ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಕರ್ನಾಟಕ

ರಣಜಿ: ಮುಂಬೈ ತಂಡಕ್ಕೆ ಮುಖಭಂಗ, ಆತಿಥೇಯರಿಗೆ 112 ರನ್‌ ಜಯ
Last Updated 28 ಫೆಬ್ರುವರಿ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ತಲುಪುವ ಅವಕಾಶ ಯಾರ ಪಾಲಾಗಲಿದೆ ಎನ್ನುವ ಕುತೂಹಲ, ನಿರೀಕ್ಷೆಗಳೆಲ್ಲವೂ ಈಗ ತಣಿದು ಹೋಗಿವೆ. ಸೆಮಿಫೈನಲ್‌ನಲ್ಲಿ ಮುಂಬೈ ತಂಡವನ್ನು 112 ರನ್‌ಗಳಿಂದ ಬಗ್ಗುಬಡಿದ ಹಾಲಿ ಚಾಂಪಿಯನ್ನರು ಸತತ ಎರಡನೇ ವರ್ಷ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

40 ಸಲ ರಣಜಿ ಟ್ರೋಫಿ ಗೆದ್ದಿರುವ ಮುಂಬೈ ತಂಡ ಶುಕ್ರವಾರದ ಅಂತ್ಯಕ್ಕೆ ಆರು ವಿಕೆಟ್‌ ಕಳೆದುಕೊಂಡಿದ್ದಾಗಲೇ ಆತಿಥೇಯ ತಂಡದ ಗೆಲುವು ಖಚಿತ ವಾಗಿತ್ತು. ಕೊನೆಯ ಕ್ಷಣದಲ್ಲಿ ಏನಾ ದರೂ ಪವಾಡ ಆದರೆ ಹೇಗೆ ಎನ್ನುವ ಆತಂಕ ತವರಿನ ಅಭಿಮಾನಿಗಳಲ್ಲಿತ್ತು. ಆದರೆ, ನಾಲ್ಕನೇ ದಿನದಾಟ ಆರಂಭ ವಾಗಿ ಎಪ್ಪತ್ತು ನಿಮಿಷಗಳಲ್ಲಿಯೇ ಕರ್ನಾಟಕ ವಿಜೃಂಭಿಸಿತು. ಮುಂಬೈ ಒಂಬತ್ತು ವಿಕೆಟ್ಸ್‌ ಕಳೆದುಕೊಂಡು 332 ರನ್ ಗಳಿಸಿತು. ಗಾಯಗೊಂಡಿದ್ದ ಅಭಿಷೇಕ್‌ ನಾಯರ್ ಬ್ಯಾಟ್‌ ಮಾಡಲು ಕ್ರೀಸ್‌ಗೆ ಬರಲಿಲ್ಲ. ರಾಜ್ಯ ತಂಡ 445 ರನ್ ಗುರಿ ನೀಡಿತ್ತು.

ರಣಜಿ ಟೂರ್ನಿಯಲ್ಲಿ ಆತಿಥೇಯ ತಂಡ ಫೈನಲ್‌ ಪ್ರವೇಶಿಸುತ್ತಿರುವುದು ಇದು ಸತತ ಎರಡನೇ ಬಾರಿ. ಹೋದ ವರ್ಷ ಮೊಹಾಲಿಯಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ಪಂಜಾಬ್‌ ಎದುರು ಇನಿಂಗ್ಸ್‌ ಮುನ್ನಡೆ ಪಡೆದು ಪ್ರಶಸ್ತಿ ಸುತ್ತು ತಲುಪಿತ್ತು. ಫೈನಲ್‌ನಲ್ಲಿ ಮಹಾರಾಷ್ಟ್ರವನ್ನು ಮಣಿಸಿತ್ತು. ಮುಂಬೈ ಹೋದ ವರ್ಷ ಕ್ವಾರ್ಟರ್‌ ಫೈನಲ್‌ನಲ್ಲಿ ಮಹಾರಾಷ್ಟ್ರ ಎದುರು ಸೋಲು ಕಂಡಿತ್ತು.

ದೇಶಿಯ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡಗಳೆನಿಸಿರುವ ಕರ್ನಾಟಕ ಮತ್ತು ಮುಂಬೈ ನಡುವಿನ ಹೋರಾಟ ಯಾವಾಗಲೂ ಕುತೂಹಲದ ಗಣಿಯಾ ಗಿರುತ್ತದೆ. ಈ ಪಂದ್ಯದ ಸೊಬಗು ಸವಿ ಯಲು ಶನಿವಾರ ಮೂರು ಸಾವಿರಕ್ಕಿಂ ತಲೂ ಹೆಚ್ಚು ಅಭಿಮಾನಿಗಳು ಕ್ರೀಡಾಂ ಗಣಕ್ಕೆ ಬಂದಿದ್ದರು. ವೇಗಿಗಳಾದ ಅಭಿ ಮನ್ಯು ಮಿಥುನ್, ಎಸ್‌. ಅರವಿಂದ್‌ ಮತ್ತು ಲೆಗ್‌ ಸ್ಪಿನ್ನರ್‌ ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಉರುಳಿಸಿ ಜಯದ ತೋರಣ ಕಟ್ಟಿದರು.

ಎಂಟನೇ ವಿಕೆಟ್‌ ಪತನವಾಗುತ್ತಿದ್ದಂತೆ ಅಭಿಮಾನಿಗಳು ವಿಜಯೋತ್ಸವಕ್ಕೆ ಸಜ್ಜಾದರು. ಹಿಂದಿನ ಲೀಗ್‌ ಪಂದ್ಯದಲ್ಲಿ ಕರ್ನಾಟಕ ಎದುರು ಶತಕ ಗಳಿಸಿದ್ದ ಸಿದ್ದೇಶ್ ಲಾಡ್‌ 121.1ನೇ ಓವರ್‌ನಲ್ಲಿ ವಿಕೆಟ್ ಕೀಪರ್‌ ಬಳಿ ಬಾರಿಸಿದ ಚೆಂಡನ್ನು ರಾಬಿನ್‌ ಉತ್ತಪ್ಪ ಹಿಡಿತಕ್ಕೆ ಪಡೆಯುತ್ತಿದ್ದಂತೆ, ಸಂಭ್ರಮ ಉಕ್ಕಿ ಹರಿಯಿತು. ಅಭಿಮಾನಿಗಳು ಕರ್ನಾಟಕ ತಂಡಕ್ಕೆ ಜೈಕಾರ ಹಾಕಿ ಖುಷಿಪಟ್ಟರು.

ದಿನದಾಟದ ಮೊದಲ ಅವಧಿಯ ಪಿಚ್‌ ಸಾಮಾನ್ಯವಾಗಿ ಬೌಲರ್‌ಗಳಿಗೆ ನೆರವಾಗುತ್ತದೆ. ಈ ಪಂದ್ಯದಲ್ಲಿಯೂ ಅದೇ ರೀತಿ ಆಯಿತು. ಮುಂಬೈ ಶನಿವಾರ 85 ಎಸೆತಗಳನ್ನು ಎದುರಿಸಿ 55 ರನ್ ಗಳಿಸಿತು. ದಿನದಾಟ ಆರಂಭವಾಗಿ ಒಂದೇ ಗಂಟೆಯೊಳಗೆ ಗೆಲುವು ಪಡೆಯಲು ಕರ್ನಾಟಕಕ್ಕೆ ಅವಕಾಶವಿತ್ತು. ಆದರೆ, 111.5ನೇ ಓವರ್‌ನಲ್ಲಿ ಶಾರ್ದೂಲ್‌ ಠಾಕೂರ್‌ ಕವರ್‌ ಬಳಿ ಕೆ.ಎಲ್‌. ರಾಹುಲ್‌ ಕೈಗೆ ಕ್ಯಾಚ್‌ ನೀಡಿದ್ದರು. ಆದರೆ, ರಾಹುಲ್‌ ಕ್ಯಾಚ್‌ ಕೈ ಚೆಲ್ಲಿದರು.

ಈ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾದ ಶಾರ್ದೂಲ್‌ ಅವರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಆತಿಥೇಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ಶ್ರೇಯಸ್‌ 119ನೇ ಓವರ್‌ನಲ್ಲಿ ಔಟ್‌ ಮಾಡಿದರು. ಮಿಥುನ್‌ (69ಕ್ಕೆ4), ಅರವಿಂದ್‌ (64ಕ್ಕೆ2) ಮತ್ತು ಶ್ರೇಯಸ್‌ (68ಕ್ಕೆ2) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡೂ ಇನಿಂಗ್ಸ್‌ ಸೇರಿ ಏಳು ವಿಕೆಟ್ ಪಡೆದ ವಿನಯ್‌ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಮುಂದುವರಿದ ಪ್ರಾಬಲ್ಯ: ವಿನಯ್‌ ಕುಮಾರ್‌ ನಾಯಕತ್ವದ ಕರ್ನಾಟಕ ದೇಶಿಯ ಕ್ರಿಕೆಟ್‌ನಲ್ಲಿ ತನ್ನ ಪ್ರಭುತ್ವ ವನ್ನು ಮುಂದುವರಿಸಿದೆ. ಹಿಂದಿನ 26 ಪಂದ್ಯಗಳಿಂದ ಒಂದೂ ಸೋಲು ಕಂಡಿಲ್ಲ. 14ರಲ್ಲಿ ಗೆಲುವು ಪಡೆದಿದ್ದು, 12ರಲ್ಲಿ ಡ್ರಾ ಮಾಡಿಕೊಂಡಿದೆ. ಹೋದ ವರ್ಷ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ಎರಡು ಸಲ ವಿಜಯ್‌ ಹಜಾರೆ ಟೂರ್ನಿಯಲ್ಲಿ ಕರ್ನಾಟಕವೇ ಚಾಂಪಿಯನ್‌ ಆಗಿತ್ತು.

ಈ ಬಾರಿಯೂ ಫೈನಲ್‌ ತಲುಪಿರುವ ಕರ್ನಾಟಕ ಸತತ ಎರಡನೇ ಬಾರಿ ಚಾಂಪಿಯನ್‌ ಪಟ್ಟ ಪಡೆಯುವ ಹುಮ್ಮಸ್ಸಿನಲ್ಲಿದೆ. ಜೊತೆಗೆ, ಹೆಚ್ಚು ಸಲ ಟ್ರೋಫಿ ಗೆದ್ದ ಪಟ್ಟಿಯಲ್ಲಿ  ಎರಡನೇ ಸ್ಥಾನ ಪಡೆಯುವ ಗುರಿ ಹೊಂದಿದೆ. ಏಳು ಸಲ ಟ್ರೋಫಿ ಜಯಿಸಿರುವ ಕರ್ನಾಟಕ ಮತ್ತು ದೆಹಲಿ ಈಗ ಜಂಟಿ ಎರಡನೇ ಸ್ಥಾನದಲ್ಲಿವೆ.

ಮುಂಬೈ ಎದುರು ಮತ್ತೆ ಇತಿಹಾಸ
ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಬೈ ಎದುರು ಚೊಚ್ಚಲ ಗೆಲುವು ಪಡೆದು ಐತಿಹಾಸಿಕ ಸಾಧನೆ ಮಾಡಿತು. ನಾಲ್ಕರ ಘಟ್ಟದ ಹಂತದಲ್ಲಿ ಉಭಯ ತಂಡಗಳು ಏಳು ಸಲ ಮುಖಾಮುಖಿಯಾಗಿದ್ದರೂ ಕರ್ನಾಟಕ ಒಮ್ಮೆಯೂ ಗೆದ್ದಿರಲಿಲ್ಲ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.

1973-74 ಮತ್ತು 1981-82ರ ಟೂರ್ನಿಯ ಸೆಮಿಫೈನಲ್‌ನಲ್ಲಿ ಆತಿಥೇಯ ತಂಡ ಮುಂಬೈ ಎದುರು ಇನಿಂಗ್ಸ್‌ ಮುನ್ನಡೆ ಗಳಿಸಿ ಫೈನಲ್ ತಲುಪಿತ್ತು. ಹೋದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ತಂಡ ಮುಂಬೈ ಎದುರು ಲೀಗ್‌ ಪಂದ್ಯದಲ್ಲಿ ಚೊಚ್ಚಲ ಗೆಲುವು ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು. ಈಗ ಮತ್ತೊಮ್ಮೆ ವಿಜಯದ ಕೇಕೆ ಹಾಕಿದೆ.

‘ಯಶಸ್ಸಿಗೆ ಪ್ರಯೋಗ ಅನಿವಾರ್ಯ’
ಬೆಂಗಳೂರು: ‘ಬ್ಯಾಟಿಂಗ್‌ನಲ್ಲಿ ನಿರಂತರ ಸುಧಾರಣೆ ಕಂಡುಕೊಳ್ಳುವ ಕಾರಣಕ್ಕಾಗಿ ಆಗಾಗ್ಗೆ ಪ್ರಯೋಗಗಳನ್ನು ಮಾಡಲಾಗುತ್ತದೆ. ಆದ್ದರಿಂದ ಶ್ರೇಯಸ್‌ ಗೋಪಾಲ್‌ಗೆ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲಾಯಿತು. ಈ ರೀತಿಯ ಪ್ರಯೋಗಗಳು ಅನಿವಾರ್ಯ...’

ಕರ್ನಾಟಕ ತಂಡದ ನಾಯಕ ವಿನಯ್‌ ಕುಮಾರ್‌ ಅವರ ಮಾತುಗಳಿವು. ಈ ಸಲದ ರಣಜಿಯಲ್ಲಿ ಅಮೋಘ ಆಟವಾಡಿರುವ ಶ್ರೇಯಸ್ ಅವರನ್ನು ಮುಂಬೈ ಎದುರಿನ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ಈ ನಿರ್ಧಾರವನ್ನು ವಿನಯ್‌ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು. ಅವರು ಮಾತನಾಡಿದ ವಿವರ ಇಲ್ಲಿ ನೀಡಲಾಗಿದೆ.

* ಕರ್ನಾಟಕ ತಂಡ ಸತತ ಎರಡನೇ ಸಲ ಫೈನಲ್‌ ತಲುಪಿದೆ. ಈ ಬಗ್ಗೆ ಹೇಳಿ.
400ಕ್ಕಿಂತಲೂ ಹೆಚ್ಚು ರನ್‌ ಗುರಿ ನೀಡಿದ್ದರಿಂದ ಜಯದ ವಿಶ್ವಾಸವಿತ್ತು. ಪ್ರತಿದಿನದ ಮೊದಲ ಅವಧಿಯಲ್ಲಿ ಎರಡು–ಮೂರು ವಿಕೆಟ್‌ಗಳನ್ನು ಪಡೆಯುತ್ತಲೇ ಬಂದಿದ್ದೇವೆ. ಆದ್ದರಿಂದ ಈ ಗೆಲುವು ನಿರೀಕ್ಷಿತವೇ ಆಗಿತ್ತು.

* ತಟಸ್ಥ ಸ್ಥಳದಲ್ಲಿ ಫೈನಲ್‌ ಆಯೋಜ ನೆಯಾಗಿದೆ. ಈ ಬಗ್ಗೆ ಹೇಳಿ.
ಮುಂಬೈ ಎದುರು ಗೆಲುವು ಪಡೆಯಲು ತವರಿನ ಅಭಿಮಾನಿಗಳು ನೀಡಿದ ಬೆಂಬಲ ಪ್ರತಿಯೊಬ್ಬ ಆಟಗಾರನಲ್ಲೂ ಸ್ಫೂರ್ತಿ ತುಂಬಿದೆ. ಫೈನಲ್‌ ವೇಳೆ ಆ ಕೊರಗು ನಮ್ಮನ್ನು ಕಾಡಲಿದೆ. ಆದರೆ, ನಮಗೆ ಬೇಕಾದಲ್ಲಿ ಪಂದ್ಯ ಆಯೋಜಿಸುವುದು ನಮ್ಮ ಕೈಯಲ್ಲಿ ಇಲ್ಲವಲ್ಲ.

* ಮಿಥುನ್‌ ಆಟದ ಬಗ್ಗೆ ಹೇಳಿ.
ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಮಿಥುನ್‌ ತೋರಿದ ಆಟ ಮೆಚ್ಚುವಂಥದ್ದು. ಆರಂಭದಲ್ಲಿ ಬ್ಯಾಟ್‌ ಮಾಡಲು ಮಿಥುನ್‌ ಕೊಂಚ ಹಿಂಜರಿದಿದ್ದ. ಆದರೆ, ಕೆಲ ಹೊತ್ತಿನ ಬಳಿಕ ಕ್ರೀಸ್‌ ಹೊಂದಿಕೊಂಡಿದ್ದು ನೋಡಿ ಖುಷಿಯಾಯಿತು. ಸತ್ವ ಕಳೆದುಕೊಂಡ ಪಿಚ್‌ಗಳಲ್ಲಿಯೂ ವಿಕೆಟ್ ಪಡೆಯುವುದು ಹೇಗೆ ಎನ್ನುವುದು ಮಿಥುನ್‌ಗೆ ಗೊತ್ತು.

* ಕರ್ನಾಟಕ ತಂಡದ ಮಧ್ಯಮ ಕ್ರಮಾಂಕದ  ಬ್ಯಾಟಿಂಗ್‌ ಪದೇ ಪದೇ ವೈಫಲ್ಯಕ್ಕೆ ಒಳಗಾಗುತ್ತಿದೆಯಲ್ಲಾ.
ಅದು ನಿಜ. ಮಧ್ಯಮ ಕ್ರಮಾಂಕದಲ್ಲಿ ನಾವು ತುಂಬಾ ಕೆಲಸ ಮಾಡಬೇಕಿದೆ. ಎಚ್ಚರಿಕೆಯಿಂದ ಎಸೆತಗಳನ್ನು ಎದುರಿಸಬೇಕು.  ಮನೀಷ್‌ ಪಾಂಡೆ ಹಾಗೂ ಕರುಣ್‌ ನಾಯರ್‌ ಫೈನಲ್‌ ಪಂದ್ಯದ ವೇಳೆಗೆ ಫಾರ್ಮ್‌ಗೆ ಮರಳುವ ವಿಶ್ವಾಸವಿದೆ.

*ಬ್ಯಾಟಿಂಗ್‌ ಕ್ರಮಾಂಕದಲ್ಲಿ  ಬದ ಲಾವಣೆ ಮಾಡಲು ಕಾರಣವೇನು.
ಒಬ್ಬ ಆಟಗಾರ ಎಲ್ಲಾ ಕ್ರಮಾಂಕಗಳಲ್ಲಿ ಆಡುವುದನ್ನು ರೂಢಿಸಿಕೊಳ್ಳಬೇಕು. ಆದ್ದರಿಂದ ಆಗಾಗ್ಗೆ ಪ್ರಯೋಗಗಳನ್ನು ಮಾಡಲಾಗುತ್ತದೆ. ಬ್ಯಾಟಿಂಗ್‌ ವಿಭಾಗ ಬಲಗೊಳಿಸಲು ನಾವು ಆಯ್ಕೆ ಮಾಡಿಕೊಂಡ ಮಾರ್ಗವಿದು. ಆದರೆ, ಪ್ರತಿ ಸಲವೂ ಯಶಸ್ಸು ಸಿಗುತ್ತದೆ ಎಂದು ನಿರೀಕ್ಷೆ ಮಾಡುವುದು ಕಷ್ಟ.

*ಫೈನಲ್‌ನಲ್ಲಿ ಗೌತಮ್‌ ಆಡುವುರೇ.
ಗುಣಮುಖನಾಗಿದ್ದೇನೆ ಎಂದು ಗೌತಮ್‌ ಹೇಳಿದ್ದಾರೆ. ಮೂರು ನಾಲ್ಕು ದಿನಗಳಲ್ಲಿ ಅವರು ಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.

ಪ್ರಮುಖ ಮಾಹಿತಿಗಳು
* ಕರ್ನಾಟಕ ಫೈನಲ್‌ ಪ್ರವೇಶಿಸಿದ್ದು ಇದು 14ನೇ ಸಲ
* ಈ ಸಲದ ರಣಜಿಯಲ್ಲಿ ಪಡೆದ ಐದನೇ ಗೆಲುವು ಇದು.
* ರಣಜಿಯಲ್ಲಿ ಮುಂಬೈ ಎದುರು ಹೆಚ್ಚು ವಿಕೆಟ್‌ ಪಡೆದ ಸಾಧನೆಗೆ ವಿನಯ್‌ ಪಾತ್ರರಾದರು. ಅವರು ಒಟ್ಟು 33 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಸುನಿಲ್‌ ಜೋಶಿ (30) ದಾಖಲೆಯನ್ನು ಅಳಿಸಿ ಹಾಕಿದರು.
* ಈ ಸಲದ ಟೂರ್ನಿಯಲ್ಲಿ 8 ಪಂದ್ಯಗಳಿಂದ 41 ವಿಕೆಟ್‌ ಪಡೆದಿರುವ ವಿನಯ್‌ ಹೆಚ್ಚು ವಿಕೆಟ್‌ ಪಡೆದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮುಂಬೈನ ಶಾರ್ದೂಲ್‌ ಠಾಕೂರ್‌ (48 ವಿಕೆಟ್‌) ಮತ್ತು ಆಂಧ್ರದ ಶಿವಕುಮಾರ್‌ (44 ವಿಕೆಟ್‌) ಮೊದಲ ಎರಡು ಸ್ಥಾನ ಹೊಂದಿದ್ದಾರೆ.
* ರಣಜಿಯಲ್ಲಿ ಮುಂಬೈ ಎದುರು ಕರ್ನಾಟಕಕ್ಕೆ ಎರಡು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟ ಏಕೈಕ ನಾಯಕ ವಿನಯ್‌ ಕುಮಾರ್‌.

ಅಂಪೈರ್ ತೀರ್ಪಿಗೆ ಆಮ್ರೆ ಕಟು ಟೀಕೆ
ಬೆಂಗಳೂರು: ‘ಬಿಸಿಸಿಐ ಉತ್ತಮ ಗುಣಮಟ್ಟದ ಅಂಪೈರ್‌ಗಳನ್ನು ಆಯ್ಕೆ ಮಾಡಲಿ. ಇಲ್ಲವಾದರೆ, ಕರ್ನಾಟಕ ಎದುರು ಆದ ತಪ್ಪುಗಳು ಎಲ್ಲಾ ಪಂದ್ಯಗಳಲ್ಲಿ ಆಗುತ್ತವೆ. ಅಂಪೈರ್‌ಗಳ ಕೆಟ್ಟ ತೀರ್ಪು ನಮ್ಮ ಸೋಲಿಗೆ ಕಾರಣವಾಯಿತು’ ಎಂದು ಮುಂಬೈ ಕೋಚ್‌ ಪ್ರವೀಣ್ ಆಮ್ರೆ ಅಸಮಾಧಾನ ಹೊರಹಾಕಿದರು.

‘ತಂಡದ ಕೋಚ್‌ ಆಗಿ ಈ ಸೋಲನ್ನು ನಾನು ಒಪ್ಪುವುದಿಲ್ಲ. ಮಹತ್ವದ ಪಂದ್ಯಗಳಲ್ಲಿ ಉತ್ತಮ ಅಂಪೈರ್‌ಗಳು ಇಲ್ಲವಾದರೆ ಆಟಗಾರರ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ. ರಾಬಿನ್‌ ಉತ್ತಪ್ಪ ಔಟಾಗಿದ್ದರೂ ಅಂಪೈರ್‌ ಸರಿಯಾದ ತೀರ್ಪು ನೀಡಲಿಲ್ಲ.  ಆದಿತ್ಯ ತಾರೆ ಔಟ್‌ ಇಲ್ಲದಿದ್ದರೂ ಅನ್ಯಾಯವಾಗಿ ಹೊರಹೋಗ ಬೇಕಾಯಿತು’ ಎಂದೂ ಆಮ್ರೆ ಆರೋಪಿಸಿದರು. ಅಂಪೈರ್‌ ವಿನೀತ್‌ ಕುಲಕರ್ಣಿ ಅವರು ಈ ಎರಡೂ ತೀರ್ಪುಗಳನ್ನು ನೀಡಿದ್ದರು.

ಅಂಪೈರ್ ತೀರ್ಪಿನ ಬಗ್ಗೆ ಮುಂಬೈ ತಂಡದ ನಾಯಕ ಆದಿತ್ಯ ತಾರೆ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ ತಾರೆಗೆ ಪಂದ್ಯದ ರೆಫರಿ ವಿ. ನಾರಾಯಣ ಕುಟ್ಟಿ ಛೀ ಮಾರಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT