ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ ನಿವಾರಿಸದೆ ಪರಿಹಾರ ಇಲ್ಲ

Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆ ಕ್ಷೇತ್ರದಲ್ಲಿ ಕನಿಷ್ಠ ಮೂವತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವವರು ನಂದನಾ ರೆಡ್ಡಿ. ಅವರು, 2012ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ, ಬೆಂಗಳೂರು ಮೂಲದ ‘ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ (cwc) ಸ್ವಯಂಸೇವಾ ಸಂಸ್ಥೆಯ ಸ್ಥಾಪಕರೂ ಹೌದು.
ಬಾಲಕಾರ್ಮಿಕ ಪದ್ಧತಿಯನ್ನು ಸಮುದಾಯ ಸಹಭಾಗಿತ್ವದ ಮೂಲಕ ಪರಿಹರಿಸಬಹುದು ಎಂದು ಬಲವಾಗಿ ಪ್ರತಿಪಾದಿಸುವ ಅವರು, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಬಾಲಕಾರ್ಮಿಕ ಸಮಸ್ಯೆ ನಿವಾರಣೆಯಲ್ಲಿ ಪ್ರಜಾತಂತ್ರ ವ್ಯವಸ್ಥೆ ವಿಫಲವಾಗಿದೆಯೇ?
ಖಂಡಿತ! ಬಾಲ ಕಾರ್ಮಿಕರಿಗೂ  ನಮ್ಮಂತೆಯೇ ಹಕ್ಕುಗಳಿವೆ ಎಂಬುದನ್ನು ನಾವು ಮರೆತಿದ್ದೇವೆ. ಬಹುಪಾಲು ಪ್ರಕರಣಗಳಲ್ಲಿ ಬಾಲಕಾರ್ಮಿಕರಿಗೆ ಒದಗಿಸುವ ಪರಿಹಾರ ಅಸಮರ್ಪಕವಾಗಿರುತ್ತದೆ. ಬದುಕುವ ಹಕ್ಕು, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಕ್ಕುಗಳನ್ನು ಮಗುವಿನಿಂದ ಕಿತ್ತುಕೊಳ್ಳಲಾಗುತ್ತಿದೆ. ಇಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಲ್ಲಿ ಆಡಳಿತ ವ್ಯವಸ್ಥೆಯೇ ಮೊದಲ ಸ್ಥಾನದಲ್ಲಿದೆ.
ಬಡತನ ನಿವಾರಣೆ, ವಯಸ್ಕರಿಗೆ ಉದ್ಯೋಗ, ಶಿಕ್ಷಣ ವ್ಯವಸ್ಥೆಯ ಸುಧಾರಣೆ ಆಡಳಿತ ವ್ಯವಸ್ಥೆಯ ಕೆಲಸ. ಇದನ್ನು ಮಾಡಲು ವ್ಯವಸ್ಥೆ ವಿಫಲವಾಗಿದೆ. ಇದರಿಂದ ಹುಟ್ಟಿಕೊಂಡಿರುವುದು ಬಾಲಕಾರ್ಮಿಕ ಪದ್ಧತಿ. ವ್ಯವಸ್ಥೆ ಎಸಗಿದ ತಪ್ಪಿಗಾಗಿ ಮಕ್ಕಳು ಶಿಕ್ಷೆ ಅನುಭವಿಸಬೇಕಾಗಿದೆ. ಬಾಲಕಾರ್ಮಿಕರು ಕಂಡ ತಕ್ಷಣ ಅಲ್ಲಿ ದಾಳಿ ನಡೆಸಿ, ಅವರನ್ನು ‘ರಕ್ಷಿಸಿ’ ಪುನರ್ವಸತಿ ಕೇಂದ್ರಗಳಿಗೆ ತಳ್ಳುವುದು ಪರಿಹಾರ ಎಂದಾದರೆ, ನಾವಿನ್ನೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದೇವಾ ಅಥವಾ ಸರ್ವಾಧಿಕಾರ ವ್ವವಸ್ಥೆಯೆಡೆ ಸಾಗುತ್ತಿದ್ದೇವಾ ಎಂಬ ಅನುಮಾನ ಮೂಡುತ್ತದೆ.
* ನಮ್ಮ ನೀತಿ ನಿರೂಪಕರು ಎಡವಿದ್ದೆಲ್ಲಿ?
ಬಾಲಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ 30 ವರ್ಷಗಳ ಹಿಂದೆ ಒಂದು ಕರಡು ಮಸೂದೆ ಸಿದ್ಧಪಡಿಸಿದ್ದೆವು.

ಮನದಾಳ...
13 ವರ್ಷದ ಲೋಕೇಶ ಆಂಧ್ರದ ಕರ್ನೂಲಿನಿಂದ 3 ವರ್ಷದ ಹಿಂದೆ ಕೂಲಿ ಅರಸಿ ಬಂದ ಅಪ್ಪ ಅಮ್ಮನ ಜೊತೆ ಬೆಂಗಳೂರು ಸೇರಿದವನು. ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. 
ಕರ್ನೂಲು ಬಿಡುವಾಗ ಲೋಕೇಶ ಶಾಲೆ ತೊರೆದಿದ್ದ. ಈಗ ನೆಲೆಸಿರುವ ಶೆಡ್‌ ಸಮೀಪ ತೆಲುಗು ಮಾಧ್ಯಮ ಶಾಲೆ ಇಲ್ಲದಿರುವುದರಿಂದ ಅವನು ಮತ್ತೆ ಶಾಲೆ ಸೇರಿಲ್ಲ. ವಲಸೆ ಕುಟುಂಬಗಳಿಗೆ ಸೇರಿದ ಲೋಕೇಶನಂತಹ ಬಾಲಕರು ಪೂರ್ಣ ಪ್ರಮಾಣದ ಬಾಲಕಾರ್ಮಿಕರಾಗಲು ಇದೂ ಪ್ರಮುಖ ಕಾರಣ.
***
ಶಾಲೆಗೆ ಹೊರಡುವ ಮುನ್ನ ತನುಜಾ ಮನೆಮನೆಗೆ ಪೇಪರ್‌ ಹಂಚಿ, ಬಂದ ಹಣದಿಂದ ತನ್ನ ಬಡ ಕುಟುಂಬಕ್ಕೆ ನೆರವಾಗುತ್ತಿದ್ದಳು. ಇದ್ದಕ್ಕಿದ್ದಂತೆ ಬಂದ ಕೆಲವರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದರು. ಮನೆಯವರನ್ನು ಭೇಟಿ ಮಾಡಲು ಸಹ ಆಕೆಗೆ ಅವಕಾಶ ದೊರೆಯಲಿಲ್ಲ. ಕೊನೆಗೂ ಆಕೆಯ ಬಿಡುಗಡೆಯಾಯಿತು. ಈ ಬೆಳವಣಿಗೆಯಿಂದ ತೀವ್ರವಾಗಿ ಹೆದರಿರುವ ಪೋಷಕರು ಆಕೆ ಮನೆಯಿಂದ ಹೊರಹೋಗದಂತೆ ಕಟ್ಟುನಿಟ್ಟು ಮಾಡಿದ್ದಾರೆ. ಇದರಿಂದ, ಆಕೆ ತರುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೂ ಕುತ್ತು ಬಂದಿದೆ.
***
ಶಾಲೆಯ ರಜಾ ದಿನಗಳಲ್ಲಿ ತಂಪು ಪಾನೀಯದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ 15 ವರ್ಷದ ಮಂಜುನಾಥನನ್ನು ಕೆಲವು ಅಧಿಕಾರಿಗಳು ಏಕಾಏಕಿ ಬಾಲಮಂದಿರಕ್ಕೆ ಕರೆದೊಯ್ದರು. ಸಂಸ್ಥೆಯೊಂದರ ನೆರವಿನಿಂದ ಹೊರಬಂದ ಅವನಿಗೆ, ಪತ್ರಿಕೆಯಲ್ಲಿ ತನ್ನ ಬಗ್ಗೆ ಚಿತ್ರಸಮೇತ ವರದಿ ಪ್ರಕಟವಾಗಿದ್ದು ಅತೀವ ಮುಜುಗರ ತಂದಿತು. ತಂದೆ ಇಲ್ಲ, ನಾಲ್ವರು ಮಕ್ಕಳ ಕುಟುಂಬದ ಹೊಣೆ ಹೊತ್ತ ತಾಯಿಗೆ ಭಾರವಾಗದಿರಲೆಂದು ತನ್ನ ಶಿಕ್ಷಣಕ್ಕಾಗಿ ಒಂದಷ್ಟು ಸಂಪಾದಿಸಲು ಹೊರಟಿದ್ದೇ ತನಗೆ ಮುಳುವಾಯಿತೇ ಎಂಬುದು ಅವನ ಪ್ರಶ್ನೆ.

ಅಪಾಯಕಾರಿ ಸ್ಥಳಗಳಲ್ಲಿ ಮಕ್ಕಳು ಕೆಲಸ ಮಾಡದಂತೆ ತಡೆಯುವ, ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗುವ ಸ್ಥಳಗಳಲ್ಲಿ ಕೆಲಸ ಮಾಡುವ ಮಕ್ಕಳನ್ನು ಸಂರಕ್ಷಿಸುವ ಮಸೂದೆ ಅದಾಗಿತ್ತು.

ಮಕ್ಕಳ ಸಶಕ್ತೀಕರಣಕ್ಕೆ ಪೂರಕವಾದ, ಸೂಕ್ತ ಶಿಕ್ಷಣ ನೀಡುವ ವಿಚಾರ ಈ ಮಸೂದೆಯಲ್ಲಿ ಪ್ರಮುಖವಾಗಿತ್ತು. ಆದರೆ, ಬದುಕಿನ ಅನಿವಾರ್ಯಕ್ಕೆ ಕೆಲಸ ಮಾಡುವ ಮಕ್ಕಳು ಮತ್ತು ಅವರ ಕುಟುಂಬವನ್ನು ಶಿಕ್ಷಿಸುವ ಮಸೂದೆ ಅನುಮೋದನೆಗೊಂಡಿತು.
ನಂತರದ ದಿನಗಳಲ್ಲಿ ಅನುಸರಿಸಿದ ನೀತಿಗಳು ಕೂಡ ಬಾಲಕಾರ್ಮಿಕರನ್ನು ಶಿಕ್ಷೆಗೆ ಗುರಿಪಡಿಸುವಂಥವಾಗಿದ್ದವು. 14  ವರ್ಷಕ್ಕಿಂತ ಕೆಳಗಿನ ಮಕ್ಕಳು ಯಾವುದೇ ಕೆಲಸ ಮಾಡಬಾರದು, ಮಾಡಿದರೆ ಅವರನ್ನು ಅಪರಾಧಿಯೆಂದು ಪರಿಗಣಿಸಬೇಕು, 18 ವರ್ಷ ವಯಸ್ಸಾಗುವವರೆಗೆ ಅವರನ್ನು ಬಂಧನದಲ್ಲಿ ಇಡುವುದು, ಅಷ್ಟು ವಯಸ್ಸಾದ ತಕ್ಷಣ ಬದುಕಿನ ಸವಾಲು ಎದುರಿಸುವ ತರಬೇತಿಯನ್ನೇ ನೀಡದೆ ಅವರನ್ನು ಹೊರಗೆ ಬಿಡುವಂಥ ನೀತಿಗಳು ಅವು. ನಾವು ಆರಂಭದಲ್ಲೇ ಎಡವಿದೆವು.

ಮಕ್ಕಳು ಮಾಡಬಹುದಾದ,  ಮಾಡಬಾರದ ಕೆಲಸ ಯಾವುದು ಎಂದು ಗುರುತಿಸದಿರುವುದು ಮತ್ತೊಂದು ವೈಫಲ್ಯ. ಹಾಗಾಗಿ ಈಗ ‘ಬಾಲಕಾರ್ಮಿಕ’ ಎಂಬ ಮಾತು ಕೇಳಿದ ತಕ್ಷಣ, ದಿನಕ್ಕೆ 18 ತಾಸು ದುಡಿಯುವ, ಹಸಿವಿನಿಂದ ಬಳಲಿರುವ ಮಕ್ಕಳ ಚಿತ್ರ ಮಾತ್ರ ಕಣ್ಣೆದುರು ಬರುತ್ತದೆ. ಇಂಥ ಮಕ್ಕಳ ಸಂಖ್ಯೆ ಕಡಿಮೆ. ಇಂಥವರನ್ನು ರಕ್ಷಿಸಬೇಕು. ಆದರೆ ಈ ಬಗೆಯ ಮಕ್ಕಳು ಹೊರಜಗತ್ತಿಗೆ ಕಾಣದ ಕಾರಣ ಅವರಿಗೆ ರಕ್ಷಣೆ ದೊರೆಯುವುದೂ ಅಪರೂಪ. ಬಾಲಕಾರ್ಮಿಕ ಗಂಡೋ, ಹೆಣ್ಣೋ, ಮಕ್ಕಳ ಕೌಟುಂಬಿಕ ಹಿನ್ನೆಲೆ ಏನು, ಕುಟುಂಬದ ಸಾಮಾಜಿಕ–ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಆಧರಿಸಿ ಪರಿಹಾರ ರೂಪಿಸಬೇಕು.

ಕಡು ಬಡತನ, ಮಕ್ಕಳ ಆಕಾಂಕ್ಷೆಗಳಿಗೆ ಸ್ಪಂದಿಸಲು ಶಿಕ್ಷಣ ವ್ಯವಸ್ಥೆ ವಿಫಲವಾಗಿರುವುದು ಅಥವಾ ಶಾಲೆಗೆ ಹೋಗಲು ತುಸು ಹಣ ಸಂಪಾದಿಸಿಕೊಳ್ಳುವುದು... ಮಕ್ಕಳು ಕೆಲಸ ಮಾಡಲು ಇವುಗಳಲ್ಲಿ ಯಾವುದೋ ಒಂದು ಕಾರಣ ಇರಬಹುದು. ಈ ಕಾರಣಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಲು ನಾವು ಸೋತಿದ್ದೇವೆ.

ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಶೃಂಗಸಭೆಯಲ್ಲಿ ಹೇಳಿದಂತೆ, ನಾವು ಕಂಡುಕೊಳ್ಳುವ ಪರಿಹಾರ ಮಕ್ಕಳ ಹಿತಾಸಕ್ತಿಗಳನ್ನು ರಕ್ಷಿಸುವಂತಿರಬೇಕು. ಮಕ್ಕಳ ಈಗಿರುವ ಸ್ಥಿತಿ ಸುಧಾರಿಸುವಂತಿರಬೇಕು, ಭವಿಷ್ಯದಲ್ಲೂ ಅವರಿಗೆ ಒಳ್ಳೆಯದಾಗುವಂತೆ ಇರಬೇಕು. ಇಂಥ ಪರಿಹಾರ ಕಂಡುಕೊಳ್ಳಲು ಇರುವ ಒಂದೇ ಮಾರ್ಗ, ಮಕ್ಕಳ ಜೊತೆ ನೇರ ಮಾತುಕತೆ ನಡೆಸುವುದು, ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಮಕ್ಕಳ ಹಕ್ಕನ್ನು ಮಾನ್ಯ ಮಾಡುವುದು.

* ನಮ್ಮ ನೀತಿಗಳಲ್ಲಿ ತರಬೇಕಿರುವ ಬದಲಾವಣೆ ಏನು?
ನಮ್ಮ ಯೋಚನಾಕ್ರಮದಲ್ಲಿ, ಸಮಸ್ಯೆಯನ್ನು ನೋಡುವಲ್ಲಿ ಬದಲಾವಣೆ ಬೇಕು. ಬಾಲಕಾರ್ಮಿಕರ ಕುಟುಂಬಕ್ಕೆ ಆಧಾರ ಒದಗಿಸುವುದು ನಮ್ಮ ಮೊದಲ ಕೆಲಸ ಆಗಬೇಕಿತ್ತು.

‘ನಿಮ್ಮ ನಿಯಮಗಳನ್ನು ಪಾಲಿಸುತ್ತಿದ್ದೇವೆ’ ಎಂದು ವಿಶ್ವ ವ್ಯಾಪಾರ ಸಂಘಟನೆ ಮತ್ತು ವಿಶ್ವ ಬ್ಯಾಂಕ್‌ಗೆ ನಾವು ಹೇಳಬೇಕಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಇಲ್ಲವಾಗಿಸಬೇಕಾಗಿದೆ. ಇದಕ್ಕಾಗಿಯೇ ನಾವು ಅಂಕಿ–ಸಂಖ್ಯೆಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದೇವೆ.
ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳೂ ಬಾಲಕಾರ್ಮಿಕರು ಎಂದು ನಾವು ಹೇಳುತ್ತಿದ್ದೇವೆ. ಹಾಗಾಗಿ ಎಲ್ಲ ಮಕ್ಕಳ ಹೆಸರನ್ನೂ ಶಾಲಾ ಹಾಜರಾತಿ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೇವೆ. ಆ ಮಕ್ಕಳು ಶಾಲೆಗೆ ಬರುತ್ತಿದ್ದಾರಾ ಎಂಬುದನ್ನು ಪರಿಶೀಲಿಸುತ್ತಿಲ್ಲ. ಎಂಟನೇ ತರಗತಿವರೆಗೆ ಪರೀಕ್ಷೆಗಳು ಇಲ್ಲವಾದ ಕಾರಣ, ಶಾಲೆ ಬಿಡುವ ಮಕ್ಕಳ ಸಂಖ್ಯೆ ನಮಗೆ ಸಿಗುತ್ತಿಲ್ಲ. ಬಾಲಕಾರ್ಮಿಕರನ್ನು ಜಗತ್ತಿನ ಕಣ್ಣಿಗೆ ಕಾಣದಂತೆ ಬಚ್ಚಿಟ್ಟು, ಈ ಸಮಸ್ಯೆ ಹೇಗೋ ಬಗೆಹರಿಯುತ್ತದೆ ಎಂದು ಕುಳಿತುಕೊಳ್ಳುವ ಮನೋಭಾವ ದೂರವಾಗಬೇಕು. ಸರಳ ಸೂತ್ರಗಳು, ಕರಾಳ ಕಾನೂನುಗಳಿಂದ ಪ್ರಯೋಜನ ಆಗಿಲ್ಲ. ಪರಿಹಾರ ಕಾರ್ಯವನ್ನು ಹಳ್ಳಿಗಳಿಂದ ಆರಂಭಿಸಬೇಕು. ಬಾಲಕಾರ್ಮಿಕರು ಬರುತ್ತಿರುವುದು ಅಲ್ಲಿಂದಲೇ. ಗ್ರಾಮೀಣ ಭಾರತದಲ್ಲಿರುವ ಬಡತನ ಮತ್ತು ನಿರುದ್ಯೋಗ ನಿವಾರಿಸಿದರೆ ಅಲ್ಲಿಂದ ನಗರಗಳತ್ತ ನಡೆಯುತ್ತಿರುವ ವಲಸೆ ನಿಯಂತ್ರಣಕ್ಕೆ ಬರುತ್ತದೆ, ಬಾಲಕಾರ್ಮಿಕ ಸಮಸ್ಯೆ ಕಡಿಮೆಯಾಗುತ್ತದೆ.

* ಬಾಲಕಾರ್ಮಿಕ ಸಮಸ್ಯೆಯನ್ನು ಸ್ಥಳೀಯರ ಸಹಭಾಗಿತ್ವದಲ್ಲಿ ಪರಿಹರಿಸಿದ ಯಾವುದಾದರೂ ಉದಾಹರಣೆ ಇದೆಯೇ?
40 ವರ್ಷಗಳ ಹಿಂದೆಯೇ ಇದು ಸಾಧ್ಯವಾಗಿದೆ. ಬೆಂಗಳೂರಿನ ರೆಸ್ಟೋರೆಂಟ್‌ಗಳಲ್ಲಿದ್ದ ಬಾಲಕಾರ್ಮಿಕರ ಮೂಲ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇದ್ದುದನ್ನು ಪತ್ತೆ ಮಾಡಿದೆವು. ಅಲ್ಲಿನ ಗ್ರಾಮ ಪಂಚಾಯಿತಿಗಳ ಜೊತೆಗೂಡಿ ಈ ಸಮಸ್ಯೆ ನಿವಾರಿಸಲು ನಿರ್ಧರಿಸಿದೆವು.
ಬಾಲಕಾರ್ಮಿಕರು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು, ಅವರಿಗೆ ಗೌರವ ಸಿಗಬೇಕು ಎಂಬುದು ನಮ್ಮ ಆಶಯವಾಗಿತ್ತು. ಹಾಗಾಗಿ, ಬಾಲಕಾರ್ಮಿಕರೇ ನಡೆಸುವ ಸಂಘಟನೆ ‘ಭೀಮ ಸಂಘ’ 1990ರಲ್ಲಿ ಅಸ್ತಿತ್ವಕ್ಕೆ ಬಂತು. ಮಕ್ಕಳ ಹಕ್ಕುಗಳ ಉಲ್ಲಂಘನೆ ತಪ್ಪಿಸಲು ಪಂಚಾಯಿತಿಗಳ ಸಹಭಾಗಿತ್ವದಲ್ಲಿ ‘ಮಕ್ಕಳ ಹಕ್ಕುಗಳ ಕಾರ್ಯಪಡೆ’ ಹುಟ್ಟುಹಾಕಿದೆವು.

ತಮ್ಮ ಸಮಸ್ಯೆಗಳನ್ನು ಮಕ್ಕಳು ಹೇಳಿಕೊಳ್ಳಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ‘ಅಂಚೆ ಪೆಟ್ಟಿಗೆ’ ಎಂಬ ವ್ಯವಸ್ಥೆ ಜಾರಿಗೆ ತಂದೆವು. ಮಕ್ಕಳ ಪರವಾಗಿ ಕೆಲಸ ಮಾಡುವ, ಅವರ ಹಕ್ಕುಗಳನ್ನು ರಕ್ಷಿಸುವ ‘ಮಕ್ಕಳ ಮಿತ್ರ’ ಪರಿಕಲ್ಪನೆಯನ್ನೂ ಪರಿಚಯಿಸಿದೆವು.
ಮಕ್ಕಳ ಶೋಷಣೆ ತಪ್ಪಿಸುವ, ಬಿಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ನೆರವಾಗುವ, ಸುರಕ್ಷಿತ ನೆಲೆ ಕಲ್ಪಿಸುವ ಕೆಲಸವನ್ನು ‘ಮಕ್ಕಳ ಮಿತ್ರ’ರು ಮಾಡಬೇಕಿತ್ತು. ಮಕ್ಕಳ ಇತರ ಸಂಘಟನೆಗಳ ಜೊತೆಗೂಡಿ ಅವರು ‘ಮಕ್ಕಳ ಪಂಚಾಯತ್’ ರಚಿಸಿಕೊಂಡರು. ಪಂಚಾಯಿತಿ ಸದಸ್ಯರನ್ನು ಕಾಲಕಾಲಕ್ಕೆ ಭೇಟಿ ಮಾಡಿ, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಯೋಜನೆಗಳನ್ನೂ ಜಂಟಿಯಾಗಿ ರೂಪಿಸಿದರು. ಇಂಥ ಪ್ರಯತ್ನಗಳಿಂದ, ಇವುಗಳನ್ನು ‘ಬಾಲಕಾರ್ಮಿಕ ಪದ್ಧತಿ ಮುಕ್ತ’ ಪಂಚಾಯಿತಿಗಳು ಎಂದು 5 ವರ್ಷಗಳಲ್ಲಿ ಘೋಷಿಸಲು ಸಾಧ್ಯವಾಯಿತು.

ಬಡತನ ನಿವಾರಣೆಯೇ ನಮ್ಮ ಮೊದಲ ಕೆಲಸ ಆಗಬೇಕು. ಅವರ ಜೀವನೋಪಾಯಕ್ಕೆ ಸುರಕ್ಷಿತ ಮಾರ್ಗ ತೋರಿಸಿಕೊಡಬೇಕು. ಬಡತನದ ಜೊತೆ ಏಗಲು ಜನ ಕಂಡುಕೊಂಡಿರುವ ಮಾರ್ಗಗಳೇ ಅಪರಾಧ ಎನ್ನುವುದು ಸರಿಯಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT