ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೋರೊಸಿಸ್‌

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಿತ್ಯ ನರಕದರ್ಶನ ಮಾಡಿಸುವ ಮಹಾಮಾರಿ ಫ್ಲೋರೊಸಿಸ್‌. ಆದರೆ ಇದರ ಬಗ್ಗೆ ಇನ್ನೂ ಜಾಗೃತಿ ಮೂಡಿಸುವ ಕಾರ್ಯ ಆಗಿಲ್ಲ, ಸೂಕ್ತ ಚಿಕಿತ್ಸೆಯೂ ಕಂಡುಹಿಡಿದಿಲ್ಲ. ಈ ಕಾಯಿಲೆ ಫ್ಲೋರೈಡ್‌ಯುಕ್ತ ನೀರಿನಿಂದ ಬರುವುದೆಂದು ಸಾಬೀತಾಗಿದ್ದರೂ, ನೀರನ್ನು ಪರೀಕ್ಷೆ ಮಾಡುವ ಕೇಂದ್ರಗಳೇ ನಮ್ಮಲ್ಲಿಲ್ಲ. ಇಂಥ ಭೀಕರ ಕಾಯಿಲೆ ವಿರುದ್ಧ ಆಂದೋಲನ ನಡೆಸುತ್ತಿದೆ ಹುಬ್ಬಳ್ಳಿಯ ಸಂಸ್ಥೆ.

ಹಳದಿ ಹಲ್ಲು, ಸೊಟ್ಟಗಾಲು, ಬಾಗಿದ ಬೆನ್ನು, ಕೀಲು ನೋವು ಅನುಭವಿಸುತ್ತ ಕ್ಷಣ ಕ್ಷಣಕ್ಕೂ ಸಾಯುವಂತೆ ಮಾಡುವ ಕಾಯಿಲೆ ಫ್ಲೋರೊಸಿಸ್‌. ಭಾರತದಲ್ಲಿ ಅಂದಾಜು 6 ಕೋಟಿಯಷ್ಟು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದರೂ ಇದನ್ನು ಗಂಭೀರ ಕಾಯಿಲೆ ಎಂದು ಇದುವರೆಗೆ ಪರಿಗಣಿಸಿಲ್ಲ. ಎಷ್ಟೋ ಜನರಿಗೆ ಇದೊಂದು ಕಾಯಿಲೆ ಎಂಬುದೂ ತಿಳಿದಿಲ್ಲ. ಸಾಕಷ್ಟು ವೈದ್ಯರಿಗೂ ಇದಕ್ಕೆ ಔಷಧ ಏನೆಂಬುದೇ ಗೊತ್ತಿಲ್ಲ!

ಮರಣಕ್ಕೆ ದೂಡುವ ಇಂಥದ್ದೊಂದು ಕಾಯಿಲೆ ವಿರುದ್ಧ ಹುಬ್ಬಳ್ಳಿಯ ‘ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ’ ಆಂದೋಲನ ನಡೆಸುತ್ತಿದೆ. ಹಿರಿಯ ವಿಜ್ಞಾನಿ ಡಾ. ಎಂ. ಬಾಪೂಜಿ ಇದರ ನೇತೃತ್ವ ವಹಿಸಿದ್ದಾರೆ. ರಾಜ್ಯದಲ್ಲಿ ಫ್ಲೋರೈಡ್‌ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗದ ಹಳ್ಳಿಹಳ್ಳಿಗೆ ಭೇಟಿ ನೀಡಿ, ಅಲ್ಲಿನ ಜನರ ಬವಣೆಗಳನ್ನು ಖುದ್ದು ದಾಖಲಿಸಿ­ಕೊಂಡು ಬಂದಿದ್ದಾರೆ ಅವರು.

‘ನಾವು ಕುಡಿಯುವ ನೀರು ಫ್ಲೋರೊಸಿಸ್‌ನ ಮೂಲ. ಅಗತ್ಯಕ್ಕಿಂತ ಹೆಚ್ಚು ಫ್ಲೋರೈಡ್‌ ಅಂಶವಿರುವ ನೀರು ಕುಡಿಯುವವರೇ ಈ ಕಾಯಿಲೆಗೆ ಹೆಚ್ಚು ತುತ್ತಾಗುತ್ತಾರೆ. ರಾಜ್ಯದಲ್ಲಿ ಸುಮಾರು 24–25 ಜಿಲ್ಲೆಗಳು ಈ ಸಮಸ್ಯೆ ಎದುರಿಸುತ್ತಿದ್ದು, ಸುಮಾರು ಆರು ಸಾವಿರ ಹಳ್ಳಿಗಳ ಅರವತ್ತು ಲಕ್ಷಕ್ಕೂ ಹೆಚ್ಚು ಮಂದಿ ಈ ತೊಂದರೆಯಿಂದ ಬಳಲುತ್ತಿದ್ದಾರೆ.

ಅದರಲ್ಲೂ ಕಲಬುರ್ಗಿ, ಯಾದಗಿರಿ, ಗದಗ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಚಿತ್ರದುರ್ಗದಂತಹ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಫ್ಲೋರೈಡ್‌ಯುಕ್ತ ನೀರು ಕುಡಿದು ಬದುಕುತ್ತಿರುವವರೇ ಹೆಚ್ಚು. ಈಗೀಗ ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಕೆ ಮಾಡುವುದೇ ಹೆಚ್ಚು. ಹೀಗೆ ಆಳವಾಗಿ ಕೊರೆದಷ್ಟೂ ಹೆಚ್ಚು ಫ್ಲೋರೈಡ್‌ ಅಂಶ ನೀರಿನಲ್ಲಿ ಸೇರುತ್ತದೆ. ಆ ನೀರನ್ನು ಕುಡಿದಾಗ ಕ್ರಮೇಣ ಅದು ವಿಷವಾಗಿ ಪರಿವರ್ತನೆಯಾಗಿ ಆರೋಗ್ಯ ಹದಗೆಡುತ್ತದೆ’ ಎನ್ನುತ್ತಾರೆ ಬಾಪೂಜಿ.

2013–14ರಲ್ಲಿ ರಾಜ್ಯದಲ್ಲಿ ಸುಮಾರು 42 ಸಾವಿರ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿ 10ರಲ್ಲಿ 3 ಮಾದರಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಫ್ಲೋರೈಡ್‌ ಇರುವುದು ಕಂಡುಬಂತು. ರಾಮನಗರ, ಕೊಪ್ಪಳ ಜಿಲ್ಲೆಗಳ ಶೇ 100ರಷ್ಟು ನೀರಿನ ಮಾದರಿಗಳಲ್ಲಿ ಈ ಅಂಶ ಪತ್ತೆಯಾಗಿದೆ. ಆದರೂ ಸರ್ಕಾರ ಈವರೆಗೆ ಎಚ್ಚೆತ್ತುಕೊಂಡಿಲ್ಲ ಎನ್ನುವುದು ಅವರ ನೋವು.

ಫ್ಲೋರೊಸಿಸ್ ಮುಕ್ತ ಆಂದೋಲನ
ಕಾರ್ಮಿಕ ಹೋರಾಟದ ಜೊತೆಜೊತೆಗೆ ಸಮಾಜಮುಖಿ ಕಾರ್ಯಗಳನ್ನೂ ಹಮ್ಮಿಕೊಳ್ಳುತ್ತಾ ಬಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ, ಇದೀಗ ಹಸಿವು ಮುಕ್ತ ಭಾರತ ನಿರ್ಮಾಣದ ಕನಸು ಹೊತ್ತು ‘ಕ್ರಾಂತಿಕಾರಿ ಜನಾಂದೋಲನ’ ರೂಪಿಸುತ್ತಿದೆ. ಈ ಆಂದೋಲನದ ಅಂಗವಾಗಿ ಸದ್ಯ ಎರಡು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ಪ್ರತಿ ಗ್ರಾಮದಲ್ಲೂ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನಗಳನ್ನು ಜನರಿಗೆ ತಿಳಿಸಿ, ಅದರ ಸವಲತ್ತುಗಳನ್ನು ಸಾಮಾನ್ಯರು ಪಡೆಯುವಂತೆ ಮಾಡುವುದು ಒಂದು ಉದ್ದೇಶ; ರಾಜ್ಯವನ್ನು ಫ್ಲೋರೊಸಿಸ್ ಮುಕ್ತವನ್ನಾಗಿಸುವುದು ಮತ್ತೊಂದು ಉದ್ದೇಶ. ಈ ನಿಟ್ಟಿನಲ್ಲಿ ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್‌. ಶರ್ಮಾ ಅವರು ಡಾ. ಬಾಪೂಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಸೆಪ್ಟೆಂಬರ್‌ನಿಂದ ಆಂದೋಲನವು ಅಧಿಕೃತವಾಗಿ ಚಾಲನೆ ಪಡೆದಿದೆ.

ಕಾರ್ಯಾಗಾರಗಳ ಮೂಲಕ ಮಾಹಿತಿ
ಆಂದೋಲನದ ಮೊದಲ ಹೆಜ್ಜೆಯಾಗಿ ಫ್ಲೋರೊಸಿಸ್‌ ಕುರಿತು ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು ಹಾಗೂ ಆಸಕ್ತರಿಗೆ ಈ ಕಾರ್ಯಾಗಾರಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.

ಈ ಕಾಯಿಲೆ ಕುರಿತು ಸದ್ಯ ರಾಜ್ಯ ಸರ್ಕಾರದ ಬಳಿಯಾಗಲೀ, ಸರ್ಕಾರದ ಬಳಿಯಾಗಲೀ ಸಮರ್ಪಕ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಮೊದಲು ಮಾಹಿತಿ ಕಲೆ ಹಾಕಲು ಮಂಡಲವು ಮುಂದಾಗಿದೆ. ಇದಕ್ಕಾಗಿ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿದ್ದು, ಜನರಿಂದ ಮಾಹಿತಿ ಪಡೆಯಲಾಗುತ್ತಿದೆ. ಜನರು ಬಳಸುವ ನೀರಿನ ಮೂಲ, ಅದರಲ್ಲಿನ ಫ್ಲೋರೈಡ್‌ ಪ್ರಮಾಣ, ಅವರು ಎದುರಿಸುತ್ತಿರುವ ಆರೋಗ್ಯ ಸಂಬಂಧಿ ಸಮಸ್ಯೆಗಳು, ಸೇವಿಸುವ ಆಹಾರದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಈ ಪ್ರಶ್ನೋತ್ತರ ಮಾಲಿಕೆಯನ್ನು ರಾಜ್ಯದ ಹಳ್ಳಿಹಳ್ಳಿಗೆ ತಲುಪಿಸುವ ಪ್ರಯತ್ನ ನಡೆದಿದೆ.

ಗ್ರಾಮಸಭೆಗಳ ಆಯೋಜನೆ
ಮಹಾಮಂಡಲವು ಆಗಾಗ್ಗೆ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಗ್ರಾಮಸಭೆಗಳನ್ನು ಆಯೋಜಿಸುತ್ತಿದೆ. ಅಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನಗಳ ಜೊತೆಗೆ ಫ್ಲೋರೈಡ್‌ ನೀರಿನಿಂದಾಗುವ ಸಮಸ್ಯೆಗಳು, ಅವುಗಳಿಗೆ ಇರುವ ಪರಿಹಾರಗಳ ಕುರಿತು ವಿವರಿಸಲಾಗುತ್ತದೆ.
‘ಯಾದಗಿರಿ ಜಿಲ್ಲೆಯ ಹತ್ತಿಗೂಡು ಸಮೀಪ ತಿಂಥಣಿ ಎಂಬ ಹಳ್ಳಿಯಿದೆ. ಅಲ್ಲಿನ ಶೇ 25ರಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲಿ ಗ್ರಾಮಸಭೆ ನಡೆಸಿದ ಸಂದರ್ಭ ಈ ಅಂಶ ನಮಗೆ ಗೊತ್ತಾಯಿತು. ಅಂತೆಯೇ, ಹಾಗರಗುಂಡಗಿ ಎಂಬ ಹಳ್ಳಿಯಲ್ಲಿ ಸುತ್ತಲ ಗ್ರಾಮಸ್ಥರ ಜೊತೆ ಸಭೆ ನಡೆಸಿ ಸುತ್ತಲಿನ 25 ಹಳ್ಳಿಗಳ ಜನರ ಜೊತೆ ಈ ಸಮಸ್ಯೆಯ ಕುರಿತು ಚರ್ಚಿಸಿದೆವು’ ಎಂದು ವಿವರಿಸುತ್ತಾರೆ ಶರ್ಮಾ.

ಮನೆ ಮದ್ದಾಗಬಲ್ಲದು ನುಗ್ಗೆ– ಬಾಳೆದಿಂಡು

ನಮ್ಮ ಮನೆಯಂಗಳದಲ್ಲಿಯೇ ಬೆಳೆಯುವ ಸೊಪ್ಪು–ತರಕಾರಿಯನ್ನು ಸಮರ್ಪಕವಾಗಿ ಬಳಸಿದ್ದೇ ಆದಲ್ಲಿ ಫ್ಲೋರೊಸಿಸ್‌ ಬಾರದಂತೆ ಖಂಡಿತ ತಡೆಯಬಹುದು. ಮುಖ್ಯವಾಗಿ ನುಗ್ಗೆಸೊಪ್ಪು, ಬಾಳೆದಿಂಡಿನ ರಸ, ನೆಲ್ಲಿಕಾಯಿ, ಹುಣಸೆಯಂತಹ ಸೊಪ್ಪುಗಳ ಹೆಚ್ಚಿನ ಬಳಕೆ, ಹುರುಳಿ ಕಾಳು ಮೊದಲಾದ ಧಾನ್ಯಗಳ ಬಳಕೆಯಿಂದ ಈ ರೋಗವನ್ನು ನಿಯಂತ್ರಿಸಬಹುದು.

ಅಗ್ಗದ ಔಷಧೋಪಚಾರ
ರೋಗದ ಬಗ್ಗೆ ಅರಿವು ಮೂಡಿಸುವುದು ಮಾತ್ರವಲ್ಲ, ಪರಿಹಾರೋಪಾಯಗಳ ಕುರಿತೂ ಜನರಿಗೆ ತಿಳಿಹೇಳುವ ಪ್ರಯತ್ನ ಈ ಆಂದೋಲನದಲ್ಲಿ ನಡೆಯುತ್ತಿದೆ.

ಫ್ಲೋರೊಸಿಸ್‌ನಿಂದ ಬಳಲುತ್ತಿರುವವರಲ್ಲಿ ಪೌಷ್ಟಿಕಾಂಶದ ಕೊರತೆ ಇರುತ್ತದೆ. ಅವರಿಗೆ ಪೌಷ್ಟಿಕ ಆಹಾರವನ್ನು ಒದಗಿಸಿದ್ದೇ ಆದಲ್ಲಿ ಈ ಕಾಯಿಲೆಯಿಂದ ಪಾರುಮಾಡಬಹುದು.

ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರವು ಹಾಲು, ಮೊಟ್ಟೆ ವಿತರಿಸುತ್ತಿರುವುದು ಉತ್ತಮ ಅಂಶ. ಅಂತೆಯೇ ವಿಟಮಿನ್‌ ಸಿ, ಡಿ, ಮತ್ತು ಕಬ್ಬಿಣಾಂಶವುಳ್ಳ ಮಾತ್ರೆಗಳನ್ನೂ ವಿತರಿಸಬೇಕು. ಇದರಿಂದ ಸ್ವಲ್ಪಮಟ್ಟಿಗೆ ಈ ತೊಂದರೆಯನ್ನು ನಿಯಂತ್ರಿಸಬಹುದು ಎನ್ನುವುದು ಶರ್ಮಾ ಅವರ ಅಭಿಪ್ರಾಯ. 

ಮಾಹಿತಿ ಕೇಂದ್ರ ಆರಂಭಕ್ಕೆ ಚಿಂತನೆ
ಆಂದೋಲನದ ಜೊತೆಜೊತೆಗೆ ಈ ಕಾಯಿಲೆ ಕುರಿತ ಮಾಹಿತಿ ಮತ್ತು ಅಧ್ಯಯನದ ಸಲುವಾಗಿ ಕೇಂದ್ರವೊಂದನ್ನು ಸ್ಥಾಪಿಸಲು ಮಹಾಮಂಡಲವು ಯೋಜಿಸಿದೆ. ಹುಬ್ಬಳ್ಳಿಯ ವಿಶ್ವಶ್ರಮ ಚೇತನ ಆವರಣದಲ್ಲಿ ಈ ಕೇಂದ್ರ ಆರಂಭವಾಗಲಿದೆ.

ಫ್ಲೋರೊಸಿಸ್‌ ಕಾಯಿಲೆಗೆ ಸಂಬಂಧಿಸಿ ನಮ್ಮಲ್ಲಿ ಹೆಚ್ಚು ಸಂಶೋಧನೆ ನಡೆಯಬೇಕು. ಈ ವಿಚಾರದಲ್ಲಿ ನಮ್ಮ ರಾಜ್ಯ ಸಾಕಷ್ಟು ಹಿಂದುಳಿದಿದೆ. ನಮ್ಮಲ್ಲೂ ಇದರ ಅಧ್ಯಯನವಾಗಬೇಕು. ಫ್ಲೋರೈಡ್‌ಯುಕ್ತ ನೀರನ್ನು ಅಪಾಯಕಾರಿಯಾಗದ ಹಾಗೆ ಬಳಕೆ ಮಾಡುವ ಬಗೆಯನ್ನೂ ಕಂಡುಕೊಳ್ಳಬೇಕು. ಅಲ್ಲಿಯವರೆಗೂ ಕನಿಷ್ಠ ಹಳ್ಳಿಗೊಂದು ನೀರು ಶುದ್ಧೀಕರಣ ಘಟಕವನ್ನು ಸರ್ಕಾರ ಸ್ಥಾಪನೆಮಾಡಬೇಕು ಎನ್ನುವುದು ಈ ಆಂದೋಲನ ನಿರತರ ಆಗ್ರಹ.

ಪರೀಕ್ಷೆ ಮಾಡುವ ಕೇಂದ್ರಗಳಿಲ್ಲ
‘ಫ್ಲೋರೊಸಿಸ್‌ ಅನ್ನು ಒಂದು ರೋಗ ಎಂದು ಪರಿಗಣಿಸಿ ಅದಕ್ಕೆ ತಕ್ಕ ಔಷಧೋಪಚಾರ ನೀಡುವ ವ್ಯವಸ್ಥೆಯು ನಮ್ಮಲ್ಲಿಲ್ಲ. ಅದಕ್ಕಿಂತ ಆಶ್ಚರ್ಯ ಎಂದರೆ ನೀರಿನಲ್ಲಿರುವ ಫ್ಲೋರೈಡ್‌ ಪ್ರಮಾಣವನ್ನು ಪರೀಕ್ಷಿಸುವ ಸೂಕ್ತ ಪರೀಕ್ಷಾ ಕೇಂದ್ರಗಳೇ ನಮ್ಮಲ್ಲಿಲ್ಲ. ವೈದ್ಯರು ಜನರ ರಕ್ತ ಪರೀಕ್ಷೆ ಮಾಡುವಾಗ ಅವರಲ್ಲಿ ಎಷ್ಟು ಸಕ್ಕರೆ ಪ್ರಮಾಣ ಇದೆ ಎಂದು ಪರೀಕ್ಷಿಸುತ್ತಾರೆ. ಆದರೆ ಎಷ್ಟು ಫ್ಲೋರೈಡ್‌ ಅಡಗಿದೆ ಎನ್ನುವುದನ್ನು ಯಾರೂ ನೋಡುವುದಿಲ್ಲ. ಎಷ್ಟೋ ಆಸ್ಪತ್ರೆಗಳ ವೈದ್ಯರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ’ ಎನ್ನುತ್ತಾರೆ ಡಾ. ಕೆ.ಎಸ್. ಶರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT