ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಕಾಪುರ: ರಂಗಪಂಚಮಿ ಸಂಭ್ರಮಾಚರಣೆ

ಬಿಸಿಲಿನ ತಾಪ ಲೆಕ್ಕಿಸದೆ ಬಣ್ಣದೋಕುಳಿ, ರಂಗಿನಾಟ: ಬಣ್ಣದಲ್ಲಿ ಮಿಂದೆದ್ದ ಜನರು
Last Updated 29 ಮಾರ್ಚ್ 2016, 6:49 IST
ಅಕ್ಷರ ಗಾತ್ರ

ಶಿಗ್ಗಾವಿ: ಸುಡು ಬಿಸಿಲಿನ ತಾಪ ಲೆಕ್ಕಿಸದೆ ಹೋಳಿ ಹಬ್ಬದ ನಿಮಿತ್ತ ಮಹಿಳೆಯರು, ಮಕ್ಕಳೆನ್ನದೆ ಒಬ್ಬರಿಗೊಬ್ಬರು ರಂಗು ರಂಗಿನ ಬಣ್ಣ ಎರಚುವ ಮೂಲಕ ಬಣ್ಣದೋಕುಳಿ ಹಬ್ಬವನ್ನು  ಸಂಭ್ರಮ ದಿಂದ ತಾಲ್ಲೂಕಿನ ಬಂಕಾಪುರ ಪಟ್ಟ ಣದ ಬೀದಿ, ಬೀದಿಗಳಲ್ಲಿ ಸೋಮವಾರ ಆಚರಿಸುವುದು ಕಂಡು ಬಂದಿತು.

ನಾಡಕಚೇರಿ ಮುಂದೆ ತಹಶೀಲ್ದಾರ್‌ ರಮೇಶ ಕೋನರಡ್ಡಿ ಹಲಗೆ ಬಾರಿಸುವ ಮೂಲಕ ಬಣ್ಣದೋಕುಳಿಗೆ ಚಾಲನೆ ನೀಡಿದ ನಂತರ ಆರಂಭವಾದ ಚಿಣ್ಣರ ಬಣ್ಣದೋಕುಳಿ ಮಧ್ಯಾಹ್ನದಲ್ಲಿ ರಂಗೇರಿತು. ಹಲಗೆ, ತಮಟೆಗಳನ್ನು ಬಾರಿಸುತ್ತಾ ಬಂದಿರುವ ಯುವಕರ ತಂಡ ವಿವಿಧ ಜನಪದ ಹಾಡುಗಳನ್ನು ಹಾಡುತ್ತಾ ಹಾಡಿಗೆ ತಕ್ಕಂತೆ ಕುಣಿತದ ಹೆಜ್ಜೆ ಹಾಕುತ್ತಿದ್ದರು. ಇನ್ನೂ ಕೆಲವು ಯುವಕರ ತಂಡ ಹುಲಿ ವೇಷ, ಕರಡಿ ವೇಷ, ಎತ್ತುಗಳ ವೇಷಗಳಲ್ಲದೆ ಮಹಾಭಾರತ, ರಾಮಾಯಣದಲ್ಲಿ ಬರುವ ಸನ್ನಿವೇಷಗಳ ಮುಖವಾಡ ಧರಿಸಿಕೊಂಡು ಕುಣಿಯುತ್ತಿರುವ ದೃಶ್ಯ ಜನರನ್ನು ರಂಜಿಸಿತು.

ಪಟ್ಟಣದ ಸಿಂಪಿ ಓಣಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಬಣ್ಣದ ಪಿಚಕಾರಿಗಳನ್ನು ಹಿಡಿದುಕೊಂಡು ಮನೆ, ಮನೆಗಳಿಗೆ ತೆರಳಿ ಒಬ್ಬರಿಗೆ ಒಬ್ಬರು ಬಣ್ಣ ಹಚ್ಚುವ  ಮೂಲಕ ಪರಸ್ಪರ  ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು. ಪಟ್ಟಣದ ಮಂಜುನಾಥ ನಗರದಲ್ಲಿ ರಾತ್ರಿ ವೇಳೆ ಕಾಮದಹನ ಮಾಡಿರುವುದು ವಿಶೇಷವಾಗಿತ್ತು.

ಪಟ್ಟಣದ ಸುಂಕದಕೆರಿ ಓಣಿಯಲ್ಲಿ ಯುವಕರ ತಂಡೋಪತಂಡಗಳು ಹಾಗೂ ರೈತರು ಚಕ್ಕಡಿಗಳಲ್ಲಿ ಬಣ್ಣದ ಬ್ಯಾರಲ್‌ಗಳನ್ನು ತುಂಬಿಕೊಂಡು ಬಣ್ಣ ಹಾಕುತ್ತಾ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ಕೆಲವರು ಓಣಿಗಳಲ್ಲಿ ಕಂಬಕ್ಕೆ ಕಟ್ಟಿದ ಮೊಸರಿನ ಗಡಿಗೆಗಳನ್ನು ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.

ಪ್ರಯಾಣಿಕರಿಗೆ ಕಿರಿಕಿರಿ: ಕೆಲವು ಯುವಕರ ತಂಡಗಳು ರಸ್ತೆ ನಡುವೆ  ವಾಹನಗಳನ್ನು ತಡೆದು ಬಣ್ಣ ಎರಚುವುದರಿಂದ ಹೊಸ ಬಟ್ಟೆಗಳು ಹಾಳಾಗಿ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಯಿತು. ದ್ವಿತೀಯ ಪಿಯುಸಿ ಕನ್ನಡ ವಿಷಯದ ಪರೀಕ್ಷೆ ಸೋಮವಾರ ನಡೆದಿರುವುದರಿಂದ ಪರೀಕ್ಷೆ ಮುಗಿಸಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಬಣ್ಣದಿಂದ ಕಿರಿಕಿರಿ ಅನುಭವಿಸುವಂತಾಯಿತು.

ಸವಣೂರ ವರದಿ
ಎಲ್ಲಿ ನೋಡಿದರಲ್ಲಿ ಹಲಿಗೆ ನಾದ, ಬಣ್ಣಗಳ ಸಿಂಚನ, ಹಾಡು, ನೃತ್ಯ, ನೀರಿನ ಎರಚಾಟ ಇನ್ನೂ ಕೆಲವರ ತುಂಟಾಟ. ಇದು ನಗರದಲ್ಲಿ ನಡೆದ ಹೋಳಿ ಹಬ್ಬದ ಸಂಭ್ರಮ.

ಬಹುತೇಕ ಹಬ್ಬಗಳ ಆಚರಣೆ ಮನೆ, ದೇವಸ್ಥಾನ, ಗುಡಿಗಳಲ್ಲಿ ನಡೆದರೆ ಹೋಳಿ ಹಬ್ಬದ ಸಡಗರ ಬೀದಿ ಬೀದಿಯಲ್ಲಿ ಕಂಡುಬರುತ್ತದೆ. ಮಕ್ಕಳಿಂದ  ಹಿಡಿದು ಯುವಕರು, ಹಿರಿಯರೆನ್ನದೇ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಹಬ್ಬದಲ್ಲಿ ಜನರು ಬಣ್ಣವನ್ನು ಹಿಡಿದು ಅಕ್ಕ ಪಕ್ಕದ ಮನೆಯ ಸ್ನೇಹಿತರಿಗೆ ಪರಸ್ಪರ ಬಣ್ಣವನ್ನು ಎರಚುವ ಮೂಲಕ ಬಣ್ಣದ ಹಬ್ಬವನ್ನು ಆಚರಿಸಿದರು.

ನಗರದ ಸಿಂಪಿಗಲ್ಲಿ, ಅಂಬೇಡ್ಕರ ಸರ್ಕಲ್‌, ಧರ್ಮರಾಜ ನಗರ,  ಕುಂಬಾರ ಓಣಿ, ಜೋಶಿ ಓಣಿ ಹೀಗೇ ನಾನಾ ಓಣಿಯಲ್ಲಿ ಕಾಮಣ್ಣನನನ್ನು  ಪ್ರತಿಷ್ಠಾಪಿಸಿದ್ದರು.

ಡಿಜಿ ಹಾಡುಗಳ ತಾಳಕ್ಕೆ ಕುಣಿದ ಯುವಕರು ಬಣ್ಣದ ಕಾರಂಜಿಯಲ್ಲಿ ಮುಳುಗೆದ್ದರು. ಯುವಕರು ದಂಡಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿಚಿತ್ರ ಮುಖವಾಡ ಧರಿಸಿ ಕೈನಲ್ಲಿ ಬಣ್ಣದ ಪಿಚಕಾರಿ ಹಿಡಿದ ಗುಂಪು ಪೀ..ಪೀ..ಸದ್ದು ಮಾಡುತ್ತಾ, ಎಲ್ಲರ ಗಮನ ಸೆಳೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು

ನೈಸರ್ಗಿಕ ಬಣ್ಣ:  ಶುಕ್ರವಾರ ಪೇಟೆಯಲ್ಲಿ ಹನ್ನೊಂದು ವನಸ್ಪತಿಗಳ ಮಿಶ್ರಣದೊಂದಿಗೆ ನೈಸರ್ಗಿಕ ಬಣ್ಣವನ್ನು ಬಳಸಿ ಬಣ್ಣದ ಬಂಡಿ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಬಣ್ಣದ ಡ್ರಮ್‌ ಇರಿಸಿ ಹೋಳಿ ಎರಚುತ್ತಾ ನೈಸರ್ಗಿಕ ಬಣ್ಣದೊಂದಿಗೆ ಹೋಳಿ ಆಚರಿಸಿದರು.

ರಂಗಿನ ಹೋಳಿ: ಬೆಳಿಗ್ಗಿನಿಂದಲೇ ಬೀದಿಗಿಳಿದ ಯುವಕರು ಹಬ್ಬಕ್ಕೆ ರಂಗು ತುಂಬಿದರು. ಕೈನಲ್ಲಿ ಬಣ್ಣ ಹಿಡಿದು, ರಸ್ತೆಗಳಲ್ಲಿ ಗುಂಪುಗುಂಪಾಗಿ ತೆರಳಿದ ಯುವಕರು ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ತಲೆಯ ಮೇಲೆ ಮೊಟ್ಟೆ ಹೊಡೆದುಕೊಂಡು ಸಂತಸ ಹಂಚಿಕೊಂಡರು.

* ಹೋಳಿ ಹುಣ್ಣಿಮೆಯಲ್ಲಿ ಬಣ್ಣದೋಕುಳಿ ಸಂಭ್ರಮಾಚರಣೆ ಸರ್ವರನ್ನು ಒಂದುಗೂಡಿಸುವ ಜೊತೆಗೆ ಸಹಬಾಳ್ವೆ, ಸಮಾನತೆಯ ಪ್ರತೀಕವಾಗಿದೆ

ರಮೇಶ ಕೋನರಡ್ಡಿ
ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT