ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದ ಸಮಯ!

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇಂದು ಅಕ್ಷಯ ತೃತೀಯ. ಒಡವೆಯ ಗೊಡವೆ ಇದ್ದವರಿಗೆ ಇದು ಮೆಚ್ಚಿನ ದಿನ. ನಗರದಲ್ಲಿ ಶುಭದಿನ ಎಂದು ಸುಮ್ಮನೆ ಯಾವುದೋ ಒಡವೆ ಕೊಳ್ಳುವವರ ಸಂಖ್ಯೆ ಈಗ ಕಡಿಮೆಯಾಗಿದೆ. ಇದಕ್ಕೂ ಟ್ರೆಂಡ್‌ನ ಹಂಗು ಇದೆ. ಆ ಟ್ರೆಂಟ್‌ ಯಾವುದು ಎನ್ನುವುದರ ಮೇಲೆ ಸುರೇಖಾ ಹೆಗಡೆ ಅವರ ಈ ಲೇಖನ ಬೆಳಕು ಚೆಲ್ಲುತ್ತದೆ.

ಚಿನ್ನ ಚೆನ್ನ. ಹೆಂಗಳೆಯರಿಗೆ ಹೆಚ್ಚು ಇಷ್ಟವಾಗುವ ವಸ್ತುಗಳಲ್ಲಿ ಚಿನ್ನವೂ ಒಂದು. ಮದುವೆಗೆಂದೋ, ಹಬ್ಬ ಹರಿದಿನಗಳ ನೆಪವೊಡ್ಡಿಯೋ ಆಭರಣ ಖರೀದಿಸುವುದು ರೂಢಿ. ಇತ್ತೀಚಿನ ದಿನಗಳಲ್ಲಿ ಅಕ್ಷಯ ತೃತೀಯದ ಹೆಸರಲ್ಲಿ ಮನೆಗೊಂದು ಚಿನ್ನ ಕೊಂಡರೆ ಚೆನ್ನ ಎನ್ನುವ ಟ್ರೆಂಡ್‌ ಬೆಳೆದುಬಿಟ್ಟಿದೆ.

ಅಕ್ಷಯ ತೃತೀಯದ ದಿನ ಚಿನ್ನ ಖರೀದಿಸಿ ಮನೆಗೆ ತಂದರೆ ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸುತ್ತಾಳೆ ಎಂಬುದು ನಂಬಿಕೆ. ಇದೇ ಕಾರಣಕ್ಕೆ ಚಿನ್ನ ವ್ಯಾಪಾರದಲ್ಲಿ ಭಾರಿ ಏರಿಳಿತವಾಗುತ್ತದೆ. ಕಾಲಕಾಲಕ್ಕೆ ಚಿನ್ನ ಖರೀದಿಯ ಟ್ರೆಂಡ್‌ನಲ್ಲೂ ಸಾಕಷ್ಟು ಬದಲಾವಣೆ ಆಗುತ್ತಿದೆ. ಕೆಲವೇ ವರ್ಷಗಳ ಹಿಂದೆ ಅಕ್ಷಯ ತೃತೀಯದ ದಿನ ಆಭರಣ ಕೊಳ್ಳುವುದಕ್ಕಿಂತ ಚಿನ್ನದ ನಾಣ್ಯಗಳನ್ನು ಅನೇಕರು ಕೊಳ್ಳುತ್ತಿದ್ದರು.

ಆಭರಣಗಳಿಗಾದರೆ ಮೇಕಿಂಗ್‌ ಹಾಗೂ ವೇಸ್ಟೇಜ್‌ ಚಾರ್ಜ್‌ ಹಾಕುತ್ತಾರೆ ಎನ್ನುವ ಕಾರಣಕ್ಕೆ ಹೆಚ್ಚಿನವರ ಆಯ್ಕೆ ಚಿನ್ನದ ನಾಣ್ಯವಾಗಿತ್ತು. ಆದರೆ ಆಭರಣ ಮಳಿಗೆ ಮಾಲೀಕರ ಪ್ರಕಾರ ಇಂದಿನವರು ಚಿನ್ನದ ನಾಣ್ಯ ಕೊಳ್ಳುವುದಾದರೂ ಅದರಲ್ಲಿ ಅಂದದ ವಿನ್ಯಾಸ ಇರಬೇಕು ಎಂದು ಬಯಸುತ್ತಾರಂತೆ.

ಈ ಬಾರಿ ಗ್ರಾಹಕರಿಗೆ ಆ್ಯಂಟಿಕ್‌ ಆಭರಣಗಳ ಬಗ್ಗೆ ಹೆಚ್ಚು ಮೋಹ ಬೆಳೆದಿದೆಯಂತೆ. ಜೋಯಾಲುಕ್ಕಾಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಜೀಜಿ ಕೆ.ಮ್ಯಾಥ್ಯು ಅವರ ಪ್ರಕಾರ ಈ ಬಾರಿ ವಜ್ರದ ಆಭರಣಗಳಿಗೂ ಬೇಡಿಕೆ ಇದೆ. ‘ಮೂರ್ನಾಲ್ಕು ತಿಂಗಳಿನಿಂದ ಚಿನ್ನದ ಬೆಲೆ ಕಡಿಮೆ ಇದೆ. ಹೀಗಾಗಿ ಜನರು ಹೆಚ್ಚಿನ ಆಭರಣಗಳನ್ನು ಖರೀದಿಸುತ್ತಿದ್ದಾರೆ.

ಆ್ಯಂಟಿಕ್‌ ಆಭರಣಗಳ ಬಗ್ಗೆ ಹೆಚ್ಚಿನ ಮೋಹ ಬೆಳೆದಿದೆ. ಅದರಲ್ಲೂ ಈ ವರ್ಷದ ಟ್ರೆಂಡ್‌ ಎಂದರೆ ವಜ್ರದ ಆಭರಣಗಳನ್ನು ಕೊಳ್ಳುವುದು. ನಮ್ಮಲ್ಲಿ ₹50 ಸಾವಿರ ಬೆಲೆಯ ಚಿನ್ನಾಭರಣ ಕೊಂಡರೆ 200ಮಿಲಿ ಗ್ರಾಂ ಚಿನ್ನದ ನಾಣ್ಯ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ಕೊಂಡರೆ 2 ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುವುದು.

ಈ ಕೊಡುಗೆ ಇರುವುದರಿಂದ ಹೆಚ್ಚಿನವರು ವಜ್ರಾಭರಣ ಖರೀದಿಸುತ್ತಿದ್ದಾರೆ. ಕೋಲ್ಕತ್ತ ಹಾಗೂ ಮುಂಬೈ ವಿನ್ಯಾಸಗಳಿಗೆ ಈ ವರ್ಷ ಹೆಚ್ಚು ಬೇಡಿಕೆ ಇದೆ’ ಎಂದರು. ಲಲಿತಾ ಜ್ಯುವೆಲ್ಲರ್‍ಸ್‌ನ ಮಾಲೀಕ ರಾಜೇಶ್‌ ಅಗರ್‌ವಾಲ್‌ ಅವರ ಪ್ರಕಾರ ಈ ಸಲ ಅಕ್ಷಯ ತೃತೀಯ ಎಂಬ ಕಾರಣಕ್ಕೆ ವ್ಯಾಪಾರದಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡುಬಂದಿಲ್ಲ. ಚಿನ್ನದ ಬೆಲೆಯಲ್ಲಿನ ಗೊಂದಲ ಜನರನ್ನು ಕಾಡುತ್ತಿದೆ.

ಹೀಗಾಗಿ ವ್ಯಾಪಾರ ಹೇಳುವಷ್ಟು ಉತ್ತಮವಾಗಿಲ್ಲ. ಇಲ್ಲೂ ಆಂಟಿಕ್‌ ಆಭರಣಗಳನ್ನೇ ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರಂತೆ. ಈ ವರ್ಷದ ಅಕ್ಷಯ ತೃತೀಯ ಮಂಗಳ ವಾರ ಬಂದಿರುವುದರಿಂದ ಶನಿವಾರ, ಭಾನುವಾರ ಹಾಗೂ ಸೋಮವಾರ ಚಿನ್ನದ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗುತ್ತದೆ. ಆದರೆ ಈ ಬಾರಿ ಶನಿವಾರದ ಬಂದ್‌ನಿಂದಾಗಿ ವ್ಯಾಪಾರಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ ಎನ್ನುತ್ತಾರೆ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್‌ ಸನ್ಸ್‌ನ ಸಿ.ವಿನೋದ್‌ ಹಯಗ್ರೀವ.

‘ಚಿನ್ನಕ್ಕೆ ಯಾವಾಗಲೂ ಬೆಲೆಯಿದೆ. ಚಿನ್ನದ ವ್ಯಾಪಾರ ಚೆನ್ನಾಗಿದ್ದು, ಅಕ್ಷಯ ತೃತೀಯದ ಸಂದರ್ಭದಲ್ಲಿ ಶೇ 3ರಷ್ಟು ವ್ಯಾಪಾರ ಅಭಿವೃದ್ಧಿಯಾಗುತ್ತದೆ. ಅವರವರ ಇಷ್ಟದ ಪ್ರಕಾರ ಎಲ್ಲಾ ರೀತಿಯ ಆಭರಣಗಳನ್ನು ಕೊಳ್ಳುವ ಗ್ರಾಹಕರಿದ್ದಾರೆ. ಚಿನ್ನದ ನಾಣ್ಯ ಕೊಂಡುಕೊಳ್ಳುವ ಟ್ರೆಂಡ್‌ ಇದ್ದರೂ ಮೊದಲಿನಷ್ಟಿಲ್ಲ. ನಾವು ಕಳೆದ ಮೂರು ವರ್ಷಗಳಿಂದ ‘ನವಯೋನಿ ಶ್ರೀಚಕ್ರ ಯಂತ್ರ‘ ಎಂಬ ನಾಣ್ಯವನ್ನು ವಿಶೇಷವಾಗಿ ಅಕ್ಷಯ ತೃತೀಯ ಸಂದರ್ಭದಲ್ಲಿ ಇಡುತ್ತೇವೆ.

ಒಂಬತ್ತು ವಿಶೇಷ ಲೋಹಗಳಿಂದ ತಯಾರಿಸಲಾದ ಈ ಯಂತ್ರದ ಕೇವಲ 999 ನಾಣ್ಯಗಳನ್ನು ಮಾತ್ರ ಇಡುತ್ತೇವೆ. ಪ್ರತಿ ಬಾರಿಯೂ ಹತ್ತು ದಿನದಲ್ಲಿ ಈ ನಾಣ್ಯಗಳು ಮಾರಾಟವಾಗಿಬಿಡುತ್ತವೆ. ಅದೂ ಅಲ್ಲದೆ ಮಾರ್ಗೋಸಾ ರಸ್ತೆಯಲ್ಲಿರುವ ನಮ್ಮ ಮಳಿಗೆಯಲ್ಲಿ ಮಾರ್ಗೋಸಾ ಕಾಯಿನ್‌ ಅನ್ನು ಈ ವರ್ಷ ಪರಿಚಯಿಸಿದ್ದೇವೆ. ಮಾರ್ಗೋಸಾ ಹೂವಿನ ಪರಿಕಲ್ಪನೆಯಲ್ಲಿ ಮಾಡಲಾದ ಇದು 10 ಗ್ರಾಂ ಚಿನ್ನದ ನಾಣ್ಯ. ಇವುಗಳಿಗೂ ಉತ್ತಮ ಬೇಡಿಕೆ ಇದೆ’ ಎನ್ನುತ್ತಾರೆ ವಿನೋದ್‌.

ಭಾರತೀಯರ ನಂಬಿಕೆ ಹಾಗೂ ಸಂಪ್ರದಾಯದಲ್ಲಿ ಚಿನ್ನಕ್ಕೆ ಯಾವಾಗಲೂ ಒಳ್ಳೆಯ ಸ್ಥಾನವಿದೆ. ಭಾರತೀಯ ಮಹಿಳೆಯರಿಗೆ ಚಿನ್ನದೊಂದಿಗೆ ಭಾವನಾತ್ಮಕ ಸಂಬಂಧವೂ ಇರುವುದರಿಂದ ಅಕ್ಷಯ ತೃತೀಯವನ್ನು ಒಂದು ವಿಶೇಷ ದಿನವಾಗಿ ಪರಿಗಣಿಸುತ್ತಾರೆ. ಅದೂ ಅಲ್ಲದೆ ಈ ವರ್ಷ ಚಿನ್ನದ ಬೆಲೆ ಸ್ಥಿರವಾಗಿರುವುದರಿಂದ ಜನರು ಚಿನ್ನ ಖರೀದಿಯಲ್ಲಿ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಳೆ, ನಾಣ್ಯಗಳಿಗೆ ಹೆಚ್ಚು ಬೇಡಿಕೆ ಇದೆ. ಪ್ಲೇನ್‌ ಗೋಲ್ಡ್‌ ಜ್ಯುವೆಲ್ಲರಿಯತ್ತ ಹೆಚ್ಚಿನವರು ಆಕರ್ಷಿತರಾಗುತ್ತಿದ್ದಾರೆ. ಈ ದಿನಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚು ನಡೆಯುತ್ತಿರುವುದರಿಂದ ಅನೇಕರು ಅಕ್ಷಯ ತೃತೀಯದ ಸಂದರ್ಭದಲ್ಲೇ ಹೆಚ್ಚು ಚಿನ್ನ ಖರೀದಿಸುವ ಮನಸ್ಸು ಮಾಡಿದ್ದಾರೆ’ ಎನ್ನುತ್ತಾರೆ ತನಿಷ್ಕ್‌ನ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಸಂದೀಪ್‌ ಕುಲ್ಹಳ್ಳಿ.

ಭೀಮಾ ಜ್ಯುವೆಲ್ಲರಿ ಸಹಾಯಕ ವ್ಯವಸ್ಥಾಪಕಿಯಾದ ಚಂದ್ರಿಕಾ ಅವರ ಪ್ರಕಾರ ಈ ಬಾರಿ ವ್ಯಾಪಾರ ಚೆನ್ನಾಗಿದೆ. ಅಕ್ಷಯ ತೃತೀಯದ ದಿನ ಚಿನ್ನ ಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಅನೇಕರು ಹಣವಿಲ್ಲದಿದ್ದರೂ ಕಡಿಮೆ ಬೆಲೆಯ ಕಿವಿಯೋಲೆಗಳನ್ನಾದರೂ ಕೊಳ್ಳುತ್ತಿದ್ದಾರೆ. ತಮ್ಮಲ್ಲಿನ ವಿನ್ಯಾಸ ವೈವಿಧ್ಯದ ಕುರಿತೂ ಅವರಿಗೆ ಅತೀವ ಹೆಮ್ಮೆ ಇದೆ.

ಬೆಂಗಳೂರಿನವರು ಹೆಚ್ಚಾಗಿ ಆ್ಯಂಟಿಕ್‌ ಆಭರಣಗಳ ಮೊರೆಹೋಗುತ್ತಿದ್ದಾರೆ. ಅದೂ ಅಲ್ಲದೆ ಭೀಮಾದವರು ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳ ಮೇಲೆ ಈ ಬಾರಿ ಹೆಚ್ಚಿನ ರಿಯಾಯಿತಿ ನೀಡುತ್ತಿದ್ದು, ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ’ ಎಂದು ಚಂದ್ರಿಕಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT