ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ: ಅರ್ಜಿ ವಿಲೇವಾರಿಗೆ ಇನ್ನೂ 2 ವರ್ಷ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಗರ್‌ಹುಕುಂ ಸಮಿತಿಗಳ ಮುಂದೆ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಇನ್ನೂ 2 ವರ್ಷ ಸಮಯ ನೀಡುವ ಕರ್ನಾ­ಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ­–2014ಕ್ಕೆ ವಿಧಾನಸಭೆ ಸೋಮವಾರ ಒಪ್ಪಿಗೆ ಸೂಚಿಸಿತು.

ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕ­ರ­ಣ­ವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿ­ದ್ದಾ­ಗಲೇ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಅವರು ಮಸೂದೆ ಮಂಡಿಸಿ­ದರು. ಅದನ್ನು ವಿಧಾನಸಭೆ ಅಂಗೀಕರಿ­ಸಿತು. ಅರ್ಜಿ ನಮೂನೆ 50ರಲ್ಲಿ ಸಲ್ಲಿಸಿ­ರುವ 24,824 ಮತ್ತು ಅರ್ಜಿ ನಮೂನೆ 53ರಲ್ಲಿ ಸಲ್ಲಿಸಿರುವ 3,74,580 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

ಈ ಕಾರಣದಿಂದ ವಿಲೇವಾರಿ ಅವಧಿಯನ್ನು 2016ರ ವರೆಗೆ ವಿಸ್ತರಿಸಲು ಈ ತಿದ್ದುಪಡಿ ತಂದಿರುವುದಾಗಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನಕ್ಕೆ ವಿವರಿಸಿದರು. ಇನ್ನೂ ಹಲವು ಕಡೆ ಬಗರ್‌ಹುಕುಂ ಸಮಿತಿಗಳನ್ನು ರಚಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಆದಷ್ಟು ಬೇಗ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದೂ ಶಾಸಕರಿಗೆ ಸೂಚಿಸಿದರು.

ದಿನದ ಕಲಾಪ ಪಟ್ಟಿಯಲ್ಲಿ ಈ ಮಸೂದೆ ವಿಷಯ ಪ್ರಸ್ತಾಪಿಸಿರಲಿಲ್ಲ. ಬಳಿಕ ಸಭಾಧ್ಯಕ್ಷರ ಸೂಚನೆ ಮೇರೆಗೆ ಮಧ್ಯಾಹ್ನ ಸದನ ಸೇರಿದಾಗ ಮಸೂದೆ ಮಂಡನೆಗೆ ಅಧಿಕಾರಿಗಳಿಗೆ ಸೂಚಿಸಿ­ದ್ದರು. ಅದು ಸಿದ್ಧ ಆಗಿ ಸದನಕ್ಕೆ ಬರುವವರೆಗೂ ಸಭಾಧ್ಯಕ್ಷರು ಸದನವನ್ನು ಮುಂದೂಡಿದ್ದರು.

ಕೈಮುಗಿದ ಸಭಾಧ್ಯಕ್ಷರು
ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಅರಣ್ಯ ವಾಸಿಗಳಿಗೆ ಜಮೀನು ಕೊಡಿಸುವ ನಿಟ್ಟಿನಲ್ಲಿ ಗ್ರಾಮ ಅರಣ್ಯ ಸಮಿತಿಗಳು ಕಾರ್ಯನಿರ್ವಹಿಸಬೇಕು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೂಚಿಸಿದರು. ಗ್ರಾಮ ಸಮಿತಿಗಳ ಶಿಫಾರಸುಗಳನ್ನು ಮಾನ್ಯ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಭಾಧ್ಯಕ್ಷರು ಕೈಮುಗಿದ ಕೇಳಿದ ಪ್ರಸಂಗವೂ ನಡೆಯಿತು.

‘ಜನ ಸಂಕಷ್ಟದಲ್ಲಿದ್ದಾರೆ. ಮೊದಲು ಅರಣ್ಯ ವಾಸಿಗಳಿಗೆ ಜಮೀನು ಕೊಡುವ ಕೆಲಸ ಆಗಬೇಕು. ಇದೊಂದು ಮಾಡಿಕೊಟ್ಟರೆ ನಿಮ್ಮ ಋಣ ಎಂದೂ ಮರೆಯುವುದಿಲ್ಲ’ ಎಂದೂ ಕಾಗೋಡು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT