ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಳಲ್ಲಿ ಕಂಗೊಳಿಸಿದ ಬಾಹುಬಲಿ

Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಮೈಸೂರು: ವಿಶಾಲವಾದ ಕರಿಕಲ್ಲಿನ ಬಾಹುಬಲಿ ಮೂರ್ತಿಯು ಒಮ್ಮೆ ಶ್ವೇತವರ್ಣದಲ್ಲಿ, ಮತ್ತೊಮ್ಮೆ ಕೆಂಪು ವರ್ಣ ಸೇರಿದಂತೆ ಹಲವು ವಿಭಿನ್ನ ಬಣ್ಣಗಳಲ್ಲಿ ಕಂಗೊಳಿಸಿತು. ಅರಿಸಿನ, ಚಂದನ ಸೇರಿದಂತೆ ಹಲವು ದ್ರವ್ಯಗಳ ಅಭಿಷೇಕದ ಮಧ್ಯೆ ಭಕ್ತರ ಜಯಘೋಷ ಮಾರ್ದನಿಸಿತು.

ಆಗಸದಲ್ಲಿ ಮೋಡಗಳು ಸಾಲುಗಟ್ಟಿ ಭಕ್ತವೃಂದಕ್ಕೆ ಬಿಸಿಲಿನ ಝಳ ತಟ್ಟದಂತೆ ಮಾಡಿದ್ದವು. ಆ ಸಾಲು ಮೋಡಗಳ ಮಧ್ಯೆಯೇ ಸೂರ್ಯನು ಇಣುಕುತ್ತಾ ಮಸ್ತಕಾಭಿಷೇಕದ ಸೊಬಗನ್ನು ಕಣ್ತುಂಬಿಕೊಂಡ.

ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿ ಕ್ಷೇತ್ರದ ಸುಮಾರು 150 ಅಡಿ ಎತ್ತರದ ‘ಶ್ರವಣಗುಡ್ಡ’ದ ಮೇಲಿನ 18 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಭಾನುವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಆರಂಭವಾದ 66ನೇ ಮಸ್ತಕಾಭಿಷೇಕ ಒಂದೂವರೆ ತಾಸು ನಡೆಯಿತು.

ಮೊದಲಿಗೆ 108 ಕಳಸಗಳಿಂದ ಅಭಿಷೇಕ ಕಾರ್ಯ ನೆರವೇರಿತು. ನಂತರ ಆರಂಭವಾದ ಕ್ಷೀರಾಭಿಷೇಕದಲ್ಲಿ ಶ್ಯಾಮವರ್ಣದ ವಿಗ್ರಹ ಶ್ವೇತವರ್ಣದಲ್ಲಿ ಹೊಳೆಯಿತು. ‘ಕಲ್ಪಚೂರ್ಣ’ದ (ಅಕ್ಕಿಹಿಟ್ಟು) ಅಭಿಷೇಕದಲ್ಲಿ ಶ್ವೇತವರ್ಣ ಮತ್ತಷ್ಟು ಹೆಚ್ಚಾಯಿತು. ಸ್ವಲ್ಪಹೊತ್ತಿನಲ್ಲೇ ನಡೆದ ‘ಕಷಾಯ’ದ ಅಭಿಷೇಕದಲ್ಲಿ ಮತ್ತೆ ವಿಗ್ರಹ ಗಾಢಶ್ಯಾಮ ವರ್ಣಕ್ಕೆ ತಿರುಗಿತು. ಇದೇ ರೀತಿಯಲ್ಲಿ ಶ್ರೀಗಂಧ, ಅರಿಸಿನ, ಅಷ್ಟಗಂಧ, ಕನಕ ಪುಷ್ಪವೃಷ್ಟಿ, ಎಳನೀರು, ಕಬ್ಬಿನಹಾಲಿನ ಅಭಿಷೇಕಗಳು ವಿಗ್ರಹಕ್ಕೆ ಬಗೆಬಗೆ ಚೆಲುವನ್ನು ತಂದವು.

ಶಿವಮೊಗ್ಗದ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧಿಪತಿ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಮಸ್ತಕಾಭಿಷೇಕಕ್ಕೆ ಶಾಸಕ ಎಚ್.ಪಿ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್, ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಡಾ.ಡಿ. ಪ್ರಭಾಮಂಡಲ್, ಗೌರವಾಧ್ಯಕ್ಷ ಜಿ.ಎ. ಸುರೇಶ್‌ಕುಮಾರ್, ಕಾರ್ಯದರ್ಶಿ ಡಾ.ಶಾಂತಕುಮಾರ್, ಮುಖಂಡರಾದ ಲೋಕಪಾಲ, ಪಾರ್ಶ್ವನಾಥ್ ಸೇರಿದಂತೆ ಸಹಸ್ರಾರು ಮಂದಿ ಸಾಕ್ಷಿಯಾದರು.

‘ಗೊಮ್ಮಟ ಜಾತ್ರೆ’ಗೆ ಕಾಲ್ನಡಿಗೆಯಲ್ಲಿ ಬಂದವರು:‘ಗೊಮ್ಮಟ ಜಾತ್ರೆ’ ಎಂದೇ ಸ್ಥಳೀಯರಿಂದ ಕರೆಸಿಕೊಳ್ಳುವ ಈ ಮಸ್ತಕಾಭಿಷೇಕಕ್ಕೆ ಕೇವಲ ಜೈನಧರ್ಮಿಯರಷ್ಟೇ ಅಲ್ಲ, ಅಕ್ಕಪಕ್ಕದ ಊರಿನ ಗ್ರಾಮಸ್ಥರೂ ಯಾವುದೇ ಜಾತಿ, ಭೇದ ಇಲ್ಲದೇ ಸೇರಿದ್ದರು. ಕಾಲ್ನಡಿಗೆಯಲ್ಲಿ ಬಂದ ಹಲವು ಭಕ್ತರು ಜನದಟ್ಟಣೆಯ ಕಾರಣದಿಂದ ಕಡಿದಾದ ಬೆಟ್ಟದ ಮೇಲೆ ಬರಲಾಗದೆ ಬೆಟ್ಟದ ಬುಡದಲ್ಲೇ ತಮಗೆ ತಿಳಿದಂತೆ ಹಣ್ಣು, ಕಾಯಿಗಳನ್ನು ಸಮರ್ಪಿಸಿ, ಭಕ್ತಿಭಾವ ಮೆರೆದರು. ಮೂರ್ತಿಯ ಬಲಭಾಗಕ್ಕೆ ಇದ್ದ 24 ಜೈನ ತೀರ್ಥಂಕರರ ಪಾದಗಳಿಗೆ ನಮಸ್ಕರಿಸುತ್ತಾ ಭಕ್ತಿಭಾವ ಮೆರೆದರು.

ಬೆಟ್ಟದೂರು, ವಡ್ಡರಹಳ್ಳಿ, ರತ್ನಹಳ್ಳಿ, ಮೂಡಲಕೊಪ್ಪಲು, ಹಳೇಬೀಡು, ಹೊಸಕೋಟೆ, ಗುಂಗ್ರಾಲ್ ಛತ್ರ, ಸಾಗರಕಟ್ಟೆ, ರಾಮನಹಳ್ಳಿ ಸೇರಿದಂತೆ ಮೊದಲಾದ ಹಳ್ಳಿಗಳ ಜನರು ತಂಡೋಪತಂಡವಾಗಿ ಜಾತ್ರೆಯಲ್ಲಿ ಸೇರಿದ್ದರು.

ಮಕ್ಕಳಿಗೆ ಪ್ರಿಯ: ನೀಳನಾಸಿಕ, ತಿದ್ದಿತೀಡಿದಂತಹ ಹುಬ್ಬುಗಳು, ಅರೆತೆರೆದ ಚಕ್ಷು, ಅಗಲವಾದ ಕಿವಿ, ಗುಂಗುರು ಕೂದಲು, ದೇಹಕ್ಕೆ ಸುತ್ತಿಕೊಂಡ ಬಳ್ಳಿ, ಸರ್ಪಗಳಿಂದ ಕಂಗೊಳಿಸುವ ಕಣಶಿಲೆಯ ಸುಮಾರು 18 ಅಡಿ ಎತ್ತರವಿರುವ ಏಕಶಿಲಾ ಮೂರ್ತಿ ಬಾಹುಬಲಿ ಇಲ್ಲಿನ ಮಕ್ಕಳಿಗೆ ಅತಿ ಪ್ರಿಯ ಎನಿಸಿದ್ದಾನೆ. ‘ಗೊಮ್ಮಟ ಜಾತ್ರೆ’ಗೆ ಹೋಗಲೇಬೇಕು ಎಂದು ಹಟ ಹಿಡಿದು ಬರುತ್ತಾರೆ ಎಂದು ಸ್ಥಳೀಕ ಮಲ್ಲಿಕಾರ್ಜುನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT