ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೂಕು ಹೇಳುವ ಕತೆ...

ಅಕ್ಷರ ಗಾತ್ರ

ಅಮೆರಿಕದ ವರ್ಜಿನಿಯಾ ಪ್ರಾಂತ್ಯದಲ್ಲಿ ನೇರ ಪ್ರಸಾರದ ಕಾರ್ಯಕ್ರಮವೊಂದರಲ್ಲಿ ತೊಡಗಿದ್ದ ಇಬ್ಬರು ಪತ್ರಕರ್ತರನ್ನು ಕ್ರೂರವಾಗಿ ಹತ್ಯೆ ಮಾಡಿದ್ದು ಟಿ.ವಿ. ಪರದೆಗಳಲ್ಲಿ ಮತ್ತು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. ಅವರ ಹತ್ಯೆಗೆ ಸಂತಾಪ ಸೂಚಿಸುವ ಜೊತೆಗೇ ಕೆಲವು ಪಾಠಗಳನ್ನು ಕಲಿಯುವ ಸಮಯ ಇದು.

ಇದು ಇಬ್ಬರ ಭಯಾನಕ ಹತ್ಯೆ ಮಾತ್ರವಲ್ಲ. ಅಮೆರಿಕದಲ್ಲಿ ಪ್ರತಿ 16 ನಿಮಿಷಗಳಿಗೆ ಒಂದು ಜೀವಹತ್ಯೆ ಮಾಡುವ ‘ಬಂದೂಕಿನ ಹಿಂಸೆ’ಯ ಕತೆಯೂ ಇದರ ಹಿಂದಿದೆ. ಮೂರು ಅಂಕಿ–ಅಂಶಗಳನ್ನು ಪರಿಗಣಿಸೋಣ:

ಬಂದೂಕು ಬಳಸಿ ನಡೆಸುವ ಹತ್ಯೆಯಿಂದ ಪ್ರತಿ ಆರು ತಿಂಗಳಲ್ಲಿ ಪ್ರಾಣ ಕಳೆದುಕೊಳ್ಳುವ ಅಮೆರಿಕನ್ನರ ಸಂಖ್ಯೆ ಕಳೆದ 25 ವರ್ಷಗಳಲ್ಲಿ ನಡೆದ ಭಯೋತ್ಪಾದಕರ ದಾಳಿ, ಆಪ್ಘಾನಿಸ್ತಾನ ಮತ್ತು ಇರಾಕ್‌ ಯುದ್ಧಗಳಲ್ಲಿ ಮಡಿದವರಿಗಿಂತ ಹೆಚ್ಚು. 1968ರಿಂದ ಇಲ್ಲಿಯವರೆಗೆ ಬಂದೂಕಿನ ನಳಿಕೆಗೆ ಗುರಿಯಾಗಿ ಸತ್ತ ಅಮೆರಿಕನ್ನರ ಸಂಖ್ಯೆ, ಅಮೆರಿಕದ ಇತಿಹಾಸದಲ್ಲಿ ನಡೆದ ಅಷ್ಟೂ ಯುದ್ಧಗಳಲ್ಲಿ ಸತ್ತವರ ಸಂಖ್ಯೆಗಿಂತ ಹೆಚ್ಚು. ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಅತ್ಯುತ್ತಮ ಪುಸ್ತಕವೊಂದನ್ನು ಬರೆದ, ಹಾರ್ವರ್ಡ್‌ ಪ್ರೊಫೆಸರ್ ಡೇವಿಡ್ ಹೆಮನ್‌ವೇ ಪ್ರಕಾರ, ಅಭಿವೃದ್ಧಿ ಹೊಂದಿದ ಇತರ ದೇಶಗಳಿಗೆ ಹೋಲಿಸಿದರೆ ಬಂದೂಕಿನ ಬಳಕೆಯಿಂದ ಅಮೆರಿಕದ ಮಕ್ಕಳು ಹತ್ಯೆಯಾಗುವ ಸಾಧ್ಯತೆ 14 ಪಟ್ಟು ಹೆಚ್ಚು.

ದಕ್ಷಿಣ ಕ್ಯಾರೊಲಿನಾದಲ್ಲಿ ಜೂನ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ತನ್ನ ಮಾಜಿ ಸಹೋದ್ಯೋಗಿಗಳಾದ ಅಲಿಸನ್ ಪಾರ್ಕರ್ ಮತ್ತು ಆ್ಯಡಂ ವಾರ್ಡ್‌ ಅವರನ್ನು ಕೊಲ್ಲಲು ಬ್ರೈಸ್ ವಿಲಿಯಮ್ಸ್ ಬಂದೂಕು ಪಡೆದುಕೊಂಡ. ಬಂದೂಕು ಬಳಸಿ ನಡೆಸುವ ಹಿಂಸಾಚಾರದಿಂದ ಅದೇ ಬಗೆಯ ಹಿಂಸಾಚಾರ ಜನಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

ಬುಧವಾರ ನಡೆದ ಪತ್ರಕರ್ತರ ಕೊಲೆಯನ್ನು ಚಿತ್ರೀಕರಿಸಿಕೊಂಡ ವಿಲಿಯಮ್ಸ್‌ ನಂತರ ಅದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ. ಆತ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಿರಬಹುದು. ವಿಲಿಯಮ್ಸ್‌ ಅವಿವೇಕಿ ಆಗಿದ್ದನೋ, ಇಲ್ಲವೋ. ಆದರೆ ಬಂದೂಕು ನೀಡುವ ವಿಚಾರದಲ್ಲಿ ನಮ್ಮ ನಿಯಮಗಳು ಅತಾರ್ಕಿಕವಾಗಿವೆ. ಸಾರ್ವಜನಿಕರ ಕೈಗೆ ಬಂದೂಕು ಸುಲಭವಾಗಿ ಸಿಗದಂತೆ ಮಾಡಲು, ಬಂದೂಕು ಬಯಸುವವರ ಹಿನ್ನೆಲೆ ಪರೀಕ್ಷಿಸುವ ಕನಿಷ್ಠ ವ್ಯವಸ್ಥೆಯೂ ನಮ್ಮಲ್ಲಿಲ್ಲ.

ಬಂದೂಕು ಕೊಡುವ ವಿಚಾರದಲ್ಲಿ ಹೊಸ ನಿರ್ಬಂಧ ಜಾರಿಗೊಳಿಸಬೇಕು ಎಂದು ಹೇಳುತ್ತಿಲ್ಲ. ಬಂದೂಕು ಬಳಸಿ ಮಾಡುವ ಕೊಲೆಗಳನ್ನು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎಂದು ಪರಿಗಣಿಸಬೇಕು. ಜನರನ್ನು ರಕ್ಷಿಸಲು ನಾವು ಮ್ಯೂಚುವಲ್ ಫಂಡ್‌, ಆಟಿಕೆ, ಈಜುಕೊಳಗಳು ಹೀಗೇ ಇರಬೇಕು ಎಂದು ಕಾನೂನು ರೂಪಿಸುತ್ತೇವೆ. ಆಟಿಕೆಗಳ ಬಗ್ಗೆ ಕಾನೂನು ಜಾರಿಗೆ ತಂದ ಮಾದರಿಯಲ್ಲೇ, ಬಂದೂಕುಗಳ ಬಗ್ಗೆಯೂ ಕಾನೂನು ಬೇಕಲ್ಲವೇ?

ಉದ್ಯೋಗದ ಸ್ಥಳದಲ್ಲಿನ ಸುರಕ್ಷತೆ ಮತ್ತು ಆರೋಗ್ಯ ಆಡಳಿತ ವಿಭಾಗವು ಏಣಿಗಳು ಹೇಗಿರಬೇಕು ಎಂಬ ಬಗ್ಗೆ ಏಳು ಪುಟಗಳ ನಿಯಮ ರೂಪಿಸಿದೆ. ಅಮೆರಿಕದಲ್ಲಿ ವಾರ್ಷಿಕ 300 ಜನ ಏಣಿಗಳಿಂದಾಗಿ ಸಾಯುತ್ತಾರೆ. ಆದರೆ, ಅಮೆರಿಕದಲ್ಲಿ ವಾರ್ಷಿಕ 33 ಸಾವಿರಕ್ಕಿಂತ ಹೆಚ್ಚಿನ ಜನರ ಪ್ರಾಣ ಹರಣಕ್ಕೆ ಕಾರಣವಾಗುವ ಬಂದೂಕುಗಳ ನಿಯಂತ್ರಣಕ್ಕೆ ಸರ್ಕಾರ ಗಂಭೀರಯತ್ನ ನಡೆಸಿಲ್ಲ. ವಾರ್ಷಿಕ 33 ಸಾವಿರ ಜನ ಸಾಯುತ್ತಿರುವ ಬಗ್ಗೆ ಅಂಕಿ–ಅಂಶ ನೀಡಿರುವುದು ರೋಗನಿಯಂತ್ರಣ ಮತ್ತು ತಡೆ ಕೇಂದ್ರ.

ಬಂದೂಕು ಬಳಕೆ ಪರವಾಗಿ ಮಾತನಾಡುವವರು ಹೀಗೆ ಹೇಳುತ್ತಾರೆ: ‘ಕಾರುಗಳ ಬಗ್ಗೆ ಮಾತನಾಡುವುದಿಲ್ಲವೇ? ಅವುಗಳಿಂದಲೂ ಜನ ಸಾಯುತ್ತಿದ್ದಾರೆ. ಆದರೆ ಕಾರುಗಳನ್ನು ನಿಷೇಧಿಸಬೇಕು ಎಂದು ನಾವು ವಾದಿಸುವುದಿಲ್ಲವಲ್ಲ?’ ಎನ್ನುತ್ತಾರೆ.

ಕಾರುಗಳಿಂದ ಆಗುವ ಸಾವನ್ನು ಹೇಗೆ ನಿಯಂತ್ರಿಸಿದೆವೋ, ಬಂದೂಕುಗಳಿಂದ ಆಗುವ ಸಾವನ್ನು ಅದೇ ಬಗೆಯಲ್ಲಿ ನಿಯಂತ್ರಿಸಬೇಕು. ಕಾರುಗಳು ಹೆಚ್ಚು ಸುರಕ್ಷಿತ ಆಗುವಂತೆ ಹಲವು ವರ್ಷಗಳಿಂದ ನಾವು ಕ್ರಮ ಕೈಗೊಂಡಿದ್ದೇವೆ. ಸೀಟ್‌ ಬೆಲ್ಟ್‌ ಮತ್ತು ಏರ್‌ ಬ್ಯಾಗ್‌ಗಳನ್ನು  ಅಳವಡಿಸಿದ್ದೇವೆ, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದೇವೆ, ರಸ್ತೆ ದಾಟುವುದು ಸುರಕ್ಷಿತ ಆಗುವಂತೆ ಮಾಡಿದ್ದೇವೆ.

ಈ ಎಲ್ಲ ಕ್ರಮಗಳು ಯಶಸ್ಸು ಕಂಡಿವೆ. 1921ರಲ್ಲಿ ಇದ್ದಂತಹ ರಸ್ತೆ ಸುರಕ್ಷತಾ ಕ್ರಮಗಳೇ ಇಂದಿಗೂ ಇದ್ದಿದ್ದರೆ, ವಾರ್ಷಿಕ 7.15 ಲಕ್ಷ ಅಮೆರಿಕನ್ನರು ಕಾರು ಅಪಘಾತಗಳಿಂದಲೇ ಸಾಯುತ್ತಿದ್ದರು. ಆದರೆ ಇಂತಹ ಸಾವು ಅಂದಿಗಿಂತ ಇಂದು ಶೇಕಡ 95ರಷ್ಟು ಕಡಿಮೆಯಾಗಿದೆ.

ಆದರೆ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಕತೆಯೇ ಬೇರೆ. ಬಂದೂಕು ಪರ ಇರುವವರ ಲಾಬಿಯು ಬಂದೂಕಿನಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಕಡಿಮೆ ಮಾಡುವುದು ಹೇಗೆ ಎಂಬ ಬಗೆಗಿನ ಸಂಶೋಧನೆಗೂ ವರ್ಷಗಳಿಂದ ಅಡ್ಡಿ ಮಾಡುತ್ತಿದೆ. ಪುಟ್ಟ ಮಕ್ಕಳಿಂದ ಬಳಸಲು ಆಗದಂತಹ ಬಂದೂಕುಗಳನ್ನು 19ನೇ ಶತಮಾನದಲ್ಲೇ ತಯಾರಿಸಲಾಯಿತು. ಆದರೆ ಅದೇ ಬಂದೂಕು ಉದ್ಯಮ ಇಂದು, ಸ್ಮಾರ್ಟ್‌ ಗನ್‌ ತಯಾರಿಕೆ ವಿರೋಧಿಸುತ್ತಿದೆ. ಐಫೋನ್‌ ಕದ್ದರೆ, ಅದನ್ನು ಬಳಸಲು ಗುಪ್ತ ಸಂಖ್ಯೆ ಗೊತ್ತಿರಬೇಕು. ಆದರೆ, ಬಂದೂಕು ಬಳಸಲು ಅಂತಹ ಗುಪ್ತ ಸಂಖ್ಯೆ ಗೊತ್ತಿರಬೇಕು ಎಂದಿಲ್ಲ.

ಸಾವಿನ ಸಂಖ್ಯೆ ಕಡಿಮೆ ಮಾಡುವ ವಿಚಾರದಲ್ಲಿ ಮತ್ತು ಬಂದೂಕುಗಳನ್ನು ನಿಯಂತ್ರಿಸಲು ಗಂಭೀರ ನೀತಿಗಳನ್ನು ರೂಪಿಸುವ ವಿಚಾರದಲ್ಲಿ ಅಮೆರಿಕ ಇತರ ದೇಶಗಳ ಸಮೂಹದಿಂದ ತೀರಾ ಹೊರಗಿದೆ. ಬಂದೂಕು ಬಳಸಿ ಅಮೆರಿಕದಲ್ಲಿ ಪ್ರತಿ ವರ್ಷ ಆಗುವ ಹತ್ಯೆ ಕೆನಡಾದಲ್ಲಿ ಹೀಗೆ ಆಗುವ ಹತ್ಯೆಗಿಂತ ಏಳು ಪಟ್ಟು ಹೆಚ್ಚು. ದಕ್ಷಿಣ ಕೊರಿಯಾದಲ್ಲಿ ಆಗುವ ಹತ್ಯೆಗಳಿಗಿಂತ 600 ಪಟ್ಟು ಹೆಚ್ಚು!
ಬಂದೂಕು ಬಳಕೆಗೆ ಅನುಮತಿ ನೀಡುವ ಮೊದಲು, ಅದನ್ನು ಬಯಸುವ ವ್ಯಕ್ತಿಯ ಹಿನ್ನೆಲೆಯನ್ನು ಇನ್ನಷ್ಟು ಪರೀಕ್ಷಿಸಬೇಕು. ಬಂದೂಕು ಖರೀದಿ ಮೇಲೆ ನಿಯಂತ್ರಣ ಹೇರಬೇಕು,  ಜೀವ ಉಳಿಸುವ ಬಗೆ ಹೇಗೆ ಎಂಬ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಅಮೆರಿಕದ ಫೆಡರಲ್‌ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡದಿದ್ದರೆ, ರಾಜ್ಯ ಸರ್ಕಾರಗಳೇ ಮುಂದಡಿ ಇಡಬೇಕು.

ಈ ವಿಚಾರದಲ್ಲಿ ಆಸ್ಟ್ರೇಲಿಯಾ ನಮಗೆ ಮಾದರಿ ಆಗಬಲ್ಲದು. 1996ರಲ್ಲಿ ಅಲ್ಲಿ ಜನಸಮೂಹದ ಮೇಲೆ ಗುಂಡಿನ ಮಳೆಗರೆದ ಪ್ರಕರಣ ನಡೆದ ನಂತರ, ಶಸ್ತ್ರಾಸ್ತ್ರಗಳ ಬಳಕೆ ಮೇಲೆ ನಿಯಂತ್ರಣಕ್ಕೆ  ಜನ ಆಗ್ರಹಿಸಿದರು. ಅದಾದ ನಂತರದ ಏಳು ವರ್ಷಗಳಲ್ಲಿ ಅಲ್ಲಿ ಶಸ್ತ್ರಾಸ್ತ್ರ ಬಳಸಿ ಮಾಡಿಕೊಳ್ಳುವ ಆತ್ಮಹತ್ಯೆ ಪ್ರಮಾಣ ಅರ್ಧದಷ್ಟು ಕಡಿಮೆ ಆಯಿತು, ಬಂದೂಕು ಬಳಸಿ ಮಾಡುವ ಕೊಲೆಗಳ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿ ಕಡಿಮೆ ಆಯಿತು. ಅಮೆರಿಕದಲ್ಲಿ ಪ್ರತಿದಿನ ಬಂದೂಕಿನ ನಳಿಕೆಗೆ ಗುರಿಯಾಗಿ ಸಾವನ್ನಪ್ಪುವ 92 ಜನರ ಪ್ರಾಣ ಉಳಿಸಲು ಅಂತಹ ಮಾರ್ಗ ಅನುಸರಿಸಬಹುದು.
-ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT