ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದದ್ದೆಲ್ಲ ಬರಲಿ...

ಕ್ಯಾನ್ಸರ್‌ ಗೆದ್ದ ಕತೆ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನಾನು ಸೌಂದರ್ಯಲಹರಿ ತರಗತಿಗಳಿಗೆ ಹೊರಡಲು ರೆಡಿಯಾಗುತ್ತಿದ್ದೆ. ಅಷ್ಟರಲ್ಲಿ ಫೋನ್ ಬಂತು. ‘ಅನುಪಮ ಇವತ್ತು ತರಗತಿ ಇಲ್ಲ, ನಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ’ ಎಂದರು. ‘ಯಾಕೆ ಅಮ್ಮ ಏನಾಯಿತು?’ ಎಂದೆ ಗಾಬರಿಯಿಂದ. ‘ನನಗೆ ಎದೆಯ ಕ್ಯಾನ್ಸ್‌ರ್ ಆಗಿದೆ, ಟ್ರೀಟ್‌ಮೆಂಟ್‌ಗೆ ಹೋಗುತ್ತಿದ್ದೇನೆ  ಟ್ರೀಟ್‌ಮೆಂಟ್ ಮುಗಿದ ಮೇಲೆ ತರಗತಿಗಳನ್ನು ಮುಂದುವರಿಸುತ್ತೇನೆ’ ಎಂದರು.

ದೇವತಾ ಸ್ವರೂಪಿ ಅವರು,  ನಮ್ಮಂಥ ಹಲವರಿಗೆ ಉಚಿತ ತರಬೇತಿ ಕೊಡುತ್ತಿದ್ದರು. ಇವರ ಯಜಮಾನರು ಎಂಜಿನಿಯರ್ [ಪಿ.ಡಬ್ಲ್ಯೂ.ಡಿ] ಆಗಿ ಸಲ್ಲಿಸಿದ್ದರು. ಅವರ ಜೊತೆ ಇವರು ದೇಶ ವಿದೇಶ ಸುತ್ತಿ ಇಂದಿರಾಗಾಂಧಿ ಕಾಲದಲ್ಲಿ ದೆಹಲಿಯಲ್ಲಿ ಇದ್ದಾಗ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಿವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದರು.

ಮಕ್ಕಳು ವಿದೇಶದಲ್ಲಿ ಇದ್ದರೂ ಹಲವು ವರ್ಷಗಳಿಂದ ಇವರ ಯಜಮಾನರು ಹಾಸಿಗೆ ಹಿಡಿದ್ದರು ಅವರನ್ನು ಮಗುವಂತೆ ನೋಡಿಕೊಳ್ಳುತ್ತಿದ್ದರು. ಮನೆಯ ಜವಬ್ದಾರಿಯೂ ಇವರ ಮೇಲೆ ಇತ್ತು ಅಂತಹ ಸಮಯದಲ್ಲಿ ಈ ನೋವು ಇವರು ಹೇಗೆ ನಿಬಾಯಿಸುತ್ತಾರೆ ಎಂದು ನನ್ನ ಮನಸ್ಸು ಯೋಚಿಸುತ್ತಿರುವಾಗಲೇ ಅವರಿಂದ ಫೋನ್ ಬಂತು ಅನುಪಮ ಟ್ರೀಟ್‌ಮೆಂಟ್ ಮುಗಿತು, ಬನ್ನಿ ತರಗತಿಗಳಿಗೆ ಎಂದರು. ನಾನು ಖುಷಿಯಾಗಿ ಪುಸ್ತಕವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೊರಟೆ.

ಕಿಮೋ ಥೆರಪಿಯಿಂದ ಕೂದಲು ಉದುರಿದ್ದ ಕಾರಣ ವಿಗ್ ಧರಿಸಿ ಮುಖದಲ್ಲಿ ಸ್ವಲ್ಪ ಆಯಾಸದ ಲಕ್ಷಣ ಇದ್ದರೂ ನಮ್ಮನ್ನು ನಗುಮುಖದಿಂದ ಸ್ವಾಗತಿಸಿದರು. ತರಗತಿಗಳನ್ನು ಆರಂಭಿಸಿದರು. ಒಬ್ಬ ಹೆಣ್ಣುಮಗಳು ಎಲ್ಲವನ್ನೂ ಸಕರಾತ್ಮಕವಾಗಿ ಸ್ವೀಕರಿಸಿದರೆ ಪ್ರಪಂಚವನ್ನು ಪ್ರೀತಿಯಿಂದ ನೋಡುತ್ತಾಳೆ. ಅವರೊಳಗಿನ ಗೊಂದಲವನ್ನು ಅವರು ಗೆದ್ದ ಬಗೆ ಹೇಳಿದರು.

‘ನನಗೂ ಮೊದಲು ಭಯ ಇತ್ತು. ನನ್ನ ಗುರುಗಳಿಗೆ ಕೇಳಿದೆ ಇಷ್ಟ ಪೂಜೆ, ವ್ರತ, ಮಂತ್ರಪಠನೆ ಬಹಳ ಶಿಸ್ತಿನ ಜೀವನ ನಡೆಸಿದ ನನಗೆ ಯಾಕೆ?ಎಂದು. ಅದಕ್ಕೆ ಅವರು ‘ಯಾವ ಮನುಷ್ಯನು ಈ ಕ್ಯಾನ್ಸರ್ ಅಣುವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸೃಷ್ಟಿಕರ್ತಳು ಮಾತ್ರ ಈ ಕೆಲಸ ಮಾಡಲು ಸಾಧ್ಯ ಹಾಗೇ ಆ ದೇವಿ ನಿನ್ನ ಬಳಿಗೆ ಕ್ಯಾನ್ಸರಿನ ಅಣುವಿನ ರೂಪದಲ್ಲಿ ಒಳಗೆ ಪ್ರವೇಶಿಸಿದ್ದಾಳೆ. ಅವಳನ್ನು ಪ್ರೀತಿಯಿಂದ ಸ್ವಾಗತಿಸು’ ಎಂದರು. ಇದನ್ನು ಅರಿತು ನಾನು ಇನ್ನೂ ಪ್ರೀತಿಯಿಂದ ಆತ್ಮ ವಿಶ್ವಾಸದಿಂದ ಬದುಕುವುದನ್ನು ಕಲಿತೆ’ ಎಂದರು.

ಒಂದು ದಿನ ಇವರ ಯಜಮಾನರು ಶ್ವಾಸಕೋಶ ತೊಂದರೆಯಿಂದ ಕೊನೆ ಉಸಿರೆಳೆದರು.  ಆಗಲೂ ಬಹಳ ಸ್ಥಿತಪ್ರಜ್ಞೆಯಿಂದ ವರ್ತಿಸಿ ಮಕ್ಕಳಿಗೆ ಅದರ ಬಿಸಿ ತಟ್ಟದಂತೆ ನೋಡಿಕೊಂಡರು.

ಕೆಲವೇ ತಿಂಗಳಗಳಲ್ಲಿ ಕ್ಯಾನ್ಸರ್‌ ಇನ್ನೊಂದು ರೂಪದಲ್ಲಿ ಅವರ ಮೆದುಳಿನೊಳಗೆ ನುಸುಳಿತು. ಸ್ವಲ್ಪವೂ ಭಯಪಡದೆ ಜೀವನ ಬಂದಂತೆ ಎದುರಿಸಲು ಸಿದ್ದರಾದರು. 

ನಂತರ ತಲೆ ಕೂದಲು ಉದುರಿದ್ದರು ಅದಕ್ಕೆ ವಿಗ್ ಗೋಜಿಗೆ ಹೋಗಲಿಲ್ಲ. ಟಿ.ವಿ ನೋಡಿ ನಗುನಗುತ್ತಾ ನಮ್ಮ ಜೊತೆ ಆನಂದವಾಗಿ ಮಾತನಾಡಿದರು. ಚಿಕಿತ್ಸೆ ಮುಗಿದ ಕೂಡಲೇ, ಎಲ್ಲ  ವಿದ್ಯವನ್ನುಧಾರೆ ಎರೆಯುತ್ತೇನೆ ಎಂದರು. ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅವರಿಗೆ ಕಾಣಬಾರದೆಂದು ಬಾಗಿ ಅವರ ಪಾದಗಳಿಗೆ ನಮಸ್ಕರಿಸಿದೆ.  ಮುಂದೆ ಎರಡೇ ದಿನಗಳಲ್ಲಿ ಜವರಾಯ ಅವರನ್ನು  ಕರೆದುಕೊಂಡೆ ಹೊರಟೇಹೋದ.

ಎಷ್ಟೇ ಕಷ್ಟವಿರಲಿ ಕೊರಗದೆ ಬದುಕನ್ನು ನಗುತ್ತಾ ಪ್ರೀತಿಯಿಂದ ಎದುರಿಸಬೇಕು ಎಂದು ಹೇಳಿ ಕೊಟ್ಟ ಗುರುಗಳು ಅವರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT