶಗಳಿಂದ ಆಮದು ಮಾಡಿಕೊಂಡಿರುವ ‘ಆರ್ಮ್‌ಸ್ಟ್ರಾಂಗ್’ ಸೀಲಿಂಗ್ ಉಪಕರಣ ಒಳ್ಳೆಯದು. ಇದು ದೀರ್ಘ ಕಾಲ ಬಾಳಿಕೆ ಬರುತ್ತದೆ.

ಫಾಲ್ಸ್  ಸೀಲಿಂಗ್‌ನ ಉಪಯೋಗಗಳು
1) ನಿಮ್ಮ ಕೊಠಡಿಗೆ ಒಂದು ಉತ್ತಮ ವಿನ್ಯಾಸದ ನೋಟವನ್ನು ನೀಡುತ್ತದೆ. ಮನೆಯ ಮೇಲ್ಚಾವಣಿಗೆ ಅಳವಡಿಸಿದ ತಂತಿಗಳು ಫಾಲ್ಸ್ ಸೀಲಿಂಗ್‌ನಿಂದ ಮುಚ್ಚುತ್ತದೆ.

2) ಫಾಲ್ಸ್ ಸೀಲಿಂಗ್ ಗಾಳಿಯ ಧ್ವನಿಯನ್ನು ನಿಯಂತ್ರಿಸುತ್ತದೆ. ಕಟ್ಟಡದ ಕೊನೆಯ ಮಹಡಿಯಲ್ಲಿರುವವರಿಗೆ ಅಥವಾ ತಾರಸಿ ಮನೆಯವರಿಗೆ ಬೇಸಿಗೆಯಲ್ಲಿ ಸೂರ್ಯನ ಶಾಖ ನೇರವಾಗಿ ತಾಗುತ್ತದೆ. ಅಂತಹ ಸಂದರ್ಭದಲ್ಲಿ ಫಾಲ್ಸ್ ಸೀಲಿಂಗ್, ಶಾಖ ನಿಯಂತ್ರಕವಾಗಿ ಕೆಲಸ ಮಾಡುತ್ತದೆ. 

ಮುಖ್ಯವಾಗಿ ಫಾಲ್ಸ್ ಸೀಲಿಂಗ್ ಅನ್ನು ಆಫೀಸ್ ಹಾಗೂ ಮೀಟಿಂಗ್ ರೂಂಗಳಲ್ಲಿ ಅಳವಡಿಸುತ್ತಾರೆ.  ಇತ್ತೀಚಿಗೆ ಫಾಲ್ಸ್ ಸೀಲಿಂಗ್‌ನಲ್ಲಿ ಹೊಸ ಹೊಸ ವಿನ್ಯಾಸಗಳು ಮೂಡುತ್ತಿವೆ. ಫಾಲ್ಸ್ ಸೀಲಿಂಗ್‌ನಲ್ಲಿ ಬಣ್ಣದ ದೀಪಗಳು ಹಾಗೂ ವಿವಿಧ ರೀತಿಯ ಪೇಂಟಿಂಗ್‌ಗಳನ್ನು ಐಷಾರಾಮಿ ಹೋಟೆಲ್ ಹಾಗೂ ಆಫೀಸ್‌ಗಳಲ್ಲಿ ಕಾಣಬಹುದಾಗಿದೆ. ಮನದ ಪರಿಕಲ್ಪನೆಯಲ್ಲಿ ಮೂಡುವ ಚಿತ್ತಾರವನ್ನು ಕೂಡ ಫಾಲ್ಸ್ ಸೀಲಿಂಗ್‌ನಲ್ಲಿ ನೀವು ಅಳವಡಿಸಬಹುದು.

ಮನೆಗಳಲ್ಲಿ ಫಾಲ್ಸ್ ಸೀಲಿಂಗ್‌
ನಾವು ವಾಸಿಸುವ ಕೋಣೆ ಆಕರ್ಷಣೀಯವಾಗಿರಬೇಕು ಎಂಬ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಫಾಲ್ಸ್ ಸೀಲಿಂಗ್ ಅಳವಡಿಸುತ್ತಾರೆ. ವಿವಿಧ ವಿನ್ಯಾಸಗಳಲ್ಲಿ ಫಾಲ್ಸ್ ಸೀಲಿಂಗ್ ಮಾಡಲಾಗುತ್ತದೆ. ಬಣ್ಣ ಹಾಗೂ ಬೆಳಕು ಕೂಡ ಈ ಫಾಲ್ಸ್ ಸೀಲಿಂಗ್‌ನ ಒಂದು ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ 3ಡಿ ದೀಪಗಳು ಕೂಡ ಫಾಲ್ಸ್ ಸೀಲಿಂಗ್‌ನ ಮುಖ್ಯ ಭಾಗವಾಗಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT