ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಮುಖಗಳು

ಒಡಲಾಳ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಬಡತನಕ್ಕೆ ಉಂಬುವ ಚಿಂತೆ... ಎಂದು ಶರಣರು ಹಸಿವಿನ ಮಹತ್ವ ಸಾರಿದ್ದರೆ, ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ... ಎಂದು ದಾಸರು ಕೀರ್ತನೆ ಹಾಡಿದ್ದಾರೆ. ಆದರೆ ಈ ಹಸಿವು, ಬಡತನ ಏನೆಲ್ಲ ಸಂಕಷ್ಟ ಗಳನ್ನು ನೀಡುತ್ತದೆ ಎಂಬುದು ತರ್ಕಕ್ಕೆ ಸಿಕ್ಕದ್ದು. ಹೀಗನ್ನಿಸಲು ಕಾರಣ, ಒಂದು ಘಟನೆ.

ಕಿರಾಣಿ ಅಂಗಡಿಯಲ್ಲಿ ತುಂಬಾ ಗಡಿಬಿಡಿಯಲ್ಲಿದ್ದ ಹುಡುಗನೊಬ್ಬನ ತೊಳಲಾಟ ನೋಡಲಾರದೆ ಅವನಿಗೆ ಮೊದಲು ಜಾಗ ಬಿಟ್ಟುಕೊಟ್ಟೆ. ಬಡಕಲು ಶರೀರದ ಆ ಹುಡುಗನ ಎಳೆ ಮುಖದಲ್ಲಿ ರಾಚುತ್ತಿದ್ದುದು ಚಿಂತೆಯ ಗೆರೆಗಳು. ನೋಡಿದಾಕ್ಷಣ ಕುತೂಹಲ ಮೂಡಿಸುತ್ತಿತ್ತು ಅವನ ವರ್ತನೆ. ನನ್ನ ಸರದಿ ಬಂದಾಗ ಖರೀದಿಸಬೇಕಾದ ಪದಾರ್ಥಗಳೊಂದಿಗೆ ಆ ಹುಡುಗನ ಬಗ್ಗೆಯೂ ವಿಚಾರಿಸಿದೆ.

‘ಅಯ್ಯೋ, ಆ ಹುಡುಗ ಇಲ್ಲಿಯವನೆ. ಹೆಸರು ಗಾದಿಲಿಂಗ. ಚಿಕ್ಕ ವಯಸ್ಸಿಗೆ ಮಣಭಾರ ಅವನ ಹೆಗಲಿಗೇರಿದೆ’ ಎಂದು ಹೇಳುತ್ತಾ ಹೋದರು. ಗಾದಿಲಿಂಗನ ಬಗ್ಗೆ ಪೂರ್ಣ ತಿಳಿದುಕೊಳ್ಳುವ ಉದ್ದೇಶದಿಂದ ಅವನ ಮನೆ ಬಳಿಯ ನನ್ನ ಅಕ್ಕನ ಮನೆಗೆ ಹೋದೆ. ಆಗ ತಿಳಿದಿದ್ದು, ಗಾದಿಲಿಂಗನ ಕುಟುಂಬ ನೆರೆ ರಾಜ್ಯದಿಂದ ಬಳ್ಳಾರಿಗೆ ಬಂದಿದೆ. ತಂದೆ ಕುಡುಕ, ಐದು ಜನ ಹೆಣ್ಣು ಮಕ್ಕಳು. ಗಾದಿಲಿಂಗ ಒಬ್ಬನೇ ಗಂಡು ಮಗ. ತಾಯಿ ಮತ್ತೆ ಬಸುರಿಯಾಗಿದ್ದಾಳೆ. ಅಜ್ಜ-ಅಜ್ಜಿಯರನ್ನೂ ನೋಡಿಕೊಳ್ಳುವ ಹೊಣೆ ಎಳೆ ಹುಡುಗ ಗಾದಿಲಿಂಗನ ಮೇಲೆ. ಅದೇ ರಾತ್ರಿ ಜಿಟಿ ಜಿಟಿ ಮಳೆ. ಗಾದಿಲಿಂಗನ ತಾಯಿಗೆ ಹೆರಿಗೆ ಬೇನೆ ಶುರುವಾಗಿದೆ. ನೆರೆಹೊರೆಯವರು ಸೂಲಗಿತ್ತಿ ಸಹಾಯದಿಂದ ಹೆರಿಗೆ ಮಾಡಿಸಲು ಪ್ರಯತ್ನಿಸುತ್ತಿದ್ದರು. ತಂದೆ ಕಂಠಪೂರ್ತಿ ಕುಡಿದು ಅಂಗಳದಲ್ಲಿ ಬಿದ್ದಿದ್ದ . ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜ ಅಜ್ಜಿಯರು ಬಯಲಲ್ಲಿಯೇ ಮಲಗಿದ್ದರು.

ಬೆಳಿಗ್ಗೆ ಎದ್ದು  ಕಾಲೇಜಿಗೆ ಹೊರಡಲು ಅಣಿಯಾಗುವಷ್ಟರಲ್ಲಿ ಗಾದಿಯ ಮನೆಯಿಂದ ಕೂಗಾಟ. ಗಾಬರಿಯಿಂದ  ನೋಡಿದರೆ, ಮತ್ತೆ  ಹೆಣ್ಣು ಹಡೆದ ಹೆಂಡತಿಗೆ ತಂದೆಯ ಬೈಗುಳಗಳ ಸುರಿಮಳೆ. ಹಸಿ ಬಾಣಂತಿಯ ನರಳಾಟ, ಹೊರಗೆ ಅಜ್ಜಿ ಮರಣ! ದಿಕ್ಕುಗಾಣದೇ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಗಾದಿಲಿಂಗನ ಕಣ್ಣುಗಳಲ್ಲಿ ಬಡತನದ ಬೇಗೆ ಸುಡುತ್ತಿತ್ತು. ಸ್ವಲ್ಪ ದಿನದ ನಂತರ, ಗಾದಿಲಿಂಗ ಕಾಣುತ್ತಿಲ್ಲವಲ್ಲ ಎಂದು ಒಬ್ಬರನ್ನು ವಿಚಾರಿಸಿದೆ. ಆತ ದುಡಿಯಲು ಬೆಂಗಳೂರಿಗೆ ಹೋಗಿದ್ದಾಗಿ ಹೇಳಿದರು. ಒಂದು ದಿನ ನೀರಿಗೆಂದು ಕಾಲುವೆಗೆ ಹೋಗುವಾಗ ಗೋಣಿ ಚೀಲದಲ್ಲಿ ಶವವೊಂದನ್ನು ತೆಗೆದುಕೊಂಡು ಹೋಗುತ್ತಿದ್ದರು. ಸತ್ತವರು ಯಾರೆಂದು ಸುಮ್ಮನೆ ಕೇಳಿದೆ.

‘ಬೆಂಗಳೂರಿಗೆ ದುಡಿಯಲು ಹೋಗಿದ್ದ ಸಣ್ಣ ಹುಡುಗ, ಬಿಳಿ ಕಾಮಣಿಯಾಗಿತ್ತಂತೆ. ಆಸ್ಪತ್ರೆಗೆ ತೋರಿದರೂ ಗುಣವಾಗದ್ದರಿಂದ ಊರಿಗೆ ಕಳುಹಿಸಿದ್ದರು. ಬಂದ ಒಂದು ವಾರದಲ್ಲಿಯೇ ತೀರಿಕೊಂಡುಬಿಟ್ಟ ಪಾಪ’ ಎಂದರು. ಹೌದಾ! ಆತನ ಹೆಸರೇನು ಎಂದು ಗಾಬರಿಯಿಂದ ಕೇಳಿದೆ. ‘ಗಾದಿಲಿಂಗ’ ಎಂಬ ಉತ್ತರ ಸಿಕ್ಕಿತ್ತು. ಅರಳುವ ಮುನ್ನವೇ ಕಮರಿ ಹೋದ ಗಾದಿಲಿಂಗನಿಗೆ ಬದುಕು ದಯಾಮಯಿ ಯಾಗಿರಲಿಲ್ಲ ಎಂಬುದನ್ನು ನೆನೆದರೆ ಬಡತನದ ಹಲವು ಮುಖಗಳನ್ನು ಒಮ್ಮೆಲೇ ನೋಡಿದಂತಾಗುತ್ತದೆ. ಇಂಥ ಅದೆಷ್ಟೋ ಮಕ್ಕಳ ಕೂಗು ಒಮ್ಮೆಲೇ ಕಿವಿಗೆ ಅಪ್ಪಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT