ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿರಂಗಿ ಸದ್ದಡಗಿ ಪ್ರೀತಿ ಮೂಡಲಿ...

Last Updated 16 ಜುಲೈ 2014, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನ ಪರಸ್ಪರ ಶತ್ರು ರಾಷ್ಟ್ರಗಳು. ಈ ಎರಡು ರಾಷ್ಟ್ರ­ಗಳ ನಡುವೆ ಕ್ರಿಕೆಟ್ ಪಂದ್ಯ ನಡೆದರೂ ಅದೊಂದು ಯುದ್ಧ ಎಂಬಂತೆ ಬಿಂಬಿಸ­ಲಾ­ಗು­ತ್ತಿದೆ. ಆದರೆ ಇದು ವಾಸ್ತವ ಅಲ್ಲ. ಇದೊಂದು ಉದ್ದೇಶ­ಪೂರ್ವಕ ತಂತ್ರ ಎನ್ನುತ್ತಾರೆ ಹೈದರಾ­ಬಾದ್‌ನ ಸಾಮಾಜಿಕ ಕಾರ್ಯಕರ್ತ ಮಜರ್ ಹುಸೇನ್.

ಭಾರತ ಮತ್ತು ಪಾಕಿಸ್ತಾನ ಹಾಗೂ ಏಷ್ಯಾ ದೇಶಗಳ ಜನರ ನಡುವೆ ಮಧುರವಾದ ಬಾಂಧವ್ಯ ಸೃಷ್ಟಿಯಾಗಬೇಕು ಎಂದು ಹಾರೈ­ಸುವ ಮತ್ತು ಅದಕ್ಕಾಗಿ ಶ್ರಮಿಸುವ ಅವರು ಈ ವಿಷಯಕ್ಕೆ ಸಂಬಂಧಿಸಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 

೧೯೯೩ರಲ್ಲಿ ಸ್ಥಾಪನೆಗೊಂಡ ಶಾಂತಿ ಮತ್ತು ಪ್ರಜಾಸತ್ತೆಗಾಗಿ ಪಾಕಿಸ್ತಾನ- ಭಾರತ ಜನರ ವೇದಿಕೆ (ಪಿಐಪಿಎಫ್‌ಪಿಡಿ) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ದೇಶದಾದ್ಯಂತ ಈ ಸಂಘಟನೆ ಶಾಖೆ­ಗಳನ್ನೂ ಹೊಂದಿದೆ. ಕರ್ನಾಟಕದಲ್ಲಿಯೂ ಇದರ ಶಾಖೆ ಇದೆ. ಹೈದರಾಬಾದ್ ಶಾಖೆಯಲ್ಲಿ ಮಜರ್ ಹುಸೇನ್ ಸಕ್ರಿಯರಾಗಿದ್ದಾರೆ. ಕಾನ್ಫೆಡ­ರೇ­ಷನ್ ಆಫ್ ವಾಲಂಟರಿ ಅಸೋಸಿಯೇಷನ್ಸ್ (ಕೋವಾ) ಎಂಬ ಸಂಸ್ಥೆಗಳ ಒಕ್ಕೂಟವೂ ಈ ನಿಟ್ಟಿ­ನಲ್ಲಿ ಶ್ರಮಿಸುತ್ತಿದೆ. ಪಿಐಪಿಎಫ್‌ಪಿಡಿ ನಡೆಸಿದ ಸಮಾವೇಶದಲ್ಲಿ ಭಾಗವ­ಹಿ­ಸು­ವುದ­ಕ್ಕಾಗಿ ಇತ್ತೀಚೆಗೆ ಮಜರ್ ಹುಸೇನ್‌ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಯೋಚನೆಗಳನ್ನು ಹಂಚಿ­ಕೊಂಡರು.

ಎರಡೂ ದೇಶಗಳ ನಡುವಣ ಜನರ ಸಂಬಂಧ ಉತ್ತಮಗೊಳಿಸುವುದಕ್ಕಾಗಿ ೨೦ಕ್ಕೂ ಹೆಚ್ಚು ಬಾರಿ ಮಜರ್‌ ಅವರು ಪಾಕಿಸ್ತಾನಕ್ಕೆ
ಭೇಟಿ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಜನರು ಪರಸ್ಪರ ಶತ್ರುಗಳಲ್ಲ, ಮಿತ್ರರು ಎಂಬ ಜಾಗೃತಿ ಮೂಡಿಸು­ವುದು ತಮ್ಮ ಮುಖ್ಯ ಉದ್ದೇಶ ಎಂದು ಅವರು ಹೇಳುತ್ತಾರೆ. ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ, ವಿದೇಶಾಂಗ ನೀತಿಯ ಬಗ್ಗೆ ಜನರಿಗೆ ತಿಳಿ­ವ­ಳಿಕೆ ಮೂಡಿಸುವ ಕೆಲಸವನ್ನು ಅವರು ಮಾಡು­ತ್ತಿದ್ದಾರೆ. ಒಂದು ದೇಶದ ವಿದೇಶಾಂಗ ನೀತಿ­ಯನ್ನು ಅಲ್ಲಿಯ ಜನರೇ ರೂಪಿಸಬೇಕು ಎಂಬುದು ಅವರ ಅಭಿಪ್ರಾಯ.

ಇದಕ್ಕೆ ಅವರು ಒಂದು ಉದಾಹರಣೆಯನ್ನು ನೀಡುತ್ತಾರೆ. ಮುಂಬೈ ದಾಳಿಯ ನಂತರ ದಾಳಿಯ ಕಾರಣ­ಕರ್ತರನ್ನು, ಅದರ ಹಿಂದೆ ಸಂಚು ನಡೆಸಿದವರನ್ನು ಕಾನೂನಿನ ಅನ್ವಯ ಶಿಕ್ಷಿಸಿ ಎಂಬ ಅಪೇಕ್ಷೆಯ ಮನವಿಯನ್ನು ಈ ಸಂಘಟನೆಗಳು ಪಾಕಿಸ್ತಾನ ಪ್ರಧಾನಿಯವರಿಗೆ ಸಲ್ಲಿಸಿವೆ. ಅದಕ್ಕೆ ಭಾರತ ಮತ್ತು ಪಾಕಿಸ್ತಾನದ ಸಾವಿರಾರು ಜನರು ಸಹಿ ಮಾಡಿದ್ದಾರೆ. ಇದೂ ಒಂದು ರೀತಿಯಲ್ಲಿ ಒಂದು ದೇಶದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಿದ ಹಾಗೆಯೇ ಎಂದು ಮಜರ್‌ ಹೇಳುತ್ತಾರೆ. 

ಭಾರತ-ಪಾಕಿಸ್ತಾನದ ನಡುವಣ ಗಡಿ ಸಂಘ­ರ್ಷದ ಬಗ್ಗೆ ಮಜರ್ ಅವರು ಅಧ್ಯಯನ ನಡೆಸಿ­ದ್ದಾರೆ. ಎರಡೂ ದೇಶಗಳ ಗಡಿಯಲ್ಲಿ ಸೈನಿಕರ ನಡುವೆ ನಡೆಯುವ ಹೆಚ್ಚಿನ ಸಂಘರ್ಷಗಳು ಸೆಪ್ಟೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದ ಅವಧಿಯಲ್ಲಿ ನಡೆಯುತ್ತವೆ. ಇದು ಅಲ್ಲಿ ತೀವ್ರ ಚಳಿಯ ಸಮಯವೂ ಹೌದು. ಆದರೆ ಇದೇ ಅವಧಿಯಲ್ಲಿ ಯಾಕೆ ಸಂಘರ್ಷ­ಗಳು ನಡೆಯುತ್ತವೆ ಎಂಬ ಪ್ರಶ್ನೆಗೆ ಮಜರ್ ಅವರು ಉತ್ತರ ಕಂಡುಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಇದೊಂದು ಕುತಂತ್ರ. ಈ ಅವಧಿ­ಯಲ್ಲಿ ಎರಡೂ ದೇಶಗಳ ಬಜೆಟ್ ಸಿದ್ಧತೆ ನಡೆದಿರುತ್ತದೆ. ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ. ಹಾಗಾಗಿ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಒತ್ತಡ ಸೃಷ್ಟಿಸುವುದಕ್ಕಾಗಿ ಈ ಸಂಘರ್ಷಗಳನ್ನು ಸೃಷ್ಟಿಸಲಾಗುತ್ತದೆ. ಪರಿಣಾ­ಮವಾಗಿ ಪ್ರತಿ ಬಜೆಟ್‌ನಲ್ಲಿಯೂ ರಕ್ಷಣಾ ವಲಯಕ್ಕೆ ನೀಡುವ ಅನುದಾನ ಹೆಚ್ಚು­ತ್ತಲೇ ಹೋಗುತ್ತದೆ ಎಂದು ಅಭಿಪ್ರಾಯ­ಪಡುತ್ತಾರೆ.

ಅಮೆರಿಕ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ತಯಾರಿಕಾ ರಾಷ್ಟ್ರ. ಜಗತ್ತಿನ ಒಟ್ಟು ಆಯುಧ ತಯಾರಿಕೆಯಲ್ಲಿ ಶೇ ೬೮ರಷ್ಟು ಅಲ್ಲಿಯೇ ಆಗುತ್ತಿದೆ. ಭಾರತ, ಸೌದಿ ಅರೇಬಿಯಾ ಮತ್ತು ಪಾಕಿಸ್ತಾನಗಳು ಅಮೆರಿಕದಿಂದ ಅತಿ ಹೆಚ್ಚು ಆಯುಧ ಆಮದು ಮಾಡಿಕೊಳ್ಳುವ ರಾಷ್ಟ್ರ­ಗಳು. ಈ ಬೇಡಿಕೆ ಕುಸಿಯದಿರಲಿ ಎಂಬ ಕಾರ­ಣಕ್ಕೇ ಭಾರತ-ಪಾಕಿಸ್ತಾನ ನಡುವೆ ವೈರತ್ವ ನಿರಂತರವಾಗಿರಲಿ ಎಂದು ಬಯಸುವ ಹಿತಾಸಕ್ತಿಗಳಿವೆ. ಅವರಲ್ಲಿ ಆಯುಧ ತಯಾರಕರು, ದಲ್ಲಾಳಿಗಳು, ರಾಜ­ಕಾ­ರಣಿಗಳು ಮತ್ತು ರಕ್ಷಣಾ ಪಡೆಯವರೂ ಇದ್ದಾರೆ ಎಂದು ಮಜರ್ ಹೇಳುತ್ತಾರೆ.

ಇದನ್ನು ಹೊರತುಪಡಿಸಿದರೆ ಎರಡೂ ದೇಶ­ಗಳ ನಡುವೆ ದ್ವೇಷ ಸಾಧನೆಗೆ ಕಾರಣಗಳೇ ಇಲ್ಲ ಎನ್ನುವುದು ಅವರ ಅಭಿಪ್ರಾಯ. ಬಾಲಿ­ವುಡ್ ಸಿನಿಮಾ­ಗಳನ್ನು, ಕ್ರಿಕೆಟ್ ಆಟಗಾರ ಸಚಿನ್ ತೆಂಡೂ­ಲ್ಕರ್ ಅವರನ್ನು ಭಾರತೀಯ­ರಷ್ಟೇ ಪಾಕಿ­ಸ್ತಾ­ನೀಯರೂ ಇಷ್ಟಪಡುತ್ತಾರೆ. ಪಾಕಿಸ್ತಾನಿ ವ್ಯಕ್ತಿ­ಯೊಬ್ಬರು ತಮ್ಮ ಮಗನಿಗೆ ಸಚಿನ್ ತೆಂಡೂ­ಲ್ಕರ್ ಎಂದು ಹೆಸರು ಇರಿಸಿದ್ದಾರೆ. ದ್ವೇಷ ಇದ್ದರೆ ಅದು ಸಾಧ್ಯವೇ ಎಂದು ಮಜರ್ ಪ್ರಶ್ನಿಸುತ್ತಾರೆ.

ಹಿಂದುಳಿದ ದೇಶಗಳ ಜನರು ಒಂದು ಅವಕಾಶ ಸಿಕ್ಕರೆ ಅಮೆರಿಕಕ್ಕೆ ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಆದರೆ ಪಾಕಿಸ್ತಾನದ ಸಾಮಾನ್ಯ ಜನರಿಗೆ ಒಮ್ಮೆಯಾದರೂ ಭಾರತಕ್ಕೆ ಬರಬೇಕು ಎಂಬ ಆಸೆ ಇದೆ ಎಂದು ಪಾಕಿಸ್ತಾನ ಭೇಟಿಯ ತಮ್ಮ ಅನುಭವದ ಆಧಾರದಲ್ಲಿ ಹೇಳುತ್ತಾರೆ. ಪಾಕಿಸ್ತಾನದ ಬೀದಿ ಬದಿ ಚಹಾ ಮಾರುವವನು ಕೂಡ ಭಾರತೀಯರು ಎಂದು ತಿಳಿದರೆ ಹಣ ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಭೇಟಿಯ ನೆನಪನ್ನು  ಮಜರ್ ಹಂಚಿಕೊಳ್ಳುತ್ತಾರೆ.

೨೦೦೪ರಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಇದ್ದಾಗ ಪಾಕಿಸ್ತಾನ ನೆಲದಲ್ಲಿ ೧೬ ವರ್ಷಗಳ ನಂತರ ಎರಡೂ ದೇಶಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆದಾಗಲೂ ಬಾಂಧವ್ಯ ಬೆಸೆಯುವ ಕೆಲಸ­ವನ್ನು ಹಲವು ಸಂಘಟನೆಗಳು ಸೇರಿ ಮಾಡಿದ್ದವು ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಆಗ ಪ್ರೇಕ್ಷ­ಕರು ಒಂದು ಭಾಗದಲ್ಲಿ ಭಾರತ ಮತ್ತು ಇನ್ನೊಂದು ಭಾಗದಲ್ಲಿ ಪಾಕಿಸ್ತಾನದ ಧ್ವಜಗ­ಳನ್ನು ಮುದ್ರಿಸಿ ಆಟಗಾರರನ್ನು ಹುರಿದುಂಬಿ­ಸಿ­ದ್ದರು. ಇದು ಈಗಲೂ ಮುಂದುವರಿದಿದೆ. ಉತ್ತಮ ಬಾಂಧವ್ಯಕ್ಕೆ ಇದಕ್ಕಿಂತ ಮತ್ತೇನು ಬೇಕು ಎಂದು ಮಜರ್ ಖುಷಿಪಡುತ್ತಾರೆ.

ಎರಡೂ ದೇಶಗಳಲ್ಲಿ ಬಲಪಂಥೀಯ ಸರ್ಕಾರ­ಗಳಿದ್ದರೆ ಸಂಬಂಧ ಹೆಚ್ಚು ಉತ್ತಮವಾಗಿ­ರುತ್ತದೆ ಎಂಬುದು ಮಜರ್ ಅವರು ಗಮನಿಸಿ­ರುವ ಮತ್ತೊಂದು ಅಂಶ. ವಾಜಪೇಯಿ ಕಾಲ­ದಲ್ಲಿ ಭಾರತ-ಪಾಕಿಸ್ತಾನ ಸಂಬಂಧ ಮತ್ತು ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯಕ್ಕೆ ನಾಂದಿ ಹಾಡಿರುವುದನ್ನು ತಮ್ಮ ವಾದಕ್ಕೆ ಪೂರಕವಾಗಿ ಉಲ್ಲೇಖಿಸುತ್ತಾರೆ. 

ನೆರೆಹೊರೆ ದೇಶಗಳೊಂದಿಗಿನ ವಿದೇಶಾಂಗ ನೀತಿಯನ್ನು ಜನರೇ ರೂಪಿಸಲಿ, ದ್ವೇಷ ಬಿತ್ತುವ ಜನರ ಕಾರ್ಯಸೂಚಿಯನ್ನು ಜನರು ಅರಿತು­ಕೊಳ್ಳಲಿ, ಎರಡೂ ದೇಶಗಳ ಜನರು ಪ್ರೀತಿ­ಯಿಂದ ಇರಲಿ ಎಂಬುದೇ ಪಿಐಪಿಎಫ್‌ಪಿಡಿ, ಕೋವಾ ಮತ್ತು ಮಜರ್ ಅವರ ಆಶಯ­.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT