ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧಿತ ಆರೋಪಿಗಳಿಂದ ತಪ್ಪೊಪ್ಪಿಗೆ

ದಲಿತ ಬಾಲಕಿಯರ ಮೇಲಿನ ಅತ್ಯಾಚಾರ, ಕೊಲೆ
Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ಬದಾಯೂಂ (ಪಿಟಿಐ): ದಲಿತ ಸಮುದಾಯದ ಇಬ್ಬರು ಬಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಬಂಧಿ­ಸ­ಲಾಗಿರುವ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು ಸಹ ಅವರ ವಿರುದ್ಧದ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಸಾಕ್ಷ್ಯಾಧಾರ ಕಲೆ ಹಾಕುವ ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಹಲವು ಪ್ರಕರಣಗಳಲ್ಲಿ ಆರೋಪಿ­ಗಳು ನ್ಯಾಯಾಲ­ಯದಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಅವರ ತಪ್ಪೊಪ್ಪಿಗೆಯ ಹೇಳಿಕೆಯನ್ನು ಅವಲಂಬಿಸದೆ ಸೂಕ್ತ ಸಾಕ್ಷ್ಯಾಧಾರ­ಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅತುಲ್‌ ಸಕ್ಸೇನಾ ತಿಳಿಸಿದ್ದಾರೆ.

ರಾಷ್ಟ್ರದಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಈ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಒಟ್ಟು ಐದು ಜನರನ್ನು ಬಂಧಿಸ­ಲಾಗಿದೆ. ಇದರಲ್ಲಿ ಸಹೋದರರಾದ ಪಪ್ಪು ಯಾದವ್‌, ಅವಧೇಶ್‌ ಯಾದವ್‌, ಉರ್ವೇಶ್‌ ಯಾದವ್‌ ಹಾಗೂ ಕಾನ್ಸ್‌ಟೆಬಲ್‌ ಛತ್ರಪಾಲ್‌ ಯಾದವ್‌ ಮತ್ತು ಸರ್ವೇಶ್‌ ಯಾದವ್‌ ಸೇರಿದ್ದಾರೆ.

ರಾಜಧಾನಿ ಲಖನೌದಿಂದ 300 ಕಿ.ಮೀ ದೂರ­ದಲ್ಲಿರುವ ಬದಾಯೂಂ ಗ್ರಾಮದ ಉಶೇತ್‌ ಪ್ರದೇಶ­ದಲ್ಲಿ ಕ್ರಮವಾಗಿ 14 ಮತ್ತು 15 ವರ್ಷ ವಯಸ್ಸಿನ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಮಾವಿನ ಮರಕ್ಕೆ ನೇಣು ಹಾಕಲಾಗಿತ್ತು.
ಸಹೋದರಿಯರು ಮೇ 27ರಂದು ನಾಪತ್ತೆಯಾಗಿದ್ದರು. ಅವರ ಶವಗಳು ಮೇ 28ರಂದು ಪತ್ತೆಯಾಗಿದ್ದವು.

ರಾಷ್ಟ್ರಪತಿ ಆಡಳಿತಕ್ಕೆ  ಒತ್ತಾಯ
ದಲಿತ ಬಾಲಕಿಯರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿ­ಹಾಯ್ದಿರುವ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು, ಅಧಿಕಾರಿಗಳ ವರ್ಗಾವಣೆ ಮತ್ತು ಅಮಾನತಿನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಸಮಾಜವಾದಿ ಪಕ್ಷದ ಸರ್ಕಾರ  ತನ್ನ ಪಕ್ಷದ ಕಾರ್ಯಕರ್ತರ ಮೇಲೆ ಕಡಿವಾಣ ಹಾಕುವ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು.

‘ಉತ್ತರ ಪ್ರದೇಶ ಸರ್ಕಾರಕ್ಕೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಜನರ ಹಿತದ ದೃಷ್ಟಿಯಿಂದ ಅಧಿಕಾರ ತ್ಯಜಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಮತ್ತೊಮ್ಮೆ ರಾಜ್ಯಪಾಲರನ್ನು ಕೋರು­ತ್ತೇವೆ’ ಎಂದು  ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ದಲಿತ ಬಾಲಕಿಯರ ಕುಟುಂಬ ವರ್ಗದವರನ್ನು ಭೇಟಿ ಮಾಡಲು ಭಾನುವಾರ ಬದಾಯೂಂಗೆ ತೆರಳುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.

‘ಇಂತಹ ಘಟನೆಗಳಲ್ಲಿ ಆಡಳಿತಾ ರೂಢ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರು ಕೂಡ ಶಾಮಿಲಾಗಿದ್ದಾರೆ. ಅವರನ್ನು ರಕ್ಷಿಸುತ್ತಿರುವುದು ಸರಿಯಲ್ಲ’ ಎಂದು ಅತ್ಯಾಚಾರ ಆರೋಪಿಗಳಿಗೆ ಮರಣದಂಡನೆ ವಿಧಿಸುವುದಕ್ಕೆ ಸಂಬಂ­ಧಿಸಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರು ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT