ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಚರ್ ಅರ್ಧಶತಕ: ವಿಂಡೀಸ್‌ಗೆ ಜಯ

ಕ್ರಿಕೆಟ್‌: ಚಾಂಪಿಯನ್ ತಂಡಕ್ಕೆ ಸೋಲು, ಬ್ಯಾಟಿಂಗ್‌ ಮಾಡದೇ ನಿರಾಸೆ ಮೂಡಿಸಿದ ಗೇಲ್‌
Last Updated 20 ಮಾರ್ಚ್ 2016, 20:06 IST
ಅಕ್ಷರ ಗಾತ್ರ

ಬೆಂಗಳೂರು:  ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ಕ್ರಿಸ್‌ ಗೇಲ್ ಭಾನುವಾರ ಬ್ಯಾಟಿಂಗ್‌ ಮಾಡಲಿಲ್ಲ. ಆದರೂ ವೆಸ್ಟ್‌ ಇಂಡೀಸ್ ವಿರುದ್ಧ ಹಾಲಿ ಚಾಂಪಿಯನ್ ಶ್ರೀಲಂಕಾ ಜಯಿಸಲಿಲ್ಲ.

ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯ ಒಂದನೇ ಗುಂಪಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಎಡಗಾಲಿನ ಸ್ನಾಯುಸೆಳೆತದಿಂದ ಬಳಲಿದ್ದ ಗೇಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿಯಲಿಲ್ಲ. ಆದರೂ ಈ ಅವಕಾಶವನ್ನು ಬಳಸಿಕೊಳ್ಳಲು ಶ್ರೀಲಂಕಾ ತಂಡಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ, ಮೊದಲು ಬ್ಯಾಟಿಂಗ್ ಮಾಡಿದ್ದ ಏಂಜೆಲೊ ಮ್ಯಾಥ್ಯೂಸ್‌ ಬಳಗವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 121 ರನ್‌ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು.

ಗುರಿಯನ್ನು ಬೆನ್ನತ್ತಿದ ವಿಂಡೀಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಆ್ಯಂಡ್ರೆ ಫ್ಲೆಚರ್ (ಔಟಾಗದೇ 84)  ಗೇಲ್ ಜಾಗವನ್ನು ತುಂಬಿದರು. ವಿಂಡೀಸ್ ಬಳಗವು 7 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಪರಾಭ ವಗೊಳಿಸಿತು.  18.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 127 ರನ್ ಗಳಿಸಿದ ವಿಂಡೀಸ್ ಜಯದ ಕೇಕೆ ಹಾಕಿತು.  ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗೇಲ್ ಅಬ್ಬರದ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಜಯಿಸಿದ್ದ ಕೆರೆಬಿಯನ್ ದ್ವೀಪದ ಬಳಗಕ್ಕೆ ಇದು ಎರಡನೇ ಜಯ.

ಗಾಯಗೊಂಡಿರುವ ಲಸಿತ್ ಮಾಲಿಂಗ್  ಅವರಿಲ್ಲದೇ ಕಣಕ್ಕಿಳಿದ ತಂಡಕ್ಕೆ ಅನುಭವಿ ಬೌಲಿಂಗ್‌ ಕೊರತೆಯೂ ಕಾಡಿತು. ಅಲ್ಲದೇ ಕಳಪೆ ಫೀಲ್ಡಿಂಗ್‌ ಕೂಡ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ ಚಾಂಪಿಯನ್‌ ತಂಡದ ಫೀಲ್ಡರ್‌ಗಳು ಕೈಕೈ ಹಿಸುಕಿಕೊಂಡರು. ಬ್ಯಾಟಿಂಗ್‌ನಲ್ಲಿ ಮಧ್ಯಮಕ್ರಮಾಂಕವು ಬೇಗನೆ ಕುಸಿದಿದ್ದು ಕೂಡ ಹಿನ್ನಡೆಗೆ ಕಾರಣವಾಯಿತು.

ಫ್ಲೆಚರ್ ಅಬ್ಬರ: ಜಾನ್ಸನ್ ಚಾರ್ಲ್ಸ್ ಜತೆಗೆ ಇನಿಂಗ್ಸ್ ಆರಂಭಿಸಿದ ಫ್ಲೆಚರ್ ಮೊದಲ ಓವರ್‌ನಿಂದಲೇ ಲಂಕಾ ಬೌಲರ್‌ಗಳ ಬೆವರಿಳಿಸಿದರು. ಒಂದು ಸಿಕ್ಸರ್ ಮತ್ತು ಬೌಂಡರಿಯೊಂದಿಗೆ ತಂಡದ ಖಾತೆಯನ್ನು ಅರಂಭಿಸಿದರು. ಇನ್ನೊಂದೆಡೆ ನಿಧಾನವಾಗಿ ಆಡುತ್ತಿದ್ದ ಚಾರ್ಲ್ಸ್ ಅವರ ಸುಲಭ ಕ್ಯಾಚ್‌ ಅನ್ನು ಕಪುಗೆದರಾ ಮಿಡ್‌ವಿಕೆಟ್‌ ಬಳಿ ನೆಲಕ್ಕೆ ಚೆಲ್ಲಿದರು.

ಆದರೆ, ಚಾರ್ಲ್ಸ್‌ ಇದರ ಪ್ರಯೋಜನ ಪಡೆಯಲಿಲ್ಲ. ಕೇವಲ 10 ರನ್ ಗಳಿಸಿದ ಅವರು ಜೆಫ್ರಿ ವಾಂಡರ್ಸೆ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಮರ್ಲಾನ್ ಸ್ಯಾಮುಯೆಲ್ಸ್‌, ಮತ್ತು ದಿನೇಶ್ ರಾಮ್ದೀನ್ ವಿಕೆಟ್‌ಗಳನ್ನು ಸ್ಪಿನ್ನರ್ ಮಿಲಿಂದ ಸಿರಿವರ್ಧನೆ ಪಾಲಾದಾಗ ತಂಡವು 72 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ, ಫ್ಲೆಚರ್‌ ಮಾತ್ರ ದಿಟ್ಟತನದಿಂದ ಬ್ಯಾಟ್‌ ಬೀಸುತ್ತಿದ್ದರು. ತಾವೂ ಸೇರಿದಂತೆ ಏಳು ಬೌಲರ್‌ಗಳನ್ನು ಕಣಕ್ಕೆ ಇಳಿಸಿದ ಮ್ಯಾಥ್ಯೂಸ್‌  ತಂತ್ರಗಳು ಫಲಿಸಲಿಲ್ಲ.

37 ಎಸೆತಗಳಲ್ಲಿ ಐದು ಬೌಂಡರಿಗಳು, ಮೂರು ಸಿಕ್ಸರ್‌ಗಳು ಇದ್ದ ಅರ್ಧಶತಕವನ್ನು ಫ್ಲೆಚರ್ ದಾಖಲಿಸಿದರು. ಇನ್ನೊಂದೆಡೆ ಆ್ಯಂಡ್ರೆ ರಸೆಲ್ (20; 8ಎ, 3ಬೌಂ, 1ಸಿ) ಉತ್ತಮ ಜೊತೆ ನೀಡಿದರು. 15ನೇ ಓವರ್‌ನಲ್ಲಿ ಜೀವದಾನ ಪಡೆದ ಫ್ಲೆಚರ್ ಮತ್ತಷ್ಟು ಬಿರುಸಿನ ಆಟಕ್ಕೆ ಇಳಿದರು. 15ನೇ ಒವರ್‌ನಲ್ಲಿ ಸತತ ಎರಡು ಸಿಕ್ಸರ್ ಗಳಿಸಿದ ಅವರು ತಂಡವನ್ನು ಜಯದ ಬಾಗಿಲಿಗೆ ತಂದು ನಿಲ್ಲಿಸಿದರು. ಕೊನೆಯ 12 ಎಸೆತಗಳಲ್ಲಿ 7 ರನ್‌ಗಳು ಅವಶ್ಯಕತೆಯಿದ್ದಾಗ ಆ್ಯಂಡ್ರೆ ರಸೆಲ್ ಕವರ್ಸ್ ಫೀಲ್ಡರ್ ತಲೆಯ ಮೇಲಿಂದ ಒಂದು ಸಿಕ್ಸರ್ ಮತ್ತು ಡೀಪ್‌ ಸ್ಕ್ವೇರ್‌ ಲೆಗ್‌ಗೆ ಒಂದು ಬೌಂಡರಿ ಹೊಡೆದು ಜಯದ ನಗೆ ಬೀರಿದರು.

ಬದ್ರಿ ಕೈಚಳಕ; ತಿಸಾರಾ ಹೋರಾಟ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡ ಡರೆನ್ ಸಾಮಿ ಬಳಗಕ್ಕೆ  ಆರಂ ಭಿಕ ಓವರ್‌ನಲ್ಲಿ ಆಘಾತ ಕಾದಿತ್ತು. ಶ್ರೀಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ ಮನ್ ಸಿಕ್ಸರ್‌ನೊಂದಿಗೆ ತಮ್ಮ ಖಾತೆ ತೆರೆದರು. ನಾಲ್ಕನೇ ಓವರ್‌ನಲ್ಲಿ ಅವರ ಬದಲಿಗೆ ಬೌಲಿಂಗ್‌ಗೆ ಇಳಿದ ಕಾರ್ಲೋಸ್ ಬ್ರಾಥ್‌ವೈಟ್ ತಮ್ಮ ಕೈಚ ಳಕ ತೋರಿದರು. ವೇಗಿ ಕಾರ್ಲೋಸ್ ಕೆಳಹಂತದ ಎಸೆತಕ್ಕೆ ದಿಲ್ಶಾನ್ ಎಲ್‌ಬಿ ಡಬ್ಲ್ಯು ಆದರು. ಜೆರೋಮ್ ಟೇಲರ್ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಬ್ರಾಥ್‌ವೈಟ್  ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಲ್ ಅವರು ಫೀಲ್ಡರ್ ಜಾನ್ಸನ್ ಚಾರ್ಲ್ಸ್ ಚುರುಕಾದ ಫೀಲ್ಡಿಂಗ್‌ಗೆ ರನ್‌ಔಟ್ ಆದರು.

ನಂತರ ಲೆಗ್‌ಸ್ಪಿನ್ನರ್ ಬದ್ರಿ ಕೈಚಳಕಕ್ಕೆ ಲಾಹಿರು ತಿರಿಮಾನ್ನೆ (5), ಚಾಮಿರಾ ಕಪುಗೆದೆರಾ (06), ಮಿಲಿಂದಾ ಸಿರಿವ ರ್ಧನೆ ಔಟಾದಾಗ, ತಂಡದ ಮೊತ್ತ ಕೇವಲ 47 ರನ್ ಆಗಿತ್ತು. ನಾಯಕ ಏಂಜೆಲೊ ಮ್ಯಾಥ್ಯೂಸ್ (20; 32ಎ) ಮತ್ತು ತಿಸಾರ ಪೆರೆರಾ ನಿಧಾನಗತಿಯಲ್ಲಿ ಇನಿಂಗ್ಸ್ ಕಟ್ಟಿದರು. 45 ಎಸೆತಗಳವರೆಗೂ ಒಂದೂ ಬೌಂಡರಿಯನ್ನು(ಆರನೇ ಓವರ್‌ನಲ್ಲಿ ಕಪುಗೆದರಾ ಬೌಂಡರಿ ಹೊಡೆದಿದ್ದರು. ಅದರ ನಂತರ ತಿಸಾರ 14ನೇ ಓವರ್‌ನಲ್ಲಿ ಒಂದು ಬೌಂಡರಿ ಬಾರಿಸಿದರು.) ಇಬ್ಬರೂ ಬ್ಯಾಟ್ಸ್‌ಮನ್‌ಗಳು ಹೊಡೆಯಲಿಲ್ಲ. ಹತ್ತು ಓವರ್‌ಗಳಲ್ಲಿ 50 ರನ್‌ಗಳು ಲಂಕಾ ಖಾತೆ ಸೇರಿದವು.

ಕೊನೆಯ ನಾಲ್ಕು ಓವರ್‌ಗಳಲ್ಲಿ ಸಾಧ್ಯವಾದಷ್ಟು ರನ್‌ ಗಳನ್ನು ಗಳಿಸುವ ಇಬ್ಬರು ಬ್ಯಾಟ್ಸ್‌ಮನ್‌ ಗಳ ಲೆಕ್ಕಾಚಾರವನ್ನು ಮಧ್ಯಮವೇಗಿ ಡ್ವೆನ್  ಬ್ರಾವೊ ಬುಡಮೇಲು ಮಾಡಿ ದರು. ಆರನೇ ವಿಕೆಟ್‌ಗೆ 43 ರನ್ (45ಎ) ಗಳಿಸಿದ್ದ ಇವರಿಬ್ಬರ ಜೊತೆ ಯಾಟವನ್ನು ಮುರಿದರು.  ವಿಕೆಟ್‌ ಕೀಪರ್‌ ದಿನೇಶ್‌ ರಾಮ್ದಿನ್‌ಗೆ ಕ್ಯಾಚಿತ್ತ ಮ್ಯಾಥ್ಯೂಸ್ ನಿರ್ಗಮಿಸಿದರು.  ನಂತರ ಏಕಾಂಗಿ ಹೋರಾಟ ನಡೆಸಿದ ತಿಸಾರ   ಕೊನೆಯ ಓವರ್‌ನಲ್ಲಿ ಬ್ರಾವೊಗೆ ವಿಕೆಟ್ ಒಪ್ಪಿಸಿದರು.

ಬ್ಯಾಟಿಂಗ್‌ಗೆ ಹಂಬಲಿಸಿದ ಕ್ರಿಸ್‌ ಗೇಲ್
ಫೀಲ್ಡಿಂಗ್ ಮಾಡುವಾಗ ಎಡಗಾಲಿನ ಸ್ಹಾಯುಸೆಳೆತ ಅನುಭವಿಸಿದ್ದ ಕ್ರಿಸ್ ಗೇಲ್ ಇನಿಂಗ್ಸ್‌ ಆರಂಭಿಸಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ಮಾಡಲು ಸಿದ್ಧ ರಾಗಿದ್ದರೂ ಅವಕಾಶ ಸಿಗಲಿಲ್ಲ. ಇದ ರಿಂದಾಗಿ ಅವರ ಸ್ಫೋಟಕ ಬ್ಯಾಟಿಂಗ್ ನೋಡುವ ಪ್ರೇಕ್ಷಕರ ಆಸೆಯೂ ಈಡೇರಲಿಲ್ಲ.   ಮುಂಬೈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಶತಕ ಸಿಡಿ ಸಿದ್ದರು. ಇಲ್ಲಿಯೂ ಅವರು  ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಾರೆಂಬ ನಿರೀಕ್ಷೆಯಿಂದ  ಅಭಿಮಾನಿಗಳು ಬಂದಿದ್ದರು.

ಶ್ರೀಲಂಕಾ ಬ್ಯಾಟ್ಸ್‌ಮನ್ ಮಿಲಿಂದಾ ಸಿರಿವರ್ಧನೆ ಅವರ ಕ್ಯಾಚ್‌ ಅನ್ನು ಸ್ಲಿಪ್‌ನಲ್ಲಿ ಪಡೆದ ಕ್ರಿಸ್ ಗೇಲ್ ಸ್ನಾಯುಸೆಳೆತಕ್ಕೆ ಒಳಗಾಗಿ ದ್ದರು. ಇದರಿಂದಾಗಿ ಅವರು ವಿಶ್ರಾಂತಿಗೆ ತೆರಳಿದರು.  121 ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್ ತಂಡವು 72 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಾಗ ಗೇಲ್ ಬ್ಯಾಟಿಂಗ್‌ಗೆ ಬರಲು ಸಿದ್ದರಾಗಿದ್ದರು. ಹೆಲ್ಮೆಟ್, ಪ್ಯಾಡ್ ಧರಿಸಿದ್ದ ಗೇಲ್ ಡ್ರೆಸ್ಸಿಂಗ್‌ ರೂಮಿ ನಿಂದ ಹೊರಗೆ ಅಡಿ ಇಡುತ್ತಿದ್ದಂತೆ ಪಂದ್ಯದ ಅಧಿಕಾರಿಗಳು ಅವರನ್ನು ತಡೆದರು.

ಐಸಿಸಿ ನಿಯಮದ ಪ್ರಕಾರ, ವಿಂಡೀಸ್ ತಂಡವು ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಗೇಲ್ ಎಷ್ಟು ಹೊತ್ತು ವಿಶ್ರಾಂತಿ ಪಡೆದಿ ದ್ದರೋ ಅಷ್ಟು ಸಮಯದ ಬ್ಯಾಟಿಂಗ್‌ ಅವಧಿಯನ್ನು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕಳೆಯಬೇಕಿತ್ತು. ಇದ ರಿಂದಾಗಿ ರಾತ್ರಿ 10.11 ಅಥವಾ  ಆರನೇ ಕ್ರಮಾಂಕ ದಲ್ಲಿ  ಬ್ಯಾಟಿಂಗ್‌ಗೆ ಬರುವ ಅವಕಾಶ ಅವರಿಗೆ ಇತ್ತು. ವಿಂಡೀಸ್ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿ ದ್ದರಿಂದ ಗೇಲ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.
ಪಂದ್ಯದ ನಂತರ ಪ್ರೇಕ್ಷಕರ ಬಳಿಗೆ ಹೋದ ಗೇಲ್ ಅಭಿಮಾನಿಗಳ ಕೈಕು ಲುಕಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು.

ಸ್ಕೋರ್‌ಕಾರ್ಡ್‌
ಶ್ರೀಲಂಕಾ  9ಕ್ಕೆ 122    (20 ಓವರ್‌ಗಳಲ್ಲಿ)

ದಿನೇಶ್ ಚಾಂಡಿಮಲ್ ರನ್‌ಔಟ್ (ಜಾನ್ಸನ್/ರಾಮ್ದಿನ್)  16
ತಿಲಕರತ್ನೆ ದಿಲ್ಶಾನ್  ಎಲ್‌ಬಿಡಬ್ಲ್ಯು ಬಿ ಕಾರ್ಲೋಸ್ ಬ್ರಾಥ್‌ವೇಟ್  12
ಲಾಹಿರು ತಿರುಮಾನ್ನೆ  ಸಿ ಆ್ಯಂಡ್ರೆ ಫ್ಲೆಚರ್ ಬಿ ಸ್ಯಾಮುಯೆಲ್ ಬದ್ರಿ  05
ಚಾಮರ ಕಪುಗೆದರಾ ಸ್ಟಂಪ್ಡ್ ದಿನೇಶ್ ರಾಮ್ದಿನ್ ಬಿ ಸ್ಯಾಮುಯೆಲ್ ಬದ್ರಿ  06
ಏಂಜೆಲೊ ಮ್ಯಾಥ್ಯೂಸ್ ಸಿ ದಿನೇಶ್ ರಾಮ್ದಿನ್ ಬಿ ಡ್ವೆನ್ ಬ್ರಾವೊ  20
ಮಿಲಿಂದ ಸಿರಿವರ್ಧನೆ ಸಿ ಕ್ರಿಸ್ ಗೇಲ್ ಬಿ ಸ್ಯಾಮುಯೆಲ್ ಬದ್ರಿ  00
ತಿಸಾರ ಪೆರೆರಾ  ಸಿ ಆ್ಯಂಡ್ರೆ ರಸೆಲ್ ಬಿ ಡ್ವೆನ್ ಬ್ರಾವೊ  40
ನುವಾನ್ ಕುಲಶೇಖರ        ಬಿ ಆ್ಯಂಡ್ರೆ ರಸೆಲ್  07
ರಂಗನಾ ಹೆರಾತ್ ರನ್‌ಔಟ್ (ಬ್ರಾವೊ)  03
ಜೆಫ್ರಿ ವಾಂಡರ್ಸೆ ಔಟಾಗದೆ  00
ದುಷ್ಮಂತ ಚಾಮಿರಾ ಔಟಾಗದೆ  00
ಇತರೆ: (ಲೆಗ್‌ಬೈ 7, ನೋಬಾಲ್ 1, ವೈಡ್ 5) 13

ವಿಕೆಟ್‌ ಪತನ: 1–20 (ದಿಲ್ಶಾನ್; 3.1), 2–32 (ಚಾಂಡಿಮಲ್; 4.6), 3–41 (ಲಾಹಿರು; 6.1), 4–47 (ಕಪುಗೆದರಾ; 8.1), 5–47 (ಸಿರಿವರ್ಧನೆ; 8.4), 6–91 (ಮ್ಯಾಥ್ಯೂಸ್; 16.1), 7– 116 (ನುವಾನ್; 18.5), 8–121 (ರಂಗನಾ; 19.4), 9–121 (ತಿಸಾರ; 19.5). 
ಬೌಲಿಂಗ್‌: ಆ್ಯಂಡ್ರೆ ರಸೆಲ್  4–0–34–1,  ಸ್ಯಾಮುಯೆಲ್ ಬದ್ರಿ 4–0–12–3,  ಸುಲೇಮಾನ್ ಬೆನ್ 4–0–13–0, ಕಾರ್ಲೋಸ್ ಬ್ರಾಥ್‌ವೈಟ್   4–0–36–1 (ನೋಬಾಲ್ 1, ವೈಡ್ 2),  ಡ್ವೇನ್ ಬ್ರಾವೊ 4–0–20–2 (ವೈಡ್ 2)

ವೆಸ್ಟ್ ಇಂಡೀಸ್  3 ಕ್ಕೆ 127    (18.2 ಓವರ್‌ಗಳಲ್ಲಿ)
ಆ್ಯಂಡ್ರೆ ಫ್ಲೆಚರ್ ಔಟಾಗದೆ  84
ಜಾನ್ಸನ್ ಚಾರ್ಲ್ಸ್ ಬಿ ಜೆಫ್ರಿ ವಾಂಡರ್ಸೆ  10
ಮರ್ಲಾನ್ ಸ್ಯಾಮುಯೆಲ್ಸ್  03
ದಿನೇಶ್ ರಾಮ್ದಿನ್ ಬಿ ಮಿಲಿಂದಾ ಸಿರಿವರ್ಧನೆ  05
ಆ್ಯಂಡ್ರೆ ರಸೆಲ್ ಔಟಾಗದೆ  20
ಇತರೆ: (ವೈಡ್ 5)  05

ವಿಕೆಟ್‌ ಪತನ: 1–39 (ಚಾರ್ಲ್ಸ್; 5.2), 2–54 (ಸ್ಯಾಮುಯೆಲ್ಸ್; 8.3), 3–72 (ರಾಮ್ದಿನ್; 12.5)
ಬೌಲಿಂಗ್‌: ಏಂಜೆಲೊ ಮ್ಯಾಥ್ಯೂಸ್ 1–0–13–0, ರಂಗನಾ ಹೆರಾತ್ 4–0–27–0, ನುವಾನ್ ಕುಲಶೇಖರ 2–0–17–0 (ವೈಡ್ 1), ಜೆಫ್ರಿ ವಾಂಡರ್ಸೆ 4–1–11–1, ಮಿಲಿಂದಾ ಸಿರಿವರ್ಧನೆ 4–0–33–2, ದುಷ್ಮಂತ ಚಾಮೀರಾ 3–0–15–0 (ವೈಡ್ 2), ತಿಸಾರ ಪೆರೆರಾ 0.2–0–11–0 (ವೈಡ್ 1)

ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 7 ವಿಕೆಟ್‌ಗಳ ಜಯ.
ಪಂದ್ಯಶ್ರೇಷ್ಠ: ಆ್ಯಂಡ್ರೆ ಫ್ಲೆಚರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT