ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಳಾ ತಮನ್ನಾ ?

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸಿಂಹಕಟಿ, ಹಾಲುಬಿಳುಪಿನ ಚೆಲುವೆ ತಮನ್ನಾ ನಗರಕ್ಕೆ ಬಂದಾಗ ಅಷ್ಟೊತ್ತು ಕಾಯುತ್ತಿದ್ದ ಹುಡುಗರ ಮುಖದಲ್ಲಿ ಮಿಂಚೊಂದು ಕಾಣಿಸಿತ್ತು. ಸೆಲ್ಫಿಗೆ ಸಿಕ್ಕಿಲ್ಲ ಎಂಬ ನೋವು ಕೆಲವರ ಕಣ್ಣಲ್ಲಿ ಇಣುಕುತ್ತಿತ್ತು. ತಮನ್ನಾ ಅಷ್ಟೊತ್ತು ಕಾಯಿಸಿದ ಅಸಹನೆಯನ್ನು ಮರೆತು ತಮ್ಮ ಪ್ರೀತಿಯ ನಟಿಯನ್ನು ಅಭಿಮಾನದಿಂದ ಕಣ್ಣುತುಂಬಿಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ನಗರದ ಗೋಲ್ಡನ್‌ ಪಾಮ್‌ ಹೋಟೆಲ್‌ನಲ್ಲಿ ಜೋ ರಿವಾಜ್‌ ಫ್ಯಾಷನ್‌ ಷೋ ಆಯೋಜಿಸಿತ್ತು. ನಟಿ ತಮನ್ನಾ ಬರುವಳೆಂದು ಅಲ್ಲಿ ಸಾಕಷ್ಟು ಮಂದಿ ಸೇರಿದ್ದರು. ’ಫ್ಲೈಟ್ ತಡವಾಗಿದೆ’ ‘ಮೇಕಪ್ ಮಾಡಿಕೊಳ್ಳುತ್ತಿದ್ದಾರೆ’ ಎಂಬಿತ್ಯಾದಿ ಕಾರಣಗಳ ನಡುವೆ ನಿಗದಿತ ಸಮಯಕ್ಕಿಂತ ಕೊಂಚ ಜಾಸ್ತಿಯೇ ಕಾಯಬೇಕಾಯಿತು ತಮನ್ನಾ ಆಗಮನಕ್ಕೆ.

ಅಲ್ಲಿ ಕೇಳಿಬರುತ್ತಿದ್ದ ‘ಹಾಲು ಬಣ್ಣದ ನಟಿಗೆ ಮತ್ಯಾಕೆ ಮೇಕಪ್‌?’ ಎಂಬ ಮಾತುಗಳು ಅಲ್ಲಿ ಹೆಪ್ಪುಗಟ್ಟಿದ್ದ ನಿರೀಕ್ಷೆಗೆ ನಿದರ್ಶನವಾಗಿದ್ದವು.
ಫ್ಯಾಷನ್‌ ಷೋಗೆ ಎಂದು ಬಂದ ಕೆಲವರು ತಮ್ಮ ವ್ಯಾಪಾರ ವಹಿವಾಟುಗಳ ಕುರಿತು ಮಾತನಾಡುತ್ತಿದ್ದರೆ, ಇನ್ನು ಕೆಲವು ಮಹಿಳೆಯರು ತಮ್ಮ ಸೀರೆ ವಿನ್ಯಾಸದ ಕುರಿತು ಚರ್ಚೆ ನಡೆಸಿದ್ದರು. ‘ತಮನ್ನಾ ಹೊಟೇಲ್‌ನಲ್ಲಿ ಇದ್ದಾರೆ, ಇನ್ನು ಹತ್ತು ನಿಮಿಷದಲ್ಲಿ ಬರುತ್ತಾರೆ’ ಎಂದಾಗ ಯಾವ ರೀತಿ ಮೇಕಪ್‌ ಮಾಡಿಕೊಂಡಿರಬಹುದು, ಯಾವ ಸೀರೆ ಉಟ್ಟುಕೊಂಡಿರಬಹುದು ಎಂಬ ಕುತೂಹಲ ಮೆಲ್ಲನೇ ಗರಿಗೆದರಲು ಆರಂಭವಾಯಿತು.

ಈ ಎಲ್ಲ ಗದ್ದಲಗಳ ನಡುವೆಯೇ ತಮನ್ನಾ ಬರುವಿಕೆಗೆ ಅಲ್ಲೊಬ್ಬಳು  ಹುಡುಗಿ ತುಂಬಾ ಕಾತುರದಿಂದ ಕಾಯುತ್ತಿದ್ದಳು. ಚೆನ್ನಾಗಿ ಮೇಕಪ್‌ ಮಾಡಿಕೊಂಡು ಎತ್ತರದ ಟೇಬಲ್‌ ಮೇಲೆ ನಿಂತುಕೊಂಡಿದ್ದ ಆಕೆ ಕಾದು ಕಾದು ಸುಸ್ತಾಗಿದ್ದಳು. ಅಲ್ಲಿ ಬಂದವರೆಲ್ಲಾ ಅವಳ ಎದುರು ನಿಂತು ಒಂದು ಆಶ್ಚರ್ಯ ನೋಟ ಬೀರಿ, ನಗಲೋ ಬೇಡವೋ ಎಂಬಂತೆ ನಕ್ಕು ಅವಳೊಂದು ಪ್ರದರ್ಶನದ ಗೊಂಬೆ ಎಂಬಂತೆ ಫೋಟೊ ಕ್ಲಿಕ್ಕಿಸುತ್ತಿದ್ದರು.

ಹೊರಗಡೆ ಮತ್ತಷ್ಟು ಹೊತ್ತು ಕಾಯಿಸಿದ ನಂತರ ತಮನ್ನಾ ಬಂದರು. ಅಷ್ಟೊತ್ತು ಚದುರಿ ಹೋಗಿದ್ದ ಜನ ಮತ್ತೆ ಅಲ್ಲಿ ಸೇರಿಕೊಂಡರು. ಕೆಲವರು ತಮನ್ನಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂಕು ನುಗುತ್ತಿದ್ದರು. ಇನ್ನು ಕೆಲವರು ‘ಅಬ್ಬಾ ಎಂತಹ ಬಿಳುಪು’ ಎಂದು ಕಣ್ಣರಳಿಸುತ್ತಿದ್ದರು. ಇನ್ನು ಕೆಲವರು ಇಷ್ಟು ಸರಳವಾದ ಸೀರೆ ಉಟ್ಟುಕೊಂಡು ಬರುವುದಕ್ಕೆ ಇಷ್ಟೊಂದು ಸಮಯ ತೆಗೆದುಕೊಂಡಳಾ? ಮೇಕಪ್‌ ಇಲ್ಲದೆಯೂ ಚೆನ್ನಾಗಿ ಕಾಣುತ್ತಿದ್ದಾಳೆ. ಯಾಕೆ ಕಾಯಿಸಬೇಕಿತ್ತು ಇಷ್ಟೊತ್ತು? ಎಂದು ತಮ್ಮ ಅಸಮಾಧಾನ ತೋರಿಸುತ್ತಿದ್ದರು.
ಕಪ್ಪು ಅಂಚಿರುವ ಬಿಳಿ ಸೀರೆ ಉಟ್ಟಿರುವ ತಮನ್ನಾ ಬಿಳಿ ಹರಳು ಮತ್ತು ಚಿನ್ನದ ಪಟ್ಟಿ ಅದರಲ್ಲಿ ದೊಡ್ಡ ದೊಡ್ಡ ಮುತ್ತಿನ ಮಣಿಗಳನ್ನು ಪೊಣಿಸಿರುವಂತಹ ಸರದಲ್ಲಿ ತಮನ್ನಾ ಮುದ್ದಾಗಿ ಕಾಣಿಸುತ್ತಿದ್ದರು. ಟೀವಿ ಪರದೆಯಲ್ಲಿ ಕಾಣಿಸುವಷ್ಟು ಚೆನ್ನಾಗಿ ಕಾಣಿಸದೇ ಇದ್ದರೂ ಹಾಲುಬಣ್ಣದ ಬಿಳುಪಿನಿಂದ ಕಣ್ಣುಕುಕ್ಕುತ್ತಿದ್ದರು.

ತಮ್ಮ ಸಿನಿಮಾ ಮತ್ತು ಸೀರೆಯ ಮೋಹದ ಬಗ್ಗೆ, ಬೆಂಗಳೂರಿನ ವಾತಾವರಣದ ಕುರಿತು ಒಂದಷ್ಟು ಮಾತು ಹಂಚಿಕೊಂಡರು ತಮನ್ನಾ.
ಇತರೆ ಯಾವುದೇ ಉಡುಗೆಗಿಂತ ಹೆಣ್ಣು ಸೀರೆಯಲ್ಲಿಯೇ ಹೆಚ್ಚು ಮುದ್ದಾಗಿ ಕಾಣುತ್ತಾಳೆ ಎಂಬುದು ಅವರ ಅಭಿಪ್ರಾಯ. ತಾನು ಉಟ್ಟಿರುವ ಸೀರೆಯನ್ನು ಪ್ರೀತಿಯಿಂದ ನೇವರಿಸಿ ‘ಜೋ ರಿವಾಜ್‌ ಸಂಗ್ರಹದ ಸೀರೆಗಳು ನನಗೆ ತುಂಬ ಇಷ್ಟ. ನಾನು ಸೀರೆ ಉಟ್ಟಾಗ ತುಂಬಾ ಚೆನ್ನಾಗಿ ಕಾಣಿಸುತ್ತೇನೆ ಎಂಬ ಹೊಗಳಿಕೆಯೂ ಸಿಕ್ಕಿದೆ’ ಎಂದು ನಕ್ಕರು. ಇದರ ಜತೆಗೆ ತಮ್ಮ ಆಭರಣ ಪ್ರೀತಿಯನ್ನು ತೆರೆದಿಟ್ಟರು. ಬಿಳಿ ಹರಳು ಮತ್ತು ಚಿನ್ನದ ಕಾಂಬಿನೇಷನ್‌ ಆಭರಣಗಳು ತಮನ್ನಾ ಅವರಿಗೆ ಅಚ್ಚುಮೆಚ್ಚು.

ಮಹೇಶ್ ಬಾಬು ಜತೆ ‘ಆಗಡು’ ಸಿನಿಮಾದಲ್ಲಿ ಅಭಿನಯಿಸಿದ ಇವರಿಗೆ ಆ ಸಿನಿಮಾದ ಪಾತ್ರ, ಮಹೇಶ್ ಬಾಬು ಅವರ ಹಾಸ್ಯ ಇಷ್ಟವಾಗಿದೆಯಂತೆ. ‘ಅಷ್ಟೊಳ್ಳೆ ನಟನಾದರೂ ಒಂದಷ್ಟೂ ಅಹಂಕಾರವಿಲ್ಲ. ಸೆಟ್‌ನಲ್ಲಿ ತುಂಬ ಚೆನ್ನಾಗಿ ಮಾತನಾಡಿಸುತ್ತಾರೆ. ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ’ ಎನ್ನುವುದು ತಮನ್ನಾ ಅಭಿಪ್ರಾಯ.

ಇದರ ಜತೆಗೆ ತಮ್ಮ ಹಿಂದೆ ನಿಂತಿರುವ ಎತ್ತರದ ಹುಡುಗಿಯ ಬಗ್ಗೆಯೂ ಒಂದಷ್ಟು ಹೊಗಳಿದರು. ಅಷ್ಟೊತ್ತು ನಿಂತ ಅವಳ ಸಾಮರ್ಥ್ಯ, ಅಭಿಮಾನಕ್ಕೆ ನಗುವಿನ ಮೂಲಕ ಧನ್ಯವಾದ ಸಲ್ಲಿಸಿದರು. ಜತೆಗೆ ತಾನೂ ಅವಳ ರೀತಿ ವರ್ಕ್‌ಔಟ್ ಮಾಡಬೇಕು ಎಂದರು.
ತಮನ್ನಾಗೆ ಬೆಂಗಳೂರಿನ ಆಹಾರವೆಂದರೆ ಇಷ್ಟವಂತೆ. ಇಲ್ಲಿನ ಜನ, ವಾತಾವರಣ ತುಂಬ ಕೂಲ್ ಎಂಬುದು ತಮನ್ನಾ ಮಾತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT