ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಶಿಕ್ಷೆ–ಶ್ರೀಮಂತರಿಗೆ ಶ್ರೀರಕ್ಷೆ

ಅಧಿಕಾರಿಗಳು, ಸರ್ಕಾರಿ ವಕೀಲರ ವೈಫಲ್ಯದಿಂದಲೇ ತಡೆಯಾಜ್ಞೆ: ಕಾನೂನು ತಜ್ಞರ ಅಭಿಮತ
Last Updated 24 ಏಪ್ರಿಲ್ 2015, 20:40 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರದ ಪರವಾಗಿ ವಕಾಲತ್ತು ವಹಿಸುವ  ವಕೀಲರ ವೈಫಲ್ಯದಿಂದಲೇ ಒತ್ತುವರಿ ಕಾರ್ಯಾಚರಣೆಗೆ ತಡೆಯಾಜ್ಞೆ ಸಿಗುತ್ತಿದೆ. ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.

–ಇದು ಸಾಮಾಜಿಕ ಹೋರಾಟಗಾರರು ಹಾಗೂ ಕಾನೂನು ತಜ್ಞರ ಸ್ಪಷ್ಟ ಅಭಿಪ್ರಾಯ.ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿ ವಾರ ಕಳೆದಿದೆ. ಶೇ 85ರಷ್ಟು ಗುಡಿಸಲುಗಳು, ಮನೆಗಳು ನೆಲಸಮವಾಗಿವೆ. ನ್ಯಾಯಾಲಯದ ತಡೆಯಾಜ್ಞೆ ಕಾರಣದಿಂದ ಕೆರೆಯಂಗಳದಲ್ಲಿನ ಬಹುಮಹಡಿ ಕಟ್ಟಡಗಳು ಹಾಗೆ ಉಳಿದಿವೆ.

ಚಿಕ್ಕಕಲ್ಲಸಂದ್ರ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ಆರು ತಿಂಗಳ ಹಿಂದೆ ನಡೆಯಿತು. ಗುಡಿಸಲುಗಳನ್ನು ನೆಲಸಮ ಮಾಡಿ ಜಿಲ್ಲಾಡಳಿತ ಖಾಲಿ ಜಾಗವನ್ನು ವಶಕ್ಕೆ ಪಡೆಯಿತು. ಒತ್ತುವರಿ ಮಾಡಿದ್ದ ‘ಉಳ್ಳವರು’ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವು ಇನ್ನೂ ಆಗಿಲ್ಲ. ಈ ನಡುವೆ, ಒತ್ತುವರಿ ತೆರವು ಮಾಡಿದ ಜಾಗದಲ್ಲಿ ಕೆಲವರು ಮನೆ ನಿರ್ಮಿಸಿದ್ದಾರೆ.

ಇಟ್ಟಮಡು ಕೆರೆಯ ಸ್ಥಿತಿಯೂ ಇದೇ ರೀತಿ ಆಗಿದೆ. ಕಳೆದ ವಾರ ಜಿಲ್ಲಾಡಳಿತ ಆರು ಎಕರೆ ಜಾಗ ವಶಕ್ಕೆ ಪಡೆಯಿತು. ಇದೀಗ ಮೂರು ಮಹಡಿಯ ಮನೆ ಮಾಲೀಕರೊಬ್ಬರು ತಡೆಯಾಜ್ಞೆ ತಂದಿದ್ದಾರೆ. ಈ ಬೆಳವಣಿಗೆ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸಿದೆ.

‘ಸರ್ಕಾರಿ ಜಾಗಗಳಲ್ಲಿ ನೆಲೆಸಿರುವ ಬಡವರ ಗುಡಿಸಲುಗಳನ್ನು ಏಕಾಏಕಿ ನೆಲಸಮ ಮಾಡಲಾಗುತ್ತಿದೆ. ಶ್ರೀಮಂತರಿಗೆ ನೋಟಿಸ್‌ ನೀಡುವ ನಾಟಕ ಮಾಡಲಾಗುತ್ತಿದೆ. ಇದು ಅವರು ನ್ಯಾಯಾಲಯದ ಮೆಟ್ಟಿಲೇರಲು ಮಾಡಿಕೊಡುವ ಅವಕಾಶ.

 ನೋಟಿಸ್‌ ಸಿಕ್ಕ  ಕೂಡಲೇ ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ವಿಚಾರಣೆ ವೇಳೆ ಅಧಿಕಾರಿಗಳು ಹಾಗೂ ಸರ್ಕಾರಿ ವಕೀಲರು ಪೂರಕ ದಾಖಲೆಗಳನ್ನು ಹಾಜರುಪಡಿಸುವುದಿಲ್ಲ. ಸರಿಯಾಗಿ ವಾದವನ್ನೂ ಮಾಡುವುದಿಲ್ಲ. ಇದರಿಂದ ಸುಲಭದಲ್ಲಿ ತಡೆಯಾಜ್ಞೆ ಸಿಗುತ್ತದೆ. ಇದರಲ್ಲಿ ನ್ಯಾಯಾಲಯದ ಲೋಪ ಇಲ್ಲ’ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ವಿಶ್ಲೇಷಿಸುತ್ತಾರೆ.

‘ಮನೆ ಕಳೆದುಕೊಂಡ ಬಡವರಿಗೆ ವಕೀಲರಿಗೆ ಲಕ್ಷಾಂತರ ರೂಪಾಯಿ ಶುಲ್ಕ ನೀಡಲು ಸಾಧ್ಯವಾಗುವುದಿಲ್ಲ. ಬಹುಮಹಡಿ ಕಟ್ಟಡಗಳ ಮಾಲೀಕರು ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು ಹಿರಿಯ ವಕೀಲರನ್ನು ನೇಮಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ.  ಕೆಲವು ಬಾರಿ ಅನನುಭವಿ ಅಧಿಕಾರಿಗಳು ಬರುತ್ತಾರೆ. ಇದರಿಂದಾಗಿ ಕೆಲವೇ ಕ್ಷಣಗಳಲ್ಲಿ ತಡೆಯಾಜ್ಞೆ ಸಿಗುತ್ತದೆ’ ಎಂದು ವಕೀಲ ಪಿ.ಎನ್‌. ಅಮೃತೇಶ್‌ ವ್ಯಾಖ್ಯಾನಿಸುತ್ತಾರೆ.

‘ಶ್ರೀಮಂತರಿಗೆ ತಡೆಯಾಜ್ಞೆ ಸಿಕ್ಕಾಗ ಸೂರು ಕಳೆದುಕೊಂಡು ಬೀದಿಪಾಲಾದ  ಬಡವರು ಮೌನ ತಾಳುವುದು ಸರಿಯಲ್ಲ. ಅವರೆಲ್ಲ ಒಟ್ಟಾಗಿ ನ್ಯಾಯಾಲಯಕ್ಕೆ ಹೋಗಿ  ತಮ್ಮ ಸ್ಥಿತಿಯನ್ನು ಮನವರಿಕೆ ಮಾಡಬೇಕು. ಹೀಗಾದಾಗ ನ್ಯಾಯಾಲಯಕ್ಕೆ ಸತ್ಯ ಸಂಗತಿ ಗೊತ್ತಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಇಂತಹ ವಿಷಯಗಳಲ್ಲಿ ನ್ಯಾಯಾಲಯಗಳೂ ಏಕಾಏಕಿ ಆದೇಶ ನೀಡದೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಬೇಕು. ವಾಸ್ತವ ಸ್ಥಿತಿ ಪರಿಶೀಲಿಸಿ ತೀರ್ಪು ನೀಡಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ಚಿಕ್ಕಕಲ್ಲಸಂದ್ರದಲ್ಲಿ ಬಡವರ ಮನೆಗಳನ್ನು ಮಾತ್ರ ತೆರವು ಮಾಡಲಾಗಿದೆ. ಕೆರೆಯನ್ನು ನುಂಗಿ ನೀರು ಕುಡಿದವರ ಮೂರು ಮಹಡಿಯ ಮನೆಗಳನ್ನು ಹಾಗೆ ಬಿಡಲಾಗಿದೆ. ಕೆರೆ ಒತ್ತುವರಿ ಮಾಡಿದ ಶ್ರೀಮಂತರು ನೆಮ್ಮದಿಯಿಂದ ಇದ್ದಾರೆ. ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ತಡೆ
ಯಾಜ್ಞೆಯ ನೆಪ ಹೇಳುತ್ತಾರೆ. ಇದ್ಯಾವ ನ್ಯಾಯ’ ಎಂದು ಸ್ಥಳೀಯರೊಬ್ಬರು ಪ್ರಶ್ನಿಸುತ್ತಾರೆ.

‘ಹೈಕೋರ್ಟ್‌ ಆದೇಶದ ಪ್ರಕಾರವೇ ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆಗುತ್ತಿದೆ. ಇಲ್ಲಿಯೂ ತಡೆಯಾಜ್ಞೆ ಸಿಗುತ್ತಿರುವುದು ವಿಚಿತ್ರ. ನಾವು ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ಜನರ ಪಾಲಿಗೆ ನಾವು ಕೆಟ್ಟವರಾಗುತ್ತಿದ್ದೇವೆ. ಮನೆ ಕಳೆದುಕೊಂಡ ಬಡಜನರಿಗೆ ನಾವು ಏನು ಉತ್ತರ ಹೇಳುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.
*
ಈ ಕ್ರಮ ಸರಿಯಲ್ಲ
‘ಸಾರಕ್ಕಿ ಕೆರೆಯಂಗಳದಲ್ಲಿರುವ ಮನೆಗಳನ್ನು ಅಕ್ರಮ ಕಟ್ಟಡಗಳು ಎನ್ನುವುದೇ ತಪ್ಪು. ಈ ಮನೆಗಳಿಗೆ ಖಾತಾ ಮಾಡಿಕೊಡಲಾಗಿದೆ. ನಕ್ಷೆ ಮಂಜೂರಾತಿಯೂ ಆಗಿದೆ. ಕಟ್ಟಡ ಪರವಾನಗಿಯೂ ಇದೆ. ಅವರು ತೆರಿಗೆಯನ್ನೂ ಕಟ್ಟುತ್ತಿದ್ದಾರೆ. ಹಲವು ಮನೆಗಳಿಗೆ ಬ್ಯಾಂಕ್‌ ಸಾಲವೂ ಸಿಕ್ಕಿದೆ. ವಿವಿಧ ಇಲಾಖೆಗಳ ಲೋಪದಿಂದ ಅವರಿಗೆ ಈ ಎಲ್ಲ ಸೌಲಭ್ಯ ಸಿಕ್ಕಿದೆ. ಭ್ರಷ್ಟ ಅಧಿಕಾರಿಗಳು ಹಾಗೂ ಭೂಗಳ್ಳರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸದೆ ನಿವಾಸಿಗಳ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ. ಇಲ್ಲಿ ಬಡವರಿಗೆ ಶಿಕ್ಷೆ–ಶ್ರೀಮಂತರಿಗೆ ಶ್ರೀರಕ್ಷೆ ಎಂಬಂತೆ ಆಗಿದೆ’ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳುತ್ತಾರೆ.
*
ಅಂಕಿ ಅಂಶಗಳು
ಎಷ್ಟು ಮನೆಗಳಿಗೆ ತಡೆಯಾಜ್ಞೆ
18 ಚಿಕ್ಕಕಲ್ಲಸಂದ್ರ
12 ಸಾರಕ್ಕಿ ಕೆರೆ
1 ಇಟ್ಟಮಡು ಕೆರೆ
*
ಕೆಲವು ಒತ್ತುವರಿದಾರರು ಸುಳ್ಳು ಸರ್ವೆ ಸಂಖ್ಯೆ ತೋರಿಸಿ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಕಾರ್ಯ­ಚರಣೆಗೆ ಹಿನ್ನಡೆಯಾಗುತ್ತಿದೆ. ತಡೆಯಾಜ್ಞೆ ತೆರವು ಪ್ರಕ್ರಿಯೆ ನಿರಂತರವಾಗಿ ನಡೆದಿದೆ
ವಿ.ಶಂಕರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT