ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ ಮಂತ್ರ ಮತ್ತು ಚಿನ್ನದ ಆಸೆ...

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ನಿನ್ನ ಜೀವನದ ಗುರಿಯೇನು ಎಂದು ಕ್ರೀಡಾಪಟು ಗಳನ್ನು ಒಮ್ಮೆ ಮಾತನಾಡಿಸಿ ನೋಡಿ. ‘ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕು’ ಎನ್ನುವ ಉತ್ತರ ಖಂಡಿತ ವಾಗಿಯೂ ಬರುತ್ತದೆ. ಈಗ ಇದೇ ಮಾತನ್ನು ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹೇಳಿದ್ದಾರೆ.

ಬೋಪಣ್ಣ, ಸಾನಿಯಾ ಮಿರ್ಜಾ, ರಾಮ ಕುಮಾರ ರಾಮನಾಥನ್‌, ಸಾಕೇತ್‌ ಮೈನೇನಿ, ಯೂಕಿ ಭಾಂಬ್ರಿ ಹೀಗೆ ಅನೇಕ ಸ್ಪರ್ಧಿಗಳು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಛಾಪು ಮೂಡಿಸಿದ್ದಾರೆ. ಸಾಕಷ್ಟು  ಹೊಸಬರು ಟೆನಿಸ್‌ ಅನ್ನು ವೃತ್ತಿಪರವಾಗಿ ಸ್ವೀಕರಿಸಿದ್ದಾರೆ. ಎದುರಾಳಿ ಆಟಗಾರ ಬೆಚ್ಚಿ ಬೀಳುವಂತೆ ಸರ್ವ್‌ ಮಾಡಬಲ್ಲ ಸಾಮರ್ಥ್ಯ 43ನೇ ವಯಸ್ಸಿನಲ್ಲಿಯೂ ಲಿಯಾಂಡರ್‌ ಪೇಸ್‌ ಉಳಿಸಿಕೊಂಡಿದ್ದಾರೆ.

ಇವರು 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಭಾರತದ ಟೆನಿಸ್ ಲೋಕದಲ್ಲಿ ಹೊಸ ಅಲೆ ಹುಟ್ಟು ಹಾಕಿದ್ದರು. ಬೋಪಣ್ಣ ಕೂಡ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಸಾಧನೆ ತೋರಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಮತ್ತು ಪೇಸ್‌ ಅವರು ಡಬಲ್ಸ್‌ನಲ್ಲಿ ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರೋಹನ್‌ ಬೋಪಣ್ಣ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ರಿಯೊ ಒಲಿಂಪಿಕ್ಸ್‌ ಆರಂಭವಾಗಲು ಕೆಲ ದಿನಗಳಷ್ಟೇ ಬಾಕಿಯಿವೆ. ಹೇಗಿದೆ ಅಂತಿಮ ಹಂತದ ತಯಾರಿ?
ಟೆನಿಸ್‌ ಆಡುವುದಕ್ಕಿಂತ ಹೆಚ್ಚಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಒತ್ತು ಕೊಡುತ್ತಿದ್ದೇನೆ. ಟೂರ್ನಿಗಳಲ್ಲಿ ಆಡಲು ಪದೇ ಪದೇ ಪ್ರವಾಸ ಮಾಡಬೇಕಾದ ಕಾರಣ ಫಿಟ್‌ನೆಸ್ ಹೊಂದಿರಬೇಕಾಗುತ್ತದೆ. ಆದ್ದರಿಂದ ಹೆಚ್ಚು ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತೇನೆ. ಒಲಿಂಪಿಕ್ಸ್‌ಗೆ ತೆರಳುವ ಮೊದಲು ಟೊರಾಂಟೊ ಟೂರ್ನಿಯಲ್ಲಿ ಆಡುತ್ತೇನೆ. ಅಲ್ಲಿ ಹಾರ್ಡ್‌ ಕೋರ್ಟ್‌ನಲ್ಲಿ ಪಂದ್ಯಗಳು ನಡೆಯುವುದರಿಂದ ಒಲಿಂಪಿಕ್ಸ್‌ಗೂ ಅಭ್ಯಾಸ ಮಾಡಿದಂತಾಗುತ್ತದೆ.

* ಹೋದ ವಾರ ಡೇವಿಸ್‌ ಕಪ್‌ನಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿ ಭಾರತ ವಿಶ್ವ ಗುಂಪಿನ ಪ್ಲೇ ಆಫ್‌ಗೆ ಅರ್ಹತೆ ಪಡೆಯಿತಲ್ಲಾ. ಇದರ ಬಗ್ಗೆ ಹೇಳಿ?
ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್‌ ಮತ್ತು ನಾನು ಒಟ್ಟಾಗಿ ಆಡಿ ಗೆಲುವು ಪಡೆದ ಬಳಿಕ ಡೇವಿಸ್‌ ಕಪ್‌ನಲ್ಲಿ ನಮ್ಮ ತಂಡದ ಗೆಲುವು ಖಚಿತವಾಯಿತು. ಆದರೆ ಇದಕ್ಕೂ ಮೊದಲು ರಾಮಕುಮಾರ್‌ ಮತ್ತು ಸಾಕೇತ್‌ ಮೈನೇನಿ ತುಂಬಾ ಚೆನ್ನಾಗಿ ಆಡಿದರು. ಮೊದಲ ದಿನವೇ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಗೆಲುವು ಪಡೆದರು. ಆ ಪಂದ್ಯದ ಜಯದ ಶ್ರೇಯ ರಾಮಕುಮಾರ್‌ ಮತ್ತು ಸಾಕೇತ್‌ಗೆ ಸಲ್ಲಬೇಕು.

* ಡೇವಿಸ್‌ ಕಪ್‌ನಲ್ಲಿ ಒಂದು ದಿನದ ಪಂದ್ಯಗಳು ಬಾಕಿ ಇರುವಾಗಲೇ ಭಾರತ ವಿಶ್ವ ಗುಂಪಿಗೆ ಅರ್ಹತೆ ಪಡೆಯಿತಲ್ಲಾ. ಇಷ್ಟೊಂದು ಸುಲಭ ಗೆಲುವನ್ನು ನಿರೀಕ್ಷೆ ಮಾಡಿದ್ದೀರಾ?
ಖಂಡಿತವಾಗಿಯೂ ಇಲ್ಲ. ದಕ್ಷಿಣ ಕೊರಿಯಾ ಕಠಿಣ ಸವಾಲು ಒಡ್ಡಬಹುದು ಎಂದು ಭಾವಿಸಿದ್ದೆವು. ಅದು ಬಲಿಷ್ಠ ತಂಡ. ಭಾರತ ಮತ್ತು ಕೊರಿಯಾ ತಂಡಗಳ ನಡುವಣ ಸೋಲು–ಗೆಲುವಿನ ದಾಖಲೆಯಲ್ಲಿಯೂ ಕೊರಿಯಾ ಮುಂದಿದೆ. ಆದರೆ ಹುಲ್ಲಿನಂಕಣದಲ್ಲಿ ಆಡಿದ್ದು ನಮಗೆ ಅನುಕೂಲವಾಯಿತು. ಒಲಿಂಪಿಕ್ಸ್‌ಗೆ ಸಜ್ಜಾಗಲು ಕೊರಿಯಾ ವಿರುದ್ಧದ ಪಂದ್ಯ ತುಂಬಾ ಮಹತ್ವದ್ದಾಗಿತ್ತು. ಆದ್ದರಿಂದ ಟೂರ್ನಿ ಆರಂಭಕ್ಕೂ ಒಂದೆರಡು ದಿನಗಳ ಮೊದಲು ಪೇಸ್‌ ಜೊತೆ ಚರ್ಚಿಸಿದ್ದೆ. ಕೊರಿಯಾದ ಡಬಲ್ಸ್ ಆಟಗಾರರನ್ನು ಹೇಗೆ ಮಣಿಸಬೇಕು ಎನ್ನುವುದರ ಬಗ್ಗೆ ಯೋಜನೆ ರೂಪಿಸಿದ್ದೆವು.

* ಒಲಿಂಪಿಕ್ಸ್‌ಗೆ ವಿಶೇಷ ತರಬೇತಿ ಪಡೆಯುತ್ತಿದ್ದೀರಾ?
ಹೌದು. ತರಬೇತಿಯ ಜೊತೆಗೆ ಹೆಚ್ಚು ಟೂರ್ನಿಗಳಲ್ಲಿ ಆಡುತ್ತಿದ್ದೇನೆ. ಅಲ್ಲಿ ಕಲಿಯುವ ಪಾಠದಿಂದ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ನೀಡಲು ನೆರವಾಗುತ್ತದೆ.

* ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಏನು ಗುರಿ ಇಟ್ಟುಕೊಂಡಿದ್ದೀರಿ?
ಪ್ರತಿ ಟೂರ್ನಿಗೆ ಹೋದಾಗಲೂ ಪ್ರಶಸ್ತಿ ಗೆಲ್ಲಲೇ ಬೇಕು ಎನ್ನುವ ಗುರಿ ಇಟ್ಟುಕೊಂಡೇ ಆಡುತ್ತೇನೆ. ರಿಯೊ ದಲ್ಲಿ ಚಿನ್ನದ ಪದಕ ಗೆಲ್ಲುವ ಆಸೆಯಿದೆ. ಅಲ್ಲಿ ಪದಕ ಗೆಲ್ಲುವುದು ನನಗಷ್ಟೇ ಅಲ್ಲ. ಇದರಿಂದ ದೇಶದ ಗೌರವವೂ ಹೆಚ್ಚಾಗುತ್ತದೆ.

* ರಿಯೊ ಡಿ ಜನೈರೊದಲ್ಲಿನ ವಾತಾವರಣ ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರುವುದೇ?
ವಿದೇಶದಲ್ಲಿ ಸಾಕಷ್ಟು ಬಾರಿ ಟೂರ್ನಿಗಳನ್ನು ಆಡಿ ರುವುದರಿಂದ ಸ್ಥಳೀಯ ವಾತಾವರಣ ಹೆಚ್ಚುಕಡಿಮೆ ಹೊಂದಾಣಿಕೆಯಾಗುತ್ತದೆ. ಆದ್ದರಿಂದ ಟೊರಾಂಟೊ ಟೂರ್ನಿ ಮುಗಿಸಿಕೊಂಡು ರಿಯೊ ಡಿ ಜನೈರೊಗೆ ಹೋಗುತ್ತೇನೆ. ಸ್ಥಳೀಯ ವಾತಾವರಣಕ್ಕೆ ಹೊಂದಿ ಕೊಳ್ಳುವ ಸಲುವಾಗಿ ಬ್ರೆಜಿಲ್‌ನಲ್ಲಿ ನಾಲ್ಕೈದು ದಿನ ಅಭ್ಯಾಸ ಮಾಡುತ್ತೇನೆ.

* ಒಲಿಂಪಿಕ್ಸ್‌ನಲ್ಲಿ  ಯಾರು ಕಠಿಣ ಎದುರಾಳಿ?
ಪ್ರತಿಯೊಬ್ಬರೂ ಕಠಿಣ ಎದುರಾಳಿಯೇ. ಅದ ರಲ್ಲಿಯೂ ವಿಶ್ವದ ಶ್ರೇಷ್ಠ ತಂಡವೆನಿಸಿರುವ ಅಮೆರಿಕದ ಬ್ರಯನ್‌ ಸಹೋದರರು ಎಲ್ಲರಿಗೂ ಪ್ರಬಲ ಪೈಪೋಟಿ ಒಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಸಿಂಗಲ್ಸ್‌ನಲ್ಲಿ ರಫೆಲ್‌ ನಡಾಲ್ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕ ಕಠಿಣ ಸ್ಪರ್ಧಿಗಳು.

* ವಿಂಬಲ್ಡನ್‌, ಡೇವಿಸ್‌ ಕಪ್‌, ಟೊರಾಂಟೊ ಹೀಗೆ ಸತತವಾಗಿ ಟೂರ್ನಿಗಳನ್ನು ಆಡುವುದು ನಿಮ್ಮ ಆಟದ ಮೇಲೆ ಪರಿಣಾಮ ಬೀರುವುದಲ್ಲವೇ?
ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಅದಕ್ಕೆ ಫಿಟ್‌ನೆಸ್‌ ಮುಖ್ಯವೆಂದು ನಾನು ಮೊದಲೇ ಹೇಳಿದ್ದು. ಫಿಟ್‌ನೆಸ್‌ ಹೊಂದಿದ್ದರೆ  ಆಡಲು ಕಷ್ಟವಾಗುವುದಿಲ್ಲ.

* ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಎಷ್ಟು ಪದಕಗಳನ್ನು ಗೆಲ್ಲಬಹುದು?
ಈ ಬಾರಿ ನಮ್ಮ ತಂಡ ತುಂಬಾ ಬಲಿಷ್ಠವಾಗಿದೆ. ಹೆಚ್ಚು ಕ್ರೀಡಾಪಟುಗಳಿದ್ದಾರೆ. ಹಿಂದಿನ ಎಲ್ಲಾ ಒಲಿಂಪಿಕ್ಸ್‌ಗಿಂತಲೂ ಈ ಬಾರಿ ಹೆಚ್ಚು ಪದಕಗಳು ಬರಲಿವೆ.

* ಡಬಲ್ಸ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಇದೇ ರೀತಿಯ ಆಟ ಸಿಂಗಲ್ಸ್‌ ವಿಭಾಗದಲ್ಲಿ ಏಕೆ ಮೂಡಿ ಬರುತ್ತಿಲ್ಲ. ತಾರತಮ್ಯ ಇದಕ್ಕೆ ಕಾರಣವೇ?
ಟೆನಿಸ್‌ಗೆ ಪ್ರಾಯೋಜಕರ ಕೊರತೆಯಿದೆ. ಆದ್ದರಿಂದ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಮುಂದು ವರಿಯಲು ಯುವ ಆಟಗಾರರು ಇಷ್ಟಪಡುವುದಿಲ್ಲ. ವ್ಯವಸ್ಥೆ ಬದಲಾಗಬೇಕಿದೆ. ಸಿಂಗಲ್ಸ್‌ ಮತ್ತು ಡಬಲ್ಸ್‌ ಎರಡಕ್ಕೂ ಸಮಾನ ಬೆಂಬಲ ಲಭಿಸಿದಾಗ ಮಾತ್ರ ಈ ಅಂತರ ಕಡಿಮೆ ಮಾಡಬಹುದು. ಇದೇ ಕಾರಣದಿಂದ ನಾನು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಡಬಲ್ಸ್‌ ವಿಭಾಗದಲ್ಲಿ ಬೇರೆ ದೇಶಗಳ ಜತೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

* ಒಲಿಂಪಿಕ್ಸ್‌ ಬಳಿಕ ನಿಮ್ಮ ಮುಂದಿರುವ ಸವಾಲುಗಳೇನು?
ಮೊದಲು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ. ನಂತರ ಅಮೆರಿಕ ಓಪನ್‌ ಟೂರ್ನಿ ಮತ್ತು ಲಂಡನ್‌ ಮಾಸ್ಟರ್ಸ್‌ ನಡೆಯಲಿದೆ. ಅಲ್ಲಿಯೂ ಪ್ರಶಸ್ತಿ ಗೆಲ್ಲುವ ಯೋಜನೆ ಹಾಕಿಕೊಂಡಿದ್ದೇನೆ.

* ಹಿಂದಿನ 10–15 ವರ್ಷಗಳಿಂದ ಭಾರತದಲ್ಲಿ ಟೆನಿಸ್ ವೇಗವಾಗಿ ಬೆಳೆಯುತ್ತಿದೆ. ಈ ಕ್ರೀಡೆಯತ್ತ ಸಾಕಷ್ಟು ಜನ ಆಸಕ್ತಿ ವಹಿಸುತ್ತಿದ್ದಾರೆ. ಇದರ ಹಿಂದಿರುವ ಗುಟ್ಟೇನು?
ಗುಣಮಟ್ಟದ ಆಟ ಇದಕ್ಕೆಲ್ಲಾ ಕಾರಣ. ಜೊತೆಗೆ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಡಬ್ಲ್ಯುಟಿಎ ಮತ್ತು ಕೆಲ ಗ್ರ್ಯಾಂಡ್ ಸ್ಲಾಮ್‌ ಟೂರ್ನಿಗಳಲ್ಲಿ ನಿರಂತರ ವಾಗಿ ಸಾನಿಯಾ ಮಿರ್ಜಾ ಪ್ರಶಸ್ತಿಗಳನ್ನು ಜಯಿಸಿದ್ದು ಕೂಡ ಭಾರತದಲ್ಲಿ ಹೊಸ ಅಲೆ ಹುಟ್ಟು ಹಾಕಿದೆ. ಇದರಿಂದ ಹೊಸ ಆಟಗಾರರಿಗೆ ಪ್ರೇರಣೆ ಸಿಕ್ಕಿದೆ. ಆದ್ದರಿಂದ ನಾನೂ ಬೆಂಗಳೂರಿನಲ್ಲಿ ಟೆನಿಸ್‌ ಅಕಾಡೆಮಿ ಆರಂಭಿಸಿ ಹೊಸ ಆಟಗಾರರ ಪ್ರತಿಭೆಗೆ ವೇದಿಕೆ ಕಲ್ಪಿಸಲು ಯತ್ನಿಸುತ್ತಿದ್ದೇನೆ.

* ಭಾರತದ ಟೆನಿಸ್‌ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು ಏನು?
ದೆಹಲಿ ಮತ್ತು ಕರ್ನಾಟಕದ ಆಟಗಾರರೇ ಹೆಚ್ಚು  ಬರುತ್ತಿದ್ದಾರೆ. ಜೂನಿಯರ್‌ ಮತ್ತು ಎಐಟಿಎ ಮಟ್ಟದ ಹಲವಾರು ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ. ತರಬೇತಿಯೂ ಚೆನ್ನಾಗಿ ಸಿಗುತ್ತಿದೆ.

* ಕೆಲ ವರ್ಷಗಳ ಹಿಂದೆ ಸ್ಟಾಪ್‌ ವಾರ್‌ ಸ್ಟಾರ್ಟ್‌ ಟೆನಿಸ್‌ ಆಂದೋಲನ ಆರಂಭಿಸಿದ್ದೀರಿಲ್ಲಾ. ಆಗ ನಿಮ್ಮ ಉದ್ದೇಶ ಏನಾಗಿತ್ತು?
ಟೆನಿಸ್‌ ವಲಯದಲ್ಲಿ ಬೇರೆ ಬೇರೆ ದೇಶಗಳಲ್ಲಿ ಅನೇಕ ಘಟನೆಗಳು ನಡೆದಿದ್ದವು. ಹಿರಿಯ ಆಟಗಾರರ ನಡುವೆ ಮನಸ್ತಾಪ ಮತ್ತು ವಿನಾಕಾರಣ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದ್ದವು. ಇದರಿಂದ ನನಗೆ ತುಂಬಾ ಬೇಸರವಾಗಿತ್ತು. ಟೆನಿಸ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕೆನ್ನುವ ಆಸೆ ಹೊಂದಿರುವವರಿಗೆ ಈ ಎಲ್ಲಾ ಘಟನೆಗಳು  ತಪ್ಪು ಸಂದೇಶ ಕೊಡುತ್ತಿದ್ದವು. ಆದ್ದರಿಂದ ಸಮಾನ ಮನಸ್ಕ ಸ್ನೇಹಿತರು ಸೇರಿ ಈ ಆಂದೋಲನ ಆರಂಭಿಸಿದೆವು. ಆಗ ಐಸಾಮ್‌ ಖುರೇಷಿ ತುಂಬಾ ಸಹಾಯ ಮಾಡಿದ. ಇದು ಟೆನಿಸ್ ಬೆಳವಣಿಗೆಗೆ ನೆರವಾಯಿತು.

* ಐಸಾಮ್‌ ಉಲ್‌ ಖುರೇಷಿ ಜೊತೆ ಸಾಕಷ್ಟು ಟೂರ್ನಿಗಳಲ್ಲಿ ಆಡಿದ್ದೀರಿ. ನಿಮಗಿಬ್ಬರಿಗೂ ತುಂಬಾ ಖುಷಿಕೊಟ್ಟ ಸಂದರ್ಭ ಯಾವುದು?
ಒಟ್ಟಿಗೆ ಆಡಲು ಆರಂಭಿಸಿದ ದಿನಗಳಲ್ಲಿ ನಾವು ಸಾಕಷ್ಟು ಟೀಕೆಗಳನ್ನು ಹಾಗೂ ಸವಾಲುಗಳನ್ನು ಎದುರಿಸ ಬೇಕಾಯಿತು. 2009ರ ಟೂರ್ನಿಗಳಲ್ಲಿ ಸೋಲು ಕಂಡಾಗ ಟೀಕಾಕಾರರು ಮತ್ತಷ್ಟು ಚುರುಕಾದರು. ಆದ್ದರಿಂದ ನಮಗೆ ಸಾಮರ್ಥ್ಯ ಸಾಬೀತು ಮಾಡ ಬೇಕಾದ ಸವಾಲಿತ್ತು. ಇದಕ್ಕೆ 2010ರ ಅಮೆರಿಕ ಓಪನ್‌ ಟೂರ್ನಿ ಮಹತ್ವದ್ದಾಗಿತ್ತು. ಈ ಟೂರ್ನಿಯಲ್ಲಿ ಐಸಾಮ್‌ ಜೊತೆಗೆ ಡಬಲ್ಸ್‌ನಲ್ಲಿ ಫೈನಲ್‌ ತಲುಪಿದ್ದು ಎಂದಿಗೂ ಮರೆಯಲಾಗದು.

* ನೀವು ಟೆನಿಸ್‌ ಆಡಲು ಆರಂಭಿಸಿದ ದಿನಗಳಿಗೂ ಈಗಿನ ವಾತಾವರಣಕ್ಕೂ ಏನು ವ್ಯತ್ಯಾಸವೆನಿಸುತ್ತದೆ?
ಈಗೆಲ್ಲಾ ಆಟದ ಮತ್ತು ತರಬೇತಿಯ ಗುಣಮಟ್ಟ ಹೆಚ್ಚಾಗಿದೆ. ಅನೇಕ ಕಡೆ ಕ್ಲಬ್‌ಗಳಿವೆ. ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಬದುಕು ರೂಪಿಸಿಕೊಳ್ಳ ಬಹುದು ಎನ್ನುವ ನಂಬಿಕೆ ಬಂದಿದೆ. ಪೋಷಕರಿಗೂ ಟೆನಿಸ್‌ ಮಹತ್ವ ಚೆನ್ನಾಗಿ ಅರ್ಥವಾಗಿದೆ.

* ಕ್ರೀಡಾ ಬದುಕಿನ ಸ್ಮರಣೀಯ ಕ್ಷಣ ಯಾವುದು?
ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಪ್ರತಿ ಕ್ರೀಡಾಪಟುವಿನ ಕನಸು. 2002ರ ಡೇವಿಸ್‌ ಕಪ್‌ನಲ್ಲಿ ಮೊದಲ ಸಲ ಅವಕಾಶ ಲಭಿಸಿದ್ದ ಸಂದರ್ಭ ತುಂಬಾ ಖುಷಿಕೊಟ್ಟಿದೆ.

‘ಲಿಯಾಂಡರ್‌ ಪೇಸ್‌ ಜೊತೆ ಮನಸ್ತಾಪವಿಲ್ಲ’
‘ಲಿಯಾಂಡರ್ ಪೇಸ್‌ ಮತ್ತು ನನ್ನ ಆಟದ ಶೈಲಿಯಲ್ಲಿ ಕೆಲವು ಬದಲಾವಣೆಗಳಿವೆ. ಇದಷ್ಟೇ ಹೊರತು ಅವರೊಂದಿಗೆ ನನಗೆ ಯಾವ ಮನಸ್ತಾಪವೂ ಇಲ್ಲ’ ಎಂದು ಬೋಪಣ್ಣ ಸ್ಪಷ್ಟಪಡಿಸಿದ್ದಾರೆ. ‘ದೊಡ್ಡ ಟೂರ್ನಿಯಲ್ಲಿ ಆಡಲು ತೆರಳುವ ನಾಲ್ಕೈದು ದಿನಗಳ ಮೊದಲು ಕಠಿಣ ಅಭ್ಯಾಸ ಮಾಡಿದರೆ ಹೊಂದಿಕೊಂಡು ನಾವು ಚೆನ್ನಾಗಿ ಆಡಬಲ್ಲೆವು.ನನಗಿಂತಲೂ ಪೇಸ್‌ ಅವರ ಅನುಭವ ಹೆಚ್ಚಿದೆ. ನಾವಿಬ್ಬರೂ ಸೇರಿ ಒಲಿಂಪಿಕ್ಸ್‌ನಲ್ಲಿ ಪದಕ ತಂದುಕೊಡಲು ಯತ್ನಿಸುತ್ತೇವೆ’ ಎಂದೂ ಅವರು ನುಡಿದರು.

ವಿದಾಯ ಹೇಳಲು ನಿರ್ಧರಿಸಿದ್ದ ದಿನ...
ರಾಷ್ಟ್ರೀಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದು ಆಗಷ್ಟೇ ನಾಲ್ಕು ವರ್ಷಗಳಾಗಿದ್ದವು. ಟೂರ್ನಿಗಳಲ್ಲಿ ಆಡಲು ಹೆಚ್ಚು ಅವಕಾಶಗಳು ಸಿಗುತ್ತಿದ್ದ ದಿನಗಳವು. ಆದರೆ ಆಗ ಭುಜದ ನೋವು ಇನ್ನಿಲ್ಲದಂತೆ ಕಾಡಿತ್ತು. 2006ರಲ್ಲಿ ರ್‍ಯಾಕೆಟ್‌ ಅನ್ನು ಹಿಡಿಯಲು ಸಾಧ್ಯವಾಗದಷ್ಟು ನೋವಾಗುತ್ತಿತ್ತು. ಆದ್ದರಿಂದ ಟೆನಿಸ್‌ ಕ್ರೀಡೆಯನ್ನು ಬಿಟ್ಟುಬಿಡಲು ನಿರ್ಧರಿಸಿದ್ದೆ. ಆದರೆ ಸ್ನೇಹಿತರ ಬೆಂಬಲದಿಂದ ಮತ್ತೆ ಕ್ರೀಡೆಯತ್ತ ಬರಲು ಸಾಧ್ಯವಾಯಿತು. ಮತ್ತೆ ರ್‍ಯಾಕೆಟ್‌ ಹಿಡಿಯುತ್ತೇನೆ ಎನ್ನುವ ಭರವಸೆಯೇ ಕಳೆದು ಹೋಗಿತ್ತು. ಆಗ ದುಡುಕಿನ ನಿರ್ಧಾರ ಕೈಗೊಂಡಿದ್ದರೆ ಈಗ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಹಾಳು ಮಾಡಿಕೊಳ್ಳುತ್ತಿದ್ದೆ.
–ರೋಹನ್‌ ಬೋಪಣ್ಣ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT