ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ: ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಿರೀಕ್ಷೆಯಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಐದನೆ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಚಿಲ್ಲರೆ ಹಣದುಬ್ಬರವು  ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದು ಮತ್ತು ಅಮೆರಿಕದ ಫೆಡರಲ್‌ ಬ್ಯಾಂಕ್‌ ಈ ತಿಂಗಳಲ್ಲಿ ಬಡ್ಡಿ ದರ ಹೆಚ್ಚಿಸಿದರೆ, ದೇಶಿ ಮಾರುಕಟ್ಟೆಯಿಂದ ಬಂಡವಾಳ ಹೊರ ಹೋಗುವ ಸಾಧ್ಯತೆ ಇರುವ ಕಾರಣಕ್ಕೆ ಆರ್‌ಬಿಐ ರೆಪೊ ಮತ್ತು ರಿವರ್ಸ್‌ ರೆಪೊ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸೆಪ್ಟೆಂಬರ್‌ ತಿಂಗಳಲ್ಲಿ ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಶೇ 0.50ರಷ್ಟು ಕಡಿತ ಸೇರಿದಂತೆ, ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಶೇ 1.25ರಷ್ಟು ಬಡ್ಡಿ ಕಡಿತ ಮಾಡಿದೆ.

‘ದೇಶಿ ಅರ್ಥ ವ್ಯವಸ್ಥೆಯು ನಿಜವಾಗಿಯೂ ಚೇತರಿಕೆಯ ಹಾದಿಯಲ್ಲಿ ಇದೆ. ಕೆಲ ಹಿನ್ನಡೆಗಳು ಕೂಡ ಸದ್ಯದಲ್ಲಿಯೇ ದೂರವಾಗಬಹುದು. ಮುಂಬರುವ ದಿನಗಳಲ್ಲಿ ಬಡ್ಡಿ ದರ ಕಡಿತಕ್ಕೆ ಅವಕಾಶ ಒದಗಿ ಬಂದರೆ ಖಂಡಿತವಾಗಿಯೂ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವೆ’ ಎಂದು ಆರ್‌ಬಿಐ ಗವರ್ನರ್ ರಘುರಾಂ ರಾಜನ್‌ ತಿಳಿಸಿದ್ದಾರೆ.

ಚಿಲ್ಲರೆ ಹಣದುಬ್ಬರ (ಗ್ರಾಹಕರ ಬೆಲೆ ಸೂಚ್ಯಂಕ) ಅಕ್ಟೋಬರ್‌ ತಿಂಗಳಲ್ಲಿ ಶೇ 5ರಷ್ಟು ಹೆಚ್ಚಳಗೊಂಡಿದೆ. ಇದಕ್ಕೆ ಬೇಳೆಕಾಳು ಸೇರಿದಂತೆ ಆಹಾರ ಪದಾರ್ಥಗಳು ದುಬಾರಿಯಾಗಿದ್ದೇ ಕಾರಣ. ಡಿಸೆಂಬರ್‌ ತಿಂಗಳಲ್ಲಿಯೂ ಬೆಲೆಗಳು ಏರುಗತಿಯಲ್ಲಿಯೇ ಇರುವ ಸಾಧ್ಯತೆ ಇದೆ.

ದ್ವಿತೀಯ ತ್ರೈಮಾಸಿಕದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಅರ್ಥ ವ್ಯವಸ್ಥೆಯು ಚೇತರಿಕೆ ಕಾಣುತ್ತಿರುವುದನ್ನು ಸೂಚಿಸುತ್ತಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಜಿಡಿಪಿ’ಯು ಶೇ 7.4ರಷ್ಟು ಇರಲಿದೆ ಎಂದೇ ಆರ್‌ಬಿಐ ಅಂದಾಜಿಸಿದೆ. ಈ ಮೊದಲಿನ ಬಡ್ಡಿ ದರ ಕಡಿತದ ಲಾಭವನ್ನು ಸಾಲಗಾರರು ಮತ್ತು ಹೂಡಿಕೆದಾರರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸದಿರುವ ಬ್ಯಾಂಕ್‌ಗಳ ಧೋರಣೆಗೆ ರಾಜನ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಮೂಲ ದರ: ಜನವರಿ ತಿಂಗಳಿನಿಂದೀಚೆಗೆ ಶೇ 1.25ರಷ್ಟು ಬಡ್ಡಿ ಕಡಿತ ಮಾಡಿದ್ದರೂ ಬ್ಯಾಂಕ್‌ಗಳು ತಮ್ಮ ಮೂಲ ದರವನ್ನು ಶೇ 0.60ರಷ್ಟು ಮಾತ್ರ ಕಡಿಮೆ ಮಾಡಿವೆ. ಬಡ್ಡಿ ದರ ಕಡಿತದ ಪ್ರಯೋಜನಗಳನ್ನು ಸಾಲಗಾರರಿಗೆ ವರ್ಗಾಯಿಸಲು  ಮೂಲ ದರ ನಿರ್ಧರಿಸುವ ಸ್ವರೂಪವನ್ನೇ ಬದಲಾಯಿಸಲು ಆರ್‌ಬಿಐ ನಿರ್ಧರಿಸಿದ್ದು,  ಶೀಘ್ರದಲ್ಲಿಯೇ ಜಾರಿಗೆ ತರಲಿದೆ.

ಮೂಲ ದರ ಎನ್ನುವುದು  ಸಾಲ ನೀಡುವ ಕನಿಷ್ಠ ಬಡ್ಡಿ ದರವಾಗಿದ್ದು,  ಈ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಯಾವುದೇ ಬ್ಯಾಂಕ್‌ ಸಾಲ ನೀಡುವಂತಿಲ್ಲ. ‘ಕೇಂದ್ರ ಸರ್ಕಾರಿ ನೌಕರರ 7ನೆ ವೇತನ ಆಯೋಗದ ಶಿಫಾರಸುಗಳು ಸರ್ಕಾರದ ಹಣಕಾಸಿನ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮವನ್ನೇನೂ ಬೀರಲಾರದು. ವೇತನ ಹೆಚ್ಚಳದ ವೆಚ್ಚವನ್ನು ಹೆಚ್ಚುವರಿ ವರಮಾನ ಅಥವಾ ವೆಚ್ಚ ಕಡಿತದ ಮೂಲಕ ಸರಿದೂಗಿಸಬಹುದು’ ಎಂದು  ರಘುರಾಂ ರಾಜನ್‌ ಅವು ಅಭಿಪ್ರಾಯಪಟ್ಟರು.

‘ಲಾಭ ವರ್ಗಾಯಿಸಿ’
ನವದೆಹಲಿ (ಪಿಟಿಐ):
ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗಿನ ಬಡ್ಡಿ ದರ ಕಡಿತದ ಪ್ರಯೋಜನಗಳನ್ನು ಸಾಲಗಾರರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸಬೇಕು ಎಂದು ಕೈಗಾರಿಕಾ ರಂಗವು ಒತ್ತಾಯಿಸಿದೆ.

ಗ್ರಾಹಕರು ಮತ್ತು ಹೂಡಿಕೆದಾರರಿಗೆ ಬಡ್ಡಿ ದರ ಕಡಿತ ಮಾಡುವುದರಿಂದ ಒಟ್ಟಾರೆ ಬೇಡಿಕೆ ಹೆಚ್ಚಳಗೊಂಡು ಅರ್ಥ ವ್ಯವಸ್ಥೆ ಚೇತರಿಕೆ ಕಾಣಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ  ಸಂಘಗಳ ಒಕ್ಕೂಟದ (ಫಿಕ್ಕಿ) ಪ್ರಧಾನ ಕಾರ್ಯದರ್ಶಿ ಎ. ಡಿ. ಸಿಂಗ್‌  ಅಭಿಪ್ರಾಯಪಟ್ಟಿದ್ದಾರೆ.

ಆಹಾರ ಪೂರೈಕೆ ಪರಿಸ್ಥಿತಿಯನ್ನು ಸುಧಾರಿಸುವ ಮೂಲಕ ಹಣದುಬ್ಬರ ನಿಯಂತ್ರಿಸುವುದು ಈಗ ಕೇಂದ್ರ ಸರ್ಕಾರದ ಹೊಣೆಯಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ)  ಅಧ್ಯಕ್ಷ ಸುನಿಲ್‌ ಕನೊರಿಯಾ ಹೇಳಿದ್ದಾರೆ.

***
ಆರ್ಥಿಕ ಬೆಳವಣಿಗೆಗೆ ಉತ್ತೇಜನ  ನೀಡುವ ಮತ್ತು ಹಣದುಬ್ಬರದ ಬಗ್ಗೆ ಗಮನ ನೀಡುವಲ್ಲಿ ಆರ್‌ಬಿಐ ಸಮತೋಲನದ ನಿಲುವು ತಳೆದಿದೆ.
-ಶಶಿಕಾಂತ್‌ ದಾಸ್‌,
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT