ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಬದುಕು ಬಿಚ್ಚಿಟ್ಟ ರಂಗನಾಯಕಿ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೂರು ತಲೆಮಾರುಗಳಿಂದ ಕುಟುಂಬಕ್ಕೆ ಅಂಟಿದ್ದ ದೇವದಾಸಿ ಪದ್ಧತಿಯಂಥ ಸಾಮಾಜಿಕ ಸಮಸ್ಯೆಯ ವಿರುದ್ಧ ದನಿ ಎತ್ತಿ, ಒಂಬತ್ತನೇ ತರಗತಿಯಲ್ಲಿರುವಾಗಲೇ ಬಣ್ಣ ಹಚ್ಚಿ ರಂಗದ ಮೇಲೆ ಮಿಂಚಿದ ರಂಗ ನಟಿ ಕೂಡ್ಲಿಗಿಯ ಬಿ. ಶಿವಕುಮಾರಿ.

ಮೂರು ದಶಕಕ್ಕೂ ಹೆಚ್ಚು ಸಮಯ ನಟನೆಯನ್ನೇ ಬದುಕನ್ನಾಗಿಸಿಕೊಂಡವರು. ಬಳ್ಳಾರಿ, ರಾಯಚೂರು, ಚಿತ್ರದುರ್ಗ ಸೇರಿದಂತೆ ಐದಾರು ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ರಂಗನಟಿಯಾಗಿ ನಟಿಸಿ ಹೆಸರಾದವರು ಶಿವಕುಮಾರಿ.

ಈ ಅಭಿನೇತ್ರಿಯು ‘ರಂಗಭೂಮಿ’ಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿದ ರಾಜ್ಯ ಸರ್ಕಾರ 59ನೇ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಕಳೆದ 35 ವರ್ಷಗಳಲ್ಲಿ ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ ಸೇರಿದಂತೆ 5 ಸಾವಿರಕ್ಕೂ ಅಧಿಕ ನಾಟಕ ಪ್ರದರ್ಶನಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. ಆದರೆ ಈ ನಟಿಯ ತೆರೆಯ ಹಿಂದಿನ ಬದುಕು ನಾಟಕದ ಕೆಲವು ಪಾತ್ರಗಳಂತೆ ಕಣ್ಣೀರಿನ ಕೋಡಿಯಾಗಿತ್ತು.
ಓದುವುದರಲ್ಲಿ ಅತೀವ ಆಸಕ್ತಿ ಇದ್ದ ಶಿವಕುಮಾರಿ ಅವರ ವಿದ್ಯಾಭ್ಯಾಸಕ್ಕೆ ಮನೆಯ ಬಡತನವೇ ಅಡ್ಡಿಯಾಗಿತ್ತು. 10 ಮಂದಿ ಸದಸ್ಯರ ತುಂಬು ಕುಟುಂಬ. ಕಿತ್ತು ತಿನ್ನುವ ಬಡತನ. 9ನೇ ತರಗತಿ ಓದುತ್ತಿರುವಾಗ ಸಮೀಪದ ಹಳ್ಳಿಯಲ್ಲಿ ‘ಪ್ರೇಮ ಪಂಜರ’ ನಾಟಕದಲ್ಲಿ ಅಭಿನಯಿಸಲು ಇವರಿಗೆ ಅವಕಾಶವೂ ಲಭ್ಯವಾಯಿತು. ಅಲ್ಪ ಸಂಭಾವನೆ ಬಡನಕ್ಕೆ ಆಸರೆಯಾಯಿತು. ಮುಂದೆ ನಾಟಕವನ್ನೇ ಆಶ್ರಯಿಸುವುದು ಅನಿವಾರ್ಯವಾಯಿತು.

ಶಿವಕುಮಾರಿ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮಯದಲ್ಲಿ ಬಳ್ಳಾರಿ ಜಿಲ್ಲೆಯ ತೆಲಗಿ ಸಮೀಪದ ಹಳ್ಳಿಯೊಂದರಲ್ಲಿ ನಾಟಕ ಅಭಿನಯಿಸಲು ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ರಾತ್ರಿಯಿಡೀ ನಾಟಕದಲ್ಲಿ ಅಭಿನಯಿಸಿ, ಮರುದಿನ ಎಸ್ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆ ಬರೆದರು. ಆದರೆ ಈ ವಿಷಯದಲ್ಲಿ ಅನುತ್ತೀರ್ಣರಾದರು (ಮರು ಪರೀಕ್ಷೆಯಲ್ಲಿ ಉತ್ತೀರ್ಣರಾದರು).

ವಿದ್ಯಾಭ್ಯಾಸ ಮುಂದುವರಿಸುವ ಅವಕಾಶ ಅವರಿಗೆ ಇರಲಿಲ್ಲ. ಕುಟುಂಬದ ಬಹುತೇಕ ಹೊರೆಯನ್ನು ಶಿವಕುಮಾರಿ ಹೊರಬೇಕಾಯಿತು. ನಾಟಕದಲ್ಲಿ ದುಡಿದು ಇಬ್ಬರು ತಮ್ಮಂದಿರು, ಒಬ್ಬ ತಂಗಿಯ ಮದುವೆ ಮಾಡಿದರು.

ರಂಗಭೂಮಿ ಅಭಿನೇತ್ರಿಯರ ಸಾಲಿನಲ್ಲಿ ಕೂಡ್ಲಿಗಿಯ ಬಿ.ಶಿವಕುಮಾರಿ ಹೆಸರು ಪ್ರಮುಖವಾಗಿದೆ. ತಮ್ಮದೇ ಆದ ವಿಶಿಷ್ಟ ಶೈಲಿಯ ಅಭಿನಯ ಮತ್ತು ನೃತ್ಯಗಳಿಂದ ಅಸಂಖ್ಯಾತ ಕಲಾರಾಧಕರ ಮನ ಸೂರೆಗೊಂಡಿರುವ ಈ ನಟಿಯು ಭಕ್ತಿ ಪ್ರಧಾನ, ಪೌರಾಣಿಕ, ಸಾಮಾಜಿಕ ನಾಟಕಗಳ ಅಭಿನಯದ ಮೂಲಕ ಪ್ರಖ್ಯಾತರಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. ರಕ್ತರಾತ್ರಿ, ಕುರುಕ್ಷೇತ್ರ, ವೀರ ಅಭಿಮನ್ಯು, ಹೇಮರೆಡ್ಡಿ ಮಲ್ಲಮ್ಮ, ಗುರು ತಿಪ್ಪೇರುದ್ರಸ್ವಾಮಿ ಮಹಾತ್ಮೆ, ಗವಿಸಿದ್ದೇಶ್ವರ ಮಹಾತ್ಮೆ, ಗುಡ್ಡಮ್ಮ ದೇವಿ ಮಹಾತ್ಮೆ, ಛತ್ರಪತಿ ಶಿವಾಜಿ, ಆಶಾಲತಾ, ಮುಂತಾದವು ಇವರು ಅಭಿನಯಿಸಿದ ಜನಪ್ರಿಯ ನಾಟಕಗಳು.

ಕಹಿ ನೆನಪು
‘ಎಂಬತ್ತರ ದಶಕವದು. ಸಾಮಾಜಿಕ ನಾಟಕಗಳನ್ನು ವಾರಗಟ್ಟಲೇ ಹಳ್ಳಿಗಳಲ್ಲಿ ಪ್ರದರ್ಶನ ಮಾಡಲಾಗುತ್ತಿತ್ತು. ಶೇ 90ರಷ್ಟು ನಾಟಕಗಳು ಹಳ್ಳಿಗಳಲ್ಲೇ ಪ್ರದರ್ಶನ ಕಾಣುತ್ತಿದ್ದವು. ನಾನು 1982ರಲ್ಲಿ ರಂಗದ ಮೇಲೆ ಕಾಣಿಸಿಕೊಂಡೆ. ಜಗಳೂರು ಸಮೀಪದ ಒಂದು ಹಳ್ಳಿಯಲ್ಲಿ ಸತತ ಎರಡು ದಿನ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಮೊದಲ ದಿನ ಆಶಾಲತಾ ನಾಟಕ ಆಡಿದೆವು. ನಾಟಕ ಮುಗಿದು ಗಂಟೆಯಾದರೂ ಆಯೋಜಕರು ಊಟ ಕೊಡಲಿಲ್ಲ. ಅಭಿನಯಿಸಿ ಸುಸ್ತಾಗಿದ್ದ ನನಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ವೇದಿಕೆ ಸಿದ್ಧಪಡಿಸುವ ಕಲಾವಿದರು, ವಾದ್ಯಗಾರರು ಎಲ್ಲರೂ ಉಪವಾಸ. ಆಯೋಜಕರನ್ನು ಕೇಳಿದರೆ ‘ನಾವು  ಊಟ ಕೊಡುತ್ತೇವೆ ಎಂದು ಹೇಳಿಲ್ಲ’ ಎಂದರು.

ಕಿರಿಯ ಕಲಾವಿದರು ಸೇರಿದಂತೆ ಎಲ್ಲಾ ಕಲಾವಿದರು ಸಿಟ್ಟಿಗೆದ್ದು ಅಲ್ಲಿಂದ ಹೊರಟೆವು. ಸತತ ಎಂಟು ದಿನಗಳಿಂದ ನಾಟಕಗಳಲ್ಲಿ ಅಭಿನಯಿಸಿದ್ದ ನಾವೂ ಬೇಸತ್ತಿದ್ದೆವು. ಅದೇ ಊರಿನಲ್ಲಿ ಮರುದಿನ ಮತ್ತೊಂದು ನಾಟಕದಲ್ಲಿ ಅಭಿನಯಿಸಬೇಕಿತ್ತು. ಕಲಾವಿದರೆಲ್ಲಾ ಸೇರಿ ನಾಳೆ ನಾಟಕಕ್ಕೆ ಬಣ್ಣ ಹಚ್ಚುವುದಿಲ್ಲವೆಂದು ಅಲ್ಲಿಂದ ಕಾಲು ಕಿತ್ತೆವು. ಆಯೋಜಕರು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಅದೇನಾಯಿತೋ ಮತ್ತೆ ನಮ್ಮೂರಿಗೆ ಬಂದ ಆಯೋಜಕರು ನಾಟಕ ಆಡುವಂತೆ ಕೇಳಿಕೊಂಡರು. ಆದರೆ ನಾವು ಮಾತ್ರ ನಮ್ಮ ನಿಲುವು ಬದಲಿಸಲಿಲ್ಲ. ಈ ಘಟನೆಯಾದ ಬಹಳ ದಿನಗಳ ನಂತರ ಅದೇ ಊರಿನ ಪಕ್ಕದ ಹಳ್ಳಿಯಲ್ಲಿ ನಾಟಕವಾಡಲು ಸ್ನೇಹಿತೆಯೊಂದಿಗೆ ಬಸ್ಸಿನಲ್ಲಿ ಹೋಗುವಾಗ ಆ ಊರಿನವರೊಬ್ಬರು ನನ್ನನ್ನು ಗುರುತಿಸಿದರು. ಹಳೆಯ ಸಿಟ್ಟನ್ನು ತೀರಿಸಿಕೊಳ್ಳಲು ಬ್ಯಾಗ್‌ ಕಿತ್ತುಕೊಂಡು ಊರಿನ ಮನೆಯೊಂದರಲ್ಲಿ ಕೂಡಿಹಾಕಿದರು. ಕೊನೆಗೆ ಪಂಚಾಯ್ತಿ ಕಟ್ಟೆಗೂ ಕರೆತಂದರು. ಅಷ್ಟರಲ್ಲಾಗಲೇ ನಾಟಕ ಆಯೋಜಿಸಿದ್ದ ಊರಿನವರಿಗೆ ವಿಷಯ ತಿಳಿದು ನಾನಿದ್ದ ಜಾಗಕ್ಕೆ ಬಂದು ನನ್ನನ್ನು ಕರೆದುಕೊಂಡು ಹೋದರು. ಆದರೆ ನಾವು ಹೋಗುವಾಗ ರಾತ್ರಿ ತಡವಾದ್ದರಿಂದ ಅಲ್ಲಿಯೂ ನಾಟಕ ಪ್ರದರ್ಶನ ನಿಂತಿತು. ಆ ಘಟನೆಯಿಂದ ಬಹಳ ನೋವಾಯಿತು. ನಾನು ಇನ್ಮುಂದೆ ನಟಿಸುವುದಿಲ್ಲವೆಂದಾಗ, ಮನೆಯವರು ಧೈರ್ಯ ತುಂಬಿದರು. ಅಂದು ಆದ ಕೆಟ್ಟ ಘಟನೆ, ಮುಖ್ಯಮಂತ್ರಿಗಳಿಂದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವಾಗ ಮರೆಯಾಗಿತ್ತು’ ಎನ್ನುತ್ತಾರೆ ನಟಿ ಶಿವಕುಮಾರಿ.

‘ಮೂರು ತಲೆಮಾರುಗಳಿಂದ ನಮ್ಮ ಕುಟುಂಬಕ್ಕೆ ಅಂಟಿದ್ದ ದೇವದಾಸಿ ಪದ್ಧತಿ ನನ್ನಿಂದ ಕೊನೆಗೊಂಡಿತು. ಕೂಲಿ ಮಾಡಿಯಾದರೂ ಜೀವನ ಸಾಗಿಸೋಣ, ಇಂಥ ಅನಿಷ್ಟ ಪದ್ಧತಿ ಬೇಡವೆಂದು ಅಮ್ಮನಿಗೂ ತಿಳಿಹೇಳಿದೆ. ಸಾಮಾಜಿಕ ಪಿಡುಗಿನ ಕಳಂಕದಿಂದ ದೂರಾದೆ. ರಂಗನಟಿಯಾಗಿ ಬದುಕು ಕಟ್ಟಿಕೊಂಡೆ.

ಹಳ್ಳಿಗಳಲ್ಲಿ ನಟಿಸುವಾಗ ಕೆಲವು ಗಂಡಸರು ನಮ್ಮನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಆದರೆ ನಮ್ಮ ನಡತೆ ಸರಿ ಇದ್ದರೆ ಯಾರು ಏನೂ ಮಾಡುವುದಿಲ್ಲ. ನಮ್ಮ ವೃತ್ತಿ ಬಗೆಗಿನ ಗೌರವವೂ ನಮ್ಮನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ. ಇಷ್ಟೇ ಸಂಭಾವನೆ ಕೊಡಿ ಎಂದು ಎಂದಿಗೂ ಬೇಡಿಕೆ ಇಟ್ಟಿಲ್ಲ. ನವೆಂಬರ್‌ನಿಂದ ಮೇ ತಿಂಗಳವರೆಗೆ ನಾಟಕಗಳ ಪ್ರದರ್ಶನಗಳಿವೆ. ತಿಂಗಳಿಗೆ 25 ನಾಟಕಗಳಿಗಾದರೂ ಬಣ್ಣ ಹಚ್ಚುತ್ತೇನೆ. ಚಿಕ್ಕ ವಯಸ್ಸಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರಿಂದ ಕೆಲವು ಹಿರಿಯ ನಟರಿಗೆ ಸಹಿಸಲು ಆಗಿಲ್ಲ. ಸಾಧನೆಗೆ ವಯಸ್ಸಿನ ಮಿತಿ ಇಲ್ಲವಲ್ಲ, ಕಿರಿಯ ಕಲಾವಿದೆಗೆ ಇಷ್ಟು ದೊಡ್ಡ ಗೌರವ ಸಿಕ್ಕಿದೆ ಎಂದು ಅಸೂಯೆ ಪಟ್ಟುಕೊಂಡವರೂ ಇದ್ದಾರೆ. ಆದರೆ ಇಂಥವರ ಕಡೆ ಗಮನ ಹರಿಸದ ನಾನು ನಟನೆಯನ್ನೇ ಬದುಕಾಗಿಸಿಕೊಂಡಿದ್ದೇನೆ. ಇಂದಿಗೂ ಕೆಲವೊಂದು ಹಳ್ಳಿಗಳಲ್ಲಿ 25 ವರ್ಷಗಳಿಂದ ನಾಟಕ ಪ್ರದರ್ಶನ ಮಾಡಿದ ಉದಾಹರಣೆಗಳಿವೆ.

ರಾಜ್ಯೋತ್ಸವ ಪ್ರಶಸ್ತಿ ಬಂದ ನಂತರ ನಟನೆಯ ಅವಕಾಶಗಳು ಹೆಚ್ಚು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಪ್ರಶಸ್ತಿಗಳು ಬಂದು ಮರೆಯಾಗುತ್ತವೆ. ನಟನೆಯೇ ಶಾಶ್ವತವಾಗಿ ಉಳಿಯುವುದು’ ಎನ್ನುತ್ತಾರೆ ಶಿವಕುಮಾರಿ.
ಪೂರಕ ಮಾಹಿತಿ: ಗುರುಪ್ರಸಾದ್‌ ಎಸ್‌.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT