ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿದರ ಇಳಿಕೆ ಬೇಡಿಕೆಗೆ ಬಲ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ತರಕಾರಿ, ಆಹಾರ ಧಾನ್ಯ ಮತ್ತು ತೈಲೋತ್ಪನ್ನಗಳು ಅಗ್ಗವಾಗಿ­ರುವುದ­ರಿಂದ ಐದೂ­ವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ಹಣದುಬ್ಬರವು ಶೂನ್ಯಮಟ್ಟಕ್ಕೆ ಇಳಿದಿದೆ. ಗ್ರಾಹಕ ಬೆಲೆ ಸೂಚ್ಯಂಕ  (ಸಿಪಿಐ) ಮತ್ತು ಸಗಟು ಬೆಲೆ ಸೂಚ್ಯಂಕಗಳೆರಡೂ  (ಡಬ್ಲ್ಯುಪಿಐ)  ಕುಸಿತ ದಾಖ­ಲಿಸಿ ಅಚ್ಚರಿ ಮೂಡಿ­ಸಿವೆ. ಅರ್ಥ ವ್ಯವಸ್ಥೆ­ಯಲ್ಲಿ ಹಣದಿಳಿತದ ಪ್ರವೃತ್ತಿ ಕ್ರಮೇಣ ಬಲಗೊಳ್ಳುತ್ತಿ­ರು­ವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ಸಿಪಿಐ ಆಧಾರಿತ ಹಣದುಬ್ಬರವು ಕಳೆದ ವರ್ಷದ ನವೆಂಬರ್‌ಗೆ (ಶೇ 11) ಹೋಲಿಸಿದರೆ ಈಗ ಶೇ 4.4ಕ್ಕೆ ಇಳಿ­ದಿ­ದ್ದರೆ, ಡಬ್ಲ್ಯುಪಿಐ ಆಧಾರಿತ ಹಣದುಬ್ಬರವು ಶೇ 7.5ರಿಂದ ಶೂನ್ಯ ಮಟ್ಟಕ್ಕೆ ಕುಸಿದಿ­­ರುವುದು ಅರ್ಥ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾ­ಗಲಿದೆ. 

ಹಣದುಬ್ಬರ ಶೂನ್ಯ­­ಮಟ್ಟಕ್ಕೆ ಇಳಿದಿದೆ ಎಂದರೆ ಬೆಲೆಗಳು ಏರುಗತಿ­ಯಲ್ಲಿ ಇರುವುದಿಲ್ಲ ಎಂದೇ ಅರ್ಥ. ಈ ಎರಡೂ ಬೆಲೆ ಸೂಚ್ಯಂಕ­ಗಳು ಗಮ­ನಾರ್ಹ ಮಟ್ಟದಲ್ಲಿ ಕುಸಿತ ದಾಖ­ಲಿಸಲು ಅಂತರರಾಷ್ಟ್ರೀಯ ಮಾರು­­ಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಅಗ್ಗವಾಗಿ­ರುವುದೇ ಮುಖ್ಯ ಕಾರಣ­ವಾಗಿದೆ. ಇಂಧನ ಬೆಲೆಗಳು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ 5­ರಷ್ಟು ಕಡಿಮೆ­ಯಾಗಿವೆ. ಹಲವು ವರ್ಷಗಳಿಂದ ಏರು­ಗತಿಯೇ ಇರುವ ಆಹಾರ ಹಣ­ದುಬ್ಬರವೂ ಈಗ ಇಳಿಕೆ ಪ್ರವೃತ್ತಿ ತೋರಿಸುತ್ತಿದೆ. ಹಿಂದಿನ ವರ್ಷದ ನವೆಂಬರ್‌­ನಲ್ಲಿ ಶೇ 15ರಷ್ಟಿದ್ದ ಇದು, ಈಗ ಶೇ 3ರಷ್ಟಕ್ಕೆ ಇಳಿದಿದೆ. ಸಗಟು ಮಾರಾಟ ಬೆಲೆ  ಮತ್ತು  ತರಕಾರಿ  ಬೆಲೆ ಅಗ್ಗವಾಗಿರುವುದೇ ಬೆಲೆ­ಗಳ ಕುಸಿತಕ್ಕೆ ಕಾರಣವಾಗಿದೆ.

ಬೆಲೆಗಳ ಇಳಿಕೆಯು ಇನ್ನೂ ಜನಸಾಮಾನ್ಯರ ನೇರ ಅನು­ಭವಕ್ಕೆ ಬರ­ಬೇಕಾಗಿದೆ. ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ನೀತಿ ಮತ್ತು ಉತ್ತಮ ಆಡಳಿತ ಕಾರಣ ಎಂದು ಬಿಜೆಪಿಯು ರಾಜಕೀಯ ಲಾಭ ಬಾಚಿ­ಕೊಳ್ಳಲು ಹೊರಟಿದ್ದರೂ, ಕಚ್ಚಾ ತೈಲದ ಬೆಲೆಯ ಪಾತ್ರವೇ ಪ್ರಮುಖ­ವಾಗಿ­ರು­ವುದನ್ನು ಅಲ್ಲಗಳೆಯಲಿ­ಕ್ಕಾಗ­ದು.  ಬ್ಯಾಂಕ್ ಬಡ್ಡಿ ದರ  ಇಳಿಯ­ಬೇಕೆಂದು ಕೈಗಾರಿಕಾ ವಲಯದ ಒತ್ತಾಯಕ್ಕೆ ಈಗ ಇನ್ನಷ್ಟು ಬಲ ಬರಲಿದೆ.  ಭಾರ­ತೀಯ ರಿಸರ್ವ್ ಬ್ಯಾಂಕ್‌ನ ಹಣದುಬ್ಬರ ನಿಯಂತ್ರಣ ಗುರಿಯು ಮುಂಚಿತ­ವಾಗಿಯೇ ತಲುಪಿ­ರು­ವುದರಿಂದ ಬಡ್ಡಿ ದರ ತಗ್ಗಿಸಲು ಸಹಜವಾಗಿಯೇ ಆರ್‌ಬಿಐ ಮೇಲೆ ಒತ್ತಡ ಹೆಚ್ಚಲಿದೆ.

ಅಕ್ಟೋಬರ್ ತಿಂಗಳಲ್ಲಿನ ಕೈಗಾರಿಕಾ ಉತ್ಪಾದನೆಯು ತೀವ್ರ ಪ್ರಮಾಣದಲ್ಲಿ ಕುಸಿದಿರುವುದು ಕೂಡ ಬಡ್ಡಿ ದರ ಕಡಿತಕ್ಕೆ ಒತ್ತಾಸೆ­ಯಾಗಲಿದೆ. ಅಲ್ಪಾ­ವಧಿ ಬಡ್ಡಿ ದರ-­ಗಳನ್ನು ಕಡಿತ ಮಾಡು­ವುದು ಈಗ ಸುರಕ್ಷಿತವಷ್ಟೇ ಅಲ್ಲ, ಸದ್ಯದ ಅನಿವಾರ್ಯವೂ  ಹೌದು. ಅಗತ್ಯ ಬಿದ್ದರೆ ಮಧ್ಯಾಂತರ ಅವಧಿಯಲ್ಲಿ ಬಡ್ಡಿ ದರಗಳನ್ನು ಕಡಿತ ಮಾಡುವುದಾಗಿ ಹೇಳಿದ್ದ ಆರ್‌ಬಿಐ ಗವರ್ನರ್ ರಘುರಾಂ ರಾಜನ್ ಅವರು, ತಮ್ಮ ವಾಗ್ದಾನ ಈಡೇರಿಸುವ  ಅನಿ­ವಾರ್ಯ ಸ್ಥಿತಿ ಉದ್ಭವಿ­ಸಿದೆ.

ಕಡಿಮೆ ಪ್ರಮಾಣದ ಹಣ­ದು­ಬ್ಬರ ಮಟ್ಟವನ್ನು ಇನ್ನಷ್ಟು ಖಚಿತಪಡಿಸಿ­ಕೊಳ್ಳಲು ರಾಜನ್‌,  ಇನ್ನೂ ಕೆಲ ದಿನ ಕಾಯುವ ಸಾಧ್ಯ­ತೆಯೇ ಹೆಚ್ಚು. ಶೂನ್ಯ ಹಣದು­ಬ್ಬರವು ಆರ್ಥಿಕ ವೃದ್ಧಿ ದರ ಕುಂಠಿತಗೊಳಿಸುವ ಸಾಧ್ಯತೆಯೂ ಇರುವು­ದರಿಂದ ಶೂನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಇರುವಂತೆ ನೋಡಿ­ಕೊಳ್ಳುವುದೂ ಮುಖ್ಯವಾಗು­ತ್ತದೆ.  ಹಣ­ದುಬ್ಬರ ಇಳಿಕೆ ಪ್ರವೃತ್ತಿ ಸ್ಥಿರ­ಗೊಂಡರೆ ಮಾತ್ರ ಬಡ್ಡಿ ದರಗಳು ಕಡಿಮೆ­ಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT