ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀ ಬೇಸಿಕ್ಸ್‌ಗೆ ವ್ಯಾಪಕ ಪ್ರತಿರೋಧ

ಫೇಸ್‌ಬುಕ್‌ ಉಪಕ್ರಮಕ್ಕೆ ಖಂಡನೆ
Last Updated 30 ಡಿಸೆಂಬರ್ 2015, 19:37 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್‌): ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು ಉಚಿತವಾಗಿ ನೀಡುವ ಫೇಸ್‌ಬುಕ್‌ನ ‘ಫ್ರೀ ಬೇಸಿಕ್ಸ್‌’ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಐಐಎಸ್‌ಸಿಯ ಪ್ರಾಧ್ಯಾಪಕರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

ಈ ಅಭಿಯಾನ ‘ನ್ಯೂನತೆ’ಗಳಿಂದ ಕೂಡಿದೆ ಮತ್ತು ‘ತಪ್ಪು ದಾರಿಗೆಳೆಯುವಂತಿದೆ’ ಎಂದು ಅವರು ಹೇಳಿದ್ದಾರೆ.

ಬಾಂಬೆ, ದೆಹಲಿ, ಖರಗ್‌ಪುರ, ಮದ್ರಾಸ್‌ ಮತ್ತು ಪಾಟ್ನಾ ಐಐಟಿಗಳು ಮತ್ತು ಬೆಂಗಳೂರು ಐಐಎಸ್‌ಸಿಯ 50 ಪ್ರಾಧ್ಯಾಪಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಫೇಸ್‌ಬುಕ್‌ನ ಅಭಿಯಾನ ಮಾರಕ ಎಂದು ಹೇಳಿದ್ದಾರೆ.

‘ಈ ಅಭಿಯಾನವು ಭಾರತೀಯರು ಹೇಗೆ ಅಂತರ್ಜಾಲ ಬಳಸಬೇಕು ಎಂಬ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮೂರು ಪ್ರಮುಖ ನ್ಯೂನತೆಗಳನ್ನು ಅವರು ಪಟ್ಟಿ ಮಾಡಿದ್ದು ಫೇಸ್‌ಬುಕ್‌ನ ‘ಫ್ರೀ ಬೇಸಿಕ್ಸ್‌’ ಪ್ರಸ್ತಾವವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ಮೂರು ನ್ಯೂನತೆಗಳು
*ಬೇಸಿಕ್ಸ್‌ ಅಥವಾ ಮೂಲಭೂತ ಸೇವೆಗಳು ಯಾವುವು ಎಂಬುದನ್ನು ನಿರ್ಧರಿಸುವ ಅಧಿಕಾರ ಫೇಸ್‌ಬುಕ್‌ನದ್ದೇ ಆಗಿರುತ್ತದೆ.
*ಬಳಕೆದಾರರ ಎಲ್ಲ ಆ್ಯಪ್‌ಗಳಲ್ಲಿರುವ ಮಾಹಿತಿಯನ್ನು ನೋಡುವ ಅವಕಾಶ ಫೇಸ್‌ಬುಕ್‌ಗೆ ದೊರೆಯುತ್ತದೆ
*‘ಫ್ರೀ ಬೇಸಿಕ್ಸ್‌’ನಲ್ಲಿ ಇರುವ ಫ್ರೀ ಅಥವಾ ಉಚಿತ ಎಂಬ ಪದ ಮಾರುಕಟ್ಟೆಯನ್ನು ವಶಕ್ಕೆ ಪಡೆಯುವ ತಂತ್ರ ಮಾತ್ರ.

ಸ್ಟಾರ್ಟ್‌ಅಪ್‌ ಸಿಇಒಗಳ  ವಿರೋಧ: ಪ್ರಮುಖ ಒಂಬತ್ತು ಸ್ಟಾರ್ಟ್‌ಅಪ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ‘ಫ್ರೀ ಬೇಸಿಕ್ಸ್‌’ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಾಯ್‌ಗೆ ಪತ್ರ ಬರೆದಿರುವ ಅವರು ‘ಅಂತರ್ಜಾಲದ ಮುಕ್ತ ಸ್ವರೂಪವನ್ನು ಉಳಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಡಿಜಿಟಲ್‌ ಸಮಾನತೆ ಯತ್ನ’ (ಪಿಟಿಐ ವರದಿ): ಮತ್ತೊಂದಡೆ, ‘ಫ್ರೀ ಬೇಸಿಕ್ಸ್‌’ ಸೇವೆಯನ್ನು ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಝುಕರ್‌ಬರ್ಗ್‌ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಅವರು, ‘ಫ್ರೀ ಬೇಸಿಕ್ಸ್‌’ ಭಾರತದಲ್ಲಿ ಡಿಜಿಟಲ್‌ ಅಸಮಾನತೆಯನ್ನು ಹೋಗಲಾಡಿಸಲು ನೆರವು ನೀಡುತ್ತದೆ ಎಂದು ಝುಕರ್‌ಬರ್ಗ್‌ ಪ್ರತಿಪಾದಿಸಿದ್ದಾರೆ.

‘ಫ್ರೀ ಬೇಸಿಕ್ಸ್‌ ಬಳಸುವ ಜನರ ಆಯ್ಕೆಯನ್ನು ನಿರಾಕರಿಸಲು ಯಾವುದೇ ಮೌಲಿಕ ಕಾರಣಗಳು ಇಲ್ಲ. ಕಳೆದ ಕೆಲವು ವಾರಗಳ ಅವಧಿಯಲ್ಲಿ ಭಾರತದ ಸಾವಿರಾರು ಜನರು ಇದನ್ನೇ ಟ್ರಾಯ್‌ಗೆ ಹೇಳಿದ್ದಾರೆ’ ಎಂದು ಝುಕರ್‌ಬರ್ಗ್‌ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ‘ಸೇವ್‌ ದ ಇಂಟರ್ನೆಟ್‌ ಡಾಟ್‌ ಇನ್‌’ನ ಪ್ರತಿನಿಧಿ ನಿಖಿಲ್‌ ಪಹ್ವಾ, ಫೇಸ್‌ಬುಕ್‌ ಆಯ್ದ ತಾಣಗಳನ್ನು ಮಾತ್ರ ಬಳಕೆದಾರರಿಗೆ ಒದಗಿಸುವ ಮಾದರಿಯನ್ನು ಪ್ರಶ್ನಿಸಿದ್ದಾರೆ.

‘ಬಡ ಬಳಕೆದಾರರಿಗೆ ಮುಕ್ತ ಮತ್ತು ವೈವಿಧ್ಯಮಯವಾದ ಅಂತರ್ಜಾಲದ ಸಂಪರ್ಕವನ್ನು ನಿರಾಕರಿಸಿ ಕೆಲವೇ ಕೆಲವು ತಾಣಗಳನ್ನು ಮಾತ್ರ ಉಚಿತವಾಗಿ ಯಾಕೆ ನೀಡಲಾಗುತ್ತದೆ’ ಎಂದು ಅವರು ಕೇಳಿದ್ದಾರೆ.

ಐಎಎಂಎಐ ಆಕ್ಷೇಪ: ಫೇಸ್‌ಬುಕ್‌ ಮತ್ತು ಗೂಗಲ್‌ ಕೂಡ ಸದಸ್ಯರಾಗಿರುವ ಭಾರತೀಯ ಅಂತರ್ಜಾಲ ಮತ್ತು ಮೊಬೈಲ್‌ ಸಂಘಟನೆ (ಐಎಎಂಎಐ) ಕೂಡ ‘ಫ್ರೀ ಬೇಸಿಕ್ಸ್‌’ಗೆ ಆಕ್ಷೇಪ ವ್ಯಕ್ತಪಡಿಸಿದೆ.

ಫ್ರೀ ಬೇಸಿಕ್ಸ್‌ ಅಭಿಯಾನವು ಜನರು ನೋಡುವ ವಿಷಯ ಅಥವಾ ಅಂತರ್ಜಾಲ ತಾಣದ ಆಧಾರದಲ್ಲಿ ಬೇರೆ ಬೇರೆ ತಾಣಗಳಿಗೆ ಭಿನ್ನ ದರ ವಿಧಿಸುವ ಪದ್ಧತಿಗೆ ಕಾರಣವಾಗುತ್ತದೆ ಎಂದು ಐಎಎಂಎಐ ಹೇಳಿದೆ.

ಇದು ಟ್ರಾಯ್‌ನ ದರ ನಿಯಂತ್ರಣ ನೀತಿ ಉಲ್ಲಂಘನೆ ಮಾತ್ರವಲ್ಲ, ತಟಸ್ಥ ಅಂತರ್ಜಾಲ ತತ್ವಗಳ ಉಲ್ಲಂಘನೆಯೂ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರತಿಕ್ರಿಯೆ ದಿನಾಂಕ ವಿಸ್ತರಣೆ: ಭಿನ್ನ ದರ ವಿಧಿಸುವುದಕ್ಕೆ ಸಂಬಂಧಿಸಿದ ನೀತಿ ನಿರೂಪಣಾ ದಾಖಲೆಯ ಪರ ಪ್ರತಿಕ್ರಿಯೆ ಸಲ್ಲಿಸುವ ದಿನಾಂಕವನ್ನು ಟ್ರಾಯ್‌ ಜನವರಿ 7ರವರೆಗೆ ವಿಸ್ತರಿಸಿದೆ.

ಉದ್ಯಮ ಸಂಸ್ಥೆಗಳ ಒತ್ತಾಯದ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಟ್ರಾಯ್‌ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಹೇಳಿದ್ದಾರೆ. ಈ ಪ್ರಸ್ತಾವದ ವಿರುದ್ಧ ಪ್ರತಿಕ್ರಿಯೆ ನೀಡಲು ಜನವರಿ 14ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಈತನಕ ಟ್ರಾಯ್‌ಗೆ 16.5 ಲಕ್ಷ ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ 8 ಲಕ್ಷ ಪ್ರತಿಕ್ರಿಯೆಗಳು ಫೇಸ್‌ಬುಕ್‌ ಅಥವಾ ಫ್ರೀ ಬೇಸಿಕ್ಸ್‌ ಮೂಲಕ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT