ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಿ ಅರಳಿದ ಸುಮಗಳು

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ರಮಾ ಮುರಳಿ
ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದ ಅಮ್ಮನಿಗೆ ಸಹಾಯ ಮಾಡಲು ಅಮೆರಿಕದಿಂದ ಮರಳಿದ ರಮಾ ಮುರಳಿ ಅವರ ಯಶಸ್ಸಿನ ಕಥೆ ಇದು.
ರಮಾ ಸಾರ್ವಜನಿಕ ಆರೋಗ್ಯ ಮತ್ತು ಮನಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ಅಮೆರಿಕದ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅಜ್ಜಿಯ ಆರೋಗ್ಯ ಹದಗೆಟ್ಟಿತ್ತು. ಅಮ್ಮನಿಗೆ ಅಜ್ಜಿಯನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಹಾಗಾಗಿ ಅಮ್ಮನಿಗೆ ಸಹಾಯ ಮಾಡುವ ಸಲುವಾಗಿಯೇ ಕೆಲಸಕ್ಕೆ ರಾಜೀನಾಮೆ ನೀಡಿ ಚೆನ್ನೈಗೆ ಮರಳಿದರು. ರಮಾ ಬಂದ ಕೆಲ ತಿಂಗಳಲ್ಲೇ ಅಜ್ಜಿ ಸಾವನ್ನಪ್ಪಿದರು. ಅದ್ಯಾಕೋ ರಮಾಗೆ ಮತ್ತೆ ಅಮೆರಿಕಕ್ಕೆ ಹೋಗುವ ಮನಸ್ಸಾಗಲಿಲ್ಲ. ಇಲ್ಲಿನ ಆರೋಗ್ಯಕ್ಕೆ ಸಂಬಂಧಪಟ್ಟ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಯಲ್ಲಿ ಕೆಲಸಕ್ಕೆ ಸೇರಿದರು.

ಅಜ್ಜಿಯ ಆರೈಕೆ ಮತ್ತು ಎನ್‌ಜಿಒದಲ್ಲಿ ಕೆಲಸ ಮಾಡಿದ ಅನುಭವ ರಮಾ ಅವರಿಗೆ ಭಾರತೀಯ ವೈದ್ಯಕೀಯ ಆರೈಕೆ ಪದ್ಧತಿಯನ್ನು ಪರಿಚಯಿಸಿತು. ಅಮೆರಿಕದಲ್ಲಿ ಆಸ್ಪತ್ರೆಗಳಿಂದ ಹೊರಹೋಗುವ ರೋಗಿಗಳಿಗೆ ಅಲ್ಲಿನ ಆಸ್ಪತ್ರೆಗಳು ಕೇರ್‌ಗೀವರ್ಸ್‌ಗಳನ್ನು (caregiver)ಕಳುಹಿಸಿಕೊಡುತ್ತಾರೆ. ಆದರೆ ಇಂತಹ ವ್ಯವಸ್ಥೆ ಭಾರತದಲ್ಲಿ ಇಲ್ಲದಿರುವುದು ಕಂಡುಬಂತು.  ಹಾಗಾಗಿ ಇಲ್ಲಿಯೂ ಕೇರ್‌ಗೀವರ್ಸ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ‘ಕೇರ್‌3’ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.

ಇದರ ಮೂಲಕ ವಯೋವೃದ್ಧರು, ರೋಗಿಗಳು, ಅಂಗವಿಕಲರ ಲಾಲನೆ ಪಾಲನೆ ಮಾಡುವ ವಿಧಾನದ ಬಗ್ಗೆ ಯುವ ಜನರು, ವಿದ್ಯಾರ್ಥಿಗಳು ಮತ್ತು ನರ್ಸ್‌ಗಳಿಗೆ ವಿಶೇಷ ತರಬೇತಿ ನೀಡುವ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಚೆನ್ನೈ ಮಹಾನಗರಕ್ಕೆ ಮಾತ್ರ ತಮ್ಮ ಕಾರ್ಯಚಟುವಟಿಕೆಯನ್ನು ಸಿಮೀತಗೊಳಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ನಗರಗಳಲ್ಲೂ ಕೇರ್‌ಗೀವರ್ಸ್‌ ಸಮುದಾಯ ಬೆಳೆಸುವ ಯೋಜನೆ ಹೊಂದಿದ್ದಾರೆ.

ಧರ್ಮಪಾಲ್‌ ಯಾದವ್‌
ಐಐಟಿಯಲ್ಲಿ ಎಂಜಿನಿಯರಿಂಗ್‌ ಓದಬೇಕು ಎಂಬ ಕನಸು. ಆದರೆ ಮನೆಯಲ್ಲಿ ತುಂಬಿದ ಬಡತನದಿಂದಾಗಿ ಆ ಕನಸು ಈಡೇರುವುದಿಲ್ಲ ಎಂಬುದು ಮನದಟ್ಟಾಗಿತ್ತು. ಅರ್ಧಕ್ಕೆ ನಿಲ್ಲಿಸಿದ್ದ ಐಟಿಐ ಪಾಸು ಮಾಡಿ ಯಾವುದೋ ಒಂದು ಕಾರ್ಖಾನೆಯಲ್ಲಿ ದುಡಿದು ಕುಟುಂಬಕ್ಕೆ ನೆರವಾಗುವ ನಿರ್ಧಾರ ಕೈಗೊಂಡು ಮತ್ತೆ ಕಾಲೇಜಿಗೆ ಮರಳಿದೆ.

ಈ ಹಂತದಲ್ಲಿ ಆನಂದ್‌ ಕುಮಾರ್‌ ಅವರ ಸೂಪರ್‌ 30 ತಂಡ ಸೇರಿ ನಿನ್ನ ಕನಸನ್ನು ನನಸು ಮಾಡಿಕೊಳ್ಳಬಹುದಲ್ಲ ಎಂದು ಗೆಳೆಯರೊಬ್ಬರು ಸಲಹೆ ಕೊಟ್ಟರು. ಕೂಡಲೇ ಸ್ಕ್ರೀನ್‌ ಟೆಸ್ಟ್‌ ಬರೆದೆ. ಸೂಪರ್‌ 30 ತಂಡ ಸೇರುತ್ತೇನೆ ಎಂಬ ವಿಶ್ವಾಸವಿದ್ದರೂ ಮನದ ಮೂಲೆಯಲ್ಲಿ ಸಣ್ಣದೊಂದು ಅಳುಕು ಇದ್ದೇ ಇತ್ತು. ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿತ್ತು. ನಾನು ಸೂಪರ್‌ 30 ತಂಡಕ್ಕೆ ಆಯ್ಕೆಯಾದೆ.

ಬಿಹಾರದ ಆನಂದ್‌ ಕುಮಾರ್‌ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಐಐಟಿ–ಜೆಇಇ ಪರೀಕ್ಷೆ ತಯಾರಿಗೆ ಉತ್ತಮ ತರಬೇತಿ ನೀಡುತ್ತಾರೆ. ಅವರ ಗರಡಿಯಲ್ಲಿ ಪಳಗಿ ನನ್ನ ಕನಸನ್ನು ನನಸಾಗಿಸಿಕೊಂಡೆ. ಅಪ್ಪ ಟ್ರಕ್‌ ಚಾಲಕ. ಅಪ್ಪನ ಸಂಪಾದನೆಯೇ ಕುಟುಂಬಕ್ಕೆ ಆಧಾರ. ಜೊತೆಗೆ ಇಬ್ಬರು ತಮ್ಮಂದಿರ ವಿದ್ಯಾಭ್ಯಾಸ. ಇಂತಹ ಪರಿಸ್ಥಿತಿಯಲ್ಲಿ ನನ್ನ ಎಂಜಿನಿಯರಿಂಗ್‌ ಕನಸು ಗಗನ ಕುಸುಮವಾಗಿತ್ತು. ಈ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಆನಂದ್‌ಕುಮಾರ್‌ ಅವರ ಸೂಪರ್‌ 30.

ಸೂಪರ್‌ 30ಯಲ್ಲಿ ಉತ್ತಮ ಪರೀಕ್ಷಾ ಮಾರ್ಗದರ್ಶನ ನೀಡಲಾಗುತ್ತದೆ. ನುರಿತ ವಿಷಯ ತಜ್ಞರಿಂದ ತರಬೇತಿ ಜೊತೆಗೆ ನೋಟ್ಸ್‌ಗಳನ್ನು ನೀಡಲಾಗುತ್ತದೆ. ಗುಣಮಟ್ಟದ ಕೋಚಿಂಗ್‌ನಿಂದಾಗಿಯೇ ನಾನು ಐಐಟಿಯಲ್ಲಿ ಯಶಸ್ವಿಯಾದೆ ಎನ್ನುತ್ತಾರೆ ಯಾದವ್‌. ಎಂಜಿನಿಯರಿಂಗ್‌ ಓದು ಹಾದಿ ಮಸುಕಾಗಿತ್ತು. ಆದರೆ ಆ ದಾರಿಯಲ್ಲಿ ಸಾಗುತ್ತೇನೆ ಎಂಬ ಆತ್ಮವಿಶ್ವಾಸವಿತ್ತು. ಆ ವಿಶ್ವಾಸವೇ ಇಂದು ನನ್ನ ಕನಸನ್ನು ಸಾಕಾರಗೊಳಿಸಿತು ಎನ್ನುತ್ತಾರೆ ಬಿಹಾರದ ಸಾಧಕ ಧರ್ಮಪಾಲ್‌ ಯಾದವ್‌.

ಅಭಿಷೇಕ್‌ ಕುಮಾರ್‌ ಭಾರ್ತಿಯಾ
ಐಐಟಿ–ಜೆಇಇ ಪರೀಕ್ಷೆಯನ್ನು ಕಬ್ಬಿಣದ ಕಡಲೆ ಎನ್ನುವ ವಿದ್ಯಾರ್ಥಿಗಳೇ ಬಹು ಸಂಖ್ಯೆಯಲ್ಲಿದ್ದಾರೆ. ಸಿರಿವಂತರ ಮಕ್ಕಳಂತೂ ಎರಡು ಮೂರು ವರ್ಷ ಪ್ರತಿಷ್ಠಿತ ಕೋಚಿಂಗ್‌ ಕೇಂದ್ರಗಳಲ್ಲಿ ಕುಳಿತು ಓದಿದರೂ ಯಶಸ್ವಿಯಾಗಿರುವುದಿಲ್ಲ. ಆದರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಒಂದು ನಯಾಪೈಸೆ ಖರ್ಚು ಮಾಡದೇ ಯಶಸ್ವಿಯಾಗಿರುವ ಉದಾಹರಣೆಗಳು ನಮ್ಮ ಮುಂದಿವೆ.

ಇದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಉತ್ತರ ಪ್ರದೇಶದ ಕಾನ್ಪುರ ನಗರದ ಕೊಳೆಗೇರಿ ನಿವಾಸಿ ಅಭಿಷೇಕ್‌ ಕುಮಾರ್‌ ಭಾರ್ತಿಯಾ.
‘ಅಪ್ಪ ಚಮ್ಮಾರ ವೃತ್ತಿ ಮಾಡುತ್ತ ಕುಟುಂಬವನ್ನು ಪೋಷಿಸುವವರು. ಅಮ್ಮ ಟೈಲರಿಂಗ್‌ ಕೆಲಸ ಮಾಡುತ್ತ ನನ್ನ ಓದಿಗೆ ಆಸರೆಯಾಗಿದ್ದರು. ವಿಜ್ಞಾನ ಉಪನ್ಯಾಸಕರ ಸಹಕಾರ ಮತ್ತು ಸ್ಥಳೀಯ ಕೋಚಿಂಗ್‌ ಕೇಂದ್ರದವರು ಉಚಿತವಾಗಿ ತರಬೇತಿ ನೀಡಿದ್ದರಿಂದ ನಾನು ಐಐಟಿ–ಜೆಇಇ ಪರೀಕ್ಷೆಯಲ್ಲಿ ಯಶಸ್ವಿಯಾದೆ’ ಎನ್ನುತ್ತಾರೆ ಅಭಿಷೇಕ್‌.  

ಮನೆ ಇದ್ದದ್ದು ಕೊಳಚೆ ಪ್ರದೇಶದಲ್ಲಿ. ಸರ್ಕಾರ ಕಟ್ಟಿಕೊಟ್ಟಿದ್ದ ಅಸಮರ್ಪಕ ಮನೆ ಅದು. ಅದಕ್ಕೆ ವಿದ್ಯುತ್‌ ಸಂಪರ್ಕವಿರಲಿಲ್ಲ. ಸೀಮೆಎಣ್ಣೆ ದೀಪದಲ್ಲಿ ಓದಿ ದೇಶಕ್ಕೆ 154ನೇ  ರ್‍್ಯಾಂಕ್‌ ಗಳಿಸಿದ್ದು ಅಭಿಷೇಕ್‌ ಹೆಗ್ಗಳಿಕೆ. ಈ ವರ್ಷ ದೇಶದಾದ್ಯಂತ ಸುಮಾರು 5 ಲಕ್ಷ ಜನರು ಈ ಪರೀಕ್ಷೆ ಬರೆದಿದ್ದರು. ಇವರಲ್ಲಿ 13 ಸಾವಿರ ಜನರಿಗೆ ಮಾತ್ರ ಐಐಟಿಯಲ್ಲಿ ಪ್ರವೇಶಾತಿ ದೊರೆಯುತ್ತದೆ. ಅವರಲ್ಲಿ ಅಭಿಷೇಕ್‌ ಕೂಡ ಒಬ್ಬರು. ಜೊತೆಗೆ ಕಾನ್ಪುರ ಐಐಟಿಯಲ್ಲೇ ಸ್ಥಾನ ಸಿಕ್ಕಿರುವುದು ಮತ್ತೊಂದು ಹಿರಿಮೆ.

‘ನನ್ನ ಸಾಧನೆಯ ಹಿಂದೆ ಉಪನ್ಯಾಸಕರಾದ ಬನ್ಸಾಲ್‌ ಮತ್ತು ಬಾಬಾ ಕೋಚಿಂಗ್‌ ಸಂಸ್ಥೆಯ ನೆರವು ಮತ್ತು ನನ್ನ ಪರಿಶ್ರಮವಿದೆ. ನಾನು ರ್‍್ಯಾಂಕ್‌ ಪಡೆದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ನನ್ನ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡಲು ಹಲವಾರು ಸಂಘ ಸಂಸ್ಥೆಗಳು, ರೋಟರಿ ಮತ್ತು ಲಯನ್ಸ್‌ ಕ್ಲಬ್‌ಗಳು ಮುಂದೆ ಬಂದಿವೆ. ಇವುಗಳ ಸಹಾಯ ಪಡೆದು ದೇಶ ಮೆಚ್ಚುವಂತಹ ಕೆಲಸ ಮಾಡುವ ಗುರಿ ನನ್ನದು ಎನ್ನುತ್ತಾರೆ ಅಭಿಷೇಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT