ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿದ ಸೀಟು ಹಂಚಿಕೆ ಬಿಕ್ಕಟ್ಟು

ಮಹಾರಾಷ್ಟ್ರ: ಪಟ್ಟು ಸಡಿಲಿಸಿದ ಬಿಜೆಪಿ, ಶಿವಸೇನಾ
Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾ­ವಣೆ ಸ್ಥಾನ ಹೊಂದಾಣಿಕೆ ಮಾಡಿ­ಕೊಳ್ಳಲು ಬಿಜೆಪಿ ಮತ್ತು ಶಿವಸೇನಾ ಕೊನೆಗೂ ಸಫಲವಾಗಿವೆ. ಆದರೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಹಗ್ಗಾ­ಜಗ್ಗಾಟ ಇನ್ನೂ ಮುಂದುವ­ರಿದಿದ್ದು, ತಡರಾತ್ರಿ  ಬಿಕ್ಕಟ್ಟು ಬಗೆಹರಿ­ಯುವ ವಿಶ್ವಾಸವನ್ನು ಉಭಯ ಪಕ್ಷಗಳು ವ್ಯಕ್ತಪಡಿಸಿವೆ.

ಬಿಜೆಪಿ–ಶಿವಸೇನಾ ನಿಲುವು ಸಡಿಲಿಸಿ­ದ್ದರಿಂದ ಸೀಟು ಹಂಚಿಕೆ ಬಿಕ್ಕಟ್ಟು ಸುಸೂ­ತ್ರ­ವಾಗಿ ಬಗೆಹರಿಯಿತು. ಉಭಯ ಪಕ್ಷ­ಗಳ ನಡುವೆ ಏರ್ಪಟ್ಟಿ­ರುವ ಒಪ್ಪಂದ­ದಂತೆ ಶಿವಸೇನಾ 151 ಕ್ಷೇತ್ರಗಳಲ್ಲಿ ಸ್ಪರ್ಧಿ­ಸಲಿದೆ. ಬಿಜೆಪಿಗೆ 130 ಕ್ಷೇತ್ರಗ­ಳನ್ನು ಬಿಟ್ಟುಕೊಟ್ಟಿದೆ. ಉಳಿದ ಏಳು ಕ್ಷೇತ್ರ­ಗಳು ಸಣ್ಣಪುಟ್ಟ ಮಿತ್ರಪಕ್ಷಗಳ ಪಾಲಾಗ­ಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋಮವಾರ ಸಂಜೆವ­ರೆಗೂ 119 ಸ್ಥಾನ­ಗಳನ್ನು ಮಾತ್ರ ಬಿಜೆಪಿಗೆ ನೀಡು­ವುದಾಗಿ ಶಿವಸೇನಾ ಬಿಗಿ ನಿಲುವು ತಳೆ­ದಿತ್ತು. ಮಿತ್ರ ಪಕ್ಷ 135 ಸ್ಥಾನ ಕೊಡ­ಬೇಕು ಎಂದು ಕೇಳಿತ್ತು. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ 130 ಕ್ಷೇತ್ರಗಳನ್ನು ತಮಗೆ ನೀಡುವಂತೆ ಹೊಸ ಪ್ರಸ್ತಾವನೆ ಕಳುಹಿಸಿ­ದ್ದರು. ಈ ಪ್ರಸ್ತಾವನೆಗೆ ಶಿವಸೇನಾ ಸಮ್ಮತಿಸಿದೆ. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯ­ಮಂತ್ರಿ ಎಂದು ಉದ್ಧವ್‌ ಠಾಕ್ರೆ ಪ್ರತಿಪಾ­ದಿಸಿದ್ದರು. ಆದರೆ, ಮಂಗಳ­ವಾರ ತಾವು ಯಾವುದೇ ಹುದ್ದೆ ಅಲಂಕರಿ­ವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕೈ ಮೇಲು: ಸೀಟು ಹೊಂದಾಣಿಕೆ ಒಪ್ಪಂದದಲ್ಲಿ ಬಿಜೆಪಿ ಕೈ ಮೇಲಾಗಿದೆ. 130 ಸ್ಥಾನಗಳನ್ನು ಪಡೆಯಲು ಯಶಸ್ವಿ­ಯಾಗಿದೆ. ಅಲ್ಲದೆ, ಸಿ.ಎಂ ಸ್ಥಾನದ ಬೇಡಿ­ಕೆಯಿಂದ ಠಾಕ್ರೆ ಹಿಂದೆ ಸರಿ­ದಿ­ದ್ದಾರೆ. ಸಣ್ಣ­ಪುಟ್ಟ ಮಿತ್ರಪಕ್ಷಗಳಿಗೆ ಕೇವಲ ಏಳು ಸೀಟು­ಗಳು ಸಿಗಲಿರುವುದು ಅವುಗಳಿಗೆ ಹಿನ್ನಡೆ ಎಂದೇ ಭಾವಿಸಲಾ­ಗಿದೆ. ಈ ಪಕ್ಷಗಳಿಗೆ ವಿಧಾನ ಪರಿಷತ್‌ ಮತ್ತು ನಿಗಮ– ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ನ್ಯಾಯ ಒದಗಿ­ಸುವುದಾಗಿ ಉಭಯ ಪಕ್ಷಗಳು ಭರವಸೆ ನೀಡಿವೆ.

ಕಾಂಗ್ರೆಸ್‌, ಎನ್‌ಸಿಪಿ ಸಭೆ:  ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮುಖಂಡರು ಸೀಟು ಹಂಚಿಕೆ ಕುರಿತು ಚರ್ಚಿಸಲು ಮಂಗಳ­ವಾರ ಬೆಳಿಗ್ಗೆ ಮುಂಬೈನಲ್ಲಿ ಸಭೆ ಸೇರಿ­ದ್ದರು. ಈ ಸಭೆ ಅಂತಿಮ ತೀರ್ಮಾನಕ್ಕೆ ಬರಲಿಲ್ಲ. ಸಂಜೆ ಪುನಃ ಸಭೆ ಸೇರಿ ಮಾತು­ಕತೆ ಮುಂದು­ವರಿಸಲು ತೀರ್ಮಾನಿಸ­­ಲಾ­ಯಿತು. ಬಹುತೇಕ ಎನ್‌ಸಿಪಿ ನಾಯಕರು ಸಂಜೆ ಮಾಲೆಗಾಂವ್‌ನಲ್ಲಿ ಏರ್ಪಡಿಸಿದ್ದ ಶರದ್‌ ಪವಾರ್‌ ಅವರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಮಾತುಕತೆ ಮುಂದುವರಿಯಲಿಲ್ಲ.

‘ಸೀಟು ಹಂಚಿಕೆ ಹೊಂದಾಣಿಕೆ
ಮಾಡಿ­ಕೊಳ್ಳಲು ಔಪಚಾರಿಕವಾಗಿ ಸಭೆ ಸೇರ­ಬೇಕಾದ ಅಗತ್ಯವಿಲ್ಲ. ದೂರವಾಣಿ­ಯ­ಲ್ಲೂ ಮಾತನಾಡಬಹುದು. ಮಾಲೇಗಾಂವ್‌­­ನಿಂದ ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ನೇರವಾಗಿ ನನ್ನ ಮನೆಗೆ ಬಂದರೆ ಅಭ್ಯಂತ­ರ­ವೇನಿಲ್ಲ’ ಎಂದು ಸಿ.ಎಂ ಪೃಥ್ವಿರಾಜ್‌ ಚೌಹಾಣ್‌ ಸ್ಪಷ್ಟಪಡಿ­ಸಿದರು. ಎನ್‌ಸಿಪಿಗೆ 124 ಸ್ಥಾನಗಳನ್ನು ಕೊಡುವುದಾಗಿ ಕಾಂಗ್ರೆಸ್‌ ಹೇಳಿದೆ. ಆದರೆ, 144 ಕ್ಷೇತ್ರಗ­ಳನ್ನು ಕೊಡು­ವಂತೆ ಎನ್‌ಸಿಪಿ ಕೇಳುತ್ತಿದೆ. ಅಂತಿಮವಾಗಿ 130 ಸೀಟುಗ­ಳಿಗೆ ಅದು ಒಪ್ಪಿಕೊಳ್ಳ­ಬಹುದು. ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮುಂದುವರಿ­ದಿರು­ವುರಿಂದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು
ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT