ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾದರೂ ಪರವಾ ಇಲ್ಲ..!

ಅಕ್ಷರ ಗಾತ್ರ

ಪರೀಕ್ಷೆ, ಫಲಿತಾಂಶ ಹಾಗೂ ಪರಿಣಾಮಗಳನ್ನು ಗಮನಿಸಿದಾಗ, ನಮ್ಮ ಮಕ್ಕಳಿಗೆ ನಾವು ಫೇಲಾಗುವುದೂ ಕಲಿಸಬೇಕಿದೆ ಎಂದೆನಿಸದೇ ಇರದು. ಇಷ್ಟಕ್ಕೂ ನಪಾಸಾಗುವುದು ವೈಫಲ್ಯವೇನಲ್ಲ ಎನ್ನುವುದು ಮಕ್ಕಳಷ್ಟೇ ಪಾಲಕರಿಗೂ ಮನವರಿಕೆಯಾಗಬೇಕಾದ ಹೊತ್ತಿದು.

‘ಸರ್, ನಮ್ಮ ಮಗಳು ಹೀಗೆ ಮಾಡ್ತಾಳೆ ಅಂತಾ ಅನ್ಕೊಂಡಿರಲಿಲ್ಲ. ದ್ವಿತೀಯ ಪಿಯು ಪ್ರಿಪರೇಟರಿ ಎಕ್ಸಾಂನಲ್ಲಿ ಆಕೆಗೆ ಕಡಿಮೆ ಮಾರ್ಕ್ಸ್ ಬಂದಿತ್ತು. ಅದನ್ನು ಪ್ರಶ್ನಿಸಿ,ಇನ್ನಾದರೂ ಕಷ್ಟಪಟ್ಟು ಓದು, ವಾರ್ಷಿಕ ಪರೀಕ್ಷೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡು ಅಂತ ಬುದ್ಧಿ ಹೇಳಿದ್ದೇ ತಪ್ಪಾಯ್ತು. ಆತ್ಮಹತ್ಯೆ ಮಾಡ್ಕೊಂಡ್ ಬಿಟ್ಳು ಸರ್‌... ಹೆತ್ತವರಾಗಿ ಮಗಳಿಗೆ ಬುದ್ಧಿ ಹೇಳೋ ಹಕ್ಕೂ ನಮಗಿಲ್ದೇ ಹೋಯ್ತು...!’

ಇದು ಫೆ. 15ರಂದು ಭಾನುವಾರ ಮೈಸೂರು ಬಸ್ ನಿಲ್ದಾಣದಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಪ್ರಯಾಣಿಕರಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಿಸದೆ ಮೃತಪಟ್ಟ ಬೆಂಗಳೂರಿನ ಖಾಸಗಿ ಕಾಲೇಜೊಂದರ ದ್ವಿತೀಯ ಪಿಯು ವಿದ್ಯಾರ್ಥಿನಿ ಪೂರ್ಣಿಮಾಳ ಪೋಷಕರು ದೂರಿನಲ್ಲಿ ದಾಖಲಿಸಿದ ನೋವಿನ ನುಡಿ.

ಈಗಿನ ಮಕ್ಕಳಿಗೆ ಆತ್ಮಹತ್ಯೆಗೆ ಕ್ಷುಲ್ಲಕ ಕಾರಣವೂ ಸಾಕೆನಿಸುತ್ತಿದೆ. ಬೈಕ್, ಕಂಪ್ಯೂಟರ್ ಅಥವಾ ಮೊಬೈಲ್ ಕೊಡಿಸಲಿಲ್ಲವೆಂದು, ತನಗೆ ಇಷ್ಟವಾಗುವ ತಿಂಡಿ ಮಾಡಲಿಲ್ಲ, ತನಗೆ ಬೇಕಾದ ಟಿ.ವಿ. ಚಾನಲ್ ಹಚ್ಚಲಿಲ್ಲವೆಂದು, ಶಾಲೆಗೆ ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸುದ್ದಿಯನ್ನು ನಾವು ಓದಿದ್ದೇವೆ. ಇಂಥದರಲ್ಲಿ ಪರೀಕ್ಷಾ ಭಯಕ್ಕೆ ಸಿಲುಕಿ, ಅಂಕಗಳ ಜಿಜ್ಞಾಸೆಯಲ್ಲಿ ನಲುಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು ಅದೆಷ್ಟೊ.

ಮನಃಶಾಸ್ತ್ರಜ್ಞರ ಪ್ರಕಾರ ‘ಆತ್ಮಹತ್ಯೆ’ ಎಂದರೆ, ‘ತಾತ್ಕಾಲಿಕ ಸಮಸ್ಯೆಗೆ ಕಂಡುಕೊಳ್ಳುವ ಋಣಾತ್ಮಕ ಪರಿಹಾರ. ಈಚೆಗೆ ಇದು ಸಾಮಾಜಿಕ ಕಾಯಿಲೆಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಅನುಸರಿಸುತ್ತಿರುವ ಅವೈಜ್ಞಾನಿಕ ಅಧ್ಯಯನ ಕ್ರಮಗಳಿಂದ, ತಂದೊಡ್ಡುತ್ತಿರುವ ಅನಾರೋಗ್ಯಕರ ಸ್ಪರ್ಧೆಯಿಂದ, ‘ರ್‌್ಯಾಂಕ್’ ಬರಲೇಬೇಕು ಎಂಬ ಅನಪೇಕ್ಷಿತ ಧೋರಣೆಯಿಂದ, ಸುಲಭವಾದ ಯಶಸ್ಸಿಗಾಗಿ ‘ಒಳದಾರಿ’ ಅನುಸರಿಸುತ್ತಿರುವುದರಿಂದ, ಮಕ್ಕಳ ಸಾಮರ್ಥ್ಯ ಮೀರಿದ ಒತ್ತಡ ಹೇರುವುದರಿಂದ ಭ್ರಮನಿರಸನಗೊಂಡ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ನಿಜವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಉದ್ದೇಶವಿಲ್ಲದಿದ್ದರೂ ‘ತಂದೆ–ತಾಯಿಗೆ ಬುದ್ಧಿ ಕಲಿಸಬೇಕು’ ಎಂಬ ಆತುರದಲ್ಲಿ (ಪ್ಯಾರಾ ಸುಸೈಡ್‌) ಜೀವವನ್ನೇ ಪಣವಾಗಿಡುತ್ತಿದ್ದಾರೆ. ಈ ಪ್ರವೃತ್ತಿ ಹದಿಹರೆಯದವರಲ್ಲಿ ಹೆಚ್ಚಾಗಿದೆ’.

ಪೋಷಕರು ಹಾಗೂ ಶಿಕ್ಷಕರಿಗೆ ತಜ್ಞರ ಸಲಹೆಗಳು

*ಮಕ್ಕಳಿಗೆ ಶೈಕ್ಷಣಿಕ ಸಾಧನೆಯನ್ನೂ ಮೀರಿದ ಪರ್ಯಾಯ ಅವಕಾಶಗಳನ್ನು ತಿಳಿಸಿ. ‘ತಾರೇ ಜಮೀನ್‌ ಪರ್’ ಚಿತ್ರದಲ್ಲಿ ಅಮಿರ್ ಖಾನ್‌ ನಿರ್ವಹಿಸಿದ ಶಿಕ್ಷಕನ ಪಾತ್ರ ಇದಕ್ಕೆ ಉತ್ತಮ ಉದಾಹರಣೆ.

*ಅವಿಭಕ್ತ ಕುಟುಂಬದ ಪರಿಕಲ್ಪನೆ ನೀಡಿ ಮಕ್ಕಳಲ್ಲಿ ಭಾವನಾತ್ಮಕ ವೈಶಾಲ್ಯತೆ ಬೆಳೆಸಿ. ವಿಭಕ್ತ ಕುಟುಂಬದ ಸಂಕುಚಿತ ಬುದ್ಧಿ ಅವರಿಗೆ ಬೇಡ.

*ಆತ್ಮಹತ್ಯೆಯನ್ನು ತಡೆಯುವ ಪ್ರಯತ್ನವಾಗಿ ‘HOPE: Hold On Pain Ends’ ಎಂಬ ತಾಳ್ಮೆಯ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬೆಳೆಸಿ.

*ಮಕ್ಕಳೊಂದಿಗೆ ಒರಟಾಗಿ ವರ್ತಿಸದಿರಿ. ಅಧ್ಯಯನಕ್ಕೆ ಸಂಬಂಧಿಸಿ ಅತಿಯಾದ ಒತ್ತಡ ಹೇರದಿರಿ.

*ಮಕ್ಕಳಿಗೆ ‘ಜಾಣ’ ಅಥವಾ ‘ದಡ್ಡ’ ಎಂಬ ಪಟ್ಟ ಕಟ್ಟಬೇಡಿ. ಇದು ಮಕ್ಕಳಲ್ಲಿ ಅತಿಯಾದ ಆತ್ಮವಿಶ್ವಾಸ ಅಥವಾ ಕೀಳರಿಮೆ ಹುಟ್ಟುಹಾಕಬಹುದು.

ಚೆ ಯಾವುದಾದರೂ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮರುವರ್ಷವೂ ಅದೇ ತರಗತಿಯಲ್ಲಿ ಓದಬೇಕಿತ್ತು. ಒಂದಿಡೀ ಶೈಕ್ಷಣಿಕ ವರ್ಷ ವ್ಯರ್ಥವಾಗುತ್ತಿತ್ತು. ಆದರೂ, ‘ಅಕ್ಟೋಬರ್’ ಛಾನ್ಸ್ ಇದೆ ಪಾಸ್ ಆದ್ರೆ ಆಯ್ತು ಬಿಡು! ಎಂಬ ಸಮಾಧಾನವಿತ್ತು! ಈಗ 9ನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಗಳನ್ನು ‘ಫೇಲ್‌’ ಮಾಡುವಂತೆಯೇ ಇಲ್ಲ! ಈಗಿನ ಮಕ್ಕಳಿಗೆ ನಾವು ‘ಪಾಸ್’ ಆಗುವ ಚಟ ರೂಢಿಸುತ್ತಿದ್ದೇವೆ. ‘ಫೇಲ್’ ಆದ ಅನುಭವ ಅವರಿಗಿಲ್ಲ. ಹೀಗಾಗಿ ಅವರು ಯಾವಾಗಲೂ ಪಾಸ್‌ ಆಗಬೇಕೆಂದೇ ಬಯಸುತ್ತಾರೆ. ಮುಂದೊಮ್ಮೆ ಆಕಸ್ಮಿಕವಾಗ ಅವರು ‘ಫೇಲ್’ ಆದರೆ, ಅದನ್ನು ತಡೆದುಕೊಳ್ಳುವ ಅದರಿಂದ ಹೊರಬರುವ ಸಾಮರ್ಥ್ಯ ಅವರಲ್ಲಿ ಇಲ್ಲ. ಈಗಿನ ವಿದ್ಯಾರ್ಥಿಗಳು ‘ಅಕ್ಟೋಬರ್ ಛಾನ್ಸ್’ಗೂ ಕಾಯಬೇಕಿಲ್ಲ. ಫಲಿತಾಂಶ ಘೋಷಣೆಯಾದ ತಿಂಗಳೊಪ್ಪತ್ತಿನಲ್ಲಿ ಪೂರಕ ಪರೀಕ್ಷೆಯ ಮೂಲಕ ಪಾಸಾಗಲು ಅವರಿಗೆ ಅವಕಾಶವಿದೆ. ಇಡೀ ವರ್ಷ ನಷ್ಟವಾಗುವ ಭೀತಿಯೂ ಇಲ್ಲ. ಆದರೂ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಾಳ್ಮೆ ಇಲ್ಲ. ಹೀಗಾಗಿ, ಅವರು ಬಹುಬೇಗ ನಿರಾಶರಾಗುತ್ತಿದ್ದಾರೆ, ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಇದು ಅವರ ಜೀವನಕ್ಕೂ ಅನ್ವಯಿಸುತ್ತಿರುವುದು ಆತಂಕದ ವಿಷಯ.

ಈಗಿನ ಶಿಕ್ಷಣ ಕೇವಲ ‘ಪಠ್ಯ ಕೇಂದ್ರಿತ’ವಾಗಿದೆ. ಗುಣಾತ್ಮಕವಾಗಿರದೇ ಸ್ಪರ್ಧಾತ್ಮಕವಾಗಿದೆ. ವ್ಯಕ್ತಿನಿಷ್ಠವಾಗಿರದೆ, ವಸ್ತುನಿಷ್ಠವಾಗಿದೆ. ಅಲ್ಲಿ ಏನಿದ್ರು ರ್‌್ಯಾಂಕು, ಗ್ರೇಡುಗಳಿಗೆ ಆದ್ಯತೆ! ಜೀವನಾನುಭವ ನೀಡುವ ಕಾರ್ಯ ಶಿಕ್ಷಣ, ನೈತಿಕ ಪ್ರಬುದ್ಧತೆ ಹೆಚ್ಚಿಸುವ ನೀತಿ ಶಿಕ್ಷಣ, ಹಾಗೂ ಮಾನಸಿಕ ಧೈರ್ಯವನ್ನು ಹೆಚ್ಚಿಸುವ ಜೀವನ ಕೌಶಲಗಳಿಗೆ ಅಲ್ಲಿ ಜಾಗವಿಲ್ಲ. ನಾವು ಮಕ್ಕಳಿಗೆ ಪುಸ್ತಕದ ಹುಳುವಾಗುವುದನ್ನು ಕಲಿಸುತ್ತಿದ್ದೇವೆಯೇ ವಿನಃ ಅವರನ್ನು ಜೀವನಾನುಭವಕ್ಕೆ ಒಡ್ಡುತ್ತಿಲ್ಲ. ಟಿ.ಪಿ. ಕೈಲಾಸಂ ಅವರ ‘ಟೊಳ್ಳು–ಗಟ್ಟಿ’ ನಾಟಕದಲ್ಲಿ ಬರುವ ‘ಟೊಳ್ಳು’ ಪಾತ್ರಧಾರಿ ‘ಪುಟ್ಟು’ಗಳನ್ನು ನಾವು ಹುಟ್ಟುಹಾಕುತ್ತಿದ್ದೇವೆ ವಿನಃ ‘ಗಟ್ಟಿ’ ಪಾತ್ರಧಾರಿ ‘ಮಾದು’ಗಳನ್ನು ಹುಟ್ಟುಹಾಕುತ್ತಿಲ್ಲ. ಈ ನಾಟಕದ ಕೊನೆಯಲ್ಲಿ ಓದಿನಲ್ಲಿ ಮಂದಿದ್ದ ಪುಟ್ಟು ಮನೆಗೆ ಬೆಂಕಿ ಬಿದ್ದಾಗಲೂ ಪುಸ್ತಕ ಓದುತ್ತಿರುತ್ತಾನೆ. ಆದರೆ, ಓದಿನಲ್ಲಿ ದಡ್ಡ ಎನಿಸಿಕೊಂಡ ಮಾದು ಬೆಂಕಿಯಿಂದ ತಂದೆ– ತಾಯಿ, ಮನೆಯಲ್ಲಿದ್ದ ಜಾನುವಾರು ಹಾಗೂ ಬೆಲೆಬಾಳುವ ವಸ್ತುಗಳನ್ನು ರಕ್ಷಿಸುತ್ತಾನೆ.

ಬರೀ ಮೊಬೈಲ್‌, ಕಂಪ್ಯೂಟರ್‌ಗಳ ಯಾಂತ್ರಿಕ ಬದುಕಿನಲ್ಲಿ ಮುಳುಗಿರುವ ಇಂದಿನ ವಿದ್ಯಾರ್ಥಿಗಳು ತಮ್ಮ ಸುತ್ತ ‘ವರ್ಚ್ಯುವಲ್‌ ವರ್ಲ್ಡ್‌’ ಸೃಷ್ಟಿಸಿಕೊಂಡಿದ್ದಾರೆ. ‘ಈ ಕೀ ಒತ್ತಿದರೆ ಇದು ಸಿಗಬೇಕು’ ಎಂಬ ‘ಫ್ಯಾಂಟಸಿ’ ನಿರೀಕ್ಷೆ ಅವರದ್ದಾಗುತ್ತಿದೆ. ಹೀಗಾಗಿ ಅವರು ದುರ್ಬಲರಾಗುತ್ತಿದ್ದಾರೆ. ನಾವು ಮಕ್ಕಳಿಗೆ ಒದಗಿಸಿರುವ ತಾತ್ಕಾಲಿಕ ‘ಭದ್ರತಾ ವಲಯ’ ಭವಿಷ್ಯದಲ್ಲಿ ಅವರಿಗೆ ಶಾಶ್ವತ ಭದ್ರತೆ ಒದಗಿಸುವುದಿಲ್ಲ ಎಂಬುದಂತೂ ಸತ್ಯ.

‘ಸಾಧನಾಭಿಪ್ರೇರಣೆ’ ಯಶಸ್ಸಿನ ಮೆಟ್ಟಿಲಾಗಲಿ

ಮಕ್ಕಳಲ್ಲಿ ಸಾಧನಾಭಿಪ್ರೇರಣೆ ಬೆಳೆಸಿ. ಒಂದು ಸಾಧನೆ ಮತ್ತೋದು ಸಾಧನೆಗೆ ಪ್ರೇರಣೆಯಾಗುವಂತೆ ಮಾಡಿ. ಬೇರೆಯವರೊಂದಿಗೆ ಹೋಲಿಸುವ ಬದಲು ಅವರದ್ದೇ ಆದ ಹಳೆಯ ಸಾಧನೆ ಮತ್ತು ಈಗಿನ ಸಾಧನೆಗೆ ಹೋಲಿಸಿ ಸಾಧನೆಯನ್ನು ಉತ್ತಮವಾಗಿಸಿಕೊಳ್ಳಲು ಪ್ರೋತ್ಸಾಹಿಸಿ. ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳ ಅಭಿಕ್ಷಮತೆ (ಸಾಮರ್ಥ್ಯ), ಆಸಕ್ತಿ ಆಧರಿಸಿ ಅವರು ಅಧ್ಯಯನ ಮಾಡಬೇಕಾದ ಕ್ಷೇತ್ರವನ್ನು ನಿರ್ಧರಿಸಿ. ಅಗತ್ಯಕ್ಕೆ ಅನುಗುಣವಾಗಿ ಮಕ್ಕಳಿಗೆ ವೈಯಕ್ತಿಕ, ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ನೀಡಿ.
– ಡಾ.ಎಚ್‌.ಎಂ. ಶೈಲಜಾ
ಡೀನ್‌, ಶಿಕ್ಷಣ ನಿಕಾಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT