ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೋ ಮಾತು

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಬ್ರಿಟಿಷ್‌ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ತಮ್ಮ ಪ್ರಭಾವಶಾಲಿ ಭಾಷಣಗಳಿಂದ ಹೆಸರಾದವರು. ಎರಡನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದಾಗ ಅವರ ರಾಷ್ಟ್ರಕ್ಕೆ ಆ ಭಾಷಣಗಳೇ ಇಂಧನದಂತೆ ಒದಗಿ ಬಂದವು. ‘ಬ್ರಿಟಿಷ್‌ ಬುಲ್‌ಡಾಗ್‌’ ಎನ್ನುವುದು ಅವರ ಇಮೇಜ್. ಹಾಗೆಂದೇ ಅನೇಕರು ಅವರನ್ನು ಕರೆಯುತ್ತಿದ್ದರು.

ಕೆನಡಾ ಸಂಸತ್‌ನಲ್ಲಿ ಮಾತನಾಡುತ್ತಾ ಚರ್ಚಿಲ್‌ ಒಟ್ಟಾವದಲ್ಲಿ ಇದ್ದ ಸಂದರ್ಭ. ಆಗ ದಿಢೀರನೆ ಅವರಿಗೆ ತಮಗಾಗಿ ಕಾಯುತ್ತಿದ್ದ ಫೋಟೊಗ್ರಾಫರ್‌ ಕಾಣಿಸಿದರು. ಆತ ಬರುವ ಕುರಿತು ಅವರಿಗೆ ಮಾಹಿತಿ ಇರಲಿಲ್ಲ. ಎರಡು ನಿಮಿಷ ಕಾಲಾವಕಾಶ ಕೊಟ್ಟು, ತಮ್ಮದೇ ಶೈಲಿಯಲ್ಲಿ ಸಿಗಾರ್‌ ಸೇದುತ್ತಾ ನಿಂತರು.

ಯೂಸುಫ್‌ ಕರ್ಶ್‌ ಒಂದು ಬೂದಿಬಟ್ಟಲನ್ನು ಮುಂದಕ್ಕೆ ಹಿಡಿದು, ಅದರಲ್ಲಿ ಸಿಗಾರ್‌ ಇಡುವಂತೆ ಪರೋಕ್ಷವಾಗಿ ಕೇಳಿಕೊಂಡರು. ಚರ್ಚಿಲ್‌ ಅದನ್ನು ಕೆಳಗಿಡಲು ಒಪ್ಪಲಿಲ್ಲ. ಕ್ಯಾಮೆರಾ ಅಣಿಮಾಡಿಕೊಂಡ ನಂತರ ಕರ್ಶ್‌ ಮೆಲ್ಲಗೆ ಅವರ ಬಳಿಗೆ ಹೋಗಿ, ‘ನನ್ನನ್ನು ಕ್ಷಮಿಸಿ ಸರ್‌’ ಎಂದು ಸಿಗಾರ್‌ ಅನ್ನು ಚರ್ಚಿಲ್‌ ಬಾಯಿಯಿಂದ ಹೊರತೆಗೆದು ಪಕ್ಕಕ್ಕಿಟ್ಟರು. ಲಗುಬಗೆಯಲ್ಲಿ ಕ್ಯಾಮೆರಾ ಹಿಡಿದು ಫೋಟೊ ಕ್ಲಿಕ್ಕಿಸಿದರು.

ಉಕ್ಕಿಬಂದ ಕೋಪವನ್ನು ವ್ಯಕ್ತಪಡಿಸುವ ಚಡಪಡಿಕೆಯಲ್ಲಿದ್ದ ಚರ್ಚಿಲ್‌ ಸಹಜ ಫೋಟೊ ಸಿಕ್ಕಿತು. ಮರುಕ್ಷಣವೇ ಚರ್ಚಿಲ್‌ ಕೋಪ ತಣ್ಣಗಾಯಿತು. ಫೋಟೊಗ್ರಾಫರ್‌ ಕೈಕುಲುಕಿ, ‘ನೀನು ಗರ್ಜಿಸುವ ಸಿಂಹವನ್ನೂ ತಣ್ಣಗಾಗಿಸುವ ಚಾಲಾಕಿ’ ಎಂದು ಶ್ಲಾಘಿಸಿದರು. ತಣ್ಣಗಿನ ಭಂಗಿಯಲ್ಲಿ ಇನ್ನೊಂದು ಪೋಸ್‌ ಕೊಟ್ಟರು.

ಕರ್ಶ್‌ ತಾವು ತೆಗೆದ ಫೋಟೊಗೆ ‘ದಿ ರೋರಿಂಗ್‌ ಲಯನ್‌’ ಎಂದೇ ಶಿರ್ಷಿಕೆ ನೀಡಿದರು. ‘ದಿ ಲೈಫ್‌’ ಪತ್ರಿಕೆಯ 1945ರ ಮೇ ಸಂಚಿಕೆಯಲ್ಲಿ ಕರ್ಶ್‌ ತೆಗೆದ ಈ ಫೊಟೊ ಪ್ರಕಟವಾಯಿತು. ಟರ್ಕಿಯಲ್ಲಿ ಹುಟ್ಟಿದ ಕರ್ಶ್‌ ಸಮಸ್ಯೆಯ ಕತ್ತಿಯಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಬಂದವರು. ಈ ಫೋಟೊ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT