ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Last Updated 31 ಜುಲೈ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ಸರಣಿ ಅತ್ಯಾಚಾರ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಪುಂಡಾ­ಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬೆಂಗಳೂರು ಬಂದ್‌ ಶಾಂತಿಯುತವಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ವೇಳೆ ಪ್ರತಿಭಟನಾಕಾರರು ಅತ್ಯಾಚಾರಿಗಳನ್ನು ಗಡಿಪಾರು ಮಾಡಿ, ಗಲ್ಲಿಗೇರಿಸಿ ಮತ್ತು ಎಂಇಎಸ್ ಪುಂಡಾಟಿಕೆ ಹತ್ತಿಕ್ಕಿ ಎಂದು ಘೋಷಣೆ ಕೂಗಿದರು. ನಂತರ, ಸಂಘಟನೆಗಳ ಪ್ರಮುಖರು ನಿಯೋಗದಲ್ಲಿ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ‘ಈ ಪ್ರತಿಭಟನೆ ಸರ್ಕಾರದ ವಿರುದ್ಧ ಅಲ್ಲ. ಅತ್ಯಾಚಾರಿಗಳ ವಿರುದ್ಧ. ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಅತ್ಯಾಚಾರಿಗಳ ನಗರ ಎಂಬ ಕೆಟ್ಟ ಹೆಸರು ಪಡೆಯುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಅವರಿಗೆ ಸ್ಥೈರ್ಯ ತುಂಬಿ, ಆತಂಕ ದೂರ ಮಾಡಬೇಕು’ ಎಂದು ಹೇಳಿದರು.
‘ಗಡಿ ಭಾಗದಲ್ಲಿ ಪದೇ ಪದೇ ದಾಂದಲೆ ನಡೆಸುವ ಮೂಲಕ ಎಂಇಎಸ್‌ನವರು ಕರ್ನಾಟಕದ ಮೇಲೆ ಪುಂಡಾಟಿಕೆ ನಡೆಸುತ್ತಿದ್ದಾರೆ. ಇದಕ್ಕೆ ಶಿವಸೇನೆಯವರು ಕುಮ್ಮಕ್ಕು ನೀಡುತ್ತಿದ್ದಾರೆ. ಸರ್ಕಾರ ತಕ್ಷಣವೇ ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ರಾಜ್ಯದ ಸಂಸದರು ಕೇಂದ್ರ ಗೃಹಸಚಿವರನ್ನು ಭೇಟಿ ಮಾಡಿ ಅವರಿಗೆ ಈ ದೌರ್ಜನ್ಯ ಕುರಿತು ಮನವರಿಕೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ ಮಾತನಾಡಿ, ‘ಶಾಂತಿಯುತ ಬಂದ್‌ಗೆ ಕನ್ನಡ ಸಂಘಟನೆಗಳು ಕರೆ ನೀಡಿದಾಗಲೂ ಸಾರಿಗೆ ಸಚಿವರು ಬಸ್‌ಗಳನ್ನು ಓಡಿಸುವ ಮೂಲಕ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ’ ಎಂದು ಕಿಡಿಕಾರಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಪ್ರವೀಣ್‌ ಶೆಟ್ಟಿ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ದಲಿತ ಸಂಘರ್ಷ ಸಮಿತಿಯ ಎನ್.ಮೂರ್ತಿ ಸೇರಿದಂತೆ ಅನೇಕ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಶುಕ್ರವಾರ ಯಳ್ಳೂರು ಜಾಥಾ
ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅವರು ‘ಬೆಳಗಾವಿ ಗಡಿಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳ ಪ್ರಮುಖರೆಲ್ಲರು ಶುಕ್ರವಾರ ಯಳ್ಳೂರು ಗ್ರಾಮಕ್ಕೆ ತೆರಳಿ ಬಹೃತ್ ಪ್ರತಿಭಟನಾ ಜಾಥಾ ನಡೆಸುತ್ತೇವೆ’ ಎಂದು ತಿಳಿಸಿದರು.

ವಿಮಾನ ನಿಲ್ದಾಣ, ಮೆಟ್ರೊಗೆ ತಟ್ಟದ ಬಿಸಿ
ಬಂದ್‌ನ ನಡುವೆಯೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಟ್ಯಾಕ್ಸಿಗಳ ಸಂಚಾರ ಮಾಮೂಲಿನಂತೆ ಇತ್ತು. ವಿಮಾನ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ.

ಪಾಲಿಕೆ ಕಚೇರಿಯೂ ಬಣ ಬಣ...
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಹಾಜರಾ ಗದೆ ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ಪಾಲಿಕೆ  ಕಚೇರಿಯು ಬಣಗುಡುತ್ತಿತ್ತು. ವಿಧಾನಸೌಧ ಸೇರಿ ದಂತೆ ಬಹುತೇಕ ಸರ್ಕಾರಿ ಕಚೇರಿಗಳ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT