ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು... ದೇಶಕ್ಕೆ ಆದಾಯ ಜೋರು

Last Updated 6 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ರಾಜಮಹಾರಾಜರ ಕಾಲದಿಂದಲೂ ಜಲಸಾರಿಗೆ ಪ್ರಮುಖ ಸರಕು ಸಾಗಣೆ ವ್ಯವಸ್ಥೆಯಾಗಿ ಗುರ್ತಿಸಿಕೊಂಡಿದೆ. ಬಂದರುಗಳು ಒಂದು ದೇಶದ ಆರ್ಥಿಕ ಪ್ರಗತಿಗೆ ತಮ್ಮದೇ ಆದ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿವೆ. ರಸ್ತೆ ಅಥವಾ ವಾಯು ಸಾರಿಗೆಗೆ ಹೋಲಿಸಿ ನೋಡಿದರೆ ಹಡಗಿನ ಮುಖಾಂತರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಾರಿ ಪ್ರಮಾಣದ ಸರಕುಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದಾಗಿದೆ. ಹಾಗಾಗಿ, ಬಂದರುಗಳು ಹಾಗೂ ಹಡಗು ಉದ್ಯಮಗಳು ದೇಶದ ವ್ಯಾಪಾರ ಮತ್ತು ವಾಣಿಜ್ಯ ಬೆಳವಣಿಗೆಯನ್ನು ಬೃಹತ್‌ ಪ್ರಮಾಣದಲ್ಲಿ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

7,517 ಕಿಲೋಮೀಟರ್‌ ಕರಾವಳಿ ಪ್ರದೇಶವನ್ನು ಹೊಂದಿರುವ ಭಾರತ ಪ್ರಪಂಚದಲ್ಲಿಯೇ 16ನೇ ದೊಡ್ಡ ಕಡಲ ತೀರದ ಸಂಪನ್ಮೂಲದ ದೇಶ ಎನಿಸಿಕೊಂಡಿದೆ. ನಮ್ಮ ದೇಶದಲ್ಲಿ 12 ಪ್ರಮುಖ ಬಂದರುಗಳು ಹಾಗೂ 187 ಸಣ್ಣ ಬಂದರುಗಳಿವೆ.
ಯಾವುದೇ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಂದರುಗಳ ಪಾತ್ರ ಮುಖ್ಯ ಎಂಬುದನ್ನು ಅರಿತಿರುವ ಸರ್ಕಾರಗಳು, ಬಂದರುಗಳ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಸಾಕಷ್ಟು ಮುತುವರ್ಜಿ ವಹಿಸುತ್ತಿವೆ.

ಈ ಕಾರಣಕ್ಕಾಗಿಯೇ ಸರ್ಕಾರ ದೇಶದಲ್ಲಿ ಬಂದರು ನಿರ್ಮಾಣ ಮತ್ತು ನಿರ್ವಹಣೆ ಯೋಜನೆಗಳಿಗೆ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಿದೆ. ಇದರ ಜತೆಗೆ ಬಂದರುಗಳ ಅಭಿವೃದ್ಧಿ, ನಿರ್ವಹಣೆ ಮತ್ತು ಒಳನಾಡು ಜಲಸಾರಿಗೆಯನ್ನು ಉತ್ತೇಜಿಸುವ ಸಲುವಾಗಿ ತೆರಿಗೆ ವಿನಾಯಿತಿಯನ್ನೂ ನೀಡುತ್ತಿದೆ.

ಕೇಂದ್ರದ ಹಡಗು ಮತ್ತು ಬಂದರು ಸಚಿವಾಲಯದ ಪ್ರಕಾರ, ದೇಶದಲ್ಲಿ ನಡೆಯುವ ಒಟ್ಟು ವ್ಯಾಪಾರ ಚಟುವಟಿಕೆಗಳಲ್ಲಿ ಶೇ 70ರಷ್ಟು ಕಡಲಿನ ಮೂಲಕವೇ ನಡೆಯುತ್ತವೆ.

ಬಂದರು ಮಾರುಕಟ್ಟೆ ಗಾತ್ರ
ಭಾರತದ ಪ್ರಮುಖ ಬಂದರುಗಳು ಅತ್ಯುತ್ತಮ ನಿರ್ವಹಣಾ ಸಾಮರ್ಥ್ಯ ಹೊಂದಿವೆ. 2015ರ ಮಾರ್ಚ್‌ 31ರವರೆಗೆ ಲಭ್ಯವಿರುವ ಅಂಕಿ–ಅಂಶಗಳನ್ನು ಗಮನಿಸಿದಾಗ, 2013–14ನೇ ಹಣಕಾಸು ವರ್ಷದಲ್ಲಿ ದೇಶದ ಪ್ರಮುಖ ಬಂದರುಗಳಲ್ಲಿ ಒಟ್ಟು 58.15 ಕೋಟಿ ಟನ್‌ಗಳಷ್ಟು ಸರಕುಗಳ ವಹಿವಾಟು (ಸರಕಿನ ಸಂಚಾರ ನಿರ್ವಹಣೆ) ನಡೆದಿದ್ದರೆ, 2014–15ನೇ ಹಣಕಾಸು ವರ್ಷದಲ್ಲಿ 87.15 ಕೋಟಿ ಟನ್‌ಗಳಷ್ಟು ಸರಕುಗಳ ವಹಿವಾಟು ನಡೆದಿದೆ. ಅಂದರೆ, 2014–15ನೇ ಹಣಕಾಸು ವರ್ಷದಲ್ಲಿ ಬಂದರುಗಳ ಬಳಕೆ ಶೇ 66ರಷ್ಟು ಹೆಚ್ಚಾಗಿರುವುದು ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಬಂದರುಗಳ ದಕ್ಷತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ಇಂಡಿಯನ್‌ ಪೋರ್ಟ್ಸ್‌ ಅಸೋಸಿಯೇಷನ್‌ನಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿ– ಅಂಶಗಳನ್ನು ಅವಲೋಕಿಸಿದಾಗ, ಸರ್ಕಾರದ ಒಡೆತನದಲ್ಲಿರುವ ಪ್ರಮುಖ ಬಂದರುಗಳಿಂದ 2013–14ನೇ ಹಣಕಾಸು ವರ್ಷಕ್ಕಿಂತಲೂ 2014–15ನೇ ಹಣಕಾಸು ವರ್ಷದಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ ಎಂಬುದು ತಿಳಿದುಬರುತ್ತದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವಾಲಯದ ‘ದಿ ಡಿಪಾರ್ಟ್‌ಮೆಂಟ್‌ ಆಫ್‌ ಇಂಡಸ್ಟ್ರಿಯಲ್‌ ಪಾಲಿಸಿ ಆ್ಯಂಡ್‌ ಪ್ರೊಮೋಷನ್‌’ (ಡಿಐಪಿಪಿ), 2000ದ ಏಪ್ರಿಲ್‌ನಿಂದ 2015ರ ಮೇ ತಿಂಗಳವರೆಗಿನ ಅವಧಿಯಲ್ಲಿ ಭಾರತದ ಬಂದರು ಮಾರುಕಟ್ಟೆಯಲ್ಲಿ 163.73 ಕೋಟಿ  ಅಮೆರಿಕನ್‌ ಡಾಲರ್‌ಗಳಷ್ಟು (ಸುಮಾರು ₹10,724 ಕೋಟಿಗಳಷ್ಟು) ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಗಿದೆ ಎಂದು ವರದಿ ಮಾಡಿದೆ.

ಹೂಡಿಕೆ ಮತ್ತು ಬೆಳವಣಿಗೆ
ದೇಶದ ಆರ್ಥಿಕ ಪ್ರಗತಿಗೆ ಸಾರಿಗೆ ವ್ಯವಸ್ಥೆ ರಹದಾರಿ ಎಂಬುದನ್ನು ಅರಿತಿರುವ ಸರ್ಕಾರಗಳು ಈ ಉದ್ಯಮಗಳ ಮೇಲೆ ಪ್ರತಿವರ್ಷವೂ ಬೃಹತ್‌ ಹೂಡಿಕೆಯನ್ನೇ ಮಾಡುತ್ತಿವೆ. ಕೇಂದ್ರ ಸರ್ಕಾರವು ‘ಸಾಗರಮಾಲಾ ಪ್ರಾಜೆಕ್ಟ್‌’ ಅಡಿಯಲ್ಲಿ ದೇಶದ 10 ಕರಾವಳಿ ಆರ್ಥಿಕ ವಲಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಈ ಯೋಜನೆಯು ಬಂದರುಗಳ ಆಧುನೀಕರಣ ಹಾಗೂ ಅವುಗಳ ಉತ್ಪಾದನಾ ಶಕ್ತಿಯಲ್ಲಿನ ಹೆಚ್ಚಳಕ್ಕೆ ಶಕ್ತಿವರ್ಧಕದಂತೆ ಕೆಲಸ ಮಾಡಲಿದೆ. ಇದರ ಜತೆಗೆ ಕೇಂದ್ರ ಸರ್ಕಾರವು ದೇಶದ ಬಂದರುಗಳಿಗೆ ಸರಕುಗಳನ್ನು ಸಾಗಿಸಲು ರಸ್ತೆ ಮತ್ತು ರೈಲು ಮಾರ್ಗಗಳಿಗೆ ಪರ್ಯಾಯವಾಗಿ ಒಳನಾಡು ಜಲಸಾರಿಗೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನೂ ಹಾಕಿಕೊಂಡಿದೆ. ಆ ಮೂಲಕ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನೂ ಹೊಂದಿದೆ.

ಇನ್ನು ನಮ್ಮ ದೇಶದ ಇಡೀ ಕರಾವಳಿ ತೀರಗಳನ್ನು ಬೆಸೆಯುವ ‘ಕೋಸ್ಟಲ್‌ ಕಾರಿಡಾರ್‌’ ಯೋಜನೆ ಸಮಗ್ರವಾಗಿ ಅನುಷ್ಠಾನಗೊಂಡರಂತೂ ಭಾರತದ ಅರ್ಥ ವ್ಯವಸ್ಥೆಯ ಚಿತ್ರಣವೇ ಬದಲಾಗುವ ಸಾಧ್ಯತೆಗಳಿವೆ.

ಸರ್ಕಾರದ ಕ್ರಮಗಳು:
ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ರಸ್ತೆ ಹಾಗೂ ಹಡಗು ಉದ್ಯಮದ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಅನೇಕ ಯೋಜನೆಗಳನ್ನು ರೂಪಿಸಿದೆ. ದೇಶದ ಆರ್ಥಿಕ ಬೆಳವಣಿಯನ್ನು ಹೆಚ್ಚಿಸುವುದು ಹಾಗೂ ಜಲಸಾರಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನದಿ ಜೋಡಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನೂ ಹಾಕಿಕೊಂಡಿದೆ. ಹಾಗೆಯೇ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಎರಡು ಹೊಸ ಬಂದರುಗಳನ್ನು ನಿರ್ಮಿಸುವ ಯೋಜನೆಯೂ ಇದೆ.

ಬಂದರುಗಳ ಅಭಿವೃದ್ಧಿ, ಹೊಸ ಹಡಗುಗಳ ನಿರ್ಮಾಣ ಮತ್ತು ದೇಶದಲ್ಲಿ ಜಲಮಾರ್ಗವನ್ನು ಸುಧಾರಿಸುವ ಸಮಗ್ರ ಯೋಜನೆಗಾಗಿ ₹1 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಹಡಗು ಮತ್ತು ಬಂದರು ಸಚಿವಾಲಯ ಕಡಲ ತೀರದ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ‘ದಿ  ಮ್ಯಾರಿಟೈಮ್‌ ಅಜೆಂಡಾ 2010-2020’ ಎಂಬ ಯೋಜನೆಯನ್ನೂ ರೂಪಿಸಿದೆ.

ನೆಲ್ಲೂರಿನ ಕೃಷ್ಣಪಟ್ಟಣಂ ಬಂದರು
ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಕೃಷ್ಣಪಟ್ಟಣಂ ಪೋರ್ಟ್‌ ದೇಶದಲ್ಲೇ ಅತಿ ಆಳವಾದ ಬಂದರು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿರುವ ಈ ಬಂದರು ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ಬಂದರಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನೂ ದಾಖಲಿಸುತ್ತಿದೆ.

ವಿಜಯನಗರದ ಅರಸು ಶ್ರೀಕೃಷ್ಣದೇವರಾಯರ ಕಾಲದ ಬಂದರು ಇದಾಗಿರುವುದರಿಂದ ಸಹಜವಾಗಿಯೇ ಅವರ ಹೆಸರನ್ನೇ ಇದಕ್ಕೆ ಇಡಲಾಗಿದೆ. ಕಬ್ಬಿಣದ ಅದಿರು ಹಾಗೂ ಇತರೆ ಸರಕು ಸರಂಜಾಮುಗಳನ್ನು ಇಲ್ಲಿಂದ ವಿದೇಶಕ್ಕೆ ಸಾಗಿಸುವ ಮಾರ್ಗ ಆಗಿನ ಕಾಲದಲ್ಲೇ ಇತ್ತು. ಹಾಗೆಯೇ, ಶ್ರೀಕೃಷ್ಣ ದೇವರಾಯರು ತಮ್ಮ ಸೈನ್ಯಕ್ಕೆ ಬೇಕಿದ್ದ ಆನೆಗಳನ್ನು ಶ್ರೀಲಂಕಾದಿಂದ ಈ ಬಂದರಿನ ಮೂಲಕವೇ ಆಮದು ಮಾಡಿಕೊಳ್ಳುತ್ತಿದ್ದರಂತೆ.

ಚೆನ್ನೈನಿಂದ 180 ಕಿಲೋ ಮೀಟರ್‌ ದೂರದಲ್ಲಿರುವ ಕೃಷ್ಣಪಟ್ಟಣಂ ಬಂದರಿನಿಂದ  ದಕ್ಷಿಣ ಆಂಧ್ರಪ್ರದೇಶ, ಉತ್ತರ ತಮಿಳುನಾಡು ಹಾಗೂ ಪೂರ್ವ ಕರ್ನಾಟಕವನ್ನು ತುಂಬ ಸುಲಭವಾಗಿ ಸಂಪರ್ಕಿಸಬಹುದಾಗಿದೆ. 6,500 ಎಕರೆಯಷ್ಟು ವಿಶಾಲ ಪ್ರದೇಶವನ್ನು ಹೊಂದಿರುವ ಈ ಬಂದರಿಗೆ ಮೂರು ರಾಜ್ಯಗಳಿಂದ ಅತ್ಯುತ್ತಮ ರಸ್ತೆ ಮತ್ತು ರೈಲು ಸಾರಿಗೆಯ ಸಂಪರ್ಕ ವ್ಯವಸ್ಥೆಯೂ ಇದೆ.

ಸರ್ವಋತುವಿನ ಕಾರ್ಯದಕ್ಷತೆ
ಸರ್ವಋತುವಿನಲ್ಲಿಯೂ ಕಾರ್ಯನಿರ್ವಹಿಸುವಂತಹ ದಕ್ಷತೆಯುಳ್ಳ ಕೃಷ್ಣಪಟ್ಟಣಂ ಬಂದರಿನಲ್ಲಿ 2950 ಮೀಟರ್‌ ಉದ್ದದ ಸಮುದ್ರ ತೀರವಿದೆ. ಇದರ ಬದಿಯಲ್ಲಿ ವಿವಿಧೋದ್ದೇಶಕ್ಕೆ ಬಳಕೆಯಾಗುವ 10 ಬರ್ಥ್‌ಗಳಿವೆ. ಬೃಹತ್‌ ಹಡಗುಗಳು ಲಂಗರು ಹಾಕಲು ಅನುಕೂಲವಾಗುವಂತೆ ಈ ಬಂದರು 18.5 ಮೀಟರ್‌ಗಳಷ್ಟು ಆಳವನ್ನೂ ಹೊಂದಿದೆ.

ಕೃಷ್ಣಪಟ್ಟಣಂ ಬಂದರಿನ ಉತ್ತರ ಭಾಗದಲ್ಲಿ 1400 ಮೀಟರ್‌ ಹಾಗೂ ದಕ್ಷಿಣ ಭಾಗದಲ್ಲಿ 1815 ಮೀಟರ್‌ ಉದ್ದದ ಬ್ರೇಕ್‌ವಾಟರ್‌ ಗೋಡೆಗಳಿವೆ. ಇವು ಬಂದರು ತೀರದಲ್ಲಿ ಮರಳು ಸಂಗ್ರಹವಾಗಿ ಹಡುಗುಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಕಾರ್ಯನಿರ್ವಹಿಸುತ್ತವೆ.

ಕೃಷ್ಣಪಟ್ಟಣಂ ಬಂದರಿನಲ್ಲಿ ಸರಕುಗಳ ರಕ್ಷಣೆಗೆ ಬೇಕಿರುವ ಸುಸಜ್ಜಿತ ಗೋದಾಮುಗಳ ವ್ಯವಸ್ಥೆಯೂ ಇದೆ. ಈ ಬಂದರಿಗೆ ಬೇರೆ ದೇಶಗಳಿಂದ ಬರುವ ಹಾಗೂ ವಿವಿಧ ದೇಶಗಳ ಮಾರುಕಟ್ಟೆಗೆ ರಫ್ತಾಗುವ ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಬೇಕಿರುವ ರಸ್ತೆ ಮತ್ತು ರೈಲು ಸಾರಿಗೆ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ.

ಕೆಪಿಸಿಎಲ್‌ ವಿಶೇಷತೆ
ಕೃಷ್ಣಪಟ್ಟಣಂ ಪೋರ್ಟ್‌ ಕಂಪೆನಿ ಲಿ., (ಕೆಪಿಸಿಎಲ್‌) ಉತ್ತಮ ಸೇವೆಯಿಂದ ಗುರುತಿಸಿಕೊಳ್ಳುತ್ತಿದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಪ್ಟನ್‌ ಶ್ರೀರಾಮ್‌ ರವಿಚಂದರ್‌.

24/7 ಸೇವೆ ಒದಗಿಸುವ ಈ ಬಂದರು ಸಂಸ್ಥೆಯು, ಇಲ್ಲಿಂದ ರಫ್ತಾಗುವ ಪ್ರತಿಯೊಂದು ಸರಕಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳುತ್ತದೆ. ಸರಕುಗಳನ್ನು ಹೊತ್ತು ಬಂದ ಒಂದು ಟ್ರಕ್‌ ಬಂದರಿನ ಒಳಕ್ಕೆ ಪ್ರವೇಶಿಸುತ್ತಿದ್ದಂತೆ ಆ ಸರಕುಗಳನ್ನು ಹೊರದೇಶಕ್ಕೆ ರಫ್ತು ಮಾಡಲು ಪಡೆಯಬೇಕಾದ ಗುಣಮಟ್ಟ ನಿಯಂತ್ರಣ ಪ್ರಮಾಣಪತ್ರ, ಸುಂಕದ ಅಧಿಕಾರಿಗಳಿಂದ ಅನುಮತಿ, ಲೋಡ್‌–ಅನ್‌ಲೋಡಿಂಗ್‌ ಮೊದಲಾದ ಚಟುವಟಿಕೆಗಳನ್ನೆಲ್ಲಾ ಕೆಪಿಸಿಎಲ್‌ ನೋಡಿಕೊಳ್ಳುತ್ತದೆ ಎಂದು ವಿವರಿಸುತ್ತಾರೆ ರವಿಚಂದರ್‌.

ಕೆಪಿಸಿಎಲ್‌ನಿಂದ ಸರಕುಗಳನ್ನು ರಫ್ತು ಮಾಡುವವರು ಪ್ರತಿಬಾರಿಯೂ ಚೆನ್ನೈನಲ್ಲಿರುವ ‘ಎಕ್ಸ್‌ಪೋರ್ಟ್‌ ಇನ್‌ಸ್ಪೆಕ್ಷನ್‌ ಏಜೆನ್ಸಿ’ಯನ್ನು (ಇಐಎ) ಎಡತಾಕುವ ಪ್ರಮೇಯವಿಲ್ಲ. ಏಕೆಂದರೆ, ರಫ್ತುದಾರರ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶದಿಂದ ಕೆಪಿಸಿಎಲ್‌ ನೆಲ್ಲೂರಿನಲ್ಲಿಯೇ ಇಐಎ ಶಾಖೆಯ ವ್ಯವಸ್ಥೆ ಮಾಡಿದೆ. ಈ ಕಾರಣಕ್ಕಾಗಿಯೇ ಕೃಷ್ಣಪಟ್ಟಣಂ ಬಂದರು ವೇಗ ಮತ್ತು ದಕ್ಷತೆಗೆ ಹೆಸರಾಗಿದೆ.

ಕೃಷ್ಣಪಟ್ಟಣಂ ಬಂದರಿನಿಂದ ಶಾಂಘೈ, ಯಾಂಗೂನ್‌, ಕೊಲೊಂಬೊ ಮತ್ತು ಸಿಂಗಪುರ ದೇಶಗಳಿಗೆ ಸರಕು ಸಾಗಣೆ ಹಡಗುಗಳು ಸಂಚರಿಸುತ್ತವೆ. ಸಿಗಡಿ, ಮೀನು ಮತ್ತು ಮೀನಿನ ಉತ್ಪನ್ನಗಳು, ಅಕ್ಕಿ, ಗೋಧಿ, ಕಬ್ಬಿಣದ ಅದಿರು, ಪಾಮ್‌ ಆಯಿಲ್‌, ಗ್ರಾನೈಟ್‌ ರಫ್ತಾಗುತ್ತವೆ. ಕೋಲ್‌, ಜಿಪ್ಸಂ, ರಾ ಶುಗರ್‌, ಎಡಿಬಲ್‌ ಆಯಿಲ್‌, ಸೋಡಾ ಆ್ಯಶ್‌, ಕಬ್ಬಿಣದ ಅದಿರು ಆಮದಾಗುತ್ತದೆ ಎಂದು ರವಿಚಂದರ್‌ ಅವರು, ಬಂದರಿನಲ್ಲಿನ ಸೇವಾ ವ್ಯವಸ್ಥೆಗಳ ಸಮಗ್ರ ಚಿತ್ರಣವನ್ನು ನೀಡುತ್ತಾರೆ.

ಬೆಂಗಳೂರಿಂದ 385 ಕಿ.ಮೀ
ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶದಲ್ಲಿನ ಕೈಗಾರಿಕೆಗಳು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿವೆ. ಬೆಂಗಳೂರಿನಿಂದ ಬೇರೆಸ್ಥಳಕ್ಕೆ ರಫ್ತು ಮಾಡುವುದು, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ಕೃಷ್ಣಪಟ್ಟಣಂ ಬಂದರಿಗೆ ರೈಲು ಸಂಪರ್ಕ ವ್ಯವಸ್ಥೆ ಇದೆ. ಬೆಂಗಳೂರಿನಿಂದ ಗ್ರಾನೈಟ್‌, ಗರ್ಕಿನ್ಸ್‌, ಗಾರ್ಮೆಂಟ್ಸ್‌ ಅತಿ ಹೆಚ್ಚು ರಫ್ತಾಗುತ್ತಿವೆ. ಕಾಫಿ, ಆಟೊಮೋಟಿವ್‌ ಬಿಡಿಭಾಗಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತವೆ.

ನಗರದಿಂದ ಬಂದರುಗಳಿಗೆ ಸರಕುಗಳನ್ನು ಸಾಗಿಸುವ ಸಾರಿಗೆ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ‘ಕಂಟೇನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ’ ಹಾಗೂ ‘ಕೃಷ್ಣಪಟ್ಟಣಂ ಪೋರ್ಟ್‌ ಕಂಟೇನರ್‌ ಟರ್ಮಿನಲ್‌’ ಸಹಭಾಗಿತ್ವದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಕೃಷ್ಣಪಟ್ಟಣಂ ಬಂದರಿಗೆ ರೈಲು ಮಾರ್ಗದ ನೇರ ಸಂಪರ್ಕವೂ ಇದೆ.

ಈ ರೈಲು ಏಕಕಾಲಕ್ಕೆ 90 ಕಂಟೇನರ್‌ಗಳನ್ನು ಸಾಗಿಸುವ ಸಾಮರ್ಥ್ಯದ್ದಾಗಿದೆ. ಬೆಂಗಳೂರಿಗೆ ಆಮದಾಗುವ ಹಣ್ಣು ಮತ್ತು ಔಷಧಗಳಿಗೆ ಈ ಬಂದರು ಮತ್ತು ರೈಲು ಮಾರ್ಗ ಬಹಳ ಅನುಕೂಲಕಾರಿಯಾಗಿದೆ. ಇದೆಲ್ಲದರಿಂದಾಗಿ ಕೆಪಿಸಿಎಲ್‌ಗೆ ಪ್ರಶಸ್ತಿಗಳು ಸಂದಿವೆ. ಕಾರ್ಮಿಕರಿಗಾಗಿ ಕೌಶಲ ಅಭಿವೃದ್ಧಿ ಕೇಂದ್ರ ನಡೆಸಲಾಗುತ್ತಿದೆ ಎನ್ನುವುದು ಬಂದರು ಅಧಿಕಾರಿಗಳು ನೀಡುವ ವಿವರಣೆ.

ಕೃಷ್ಣಪಟ್ಟಣಂ ಬಂದರಿನ ಸುತ್ತ ಕೈಗಾರಿಕೆಗಳು ಬೆಳೆಯಲು ಹೆಚ್ಚಿನ ಅವಕಾಶವಿದೆ. ಈಗಾಗಲೇ ಮೂರು ವಿದ್ಯುತ್‌ ಘಟಕಗಳು, ಒಂದು ಖಾದ್ಯತೈಲ ಘಟಕವೂ ಇದೆ.

ನವ ಮಂಗಳೂರು ಬಂದರು
ಮಂಗಳೂರು ಕರ್ನಾಟಕದ ಪ್ರಮುಖ ಬಂದರು ಪಟ್ಟಣ. ಇದು ಪ್ರಮುಖ ಆಮದು-ರಫ್ತು ಕೇಂದ್ರವಾಗಿ ಗುರ್ತಿಸಿಕೊಂಡಿದೆ. ಈ ಬಂದರಿನಿಂದ ಪ್ರಮುಖವಾಗಿ ಕಚ್ಚಾತೈಲ, ನೈಸರ್ಗಿಕ ಅನಿಲ, ಖಾದ್ಯ ತೈಲ, ಮರಮುಟ್ಟುಗಳು, ಕಬ್ಬಿಣದ ಅದಿರು, ಗ್ರಾನೈಟ್‌ ಕಲ್ಲುಗಳ ಆಮದು ಮತ್ತು ರಫ್ತು ಚಟುವಟಿಕೆ ನಡೆಯುತ್ತದೆ. ಪ್ರತಿದಿನವೂ ಹಲವು ಹಡಗುಗಳ ಸಂಚಾರವನ್ನು ಈ ಬಂದರು ನಿರ್ವಹಿಸುತ್ತಿದೆ.

ನವ ಮಂಗಳೂರು ಬಂದರು ನೌಕಾಯಾನ ಹಾಗೂ ಸರಕು ಸಂಗ್ರಹಣೆಯಲ್ಲಿ ತೊಡಗಿದೆ.  ಪೆಟ್ರೋಲಿಯಂ ಹಾಗೂ ಎಲ್‌.ಪಿ.ಜಿ ಧಾರಕಗಳನ್ನು ನಿರ್ವಹಿಸಲು ಕೂಡಾ ನವ ಮಂಗಳೂರು ಬಂದರು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನವ ಮಂಗಳೂರು ಬಂದರು ಸರಕುಗಳ ನಿರ್ವಹಣೆ ಪ್ರಮಾಣದಲ್ಲಿ ಭಾರತದ 9ನೇ ಅತಿ ದೊಡ್ಡ  ಬಂದರು ಎನಿಸಿಕೊಂಡಿದೆ. ಕರ್ನಾಟಕದ ಏಕಮಾತ್ರ ಬೃಹತ್‌ ಬಂದರಾಗಿದೆ.


ಭಾರತದ ಪ್ರಮುಖ ಬಂದರುಗಳು
* ಮುಂಬೈ ಬಂದರು (ಮಹಾರಾಷ್ಟ್ರ)

* ಜವಹರಲಾಲ್‌ ನೆಹರೂ ಪೋರ್ಟ್‌ (ಮಹಾರಾಷ್ಟ್ರ)

* ಕಾಂಡ್ಲಾ ಬಂದರು (ಗುಜರಾತ್‌)

* ಮರ್ಮಗೋವಾ ಬಂದರು (ಗೋವಾ)

* ನವ ಮಂಗಳೂರು ಬಂದರು (ಕರ್ನಾಟಕ)

* ಕೊಚ್ಚಿ ಬಂದರು (ಕೇರಳ)

* ಕೋಲ್ಕತ್ತ– ಹಲ್ದಿಯಾ ಬಂದರು (ಪಶ್ಚಿಮ ಬಂಗಾಳ)

* ಪಾರಾದೀಪ್ ಬಂದರು (ಒಡಿಶಾ)

* ವಿಶಾಖಪಟ್ಟಣಂ ಬಂದರು (ಆಂಧ್ರಪ್ರದೇಶ)

* ಚೆನ್ನೈ ಬಂದರು (ತಮಿಳುನಾಡು)

* ಕಾಮರಾಜರ್‌ ಬಂದರು (ತಮಿಳುನಾಡು)

* ತೂತುಕುಡಿ ಬಂದರು (ತಮಿಳುನಾಡು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT