ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮುದಾಯದ ಭಾವ–ಬಣ್ಣ

Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಬಂಜಾರ ಸಮುದಾಯದ ಮೂಲ ಇರುವುದು ರಾಜಸ್ತಾನದಲ್ಲಿ.  ಮೂಲತಃ ಇದು ಅಲೆಮಾರಿ ಸಮುದಾಯ. ಕಳೆದ ಒಂದು ಶತಮಾನದಿಂದೀಚೆಗೆ ಇವರಲ್ಲೇ ಕೆಲವರು ಕೃಷಿಗೆ ಆತುಕೊಂಡು; ಒಂದೆಡೆ ನೆಲೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಹೊಟ್ಟೆಹೊರೆಯಲು ಕೂಲಿನಾಲಿ ಮಾಡುತ್ತಾ ಅಲ್ಲಿಂದಿಲ್ಲಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ.

‘ಗೋರ್‌ಬೋಲಿ’ ಎಂಬುದು ಬಂಜಾರ ಸಮುದಾಯದವರ ಭಾಷೆ. ಇದಕ್ಕೆ ಲಿಪಿ ಇಲ್ಲ. ಈ ಭಾಷೆಗೊಂದು ಲಿಪಿ ರೂಪಿಸುವ ಪ್ರಯತ್ನವೂ ಈಗ ನಡೆಯುತ್ತಿದೆ. ಈ ಕಾಲಘಟ್ಟದ ಬಂಜಾರ ಯುವಜನತೆ ಈಗೀಗ ಮಾತೃಭಾಷೆ ಆಡುವುದನ್ನೇ ಮರೆಯುತ್ತಿದೆಯಂತೆ. ಇವರಲ್ಲೇ ಕೆಲವರು ಆಧುನಿಕತೆಯೆಂಬ ಮಾಯಾಂಗನೆಯ ಮೋಹಕ್ಕೆ ಸಿಲುಕಿ, ವಿಶೇಷ ಸೌಕರ್ಯ ಹಾಗೂ ಸವಲತ್ತು ಪಡೆದುಕೊಳ್ಳುವ ಆಕರ್ಷಣೆಗೆ ಬಿದ್ದು  ಮತಾಂತರಗೊಳ್ಳುತ್ತಿದ್ದಾರೆ.  ಆರ್ಥಿಕವಾಗಿ ಬಡವರಾದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬಂಜಾರ ಸಮುದಾಯದ ಪ್ರದರ್ಶನ ಕಲೆ, ವೇಷಭೂಷಣ, ಮೌಖಿಕ ಸಾಹಿತ್ಯ ಆಧುನೀಕರಣದ ಪ್ರಭೆಯಲ್ಲಿ ಮಂಕಾಗುತ್ತಿದೆ.

ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲೆಂದೇ ‘ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ’ ನಗರದಲ್ಲಿ ಸಕ್ರಿಯವಾಗಿದೆ. ಈ ಅಕಾಡೆಮಿ ನಿರಂತರವಾಗಿ ಬಂಜಾರ ಪ್ರದರ್ಶನ ಕಲಾ ಉತ್ಸವವನ್ನು, ತರಬೇತಿಯನ್ನು ಏರ್ಪಡಿಸುವ ಮೂಲಕ ಸಮುದಾಯದ ಶ್ರೀಮಂತ ಪರಂಪರೆಯನ್ನು ಜೀವಂತವಾಗಿರಿಸುವ ಪ್ರಯತ್ನ ಮಾಡುತ್ತಿದೆ. ಬಂಜಾರ ಪ್ರದರ್ಶನ ಕಲೆಗಳನ್ನು ಸಂಘಟಿಸಿದರೆ ಒಂದು ‘ರಾಷ್ಟ್ರೀಯ ಪ್ರದರ್ಶನ ಕಲಾ ಪ್ರಕಾರ’ವನ್ನು ಹುಟ್ಟುಹಾಕಬಹುದು, ಅಷ್ಟು ಸತ್ವ ಇದರಲ್ಲಿದೆ.

ನಗರದಲ್ಲಿ ಬಂಜಾರರ ಹೆಜ್ಜೆ ಗುರುತು...
ಬೆಂಗಳೂರು ನಗರಿಯಲ್ಲಿ ಅಂದಾಜು ಮೂರು ಲಕ್ಷ ಬಂಜಾರರಿದ್ದಾರೆ. ಅವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು, ಮನೆಗೆಲಸ, ಡಾಂಬರು ಹಾಕುವಂತಹ ಕೆಲಸದಲ್ಲಿ ತೊಡಗಿಸಿಕೊಂಡವರು. ಸರ್ಕಾರಿ ನೌಕರಿಯಲ್ಲಿರುವವರು ಬೆರಳೆಣಿಕೆಯಷ್ಟಿದ್ದಾರೆ. ಇವರ ತಾಂಡಾಗಳು ಇನ್ನೂ ಕಂದಾಯ ಗ್ರಾಮಗಳಾಗಿಲ್ಲ. ಹೀಗಾಗಿ, ಸರ್ಕಾರಿ ಸೌಕರ್ಯದಿಂದ ವಂಚಿತರಾಗಿದ್ದಾರೆ. ಇಲ್ಲಿರುವ ಬಂಜಾರರು ಹೆಚ್ಚಾಗಿ ಕೂಲಿ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿರುವ ಬಂಜಾರ ಸಮುದಾಯದ ಅಜ್ಜಿಯರು ಸ್ವಲ್ಪ ಮಟ್ಟಿಗೆ ಕಸೂತಿ ಕೆಲಸ ಮಾಡುತ್ತಿದ್ದಾರೆ. ಈ ಕಲೆಯೂ ಈಗ ಹೈಜಾಕ್‌ ಆಗಿದೆ.

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಬಂಜಾರ ಸಮುದಾಯದಲ್ಲೂ ಸಾಕಷ್ಟು ಸಾಂಸ್ಕೃತಿಕ ಪಲ್ಲಟಗಳಾಗಿವೆ. ಬಂಜಾರ ಯುವಜನತೆಯಲ್ಲಿ ಇಂದು ಸಮುದಾಯ ಸ್ವಾಭಿಮಾನ ಕಣ್ಮರೆಯಾಗಿದೆ. ಮಾತೃ ಭಾಷೆ ಮಾತನಾಡಲು ಅವರು ಬಿಮ್ಮು ತೋರುತ್ತಾರೆ. ಇದಕ್ಕೆ ನಾನಾ ಕಾರಣಗಳಿವೆ. ಬಂಜಾರ ಸಮುದಾಯದಲ್ಲಿ ಒಗ್ಗಟ್ಟಿಲ್ಲದಿರುವುದು, ಅಲೆಮಾರಿತನ  ಇದಕ್ಕೆ ಪ್ರಮುಖ ಕಾರಣ. ಈ ಸಮುದಾಯದವರು ಯಾವ ಸ್ಥಳ, ಪ್ರದೇಶದಲ್ಲಿ ನೆಲೆ ನಿಂತಿರುತ್ತಾರೋ ಆ ಮಣ್ಣಿನ ಗುಣ ಮತ್ತು ಸಂಸ್ಕೃತಿಗೆ ಬೇಗ ಒಗ್ಗಿಕೊಂಡು ಬಿಡುತ್ತಾರೆ. ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಗಳಿಗೆ ಇವರ ಸಂಸ್ಕೃತಿ ಹೊಂದಿಕೊಂಡು ಸಾಗಿ ಮೂಲ ಸಂಸ್ಕೃತಿಯಲ್ಲಿ ಬದಲಾವಣೆಗಳಾಗಿವೆ.

ಮದುವೆ ಶಾಸ್ತ್ರ , ಹಬ್ಬಗಳ ವಿಶಿಷ್ಟ ಆಚರಣೆ
ಲಂಬಾಣಿ ಜನಾಂಗದ ಮದುವೆ ಶಾಸ್ರ್ತಗಳು ಇತರೆ ಬುಡಕಟ್ಟುಗಳ ಮದುವೆ ಶಾಸ್ತ್ರಗಳಿಗಿಂತ ಭಿನ್ನವಾಗಿದೆ. ಲಂಬಾಣಿ ಬುಡಕಟ್ಟಿನಲ್ಲಿ ಮದುವೆ ಎಂಬುದು ಎರಡು ತಾಂಡಗಳನ್ನು ಬೆಸೆಯುವ ಸಂಬಂಧ ಸೇತು ಆಗಿರುವುದನ್ನು ಗುರ್ತಿಸಬಹುದು. ಮಾರ್ವಾಡಿ ಸಮುದಾಯದವರು ಆಚರಿಸುವ ಎಲ್ಲ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ದೀಪಾವಳಿ ಮತ್ತು ಹೋಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೀಪಾವಳಿ ಲಂಬಾಣಿಗರ ಸಂಸ್ಕೃತಿಯ ಮುಖಗಳನ್ನು ಪರಿಚಯಿಸುತ್ತದೆ. ದೀಪಾವಳಿಯನ್ನು ಇವರು ‘ಕಾಳಿಮಾಸ್’ ಮತ್ತು ‘ದವಾಳಿ’ ಎಂದು ಎರಡು ದಿನ ಬೇರೆ ಬೇರೆ ವಿಧಿ ವಿಧಾನಗಳಿಂದ ಆಚರಿಸುತ್ತಾರೆ. ದೀಪಾವಳಿ ಸಿಹಿ ನೈವೇದ್ಯದ ಪೂಜಾವಿಧಿಯಾದರೆ; ಕಾಳಿಮಾಸ್ ಎಂಬುದು ಕುರಿ ಬಲಿಯ ಪೂಜೆಯಾಗಿ ಆಚರಿಸುತ್ತಾರೆ.

‘ಕಾಳಿಮಾಸ್‌ನ ರಾತ್ರಿ ಮನೆಯ ಗಂಡು ಮಕ್ಕಳು ಧಾನ್ಯ ಕೇರುವ ಮೊರವನ್ನು ಸೌಟಿನಿಂದ ಬಡಿಯುತ್ತ, ಅಗ್‌ಝಡ್-ಬಗ್‌ಝಡ್, ಊಟ ಲಂಬಡಿ ಬಾರ್ ಬೇಸ್, ಉಣ್ಣೆ ಉದುರು, ತೊಣಚಿ ಉದುರು, ಎದ್ದೇಳು ಹುಚ್ಚು ಮುಂಡೆ ಹೊರಹೋಗು ಎಂದು (ದೆವ್ವಕ್ಕೆ) ಹೇಳುತ್ತಾ, ದನದ ಕೊಟ್ಟಿಗೆ ಮತ್ತು ವಾಸಿಸುವ ಮನೆಯನ್ನು ಏಳು ಸಾರಿ ಪ್ರದಕ್ಷಿಣೆ ಮಾಡುತ್ತಾರೆ. ಮುಂಬಾಗಿಲಿಗೆ ಸರಿಯಾಗಿ ಮೊರವನ್ನು ಸೌಟಿಗೆ ಆಧಾರ ಮಾಡಿ ಬೋರಲಾಗಿ ಒರಗಿಸಿ ಸ್ವಲ್ಪ ಹೊತ್ತು ಇಡುತ್ತಾರೆ. ಇಲ್ಲಿಗೆ ಲಂಬಾಣಿಗರ ಕಾಳಿಮಾಸಿನ ಆಚರಣೆ ಮುಕ್ತಾಯವಾಗುತ್ತದೆ. ಕಾಳಿಮಾಸ್ ಆಚರಣೆ ಮುಗಿದ ಮರುದಿನ  ದೀಪಾವಳಿ ಆಚರಿಸುತ್ತಾರೆ’ ಎನ್ನುತ್ತಾರೆ ರಂಗತಜ್ಞ ಡಾ. ಎ.ಆರ್‌. ಗೋವಿಂದಸ್ವಾಮಿ. 

ಈ ಸಮುದಾಯದ ಮತ್ತೊಂದು ಪ್ರಮುಖ ಹಬ್ಬ ಮೇರಾ. ‘ಮೇರಾ’ ಎಂದರೆ ಕನ್ನಡದಲ್ಲಿ ‘ಶುಭಾಶಯ ಕೋರುವುದು’ ಎಂದರ್ಥ. ಪ್ರಾಯದ ಯುವತಿಯರು ಗುಂಪುಗೂಡಿ ರಂಗುರಂಗಿನ ಬಟ್ಟೆ ಧರಿಸಿ ಕಂಚಿನ ತಟ್ಟೆಯಲ್ಲಿ ಹಣತೆ ಇಟ್ಟು ತಾಂಡದ ಮನೆ ಮನೆಗೂ ಹೋಗಿ ‘ಮೇರಾ’ ಮಾಡುತ್ತಾರೆ. ಯುವತಿಯರು ಪ್ರತಿಯೊಂದು ಮನೆಯ ಒಳಗಡೆ ಪ್ರವೇಶ ಮಾಡಿ ಅವರವರ ಕುಲ ದೇವತೆಗಳ ಮತ್ತು ಆ ಮನೆಯಲ್ಲಿ ವಾಸಿಸುವ ಜನರ ಹೆಸರುಗಳನ್ನು ಕ್ರಮವಾಗಿ ಹೇಳಿ ‘ಮೇರಾ’ ಮಾಡುತ್ತಾರೆ. ಮನೆಗೆ ಬಂದ ಯುವತಿಯರು ಶುಭಾಶಯವನ್ನು ಸ್ವೀಕರಿಸುವ ಹಿರಿಯರು ತಮ್ಮ ಕೈಲಾದಷ್ಟು ಕಾಣಿಕೆ ಮತ್ತು ದೀಪಕ್ಕೆ ಎಣ್ಣೆ ಹಾಕಿ ಕಳಿಸಿಕೊಡುತ್ತಾರೆ. 

ಮನರಂಜನೆ, ಆಹಾರ ಸಂಸ್ಕೃತಿ
‘ಡಿಸ್ಕವರ್ ಇಂಡಿಯಾ’  ಪ್ರವಾಸದ ಭಾಗವಾಗಿ ಕೆಲ ವರ್ಷಗಳ ಹಿಂದೆ  ರಾಹುಲ್ ಗಾಂಧಿ ಲಂಬಾಣಿ ತಾಂಡಾಕ್ಕೆ ಭೇಟಿ ನೀಡಿದ್ದರು. ಈ ಜನರ ಸಂಪ್ರದಾಯ, ಜೀವನದ ಕುರಿತು ಅರಿತುಕೊಳ್ಳಲು ಅಲ್ಲಿನ ಗುಡಿಸಲೊಂದರಲ್ಲಿ  ತಂಗಿದ್ದರು. ಈ ವೇಳೆ ಬಂಜಾರರ ಸಿಗ್ನೇಚರ್‌ ಮಾಂಸಾಹಾರ ತಿನಿಸು ‘ಸಳೋಯಿಭಾಟಿ’ ಸವಿದಿದ್ದರು. ರಾಹುಲ್‌ ಮೆಚ್ಚಿದ ಸಳೋಯಿಭಾಟಿಯೇ ಇವರ ಜನಪ್ರಿಯ ತಿನಿಸು. ಇದನ್ನು ಕುರಿಯ ರಕ್ತದಿಂದ ತಯಾರಿಸುತ್ತಾರೆ. ದೀಪಾವಳಿಯಲ್ಲಿ ತಯಾರಿಸುವ ವಿಶೇಷ ಸಿಹಿ ಅಡುಗೆ ‘ಲಾಪಸಿ’ (ಅಕ್ಕಿ ಮತ್ತು ಬೆಲ್ಲದ ಮುದ್ದೆ) ಮತ್ತೊಂದು ತಿನಿಸು. ಅಕ್ಕಿ ಹಿಟ್ಟನ್ನು ಹಿತಮಿತವಾದಷ್ಟು ಬೆಲ್ಲದೊಂದಿಗೆ ಬೆರೆಸಿ ಅದಕ್ಕೆ ಹಸುವಿನ ತುಪ್ಪ ಸೇರಿಸಿ ನಂತರ ಕಲೆಸಿ ಇದನ್ನು ರಾಗಿ ಮುದ್ದೆಯಂತೆ ತಯಾರಿಸುತ್ತಾರೆ.

‘ಸಾಂಪ್ರದಾಯಿಕ ನೃತ್ಯದ ಮಂದವಾದ ಗತಿಗೆ ತದ್ವಿರುದ್ಧವಾಗಿ ವೇಗದ ಚಲನೆಯ ನೃತ್ಯವೂ ಲಂಬಾಣಿ ಮಹಿಳೆಯರಲ್ಲಿ ಪ್ರಚಲಿತವಿದೆ. ಮನರಂಜನೆಯೇ ಈ ಬಗೆಯ ನೃತ್ಯದ ಪ್ರಧಾನ ಉದ್ದೇಶ. ಈ ವೇಗದ ಗತಿಯ ನೃತ್ಯವನ್ನು ಘುಮರ್ ಎನ್ನುತ್ತೇವೆ. ಈ ನೃತ್ಯ ವೀರರಸ ಪ್ರಧಾನವಾಗಿದ್ದು ಪ್ರಣಯ, ವಿಜಯ, ದುರಂತ ಗೀತೆಗಳ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತದೆ. ಸ್ತ್ರೀ ಪುರುಷರು ಪ್ರತ್ಯೇಕವಾಗಿ ಸಾಲಾಗಿ ನಿಂತು ನಿಧಾನವಾಗಿ ನೃತ್ಯ ಪ್ರಾರಂಭಿಸಿ ನಂತರದಲ್ಲಿ ಒಂದೇ ಗೋಲಾಕಾರವಾಗಿ ಸೇರಿಕೊಳ್ಳುತ್ತಾ ನಲಿಯುತ್ತಾರೆ. ನೃತ್ಯದ ತೀವ್ರತೆ ಬೆಳೆದಂತೆ ನರ್ತಕರು ಗೋಲಕೇಂದ್ರಕ್ಕೆ ನಡೆದು ಬಂದು ಬುಗುರಿಯಂತೆ ತಿರುಗಿ ತಮ್ಮ ವಿಶಿಷ್ಟ ಸಾಮರ್ಥ್ಯ ಪ್ರದರ್ಶಿಸುತ್ತಾರೆ.

ಹೆಣ್ಣು-ಗಂಡು ಒಟ್ಟಿಗೆ ಸೇರಿ ಕುಣಿಯುವುದನ್ನು ಬಿಟ್ಟರೆ ಲಂಬಾಣಿ ಸ್ತ್ರೀಯರ ಘುಮರ್ ನೃತ್ಯವು ಸಾನ್ಸಿ ಗಿರಿಜನರ ಘುಮರ್ ನೃತ್ಯವನ್ನು ಹೋಲುತ್ತದೆ’ ಎನ್ನುತ್ತಾರೆ ಎ.ಆರ್‌.ಗೋವಿಂದಸ್ವಾಮಿ. ‘ಬಂಜಾರ ಸಮುದಾಯದವರಲ್ಲಿ ನೃತ್ಯಗೀತೆಗಳ ಅಮೂಲ್ಯ ನಿಧಿಯೇ ಇದೆ. ಇವರ ಸಹಜ ಸುಂದರ ಗೀತೆಗಳ ನಿರೂಪಣೆಗೆ ಎಂತವರೂ ತಲೆದೂಗಬೇಕು. ನರ್ತನ ಗೀತೆಗಳ ಕಥನ ಕವನಗಳು, ತತ್ವಪದ, ಹಾಸ್ಯದ  ಜೊತೆಗೆ ಆಧುನಿಕ ಸಮಾಜದ ನಾನಾ ವಿಷಯ ವಸ್ತುವನ್ನೊಳಗೊಂಡಿರುತ್ತವೆ.

ಗುಂಪು ಧ್ವನಿ, ಗೆಜ್ಜೆನಾದ,ಧಿರಿಸುಗಳ ಚಮತ್ಕಾರದಿಂದ ಮಹಿಳೆಯರ ನೃತ್ಯಗೀತೆಗಳು ನೋಡುಗರನ್ನು ಆಕರ್ಷಿಸುತ್ತವೆ.  ಸಾಹಿತ್ಯದ ಅಂಶಗಳಿಂದ ಸಮೃದ್ಧಗೊಂಡ ಈ ಹಾಡುಗಳಲ್ಲಿ ಪುನರಾವರ್ತನೆ ಹೆಚ್ಚಾಗಿರುತ್ತದೆ. ಲಂಬಾಣಿ ಮಹಿಳೆಯರು ಒಂದೊಂದು ಸಾಲುಗಳನ್ನೂ ಕನಿಷ್ಠ ಪಕ್ಷ ಐದರಿಂದ ಆರು ಬಾರಿ ಪುನರುಚ್ಚರಿಸುತ್ತಾರೆ. ಅಷ್ಟಾದರೂ ಈ ಹಾಡುಗಳು ಕೇಳುಗರ ಕುತೂಹಲ ಕೊನೆಯವರೆಗೂ ಕಾಯ್ದುಕೊಳ್ಳುತ್ತವೆ’ ಎನ್ನುತ್ತಾರೆ ಅವರು.  
***
ಸಮುದಾಯದ ಸಿಂಹಾವಲೋಕನ...
ಬಂಜಾರ ಸಮುದಾಯದ ಪರಂಪರೆ ಬೆಳೆದು ಬಂದ ಬಗೆಯನ್ನು, ಅದು ಕಾಲಕಾಲಕ್ಕೆ ಬದಲಾಯಿಸಿಕೊಂಡು ಬಂದ ವ್ಯಾಪಾರ, ದೊಂಬರಾಟ, ಬೇಟೆ, ಪಶುಪಾಲನೆ, ಕೃಷಿ ಮೊದಲಾದ ವೃತ್ತಿಗಳಲ್ಲಿ ಗುರುತಿಸಬಹುದು. ಅಪ್ಪಟ ನಿಸರ್ಗ ಜೀವಿಗಳಾದ ಲಂಬಾಣಿ ಬುಡಕಟ್ಟುಗಳ ಜೀವನ ಕ್ರಮವೇ ನೈಸರ್ಗಿಕವಾದದ್ದು. ಚತುರರು, ಧೈರ್ಯಶಾಲಿಗಳು, ಶ್ರಮ ಜೀವಿಗಳು ಆದ ಇವರು ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯೊಂದನ್ನು ತಮ್ಮ ಮಡಿಲಿನಲ್ಲಿ ಇಟ್ಟುಕೊಂಡಿದ್ದಾರೆ. ತಾಂಡಗಳಲ್ಲಿ ವಾಸಿಸುವ ಲಂಬಾಣಿಗರ ಉಡುಗೆ-ತೊಡುಗೆ ವಿಶಿಷ್ಟವಾದುದು. ಇವರು ಶೃಂಗಾರಪ್ರಿಯರು, ಕಲಾಪ್ರಿಯರು ಹಾಗೂ ಆಭರಣ ಪ್ರಿಯರು ಹೌದು.

ಲಂಬಾಣಿಗರು ಮೂಲತಃ ರಾಜಸ್ತಾನದ ಮಣಿಕ್ (ವ್ಯಾಪಾರಿ) ಸಮುದಾಯಕ್ಕೆ ಸೇರಿದವರು. ಸಂಚಾರ ವ್ಯವಸ್ಥೆ ಇಲ್ಲದ ಕಾಲಕ್ಕೆ ಇವರೇ ವ್ಯಾಪಾರ ವಹಿವಾಟನ್ನು ಹಿಡಿತದಲ್ಲಿಟ್ಟುಕೊಂಡಿದ್ದರು ಎಂಬ ಬಗ್ಗೆ ದಾಖಲೆ ಸಿಗುತ್ತವೆ. ಹೀಗೆ ವ್ಯಾಪಾರದಲ್ಲಿ ಪರಿಣತಿ ಪಡೆದು, ರಾಜ ಮಹಾರಾಜರುಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಗಾನ-ನೃತ್ಯಗಳನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಹಾಸು ಹೊಕ್ಕಾಗಿ ಬೆಳೆಸಿಕೊಂಡರು. ಇವರು ಸ್ಥಳದಲ್ಲೇ ಕವಿತೆಗಳನ್ನು ರಚಿಸಿ ಹಾಡುವಂತಹ ಆಶು ಕವಿಗಳು, ಕಥೆ ಹೇಳುವ ಕಥೆಗಾರರು, ಕಲಾ ನಿಪುಣರು ಈ ವಿಶಿಷ್ಟ ಸಂಸ್ಕೃತಿಯಿಂದಾಗಿಯೇ ಪ್ರಪಂಚದ ಗಮನ ಸೆಳೆದವರು. ಇವರ ಈ ಪ್ರಕಾರಗಳೆಲ್ಲವೂ ಇಂದು ಸಿನಿಮಾ, ರಂಗಭೂಮಿ ಹಾಗೂ ಫ್ಯಾಷನ್ ಲೋಕದಲ್ಲಿ ಹಾಸು ಹೊಕ್ಕಾಗಿವೆ. –ಡಾ.ಎ.ಆರ್. ಗೋವಿಂದಸ್ವಾಮಿ, ರಂಗತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT