ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌: ಧ್ವನಿಸದ ಬದಲಾವಣೆ ಆಶಯ

Last Updated 15 ಜುಲೈ 2014, 19:30 IST
ಅಕ್ಷರ ಗಾತ್ರ

ಈ ಬಾರಿಯ ಬಜೆಟ್‌ ಗಂಗೆಯ ಒಡಲಲ್ಲಿ ಬೆಂಕಿ­ಯ­ನ್ನೇನೂ ಹೊತ್ತಿಸಲಿಲ್ಲ. ಆಯಾ ಕಾಲದ ಹಣ­­­ಕಾಸು ಸಚಿವರನ್ನು ಓಲೈಸುವ ಕೈಗಾರಿಕಾ ರಂಗದ ಮುಂದಾಳುಗಳು ರಕ್ಷ ಣಾತ್ಮಕವಾಗಿ, ಬಜೆಟ್‌ ಕುರಿತು ಹೊಗಳಿಕೆಯ ಮಾತು ಆಡಿ­ದರು.

ಆದರೆ ಈ ಬಜೆಟ್‌ ಯುಪಿಎ ಸರ್ಕಾರ ಮಂಡಿ­ಸಿದ ಬಜೆಟ್‌ಗಿಂತ ಭಿನ್ನವಾಗಿಲ್ಲ, ಉತ್ಸಾಹ­ ಮೂಡಿಸುವಂತೆಯೂ ಇಲ್ಲ ಎಂದು ಅರ್ಥ­ಶಾಸ್ತ್ರಜ್ಞರು ಹೇಳಿದರು. ‘ಇದು ಪಿ. ಚಿ­ದಂ­ಬರಂ ಮಂಡಿಸಿದ ಬಜೆಟ್‌ಗೆ ಕೇಸರಿ ಬಣ್ಣ ಬಳಿದು ಪುನಃ ಮಂಡಿಸಿದಂತಿದೆ’ ಎಂದು ಅರ್ಥ­ಶಾ­ಸ್ತ್ರ­ಜ್ಞ­ರೊಬ್ಬರು ಹೇಳಿದರು. ಜೇಟ್ಲಿ ಅವರು ಬಜೆಟ್‌ ಮಂಡಿಸಿದ ನಂತರ ಅಸ್ಪಷ್ಟವಾದ ತಲ್ಲಣ, ಅತೃಪ್ತಿ ಮತ್ತು ಅಶುಭದ ಮುನ್ಸೂಚ­ನೆ­ಯೊಂದು ದೇಶ­ದಲ್ಲಿ ವ್ಯಾಪಿಸಿ ದಂತಿದೆ. ತಮ್ಮ ಪಕ್ಷದ ನಿರುತ್ಸಾಹಿ ರಾಜ­ಕಾರ ಣಿಗಳು ಮತ್ತು ಬದ­ಲಾ­ವಣೆಗೆ ಒಪ್ಪದ ಅಧಿಕಾರಶಾಹಿಯ ಒತ್ತಡಕ್ಕೆ ನರೇಂದ್ರ ಮೋದಿ ಮಣಿದರೇ? ಶಕ್ತಿಶಾಲಿ ಭಾರತದ ಕನಸು ನುಚ್ಚಾಯಿತೇ?

ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಜನಾ­ದೇಶ ದೊರೆತಿರುವುದು ಮೋದಿ ಅವರಿಗೆ. ಜನ ಎಲ್ಲ ರಾಜಕೀಯ ಪಕ್ಷಗಳ ಬಗ್ಗೆಯೂ ಸಿನಿಕ ಭಾವ ಬೆಳೆಸಿಕೊಂಡಿರುವ ಕಾರಣ, ಜನಾದೇಶ ದೊರೆ­­­­ತಿದ್ದು ಬಿಜೆಪಿಗಂತೂ ಅಲ್ಲ. ಜನರಲ್ಲಿ ನಿರಾಸೆ ಮನೆ ಮಾಡಿತ್ತು. ತಮ್ಮನ್ನು ಮುನ್ನಡೆಸ­ಬಲ್ಲ ನಾಯಕನಿಗಾಗಿ ಜನ ಎದುರು ನೋಡುತ್ತಿ­ದ್ದರು. ನಿರ್ಣಯಗಳನ್ನು ಧೈರ್ಯವಾಗಿ ಕೈಗೊಳ್ಳ­ಬಲ್ಲ ನಾಯಕ ಎಂಬ ಹಿರಿಮೆ ಮೋದಿ ಅವರ ಕೈ­ಹಿ­ಡಿ­­­ಯಿತು. ಚುನಾವಣಾ ಪ್ರಚಾರದ ಸಂದರ್ಭ­­ದಲ್ಲಿ ಮೋದಿ ಅವರು, ಹೊಸಹಾ­ದಿಯ ದಿಟ್ಟ ಸುಧಾ­ರಣಾ ಕ್ರಮಗಳ ಭರವಸೆ ನೀಡಿ­ದ್ದರು. ಹಳೆಯ ಪದ್ಧತಿಯನ್ನು ಬದಲಾಯಿ­ಸುವ ಮಾತಾ­ಗಿತ್ತು ಅದು. ಬಡತನ ನಿರ್ಮೂಲ­ನೆಯ ಮಾತನ್ನು ಮಾತ್ರ ಆಡುವ ಜನಪ್ರಿಯ ಘೋಷಣೆ­­­ಗಳು ಹಾಗೂ ಉದ್ಯಮಿ–ಅಧಿಕಾರಿ ಸಂಬಂಧದ ವ್ಯವಸ್ಥೆಯನ್ನು ತೊಡೆಯುವ ಮಾತು ಅದಾಗಿತ್ತು. ಮೋದಿ ಅವರ ಮಾತು ಎಲ್ಲರ ಅಭಿವೃದ್ಧಿಯ ಕುರಿತಾಗಿತ್ತು.

ಮೋದಿ ಅವರು ಕಹಿ ಮಾತ್ರೆಯ ಚಿಕಿತ್ಸೆ­ಯನ್ನು ತಮ್ಮದೇ ಪಕ್ಷದ ಮುಖಂಡರಿಗೆ ಮೊದಲು ನೀಡಬೇಕು. ಅರವಿಂದ ಕೇಜ್ರಿವಾಲ್‌

ಹೇಳಿದಂತೆ ಬಿಜೆಪಿ ಮುಖಂಡರೂ ಇತರ ಪಕ್ಷಗಳ ಮುಖಂಡರಿಗಿಂತ ಯಾವ ರೀತಿಯಲ್ಲೂ ಭಿನ್ನ­ರಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ನೀತಿ­­ಗಳು ಮತ್ತು ಅಲ್ಲಿನ ಮುಖಂಡರು ಕಾಂಗ್ರೆಸ್ಸಿ­ಗ­­ರಷ್ಟೇ ಭ್ರಷ್ಟ. ಆದರೆ ಮೋದಿ ವಿಭಿನ್ನರಾಗಿ ಕಂಡರು. ಯಾವ ಸಂದರ್ಭದಲ್ಲೂ ಭ್ರಷ್ಟನಾ­ಗದ ನಾಯಕನಂತೆ ಮೋದಿ ಕಂಡರು. ಮೋದಿ ತಮ್ಮ ರಾಜ್ಯದಲ್ಲಿ ಶಕ್ತಿವಂತನಾಗಿ ಮೆರೆದವರು. ಅಭಿ­ವೃ­ದ್ಧಿಯ ವಿಚಾರದಲ್ಲಿ ಗುಜರಾತ್‌ ಮಾದ­­ರಿ­­­ಯಾಗಿತ್ತು. ಮೋದಿ ಕುರಿತ ವಿವಾದ­ಗಳು ಏನೇ ಇರ­ಬಹುದು, ದೇಶದ ನ್ಯಾಯಾಂಗ ಅವ­ರನ್ನು ನಿರ್ದೋಷಿ ಎಂದಿದೆ, ಬಹುಸಂಖ್ಯೆಯ ಜನ ಕೂಡ ಅದೇ ಮಾತು ಹೇಳಿದ್ದಾರೆ. ಮೋದಿ ಅವರ ‘ಚರಿಷ್ಮಾ’ ವಿಶ್ವದ ಇತರೆಡೆಯಲ್ಲೂ ಇಮ್ಮಡಿಸಿದೆ.
ಮೋದಿ ಅವರ ಗೆಲುವಿನ ಕುರಿತು ಜನರ ಸಂಭ್ರಮ ಇನ್ನೂ ಮುಗಿದಿಲ್ಲ. ಈ ಸಂದರ್ಭದಲ್ಲಿ ಬಜೆಟ್‌ ಮೇಲೆ ತಮ್ಮ ಮುದ್ರೆ ಒತ್ತಿ, ತಮ್ಮ ಯೋಜ­ನೆ­ಗಳ ಸಾಕಾರಕ್ಕೆ ಅಧಿಕಾರಿಗಳು ಮತ್ತು ಮಂತ್ರಿ­ಗಳನ್ನು ಮೋದಿ ಒಗ್ಗೂಡಿಸಬೇಕಿತ್ತು. ಬಜೆ­ಟ್‌ಗೆ ರೂಪುರೇಷೆ ನೀಡುವ ಸಂದರ್ಭದಲ್ಲಿ ಮೋದಿ ಅವರು ತಮ್ಮ ಸ್ಥೈರ್ಯವನ್ನು ನಂಬಿ ಮುನ್ನಡೆ­ಯಬೇಕಿತ್ತು.

ಹಳೆಯ ಚಿಂತನಾ ಶೈಲಿಯನ್ನೇ ನಂಬಿ­ಕೊಂಡಿ­ರುವ ಮೋದಿಯವರ ಕೆಲವು ಸಹೋದ್ಯೋಗಿ­ಗಳು ಸಂಪ್ರದಾಯವಾದಿ, ಧೈರ್ಯ ಶಾಲಿಗಳ­ಲ್ಲದ ಅಧಿಕಾರಿಗಳ ಬೆಂಬಲಕ್ಕಿದ್ದಾರೆ. ಅವರಿಗೆ ಬಜೆಟ್‌ ಮೇಲೆ ಅಧಿಕಾರ ಚಲಾಯಿಸುವ ಅವ­ಕಾ­ಶ ನೀಡಿದ್ದೇಕೆ?
ಚುನಾವಣೆ ಸಂದರ್ಭದಲ್ಲಿ ಪಶ್ಚಿಮದ ಹಲವು ವಿದ್ವಾಂಸರು ಮೋದಿ ಅವರನ್ನು ರೊನಾಲ್ಡ್‌ ರೇಗನ್‌ ಮತ್ತು ಮಾರ್ಗರೆಟ್‌ ಥ್ಯಾಚರ್‌ ಅವರಿಗೆ ಹೋಲಿಸಿದರು. ಇವರಿಬ್ಬರೂ ಅರ್ಥ­­ಶಾಸ್ತ್ರಜ್ಞ ರಾಗಿರಲಿಲ್ಲ. ರೇಗನ್‌ ಅವರು ಹಾಲಿ­ವುಡ್‌ ನಟರಾಗಿದ್ದರು. ಥ್ಯಾಚರ್‌ ಅವರು ರಸಾ­ಯನ ವಿಜ್ಞಾನಿ ಮತ್ತು ವಕೀಲರಾಗಿದ್ದರು. ಅವರು ತಮ್ಮ ಹೃದಯದ ಮಾತಿಗೆ ಕಿವಿಗೊ­ಟ್ಟರು. ದೇಶದ ಪಥ ಬದಲಾಯಿಸಿದರು. ದಿಟ್ಟ ಸುಧಾ­­ರಣಾ ಕ್ರಮಗಳ ಮೂಲಕ ಅಧಿಕಾರ­ಶಾ­ಹಿಯ ಹಿಡಿತದಿಂದ ದೇಶವನ್ನು ಪಾರು ಮಾಡಿ­ದರು. ಅವರು ಸರ್ಕಾ ರದ ಮುಖ್ಯಸ್ಥರಾಗಿ ಅಧಿ­ಕಾರ ವಹಿಸಿಕೊಂಡ ಸಂದರ್ಭದಲ್ಲಿ ಅರ್ಥ­ವ್ಯವಸ್ಥೆ ಸ್ಥಿರವಾಗಿರಲಿಲ್ಲ. ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಂತ ರೇಗನ್‌, ಹೊಸ ಸ್ವರೂಪದ ರಾಜ­ಕೀಯ ಮತ್ತು ಆರ್ಥಿಕ ವ್ಯವಸ್ಥೆಗೆ ನಾಂದಿ ಹಾಡಿದರು.

ರೇಗನ್‌ ಅವರು ಆರ್ಥಿಕ ಬೆಳವಣಿಗೆಗೆ ಉತ್ತೇ­ಜನ ನೀಡಲು ತೆರಿಗೆ ಕಡಿತದ ಪರವಾಗಿದ್ದರು, ಹಣ­­ದುಬ್ಬರ ಏರಿಕೆ ಕಡಿವಾಣಕ್ಕೆ ಹಣದ ಪೂರೈಕೆ ಮೇಲೆ ನಿಯಂತ್ರಣ, ಆರ್ಥಿಕ ವ್ಯವಸ್ಥೆಯ ಮೇಲಿನ ನಿಯಂತ್ರಣ ತೆಗೆಯುವುದು ಮತ್ತು ಸರ್ಕಾ­­ರದ ವೆಚ್ಚಗಳನ್ನು ಕಡಿತಗೊಳಿಸುವ ಪರ­ವಾ­­ಗಿದ್ದರು. ಇದು ಮುಂದೆ ‘ರೇಗನಾಮಿಕ್ಸ್‌’ (ರೇಗನ್‌ ಅರ್ಥಶಾಸ್ತ್ರ) ಎಂದೇ ಖ್ಯಾತವಾ­ಯಿತು. ಈ ಬಾರಿಯ ಬಜೆಟ್‌ ಮೂಲಕ ಮೋದಿ ಅವರು ಸಮಗ್ರ ಬದಲಾವಣೆ ತರುತ್ತಾರೆ ಎಂದು ಬಹುತೇಕರು ಭಾವಿಸಿದ್ದರು.

ಬಜೆಟ್‌ನ ತಾಂತ್ರಿಕ ಸೂಕ್ಷ್ಮ ಅಂಶಗಳತ್ತ ನೋಟ ಹರಿಸದೆಯೂ ಮೋದಿ ಅವರು ಬಜೆ­ಟ್‌ಗೆ ಒಂದು ದಿಕ್ಕು–ದೆಸೆ ನೀಡುವಂಥ ನಿರ್ದೇಶ­ನ­­­ಗ­ಳನ್ನು ನೀಡಬಹುದಿತ್ತು. ಇದು ಆರಂಭ ಮಾತ್ರ ಎಂದು ಜೇಟ್ಲಿ ಅವರು ಮತ್ತೆ ಮತ್ತೆ ಹೇಳು­ತ್ತಿ­ದ್ದಾರಾದರೂ, ಹಳೆಯ ಪದ್ಧತಿಯಿಂದ ಹೊರ­ಬರುವ ಬಜೆಟ್‌ ಇದು ಎನ್ನಲು ಯಾವ ಆಧಾ­ರವೂ ಸಿಗುತ್ತಿಲ್ಲ. ಮೋದಿ ಅವರು ಇಲ್ಲಿ ಹೇಳಿರುವ ನಾಲ್ಕು ಅಂಶಗಳ ಕುರಿತು ನಿರ್ದೇಶನ ನೀಡಬೇಕಿತ್ತು.

ಮೊದಲನೆಯದು: ಮೋದಿ ಮಂತ್ರವಾದ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬುದು ಉತ್ತಮ ಘೋಷಣೆ ಮಾತ್ರವಲ್ಲ, ಅದರಲ್ಲಿ ಒಳ್ಳೆಯ ಅರ್ಥಶಾಸ್ತ್ರೀಯ ಅಂಶವೂ ಇದೆ. ಈ ಘೋಷ­ಣೆ­ಯಲ್ಲಿ, ಸರ್ಕಾರ ಸದಾ ಜನರ ಬೆನ್ನಿಗಿರಬೇಕು ಎಂಬ ಮಾತು ಮಾತ್ರವಲ್ಲ, ದೇಶದ ಅಧಿಕಾರಿ ವರ್ಗದ ಗಾತ್ರವನ್ನು ಕಡಿತ­ಗೊ­ಳಿ­ಸುವ ಮಾತೂ ಇದೆ. ಒಟ್ಟು ಆದಾಯದ ಅಂದಾಜು ಶೇಕಡ 25ರಷ್ಟು ಭಾಗ ಸರ್ಕಾರಿ ನೌಕ­ರರ ವೇತನ ಮತ್ತು ಅವರಿಗೆ ಸಂಬಂಧಿಸಿದ ಇತರ ಖರ್ಚುಗಳಿಗೆ ಬಳಕೆಯಾಗುತ್ತಿದೆ. ಸರ್ಕಾ­ರದ ಗಾತ್ರವನ್ನು ಶೇಕಡ 10ರಷ್ಟು ಕಡಿತ ಮಾಡಲು ಮೋದಿ ಅವರು ಜೇಟ್ಲಿ ಅವರಿಗೆ ಸೂಚಿ­ಸ­ಬೇ­ಕಿತ್ತು. ಇದರಿಂದ ಅಂದಾಜು 22 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗುತ್ತಿತ್ತು.

ಎರಡನೆಯದು: ಸಬ್ಸಿಡಿ ಹೊರೆಯನ್ನು ಸಂಪೂ­ರ್ಣವಾಗಿ ಇಲ್ಲವಾಗಿಸುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯನ್ನು ಇಡಬಹುದಿತ್ತು. ಸಬ್ಸಿಡಿ­ಗಾಗಿ ನೀಡಲಾಗುತ್ತಿರುವ ₨ 3.65 ಲಕ್ಷ ಕೋಟಿ­ಯಲ್ಲಿ ಶೇಕಡ 20ರಷ್ಟನ್ನು ಕಡಿತಗೊಳಿಸುವ ಗುರಿ­ಯನ್ನು ಮೋದಿ ನೀಡಬಹುದಿತ್ತು. ಇದ­ರಿಂದ ಅಂದಾಜು ₨ 70 ಸಾವಿರ ಕೋಟಿ ಉಳಿ­ತಾಯ ಆಗುತ್ತಿತ್ತು. ಸಬ್ಸಿಡಿ ಹಣದ ಸೋರಿಕೆ ತಡೆ­ಗಟ್ಟಿದರೆ, ಆ ಹಣದಿಂದ ಲಾಭ ಪಡೆಯುವ ವರ್ಗದ ಜನರ ಮೇಲೆ ಯಾವುದೇ ದುಷ್ಪರಿ­ಣಾಮ ಆಗದಂತೆ ನೋಡಿಕೊಳ್ಳಬಹುದು. ಸಬ್ಸಿ­ಡಿ­ಗಾಗಿ ಮೀಸಲಿಡುವ ಹಣದಲ್ಲಿ ಶೇಕಡ 50­ರಷ್ಟ­ಕ್ಕಿಂತ ಹೆಚ್ಚು ಸೋರಿಹೋಗುತ್ತದೆ ಎಂಬುದು ಎಲ್ಲ­ರಿಗೂ ಗೊತ್ತಿರುವ ಸಂಗತಿ. ರಾಜೀವ್‌ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು ಹೇಳಿ­ರು­ವಂತೆ, ₨ 1 ಸಬ್ಸಿಡಿ ಹಣದಲ್ಲಿ ಜನರನ್ನು ತಲು­ಪುವ ಮೊತ್ತ 15 ಪೈಸೆ ಮಾತ್ರ. ಈ ಅಂಕಿ–ಅಂಶವನ್ನು ಸ್ವತಂತ್ರವಾಗಿ ನಡೆಸಿದ ಅನೇಕ ಲೆಕ್ಕ­ಪರಿಶೋಧನೆಗಳು ದೃಢಪಡಿಸಿವೆ. ಒಳ್ಳೆಯ ಆಡ­ಳಿತ ನೀಡುವುದಾಗಿ ಮೋದಿ ಅವರೇ ಭರವಸೆ ನೀಡಿ­ರುವ ಕಾರಣ, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದ­ಲಾವಣೆ ತಂದು ಸೋರಿಕೆ ತಡೆಯುವುದು ಜೇಟ್ಲಿ ಅವರ ಜವಾಬ್ದಾರಿಯೂ ಆಗಿದೆ.

ಮೂರನೆಯದು: ಸಾರ್ವಜನಿಕ ರಂಗದ ಉದ್ದಿ­­ಮೆ­­ಗಳಿಂದ ಇನ್ನೂ ಹೆಚ್ಚಿನ ಪ್ರಮಾಣದ ಬಂಡ­­ವಾ­ಳವನ್ನು ಹಿಂತೆಗೆಯಲು ಮೋದಿ ಮನಸ್ಸು ಮಾಡಬೇಕಿತ್ತು. ‘ಸಾರ್ವಜನಿಕರು ಸರ್ಕಾ­­ರದ ಮೂಲಕ ಸಾರ್ವಜನಿಕ ರಂಗದ ಉದ್ದಿ­ಮೆ­ಗಳ ಮಾಲೀಕರಾಗಿದ್ದಾರೆ. ಈಗ ಬಂಡ­ವಾಳ ಹಿಂತೆ­ಗೆ­ತದ ಮೂಲಕ, ಆ ಉದ್ದಿಮೆಗಳಲ್ಲಿ ತಾವು ನೇರ ಪಾಲುದಾರರಾಗಲು ಸಾರ್ವಜನಿ­ಕ­ರಿಗೆ ಅವಕಾಶ ದೊರೆತಿದೆ’ ಎಂದು ಜೇಟ್ಲಿ ಅವರು ಸರಿಯಾಗಿಯೇ ಹೇಳಿದ್ದಾರೆ.

ಕೊನೆಯದು: ತೆರಿಗೆ ವ್ಯವಸ್ಥೆ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್‌ಡಿಐ) ದೊಡ್ಡ ಪ್ರಮಾಣದ ಬದಲಾವಣೆ ಬೇಕಿತ್ತು. ಉದಾ­­ಹರಣೆಗೆ ತೆರಿಗೆ ತಪ್ಪಿಸುವುದನ್ನು ನಿಯಂತ್ರ ಣದಲ್ಲಿಡುವ ಜಿಎಎಆರ್‌ ಮತ್ತು ಪೂರ್ವಾ­­ನ್ವಯ ತೆರಿಗೆ ಪದ್ಧತಿ ಕೈಬಿಡಬೇಕಿತ್ತು. ತಮ್ಮ ವಿರುದ್ಧ ಬಂದ ಆದೇಶಗಳನ್ನು ಪ್ರಶ್ನಿಸಿ ಮೇಲ್ಮ­ನವಿ ಸಲ್ಲಿಸದಂತೆ ‘ಕೇಂದ್ರ ನೇರ ತೆರಿಗೆ ಮಂಡಳಿ’ (ಸಿಬಿಡಿಟಿ) ತೆರಿಗೆ ಅಧಿಕಾರಿಗಳಿಗೆ ಸೂಚಿಸ­­ಬಹುದಾದರೆ, ಅದೇ ಸಲಹೆಯನ್ನು ಸರ್ಕಾರ ಏಕೆ ಆಲಿಸಬಾರದು?

ವೊಡಾಫೋನ್‌ ಕಂಪೆನಿ ವಿಚಾರದಲ್ಲಿ ಸರ್ಕಾ­ರದ ನಿಯಮವನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿತು. ಸುಪ್ರೀಂ ಕೋರ್ಟ್‌ ತೀರ್ಪಿಗೆ ಮೇಲ್ಮ­ನವಿ ಸಲ್ಲಿಸಲು ಆಗದ ಕಾರಣ, ಸರ್ಕಾರ ನಿಯ­ಮ­ವನ್ನೇ ಬದಲಾಯಿಸಿತು. ದೇಶದಲ್ಲಿ ಬಂಡ­ವಾಳ ಹೂಡಲು ಸಿದ್ಧವಿರುವ ವ್ಯಕ್ತಿಗೆ ಇದಕ್ಕಿಂತ ಕೆಟ್ಟ ಸುದ್ದಿ ಇನ್ನೇನಿದೆ?

ತೆರಿಗೆ ಕಡಿತ ಮತ್ತು ತೆರಿಗೆ ನಿಯಮಗಳ ಕಟ್ಟು­ನಿ­ಟ್ಟಿನ ಅನುಷ್ಠಾನದಂಥ ಕೆಲವು ದಿಟ್ಟ ಕ್ರಮ­ಗ­ಳನ್ನು ಘೋಷಿಸಬೇಕಿತ್ತು. ಕಳೆದ 30 ವರ್ಷ­ಗ­ಳಲ್ಲಿ ರಚನೆಯಾದ ಪ್ರತಿಯೊಂದು ಸಮಿತಿಯೂ ಈ ಮಾತು ಹೇಳಿದೆ. ಇದರಿಂದ ವರಮಾನ ವೃದ್ಧಿಯೂ ಆಗುತ್ತಿತ್ತು.

ದೇಶ ಆಮದು ಮಾಡಿಕೊಳ್ಳುತ್ತಿರುವ ಪ್ರತಿ­ಯೊಂದು ರಕ್ಷಣಾ ಸಾಮಗ್ರಿಯನ್ನು ಖಾಸಗಿ ಕಂಪೆನಿ­ಗಳು ತಯಾರಿಸುತ್ತಿವೆ. ಬೋಯಿಂಗ್‌, ಬೊಫೋರ್ಸ್‌, ಡಸಾಲ್ಟ್‌, ಏರ್‌ಬಸ್‌, ಲಾಕ್‌­ಹೀಡ್‌ ಮಾರ್ಟಿನ್‌ ಇವೆಲ್ಲ ಖಾಸಗಿ ಕಂಪೆನಿಗಳು. ಹಾಗಾಗಿ, ದೇಶದಲ್ಲಿ ವಿದೇಶಿ ರಕ್ಷಣಾ ಸಾಮಗ್ರಿ ಉತ್ಪಾ­­ದನಾ ಕಂಪೆನಿ ಆರಂಭಿಸಲು ಅವಕಾಶ ನೀಡು­ವುದು, ಅವುಗಳಿಗೆ ಶೇಕಡ 100ರಷ್ಟು ಪಾಲು­ದಾರಿಕೆ ಹೊಂದಲು ಅವಕಾಶ ನೀಡು­ವುದು ದೇಶದ ಭದ್ರತಾ ವ್ಯವಸ್ಥೆಗೆ ಒಳ್ಳೆಯದು.

ಬಹು ಬ್ರ್ಯಾಂಡ್‌ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡುವ ವಿಚಾರದಲ್ಲೂ ಇದೇ ಆಗಿದೆ. ಆರ್ಥಿಕ ಚಟುವಟಿಕೆಗೆ ಇಂಬು ನೀಡು­ವಂತಿದ್ದ ಕ್ರಮವೊಂದನ್ನು ಸರ್ಕಾರ ಕೈಬಿ­ಟ್ಟಂತೆ ಕಾಣುತ್ತಿದೆ. ಶೇ 49ರಷ್ಟು ಹೂಡಿಕೆಗೆ ಅವ­ಕಾಶ ನೀಡುವುದು ಬಂಡವಾಳ ಹೂಡು­ವ
ವ­ರ­ನ್ನು ಆಕರ್ಷಿಸುವುದಿಲ್ಲ.

ಭಾರತದಲ್ಲಿ ಬಜೆಟ್‌ ಮಂಡನೆ ಎಂಬುದು ದೊಡ್ಡ ವಿದ್ಯಮಾನ. ಸ್ಪಷ್ಟ ಸಂದೇಶ­ವೊಂ­ದನ್ನು ರವಾನಿಸಲು ಮೋದಿ ಅವರಿಗೆ ಇದು ಸರಿ­ಯಾದ ಅವಕಾಶ ಆಗಿತ್ತು. ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆ. ಜನಾಭಿಪ್ರಾಯ ತಮ್ಮ ಪರ ವಾಗಿರುವ ಸಂದರ್ಭವನ್ನು ಬಳಸಿ­ಕೊಂಡು ಮೋದಿ ಅವರು ಭರವಸೆಗಳ ಸಾಕಾ­ರಕ್ಕೆ ಹೆಜ್ಜೆ ಇಡಬೇಕು. ಜನ ಮೋದಿ ಅವರನ್ನು ಬದ­ಲಾವಣೆಯ ಹರಿಕಾರನನ್ನಾಗಿ ಕಂಡಿದ್ದಾರೆ, ಬಿಜೆಪಿಯನ್ನಲ್ಲ. ಇದನ್ನು ಮೋದಿ ಅವರೂ ಮರೆಯಬಾರದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT