ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳ ಬೆಕ್ಕಿನ ನಡಿಗೆ

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಬಣ್ಣ–ಬಣ್ಣದ ಲೈಟ್‌ಗಳಲ್ಲಿ ಝಗ ಝಗಿಸುವ  ರ್‍ಯಾಂಪ್ ಮೇಲೆ ಹೊಳೆಯುವ ಕಣ್ಣಿನ ಮಿಂಚುಳ್ಳಿ ಮಕ್ಕಳು ಕೈಕೈ ಹಿಡಿದು ಒಂದೊಂದೇ ಹೆಜ್ಜೆ ಹಾಕುತ್ತಿರಲು ಕುಳಿತವರಿಂದ ಕರತಾಡನ.

ಹಿಂದೆಂದೂ ವೇದಿಕೆ ಏರಿದ ಅನುಭವವೇ ಇಲ್ಲದ ಪುಟ್ಟ ಪುಟ್ಟ ಮಕ್ಕಳು ಆತ್ಮವಿಶ್ವಾಸದ ನಗೆ ಹೊತ್ತು, ಒಂದಿಷ್ಟೂ ಅಳುಕಿಲ್ಲದೆ ವೇದಿಕೆ ಮೇಲೆ ಹೆಜ್ಜೆ ಹಾಕುವಾಗ ಕುಳಿತಿದ್ದ ಸೆಲೆಬ್ರಿಟಿಗಳ ಮುಖದಲ್ಲೂ ಅಚ್ಚರಿಯ ಮುಗುಳ್ನಗೆ.

ಫ್ಯಾಷನ್ ಕೊರಿಯಾಗ್ರಾಫರ್ ಪ್ರಸಾದ್ ಬಿದಪ್ಪ ಅವರೊಂದಿಗೆ, ಸ್ಮೈಲ್ ಫೌಂಡೇಶನ್‌ನ ಹಾಗೂ ಸ್ಕಲರ್ಸ್ ಕಿಡ್ಸ್ ಸಹಭಾಗಿತ್ವದಲ್ಲಿ  ಒರಾಯನ್ ಮಾಲ್ ಆಯೋಜಿಸಿದ ‘ರ್‍ಯಾಂಪ್ ಫಾರ್ ಚಾಂಪ್ಸ್’ ಫ್ಯಾಷನ್ ಷೋನಲ್ಲಿ ಕಂಡುಬಂದ ದೃಶ್ಯವಿದು.

ಮೂಲ ಸೌಲಭ್ಯಗಳಿಂದ ವಂಚಿತರಾದ ಮಕ್ಕಳ ಶಿಕ್ಷಣಕ್ಕೆ ಸಹಾಯ ದೊರಕಿಸಿಕೊಡುವ ಉದ್ದೇಶದಿಂದ ನಡೆದ ‘ರ್‍ಯಾಂಪ್ ಫಾರ್ ಚಾಂಪ್ಸ್’ ಮಕ್ಕಳ ಫ್ಯಾಷನ್ ಷೋ ನೋಡುಗರ ಕಣ್ಮನ ಸೆಳೆಯಿತು.

ರ್‍ಯಾಂಪ್ ಫಾರ್ ಚಾಂಪ್ಸ್  7ನೇ ವಾರ್ಷಿಕ ಆವೃತ್ತಿಯಲ್ಲಿ ಸ್ಕಲರ್ಸ್ ಬ್ರಾಂಡ್‌ನ ಬೇಸಿಗೆಯ ಸಂಗ್ರಹದ ವಿನೂತನ ಉಡುಪುಗಳನ್ನು ಧರಿಸಿದ ಸ್ಮೈಲ್ ಫೌಂಡೇಶನ್ ಮಕ್ಕಳು, ವಿವಿಧ ಕ್ಷೇತ್ರಗಳ ಗಣ್ಯರ ಜೊತೆಗೆ ರ್‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಈ ಸಂಜೆಯ ಷೋ ಸ್ಟಾಪರ್ ಆಗಿ ಗಮನ ಸೆಳೆದರು. ಖ್ಯಾತ ಫ್ಯಾಷನ್ ಗುರು ಪ್ರಸಾದ್ ಬಿದಪ್ಪ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ನಿಕೋಲ್ ಫರಿಯಾ,ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್, ಕಮಲ್ ಬಾಲಿ (ವೋಲ್ವೋ ಇಂಡಿಯಾ), ಸ್ಮಿತಾ ಕಲ್ಲಪ್ಪ (ಸ್ಮೈಲ್ ಫೌಂಡೇಶನ್), ಚಲನಚಿತ್ರ ನಿರ್ಮಾಪಕ ಇಂದ್ರಜಿತ್ ಲಂಕೇಶ್, ನಟಿ ಸಂಜನಾ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಮಕ್ಕಳೊಂದಿಗೆ ವೇದಿಕೆ ಏರಿ ಸಂಭ್ರಮಿಸಿದರು.

ಸುಮಾರು 25 ಮಕ್ಕಳು ಹೊಸ ಸ್ಕಲರ್ಸ್ ಕಿಡ್ಸ್ ಬೇಸಿಗೆ ಸಂಗ್ರಹವನ್ನು ಪ್ರದರ್ಶಿಸುತ್ತ ರ್‍ಯಾಂಪ್ ಮೇಲೆ ನಡೆದಾಡಿದರು. ಟಿ–ಶರ್ಟ್, ಚಿನೊಸ್, ಡೆನಿಮ್, ಸ್ವೆಟರ್‌ಗಳು, ಜಾಕೆಟ್‌ಗಳು, ಟಾಪ್ಸ್, ಸ್ಕರ್ಟುಗಳು ಮತ್ತು ವಿವಿಧ ಉಡುಪುಗಳನ್ನು ಧರಿಸಿದ ಮಕ್ಕಳು ಮೋಹಕ ನಡಿಗೆಯಲ್ಲಿ ಮನ ಗೆದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಗೇಡ್ ಗ್ರೂಪ್ (ಕಮರ್ಷಿಯಲ್ ಆಂಡಿ ರಿಟೈಲ್)ನ ವಿಶಾಲ್ ಮಿರ್ಚಂದಾನಿ, ‘ಶಾಪಿಂಗ್ ಮಾಲ್‌ಗಳು ಸಮುದಾಯ ನಿರ್ಮಾಣಕ್ಕೆ ಒಂದು ವೇದಿಕೆ ಒದಗಿಸುವ ಜವಾಬ್ದಾರಿ ಹೊಂದಿವೆ ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಒರಾಯನ್ ಮಾಲ್‌ಗೆ ಪ್ರತಿ ತಿಂಗಳು ಸುಮಾರು 1.5 ದಶಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಸೌಲಭ್ಯ ವಂಚಿತರನ್ನು ಮೇಲೆತ್ತುವ ಕಾರ್ಯಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬ  ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ಕೆ ಕೈಜೋಡಿಸಿದ್ದೇವೆ’ ಎಂದರು. 

ಫೆಸ್ಟಿವಲ್‌ ಆಫ್ ಗಿವಿಂಗ್‌
ಒರಾಯನ್‌ ಮಾಲ್‌ ಹಾಗೂ ಸ್ಮೈಲ್‌ ಫೌಂಡೇಷನ್‌ ಆಶ್ರಯದಲ್ಲಿ ಒರಾಯನ್‌ ಮಾಲ್‌ನಲ್ಲಿ ಇದೇ 31ರವರೆಗೆ ‘ಒರಾಯನ್‌ ಫೆಸ್ಟಿವಲ್‌ ಆಫ್ ಗಿವಿಂಗ್‌’ ನಡೆಯುತ್ತಿದೆ.

ಗ್ರಾಹಕರು ಸುಸ್ಥಿತಿಯಲ್ಲಿರುವ ಬಟ್ಟೆಗಳು, ಪುಸ್ತಕಗಳು, ಆಟಿಕೆಗಳು, ಸಲಕರಣೆಗಳು ಹಾಗೂ ಚಪ್ಪಲಿಗಳನ್ನು ಮಾಲ್‌ನ ಡೊನೇಷನ್‌ ಕೌಂಟರ್‌ನಲ್ಲಿ ದಾನ ಮಾಡಬಹುದು. ಇದಕ್ಕೆ ಮಾಲ್‌ನ ಔಟ್‌ಲೆಟ್‌ಗಳಲ್ಲಿ ಖರೀದಿಗಾಗಿ ಡಿಸ್ಕೌಂಟ್ ವೋಚರ್‌ಗಳನ್ನು ಪಡೆಯಲಿದ್ದಾರೆ.
ಗ್ರಾಹಕರು ದಾನ ಮಾಡಿದ ವಸ್ತುಗಳನ್ನು ಸ್ಮೈಲ್‌ ಫೌಂಡೇಷನ್‌ಗೆ ನೀಡಲಾಗುವುದು. ಸಂಸ್ಥೆ ಇದನ್ನು ಬಡ ಮಕ್ಕಳಿಗೆ ವಿತರಿಸಲಿದೆ.

ಮಕ್ಕಳ ಅದ್ಭುತ ಪ್ರತಿಭೆ
ಬಡ ಮಕ್ಕಳಲ್ಲಿ ನಿಜಕ್ಕೂ ಅದ್ಭುತ ಪ್ರತಿಭೆ ಅಡಗಿರುತ್ತದೆ ಎನ್ನುವುದಕ್ಕೆ ಈ ಷೋ ಸಾಕ್ಷಿಯಾಯಿತು. ಸ್ಮೈಲ್ ಫೌಂಡೇಷನ್‌ನ ಮಕ್ಕಳನ್ನು ಪ್ರಾಯೋಗಿಕ ಬ್ರಾಂಡ್‌ಗಳ ಮಳಿಗೆಗೆ ಕರೆದೊಯ್ದು, ಅವರಿಗೆ ಇಷ್ಟವಾಗುವ ಬಟ್ಟೆಯನ್ನು ಧರಿಸುವಂತೆ ಹೇಳಲಾಯಿತು. ಈ ಬಟ್ಟೆಯನ್ನು ಅವರ ಬಳಿಯೇ ಇಟ್ಟುಕೊಳ್ಳಲು ಅವಕಾಶ ನೀಡಲಾಯಿತು. ಅವರ ಮುಖದಲ್ಲಿ ಅರಳಿದ ಖುಷಿಯನ್ನು ನೋಡಿ ನಿಜಕ್ಕೂ ಅಚ್ಚರಿಯಾಯಿತು. ಇಂತಹ ಕಾರ್ಯಕ್ಕೆ ಸೆಲೆಬ್ರಿಟಿಗಳು ಕೂಡ ಮುಂದೆ ಬಂದಿರವುದು ಸಂತೋಷದ ಸಂಗತಿ.
ಪ್ರಸಾದ್ ಬಿದಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT