ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದಂಥ ಬಂಗಾರು ತಿರುಪತಿ ನೋಡ ಬನ್ನಿ...

ಸುತ್ತಾಣ
Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಇಂದಿನ ಯಾಂತ್ರಿಕ ಜೀವನದ ನಡುವೆ ಒದ್ದಾಡುತ್ತಿರುವವರಿಗೆ ನೆಮ್ಮದಿ ಸಿಗುವ ಏಕೈಕ ತಾಣ ಧಾರ್ಮಿಕ ಸ್ಥಳ ಎಂದು ನಂಬಿದವರು ಹೆಚ್ಚು. ರಾಜ್ಯದಲ್ಲಿ ತಿರುಪತಿ ಹೆಸರಿನಿಂದ ಕರೆಸಿಕೊಳ್ಳುವ ಕೆಲವೇ ಧಾರ್ಮಿಕ ಕ್ಷೇತ್ರಗಳ ಪೈಕಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗುಟ್ಟಹಳ್ಳಿಯೂ (ಬಂಗಾರು ತಿರುಪತಿ) ಒಂದು.

ಇಲ್ಲಿನ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ  ನಡುವೆ ಶ್ರೀ ವೆಂಕಟರಮಣಸ್ವಾಮಿ ನೆಲೆ ನಿಂತಿದ್ದು ರಾಜ್ಯದ ಭಕ್ತರಷ್ಟೇ ಅಲ್ಲದೇ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ಭಕ್ತರು ಸ್ವಾಮಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ಆಂಧ್ರಪ್ರದೇಶದ ಚಿತ್ತೂರು  ಜಿಲ್ಲೆಯ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದ ರೀತಿಯಲ್ಲೇ ಬಂಗಾರು ತಿರುಪತಿ ದೇವಾಲಯವು ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 

ಗುಟ್ಟಹಳ್ಳಿಯಲ್ಲಿನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ದಶಕಗಳ ಇತಿಹಾಸವಿದೆ. ಈ ಕ್ಷೇತ್ರವು ಹಿಂದೆ ಭೃಗಮಹರ್ಷಿಗಳ ಆಶ್ರಮವಾಗಿತ್ತು. ತನ್ನಲ್ಲಿನ ಅಹಂಕಾರವನ್ನು ದೂರವಾಗಿಸಿ ಮೋಕ್ಷವನ್ನು ನೀಡಬೇಕೆಂದು ಭೃಗಮಹರ್ಷಿಗಳು ಮಹಾ ವಿಷ್ಣುವನ್ನು  ಕೇಳಿಕೊಂಡಾಗ ಆಗ ಮಹಾ ವಿಷ್ಣುವು ತಾನು ಏಕಾಂತ ಶ್ರೀನಿವಾಸನಾಗಿ ಗುಟ್ಟಹಳ್ಳಿಯಲ್ಲಿ (ಬಂಗಾರು ತಿರುಪತಿ) ಉದ್ಭವಿಸುತ್ತೇನೆ, ನಿನ್ನ ಪಾದದಲ್ಲಿರುವ ಯೋಗ ನೇತ್ರದಿಂದ ದರ್ಶನ ಮಾಡಿದಲ್ಲಿ ಮೋಕ್ಷ ನೀಡುತ್ತೇನೆ ಎಂದಾಗ  ಭೃಗಮಹರ್ಷಿಗಳು ಮಹಾವಿಷ್ಣುವಿನ  ನಿರ್ದೇಶನದಂತೆ ಯೋಗ ನೇತ್ರದಿಂದ ಕಿಂಡಿಯ ಮೂಲಕ ವೆಂಕಟರಮಣ ಸ್ವಾಮಿಯ ದರ್ಶನ ಮಾಡಿ ಮೋಕ್ಷ ಪಡೆದರೆಂಬ ಪ್ರತೀತಿ ಇದೆ.

ಈ ಕ್ಷೇತ್ರದ ವೈಶಿಷ್ಟ್ಯವೆಂದರೆ ವೆಂಕಟರಮಣ ಸ್ವಾಮಿಯನ್ನು ಕಿಂಡಿಯ (6 ರಂಧ್ರಗಳಿವೆ ) ಮೂಲಕ ನೋಡಿ ದರ್ಶನ ಪಡೆಯಬೇಕು. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರಗಳನ್ನು ಮನಸ್ಸಿನಿಂದ ಹೊರಗಿಟ್ಟು ನಿರ್ಮಲ, ಶುದ್ಧವಾದ ಮನಸ್ಸಿನಿಂದ ಕಿಂಡಿಯ ಮೂಲಕ ವೆಂಕಟರಮಣಸ್ವಾಮಿ ದರ್ಶನ ಮಾಡಿದರೆ ಅತ್ಯಂತ ಶ್ರೇಷ್ಠ ಮತ್ತು ಬೇಡಿಕೆಗಳು ಈಡೇರುತ್ತವೆಂಬ ನಂಬಿಕೆ ಆಸ್ತಿಕರದ್ದು.

ಬೆಟ್ಟ ಹತ್ತುತ್ತಿದ್ದಂತೆ ಮೊದಲು ಸಿಗುವುದು ಸುಂದರವಾದ ಪುಷ್ಕರಣಿ. ನಂತರ ಯಾಗ ಶಾಲೆ, ತದ ನಂತರ ಗವಿ ಆಂಜನೇಯಸ್ವಾಮಿ ಸನ್ನಿಧಿ,  ನವಗ್ರಹ, ನಾಗರ ಕಲ್ಲು ದೇಗುಲಗಳಿವೆ. ಬೆಟ್ಟದ ತುದಿಯಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇಗುಲವಿದೆ. ಬೆಟ್ಟದ ಒಂದು ಭಾಗದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಇದ್ದರೆ, ಇದರ ಎದುರಿಗೆ ಇರುವ ಮತ್ತೊಂದು ಬೆಟ್ಟದಲ್ಲಿ ಪದ್ಮಾವತಿ ಅಮ್ಮನವರ ಸನ್ನಿಧಿ ಇದೆ.

ಶ್ರಾವಣ ಮಾಸ, ಮಾಘ ಮಾಸ, ಶಿವರಾತ್ರಿ ಸಂದರ್ಭಗಳಲ್ಲಿ ವಿಶೇಷ ಪೂಜೆ, ಜಾತ್ರೆ, ದೇವರ ರಥೋತ್ಸವ ಹಾಗೂ ಪಾರಣಿ ಜಾತ್ರೆ ನಡೆಯುತ್ತದೆ. ಇಲ್ಲಿ ಹೆಚ್ಚಾಗಿ ಮದುವೆ, ಶುಭ ಸಮಾರಂಭಗಳು ನಡೆಯುತ್ತವೆ. ಹಲವು ಕಲ್ಯಾಣ ಮಂಟಪಗಳು ಇವೆ. ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಉಚಿತ ಅನ್ನ ದಾಸೋಹ ನಡೆಯುತ್ತದೆ.

ಹೋಗುವುದು ಹೀಗೆ...
ಬೇತಮಂಗಲ-ಮುಳಬಾಗಿಲು ರಸ್ತೆಯಲ್ಲಿ ಬಂಗಾರು ತಿರುಪತಿ ಕ್ಷೇತ್ರವಿದೆ.  ಬೆಂಗಳೂರುನಿಂದ ಬೇತಮಂಗಲ 97 ಕಿ.ಮೀ. ದೂರವಿದ್ದು, ಬೇತಮಂಗಲದಿಂದ ಗುಟ್ಟಹಳ್ಳಿ (ಬಂಗಾರು ತಿರುಪತಿ) ಸುಮಾರು 6 ಕಿ.ಮೀ. ದೂರದಲ್ಲಿದೆ.

ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿ  ಅಲ್ಲಿಂದ ಬೇತಮಂಗಲಕ್ಕೆ ಹೋಗಲು ಸರ್ಕಾರಿ ಬಸ್ಸುಗಳ ಸೌಕರ್ಯವಿದೆ. ಅಲ್ಲಿಂದ ಬಂಗಾರು ತಿರುಪತಿಯತ್ತ ತೆರೆಳಲು ಆಟೊ, ಬಸ್ಸುಗಳು ಸಿಗುತ್ತವೆ ಅಥವಾ ಬೆಂಗಳೂರಿನಿಂದ ರೈಲಿನಲ್ಲಿ ನೇರವಾಗಿ  ಕೆಜಿಎಫ್‌ನ ಕೋರಮಂಡಲ್ ರೈಲ್ವೆ ನಿಲ್ದಾಣಕ್ಕೆ ಹೋದರೆ, ನಿಲ್ದಾಣದ ಸಮೀಪದಿಂದ ಗುಟ್ಟಹಳ್ಳಿಗೆ  ಹೋಗಲು ಬಸ್ಸುಗಳು ಸಿಗುತ್ತವೆ.

ಸಮೀಪದ ಧಾರ್ಮಿಕ ಕ್ಷೇತ್ರಗಳು
ಗುಟ್ಟಹಳ್ಳಿಯ ವೆಂಕಟರಮಣ ಸ್ವಾಮಿ ದರ್ಶನದ ನಂತರ ಸಮಯವಿದ್ದರೆ ಇಲ್ಲಿಗೆ ಸಮೀಪವಿರುವ ಬೇತಮಂಗಲದ ಪಾಲಾರ್ ಕೆರೆಯ ದಡದಲ್ಲಿರುವ  ಪ್ರಸಿದ್ದ ವಿಜೇಂದ್ರಸ್ವಾಮಿ ಸನ್ನಿಧಿಗೂ ಭೇಟಿ  ಕೊಡಬಹುದು. ಹಾಗೆಯೇ ಆವಣಿ ಗ್ರಾಮದಲ್ಲಿನ ಮುಜರಾಯಿ ಇಲಾಖೆಗೆ ಸೇರಿರುವ ಪ್ರಖ್ಯಾತ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇಗುಲವನ್ನು  ನೋಡಬಹುದಾಗಿದೆ.

ಇದು ಕೂಡ ಗುಟ್ಟಹಳ್ಳಿಗೆ ಹತ್ತಿರದ ಪ್ರದೇಶ, ಆವಣಿ ಗ್ರಾಮದಲ್ಲಿ ರಾಮಲಿಂಗೇಶ್ವರ ಸ್ವಾಮಿಯ ಜೊತೆಗೆ ಒಂದರ ಪಕ್ಕ ಒಂದರಂತೆ ಸುಮಾರು 12 ದೇವಾಲಯಗಳನ್ನು ನಿರ್ಮಿಸಲಾಗಿದೆ. ಪ್ರಮುಖವಾಗಿ ಮಹಾಗಣಪತಿ, ಸುಬ್ರಮಣ್ಯ, ಶ್ರೀ ಲಕ್ಷ್ಮಣೇಶ್ವರ, ಹನುಮಂತೇಶ್ವರ, ಸುಗ್ರಿವೇಶ್ವರ ಸೇರಿದಂತೆ ಇನ್ನಿತರೆ ದೇವಸ್ಥಾನಗಳು ಇಲ್ಲಿವೆ. ಮುಂಜಾನೆಯೇ ಹೊರಟು ಸಮಯ ಪರಿಪಾಲನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಗುಟ್ಟಹಳ್ಳಿಯ ಸುತ್ತಮುತ್ತಲಿರುವ ಹಲವು ಧಾರ್ಮಿಕ ಕೇಂದ್ರಗಳನ್ನು ವೀಕ್ಷಿಸಿ ಮನಸ್ಸಿಗೆ ನೆಮ್ಮದಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT