ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಮಾಹಿತಿ ಸಂಗ್ರಹ

ಯಶಸ್ಸಿನತ್ತ...
Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪ್ರತಿವರ್ಷ ಬಜೆಟ್ ಸಮಯದಲ್ಲಿ ಹಾಗೂ ಅದಕ್ಕಿಂತ ಸ್ವಲ್ಪ ಮುಂದು ಬಿಡುಗಡೆಯಾಗುವ ಭಾರತದ ಆರ್ಥಿಕ ಸಮೀಕ್ಷೆ ರೈಲ್ವೆ ಬಜೆಟ್, ಕೇಂದ್ರ ಸರಕಾರದ ಬಜೆಟ್‌ಗಳು. ಹಾಗೆಯೇ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಆರ್ಥಿಕ ಸಮೀಕ್ಷೆ, ‘ಕರ್ನಾಟಕ ಬಜೆಟ್’ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹುಮುಖ್ಯ ಮಾಹಿತಿಯ ಆಗರಗಳಾಗಿರುತ್ತವೆ. ಇಂದಿನ ಲೇಖನದಲ್ಲಿ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’ಅನ್ನು ತೆಗೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

2011ರ ಜನಗಣತಿಯಂತೆ ಕರ್ನಾಟಕದ ಜನಸಂಖ್ಯೆಯು 6.11 ಕೋಟಿಯಷ್ಟಿದ್ದು ಇದು ಭಾರತದ ಜನಸಂಖ್ಯೆಯ ಶೇಕಡ 5.05ರಷ್ಟು ಆಗಿರುತ್ತದೆ. ಕರ್ನಾಟಕ ರಾಜ್ಯವು ಜನಸಂಖ್ಯೆಯಲ್ಲಿ ಭಾರತ ದೇಶದಲ್ಲಿ 9ನೇ ಸ್ಥಾನದಲ್ಲಿರುತ್ತದೆ. ಕರ್ನಾಟಕ ರಾಜ್ಯವು ವಿಸ್ತಿರ್ಣದಲ್ಲಿ ಭಾರತದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದ್ದು ಭಾರತದ ಭೌಗೋಳಿಕ ಪ್ರದೇಶ ಶೇ. 5.83ರಷ್ಟು ಹೊಂದಿದೆ. 2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಜನಸಾಂದ್ರತೆಯು 319 ಇದ್ದು, ಕಳೆದ ದಶಕದಲ್ಲಿ ರಾಜ್ಯದ ಜನಸಂಖ್ಯೆಯು ಶೇಕಡ 15.7ರಷ್ಟು ಬೆಳೆದಿದೆ.

ರಾಜ್ಯದಲ್ಲಿನ ಜನನ ಪ್ರಮಾಣವು (ಪ್ರತಿ 1000ಜನರಿಗೆ) 2001ರಲ್ಲಿ ಶೇಕಡ 19.2ರಷ್ಟು ಇರುತ್ತದೆ. ಅದೇ ರೀತಿ ಮರಣ ಪ್ರಮಾಣವು ಶೇಕಡ 7.1ರಷ್ಟು ಇರುತ್ತದೆ. 2011ರ ಜನಗಣತಿಯಂತೆ ರಾಜ್ಯದಲ್ಲಿ ಲಿಂಗಾನುಪಾತ 943ಇರುತ್ತದೆ ಹಾಗೂ ಜನಸಂಖ್ಯೆಯ ಶೇ. 50.80ರಷ್ಟು ಪುರುಷರು ಇರುತ್ತಾರೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ತಲಾ ಆದಾಯವು ಸ್ಥಿರ ಜಿಲ್ಲೆಗಳಲ್ಲಿ (2004-05) ರಲ್ಲಿ ಶೇಕಡ 7.0ರಷ್ಟು ನಿರೀಕ್ಷಿಸಲಾಗಿದೆ. ರಾಜ್ಯದ ಆದಾಯವು 2014-15ನೇ ಸಾಲಿನಲ್ಲಿ 3,44,106 ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ.

ರಾಜ್ಯದ ಆದಾಯಕ್ಕೆ ಪ್ರಮುಖ ವಲಯಗಳಾದ  ಸೇವಾ ವಲಯದಲ್ಲಿ ಶೇ. 8.9ರಷ್ಟು ಕೃಷಿ ವಲಯದಲ್ಲಿ ಶೇ.4.5ರಷ್ಟು ಹಾಗೂ ಕೈಗಾರಿಕಾ ವಲಯದಲ್ಲಿ ಶೇ.4.4 ರಷ್ಟು ಪ್ರಗತಿಯಾಗುವ ನಿರೀಕ್ಷೆ ಇದೆ. ರಾಜ್ಯದ ತಲಾ ಆದಾಯವು ಸ್ಥಿರ ಬೆಲೆಗಳಲ್ಲಿ (2004-05) 2014-15ನೇ ಸಾಲಿನಲ್ಲಿ 48907ಕ್ಕೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಡಿಸೆಂಬರ್ 2013ರ ಅಂತ್ಯಕ್ಕೆ ಅಖಿಲ ಭಾರತ ಮಟ್ಟದ ಸಗಟು ಮಾರಾಟ ಸೂಚ್ಯಂಕ 179.6 ಇದ್ದು, ಇದು ಡಿಸೆಂಬರ್ 2014ರ ಅಂತ್ಯಕ್ಕೆ 179.8 ರಷ್ಟು ಹೆಚಾಗಿದ್ದು ಇದರಿಂದಾಗಿ ವಾರ್ಷಿಕ ಹಣದುಬ್ಬರ ಶೇ. 0.11 ರಷ್ಟು ಏರಿಕೆಯಾಗಿರುತ್ತದೆ.

ಏಪ್ರಿಲ್ 2000 ದಿಂದ 2014ರ ನವೆಂಬರ್‌ವರೆಗೂ ಕರ್ನಾಟಕವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಯು.ಎಸ್. ಡಾಲರ್ 14.174 ಮಿಲಿಯನ್ ಆಕರ್ಷಿಸಿದ್ದು, ಇದು ರಾಷ್ಟ್ರಮಟ್ಟದ ವಿದೇಶಿ ಬಂಡವಾಳ ಹೂಡಿಕೆಯ ಶೇ. 5.99 ರಷ್ಟಾಗಿದೆ. ಕರ್ನಾಟಕವು ವಾಣಿಜ್ಯ ರಫ್ತಿನಲ್ಲಿ 4ನೇ ಸ್ಥಾನವನ್ನು ಪಡೆದಿದ್ದು ರಾಷ್ಟ್ರದ ರಫ್ತಿನ ಶೇ. 12.37 ರಷ್ಟು ಪಾಲನ್ನು ಒಂದಿರುತ್ತದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಕರ್ನಾಟಕದ ರಫ್ತು ಸಾಕಷ್ಟು ಹೆಚ್ಚಿನ ಭಾಗವಾಗಿದ್ದು ಶೇ. 47.3ರಷ್ಟು ಪಾಲನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಾಂಶವು ರಾಜ್ಯದ ರಫ್ತಿನ ಶೇ.61ರಷ್ಟು ಪಾಲನ್ನು ಹೊಂದಿದೆ.

ಮಳೆ ನೀರನ್ನು ಸಂರಕ್ಷಿಸಲು ಮತ್ತು ನ್ಯಾಯಯುತವಾಗಿ ಬಳಕೆ ಮಾಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ನೀತಿಯ ಮೇಲೆ ರಾಜ್ಯ ಸರಕಾರಕ್ಕೆ ಸಲಹೆ ನೀಡುವುದಕ್ಕಾಗಿ ರಾಜ್ಯವು 2014-15 ರಲ್ಲಿ ‘ಕೃಷಿ ಬೆಲೆ ಆಯೋಗ’ವನ್ನು ಸ್ಥಾಪಿಸಿರುತ್ತದೆ. ಪ್ರಮುಖ ಕೃಷಿ ಯಂತ್ರೋಪಕರಣಗಳ ಸೇವೆಗಳನ್ನು ಪಡೆಯುವುದಕ್ಕಾಗಿ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ‘ಕಸ್ಟಮ್ ಹೈರ್’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸದಾದ ಕೇಂದ್ರಿಯ ಪುರಸ್ಕೃತ ಯೋಜನೆಯಾದ ‘ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ’ (ಎನ್‌ಎಮ್‌ಎಸ್‌ಎ) ರೂಪಿಸಲಾಗಿರುತ್ತದೆ.

ರಾಜ್ಯದಲ್ಲಿನ ಜಾನುವಾರು ಸಾಂದ್ರತೆಯು ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ 151.21ರಷ್ಟು ಇರುತ್ತದೆ. ಹಾಲು ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೇ ಸ್ಥಾನವನ್ನು ಗಳಿಸಿರುತ್ತದೆ ಮತ್ತು ಭಾರತದ ರಾಜ್ಯಗಳ ಪೈಕಿ ಕರ್ನಾಟಕವು 11ನೇ ಸ್ಥಾನದಲ್ಲಿರುತ್ತದೆ. ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದರೆ ಕರ್ನಟಕವು ಸಮುದ್ರದ ಮೀನು ಉತ್ಪಾದನೆಯಲ್ಲಿ 6ನೇ ಸ್ಥಾನವನ್ನೂ, ಒಳನಾಡಿನ ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನವನ್ನು ಪಡೆದಿರುತ್ತದೆ. ರಾಜ್ಯದ 2013–14ರ ಅರಣ್ಯ ಇಲಾಖೆಯ ವಾರ್ಷಿಕ ವರದಿಯಂತೆ ಕರ್ನಾಟಕವು 43,3356.47 ಚದರ ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ ಭೌಗೋಳಿಕ ಪ್ರದೇಶದ ಶೇ. 22.61  ರಷ್ಟು ಇರುತ್ತದೆ.

ರಾಜ್ಯವು ಸಾಕ್ಷರತಾ ಸಾಧನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2001ರಲ್ಲಿ ಶೇಕಡಾ 66.64 ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇ. 75.60ಕ್ಕೆ ಏರಿಕೆಯಾಗಿದೆ. ಅರದಲ್ಲಿ ಪುರುಷರ ಸಾಕ್ಷರತಾ ಪ್ರಮಾಣ 82.85% ರಷ್ಟು ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡಾ 65.46ರಷ್ಟು ಇರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಶಿಶುಮರಣ ದರವು ತೀವ್ರಗತಿಯಲ್ಲಿ ಕಡಿಮೆಯಾಗಿದ್ದು ಪ್ರಸ್ತುತವಾಗಿ ಇದನ್ನು ಒಂದು ಸಾವಿರ ಜನನಕ್ಕೆ ಸುಮಾರು 10ರ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಒಂದು ಲಕ್ಷ ಸಜೀವ ಜನನಕ್ಕೆ ತಾಯಂದಿರ ಮರಣ ಪ್ರಮಾಣ (ಎಂಎಂಆರ್) 2010-13ರಲ್ಲಿ 144ರಷ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT