ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ... ಒಲವಿನ ಬಣ್ಣ...

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬಹುದಿನಗಳ ನಂತರ ಶಾಪಿಂಗ್ ಮಾಲ್‌ನಲ್ಲಿ ನನ್ನ ಬಾಲ್ಯದ ಗೆಳತಿ, ಒಪ್ಪವಾಗಿ ಜೋಡಿಸಿದ್ದ ಕಪ್ಪು ಬಣ್ಣದ ಕುರ್ತಾಗಳನ್ನು ಲಗುಬಗೆಯಿಂದ ಆರಿಸುತ್ತಿದ್ದುದನ್ನು ಕಂಡೆ. ‘ಇದೇನೇ... ಬ್ಲ್ಯಾಕ್ ಕಲರ್ ಹುಡುಕ್ತಿದೀಯಾ... ಬೇರೆ ಇನ್ಯಾವುದೂ ಸಿಗ್ಲಿಲ್ವೇನೆ ನಿಂಗೆ’ ಎಂದು ಅವಳನ್ನು ಕೇಳಿದಾಗ ಅವಳು ತನ್ನ ಗೋಳು ಹೇಳ್ಕೊಳೋದಕ್ಕೆ ಶುರು ಮಾಡಿದಳು.

‘ನಮ್‌ ಕಾಲೇಜ್‌ನಲ್ಲಿ ವರ್ಷದಲ್ಲಿ ಒಂದು ದಿನ ಎಲ್ರೂ ಒಂದೇ ಬಣ್ಣದ ಡ್ರೆಸ್ ಹಾಕಿ ಬರ್ಬೇಕು. ಈ ಸಲ ಬ್ಲ್ಯಾಕ್ ಕಲರ್ ಅಂತ ಹೇಳಿದಾರೆ...’ ಅಂದ್ಲು. ‘ಓ ಹಾಗೋ ಸಮಾಚಾರ’ ಅಂತಂದು ನಮ್ಮ ಎಸ್.ಡಿ.ಎಮ್. ಆಯುರ್ವೇದ ಕಾಲೇಜ್‌ನಲ್ಲೂ ಇಂಥದೊಂದು ಪ್ರಯೋಗ ಮಾಡೋದಿಕ್ಕೆ ಹೇಳ್ಬೋದು ಅಂತ ಯೋಚಿಸಿದೆ.

ಮರುದಿನ ಕ್ಲಾಸ್‌ಗೆ ಹೋದಾಗ, ಕಾಕತಾಳೀಯವೋ ಎಂಬಂತೆ ಕ್ಲಾಸ್‌ನಲ್ಲಿ ಕಲರ್ಸ್‌ ವೀಕ್ ಅನ್ನೋ ಶಬ್ದ ನನ್ನ ಕಿವಿಗೆ ಬಿತ್ತು.   ಆ ಒಂದು ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ನೀಲಿ, ಕಪ್ಪು, ಗುಲಾಬಿ, ನೇರಳೆ, ಕೆಂಪು ಹೀಗೆ ಐದು ದಿನಗಳಿಗೆ ಐದು ಬಣ್ಣಗಳು... ಎಲ್ರೂ ಇದನ್ನು ಪಾಲಿಸೋದಿಕ್ಕೋಸ್ಕರ ಯಾವ ಕ್ಲಾಸ್‌ನಲ್ಲಿ ಅತಿ ಹೆಚ್ಚು ಮಂದಿ ಇದನ್ನು ಪಾಲಿಸ್ತಾರೋ ಅವ್ರಿಗೆ ಒಳ್ಳೆಯ ಬಹುಮಾನ ಕೊಡೋದು ಅಂತ ನಿರ್ಧಾರನೂ ಆಯ್ತು! 

ಪ್ರತಿದಿನ ಇಬ್ಬರು ಉಪನ್ಯಾಸಕರನ್ನು ಅಂಕ ಹಾಕೋದಕ್ಕೆ ಆಹ್ವಾನ ಮಾಡಿದ್ವಿ. ಎಲ್ರೂ ತುಂಬಾ ಸಂಭ್ರಮದಿಂದ ಭಾಗವಹಿಸಿದ್ರು. ಡ್ರೆಸ್‌ಗೆ ಸರಿಯಾಗಿ ಮ್ಯಾಚಿಂಗ್ ಬಳೆ, ಸರ, ಕ್ಲಿಪ್, ನೈಲ್ ಪಾಲಿಶ್... ಹೀಗೆ ತಮ್ಮನ್ನಷ್ಟೇ ಅಲ್ಲದೇ, ಆಯಾಯ ದಿನಗಳಲ್ಲಿ ಕ್ಲಾಸ್‌ನೂ ಅದೇ ಬಣ್ಣದ ಶಾಲು, ರಿಬ್ಬನ್‌ಗಳಲ್ಲಿ ಅಲಂಕಾರ ಮಾಡಿದ್ದು ಉಪನ್ಯಾಸಕರಿಗೆ ಅಚ್ಚರಿ ಮೂಡಿಸಿತ್ತು. ವಿಶೇಷವೆಂದರೆ,  ಹೆಚ್ಚಾಗಿ ಬಂಕ್ ಮಾಡೋ ಹುಡುಗ್ರೂ, ಕ್ಲಾಸ್‌ಗೆ ಬಹುಮಾನ ಮಿಸ್ ಆಗಬಾರದು ಅಂತ ಆ ಎಲ್ಲಾ ದಿನಗಳಲ್ಲೂ ಹಾಜರ್!

ಆಯಾಯ ದಿನದ ಬಣ್ಣಗಳ ಬಟ್ಟೆಯ ನನ್ನ ಹುಡುಕಾಟದ ಪರದಾಟವನ್ನು ನೋಡಿ, ನನ್ನಮ್ಮ ಕೇಳೇ ಬಿಟ್ಳು... ‘ಯಾವ ಬಣ್ಣವಾದ್ರೆ ಏನೇ... ಅವುಗಳಲ್ಲೇನಿದೆ ವಿಶೇಷತೆ?’ ಎಂದು. ಆ ಮಾತನ್ನು ಕೇಳಿ ಕೈಕಟ್ಟಿ ಕೂರಲು ಮನಸಾಗದೇ, ಅವುಗಳ ಬಗ್ಗೆ ತಿಳಿಯುವ ಯತ್ನ ಮಾಡಿದೆ. 

ಮನಸ್ಸಿನ ಶಾಂತತೆಗೆ ಅನುಕೂಲಕರವಾದ ನೀಲಿ, ಗುರಿ ತಲುಪಲು ಪ್ರಚೋದಿಸುವ ನೇರಳೆ,  ವ್ಯಕ್ತಿಯ ಉತ್ಸಾಹವನ್ನು ಹೆಚ್ಚಿಸುವ ಕೆಂಪು ಹೀಗೆ ಪ್ರತಿಯೊಂದು ವರ್ಣವೂ ಅದರದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ ಎಂದು ತಿಳಿದದ್ದೇ ಆಗ!   ನ್ಯಾಚುರೋಪತಿಯ ಅನೇಕ ಚಿಕಿತ್ಸಾ ವಿಧಾನಗಳಲ್ಲಿ ‘ಕ್ರೋಮೋ ಥೆರಪಿ’ಯೂ ಒಂದು. ಅದರಲ್ಲಿ ನಾವು ಧರಿಸುವ ಉಡುಪಿನಿಂದ ಹಿಡಿದು ತಿನ್ನುವ ಆಹಾರದವರೆಗೆ ಸೂಕ್ತವಾದ ವರ್ಣಗಳನ್ನು ಉಪಯೋಗಿಸುವುದು ಒಂದು ವಿಧಾನದ ಚಿಕಿತ್ಸೆ.

ಅನೇಕ ಭಾಷೆ, ಜನಾಂಗ, ಸಂಸ್ಕೃತಿಯನ್ನು ಹೊಂದಿರುವ ದೇಶ ನಮ್ಮದು. ಈ ಸಂಸ್ಕೃತಿಗಳ ಸಮಾಗಮಕ್ಕೋಸ್ಕರ, ವಾರಾಂತ್ಯ ಶನಿವಾರದಂದು ಸಂಸ್ಕೃತಿ-ಸಂಭ್ರಮ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಇಟ್ಟು, ಆ ದಿನದಂದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆಗಳ ಧಾರಣೆ ಹಾಗೂ ಅವುಗಳ ಪ್ರದರ್ಶನಕ್ಕೆ ಪ್ರತೀ ಕ್ಲಾಸಿಗೂ ಹತ್ತು ನಿಮಿಷಗಳ ಅವಕಾಶ!  ಅನೇಕ ರಾಜ್ಯಗಳ ವೇಷಭೂಷಣಗಳನ್ನು ಧರಿಸಿ, ವೇದಿಕೆಯ ಮೇಲೆ ಒಂದೊಂದೇ ತಂಡ ಕಾಲಿಡುವಾಗ ಕಾಶ್ಮೀರಿ, ರಾಜಸ್ಥಾನಿ, ಗುಜರಾತಿ ಹೀಗೆ ನಾನಾ ರಾಜ್ಯಗಳ ಸಂಸ್ಕೃತಿಯ ಪರಿಚಯ!

ಇಂದು ಆಧುನಿಕತೆಯ ಸೋಗಿನಿಂದ ಸಂಸ್ಕೃತಿ-ಸಂಸ್ಕಾರಗಳು ಕಣ್ಮರೆಯಾಗುತ್ತಿದ್ದು,  ಅವುಗಳನ್ನು ಪರಿಚಯಿಸುವ, ಆಚರಣೆಗೆ ತರುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಇನ್ನೊಂದು ತಂಡದಿಂದ ಹುಟ್ಟಿನಿಂದ ಮರಣದವರೆಗೆ ನಡೆಸುವ ಷೋಡಶ ಸಂಸ್ಕಾರಗಳನ್ನು ಬಿಂಬಿಸುವ ಪ್ರದರ್ಶನ ಪ್ರಶಂಸನಾರ್ಹವಾಗಿತ್ತು.

ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಹ ಹಿಂದು, ಇಸ್ಲಾಂ, ಕ್ರೈಸ್ತ ಧರ್ಮಗಳ ಸಮಾಗಮದ ದೃಶ್ಯಾವಳಿಗಳು, ‘ನಾವೆಲ್ಲಾ ಒಂದು’ ಎಂಬ ಘೋಷಣೆಗಳು ಭಾರತದ ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ದೇಶಪ್ರೇಮವನ್ನು ಚಿಗುರಿಸಿದ್ದೂ ನಿಜ.

ಪಠ್ಯ ಪುಸ್ತಕಗಳ ಕಲಿಕೆಯ ಜೊತೆಗೆ, ಇಂಥದೊಂದು ವಿಶಿಷ್ಟ ಪ್ರಯೋಗವನ್ನು ಆಚರಿಸಿ ಸಂಭ್ರಮಿಸಿದ್ದು, ಆ ಒಂದು ವಾರದ ಎಲ್ಲಾ ಕ್ಷಣಗಳು ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಉಳಿಯುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT