ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಚಿಕಿತ್ಸೆ ಗೊತ್ತೆ?

Last Updated 22 ಏಪ್ರಿಲ್ 2015, 10:06 IST
ಅಕ್ಷರ ಗಾತ್ರ

ಬಣ್ಣಗಳಿಗೇಕೆ ಇಷ್ಟೊಂದು ಪ್ರಾಶಸ್ತ್ಯ?  ಬಣ್ಣಬಣ್ಣದ ಹೂಗಳು, ಬುಗ್ಗೆ ಮುಂತಾದವುಗಳಿಂದ ಅಲಂಕರಿಸಲ್ಪಟ್ಟ ಮದುವೆ ಮಂಟಪ, ರಸ್ತೆ ಬದಿಯಲ್ಲಿ ಮಾರುವ ಬಣ್ಣದ ಹೂಗಳ  ರಾಶಿ, ವರ್ಣಮಯ ಹಣ್ಣಿನ ಗುಡ್ಡೆಗಳು, ಹಾರುವ ಬಣ್ಣದ  ಹಕ್ಕಿಗಳು- ಇತ್ಯಾದಿ ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಅನನ್ಯ. ಬಣ್ಣಗಳು ಮಾನವನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮಕಾರಿ ಪ್ರಭಾವ ಬೀರುವುದರಿಂದಲೇ ‘ಬಣ್ಣ ಚಿಕಿತ್ಸೆ’ ಜನಪ್ರಿಯವಾಗುತ್ತಿದೆ.

ಒಂದು ಕ್ಷಣ ಯೋಚಿಸಿ, ಬಣ್ಣಗಳೇ ಇಲ್ಲದ ಒಂದು ಪ್ರಪಂಚ...!  ಆಗದು... ಸಾಧ್ಯವೇ ಆಗದು.. ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿದ ಮದುವೆ ಮಂಟಪ, ರಸ್ತೆ ಬದಿಯಲ್ಲಿ ಮಾರುವ ಬಣ್ಣದ ಹೂಗಳ ರಾಶಿ, ವರ್ಣಮಯ ಹಣ್ಣಿನ ಗುಡ್ಡೆಗಳು, ಹಾರುವ ಬಣ್ಣದ  ಹಕ್ಕಿಗಳು- ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಅನನ್ಯ. ಅದರಿಂದಲೇ ಬಣ್ಣ ಚಿಕಿತ್ಸೆ ಜನಪ್ರಿಯವಾಗುತ್ತಿದೆ.

ಏನಿದು ಬಣ್ಣಗಳ ಚಿಕಿತ್ಸೆ?
ರೋಗ ಬಾರದಂತೆ ಕಾಯುವ ಮತ್ತು ಬಂದ ರೋಗವನ್ನು ನಿವಾರಿಸುವ ಅಥವಾ ನಿಯಂತ್ರಿಸುವ ಶಕ್ತಿ ಬಣ್ಣಗಳಿಗಿದೆ ಎಂದು ಕ್ರಿ.ಶ.980–1037ರಲ್ಲಿ ದಿ. ಕ್ಯಾನತ್ ಆಫ್ ಮೆಡಿಲನ್ ಕಂಡು ಹಿಡಿದರು. ಒಂದು ಬಣ್ಣದ ನಕ್ಷೆ ಸಿದ್ಧಪಡಿಸಿದ ಅವರು, ನೀಲಿ ಮತ್ತು ಬಿಳಿ ಬಣ್ಣ ತಂಪು ನೀಡುವುದು, ಹಳದಿ ಬಣ್ಣ ಸ್ನಾಯು ಸೆಳೆತಕ್ಕೆ ಔಷಧ ಎಂದು ಮುಂತಾಗಿ ಪ್ರತಿಪಾದಿಸಿದರು. ಅಮೆರಿಕದ ಜನರಲ್ ಆಗಸ್ಟಸ್ (18011894)  1876ರಲ್ಲಿ ಪ್ರಕಟವಾದ ತಮ್ಮ ಪುಸ್ತಕದಲ್ಲಿ ಆಕಾಶ ನೀಲಿ ಬಣ್ಣ  ಸೂರ್ಯನ ‘ಬ್ಲೂ ರೇಸ್’ ಜಾನುವಾರು ಮತ್ತು ಮಾನವರಲ್ಲಿನ ರೋಗಗಳನ್ನು ಗುಣಪಡಿಸಲು ಸಹಾಯವಾಗುತ್ತದೆ ಎಂದರು.

1953ರಲ್ಲಿ ಭಾರತೀಯ ಸಂಜಾತ ಅಮೆರಿಕನ್ ಪ್ರಜೆ, ವಿಜ್ಞಾನಿ ದಿನ್‌ಶನ್ ಬಣ್ಣ ಚಿಕಿತ್ಸೆಯ ಮಹತ್ವ ತಿಳಿಸಿದರು. ಬಣ್ಣದ ಕಿರಣಗಳು ಜೀವಿಗಳಿಗೆ  ಚಿಕಿತ್ಸೆಯನ್ನು ನೀಡುತ್ತವೆ. ಕಿರಣಗಳು ದೇಹವನ್ನು ಸ್ಪರ್ಶಿಸಿದಾಗ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ನಮ್ಮ ದೇಹದಲ್ಲಿ ನೆತ್ತಿಯಿಂದ ಬೆನ್ನು ಹುರಿಯ ಅಂತ್ಯದವರೆಗೆ ಏಳು ಚಕ್ರಗಳು ಗೋಚರಿಸುತ್ತವೆ.  ಇವು ಚೈತನ್ಯ ವಾಹಕಗಳಾಗಿದ್ದು, ಪ್ರಕೃತಿಯಲ್ಲಿನ ತರಂಗ ಭಾವನೆಗಳನ್ನು ಸಂಗ್ರಹಿಸಿ ದೇಹದ ನಾಡಿ, ಧಮನಿ, ಶಿರಸ್ಸುಗೆ ತಲುಪಿಸುತ್ತದೆ.

ಶಕ್ತಿಕೇಂದ್ರಗಳಾಗಿರುವ ಈ ಚಕ್ರಗಳು ದೈಹಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಹಯೋಗ ಹೊಂದಿರುವುದಲ್ಲದೆ ನಿರ್ದಿಷ್ಟ ಚಕ್ರಗಳು ನಿರ್ದಿಷ್ಟ ಬಣ್ಣವನ್ನೂ ಪಡೆದಿವೆ.  ಹೊರಗಿನಿಂದ ನಮ್ಮ ಕಣ್ಣುಗಳಿಗೆ ಗೋಚರಿಸುವ ಬಣ್ಣಗಳು ಈ ನಿರ್ದಿಷ್ಟ ಚಕ್ರಗಳ ಮೇಲೆ ನೇರ ಪರಿಣಾಮ ಬೀರಿ ನಮ್ಮ ದೇಹ ಮನಸ್ಸುಗಳ ಒಟ್ಟು ಆರೋಗ್ಯ ರಕ್ಷಣೆಗೆ ಕಾರಣವಾಗುತ್ತದೆ. ಇದುವೇ  ಬಣ್ಣ ಚಿಕಿತ್ಸೆ. 

ಕೆಂಪು ಬಣ್ಣ: ಇದು ಮೂಲಾಧಾರ ಚಕ್ರ (ಆಸನ ದ್ವಾರದ ಮೇಲ್ಭಾಗದಲ್ಲಿದೆ)ದ ಬಣ್ಣ. ಕೆಂಪು ಬಣ್ಣ ನೋಡುವುದರಿಂದ ಧೈರ್ಯ, ಖಚಿತ, ಸ್ಥಿರತೆ, ತಾಳ್ಮೆ, ಸ್ವಯಂ ನಿರ್ಧಾರದಂಥ ಗುಣಗಳು ಹೆಚ್ಚುತ್ತವೆ. ಸ್ಥೂಲಕಾಯ, ಮೂಲವ್ಯಾಧಿ, ಮಲಬದ್ಧತೆ, ಮೂತ್ರದಲ್ಲಿ ಕಲ್ಲು, ಬೆನ್ನು ನೋವಿನಂಥ ದೈಹಿಕ ತೊಂದರೆಗಳನ್ನು ಕೆಂಪು ಬಣ್ಣ ನಿವಾರಿಸುತ್ತದೆ. ಕೋಪ, ಹಟ, ಅಸಮಾಧಾನ, ಮೊಂಡುತನ, ಅಭದ್ರತೆ, ಬಲಹೀನತೆ, ಕಾಮಾಸಕ್ತಿ, ನಿರ್ದಯ ಮುಂತಾದುವು ಕೆಂಪು ಬಣ್ಣದ ನಕಾರಾತ್ಮಕ ಗುಣಗಳು.

ಕಿತ್ತಳೆ: ಇದು ಸ್ವಾಧಿಷ್ಠಾನ ಚಕ್ರ (ಜನನೇಂದ್ರೀಯದ ಮೇಲ್ಭಾಗದಲ್ಲಿದೆ)ದ ವರ್ಣ. ಶಕ್ತಿ, ಸೃಜನಶೀಲತೆ, ಖಚಿತತೆ, ಉತ್ಸಾಹ, ಸಂಪೂರ್ಣಾನಂದ, ಕೋಮಲತೆ, ಸಂಯಮ, ಆಧ್ಯಾತ್ಮಿಕ ಒಲವು ಮುಕ್ತವಾಗಿ ಬೆರೆಯುವಿಕೆ ಮುಂತಾದ ಗುಣಗಳಿಗೆ ಕಾರಣೀಭೂತ. ಮುಟ್ಟಿನ ದೋಷ, ಮೂತ್ರಕೋಶ ಗಡ್ಡೆಗಳು, ಗರ್ಭಕೋಶದ ಸಮಸ್ಯೆ, ಮೂತ್ರದ್ವಾರ ಸೋಂಕು ಮುಂತಾದ ರೋಗಗಳನ್ನು ಕಿತ್ತಳೆ ಬಣ್ಣ ನೋಡುವುದರಿಂದ  ಗುಣ ಪಡಿಸಿಕೊಳ್ಳಬಹುದು.  ನಕಾರಾತ್ಮಕ ಗುಣಗಳೆಂದರೆ ವಿನಾಶಕಾರಿ  ಪ್ರವೃತ್ತಿ, ಕಳೆಗುಂದಿದ ಗುಣ, ಅಹಂಕಾರ, ತಿರುವು ಮುರುವು ಸ್ವಭಾವ, ಇತ್ಯಾದಿ.

ಹಳದಿ: ಈ ಬಣ್ಣವು ಮಣಿಪುರ ಚಕ್ರ (ನಾಭಿ ಪ್ರದೇಶದಲ್ಲಿದೆ) ದಲ್ಲಿದ್ದು ಶುದ್ಧ, ಸಾತ್ವಿಕ, ತೇಜಸ್ಸು, ವರ್ಚಸ್ಸು, ಕೋಮಲತೆ, ಜೀರ್ಣಶಕ್ತಿ, ಪಚನಶಕ್ತಿ, ಸಂತೋಷ, ಮಾನಸಿಕ ಶಕ್ತಿ ಮುಂತಾದ ಸಕಾರಾತ್ಮಕ ಗುಣಗಳನ್ನು ಈ ಬಣ್ಣ ಬೆಳೆಸುತ್ತದೆ. ಸಕ್ಕರೆ ಕಾಯಿಲೆ, ಅಲ್ಸರ್, ಮೂಳೆ ಸವೆತ, ಅಲರ್ಜಿ, ಲಿವರ್ ಮತ್ತು ಜೀರ್ಣಾಂಗ ಸಮಸ್ಯೆಗಳನ್ನು ಈ ಬಣ್ಣದ ವೀಕ್ಷಣೆಯಿಂದ ಕಡಿಮೆ ಮಾಡಿಕೊಳ್ಳಬಹುದು. ಲಂಚ, ಸ್ವಾರ್ಥಗುಣ, ಪ್ರತೀಕಾರ ಭಾವ, ಟೀಕೆಗಳಿಗೆ ಗುರಿಯಾಗುವುದು ಇತ್ಯಾದಿ ಹಳದಿ ಬಣ್ಣದ ನಕಾರಾತ್ಮಕ ಅಂಶಗಳು.

ಹಸಿರು: ಅನಾಹತ ಚಕ್ರ (ಹೃದಯದ ಮಧ್ಯದಲ್ಲಿದೆ)ದ ಬಣ್ಣವಿದು. ಹಸಿರು ಶುದ್ಧ ಸೌಂದರ್ಯದ ಸಂಕೇತ. ಶಾಂತಿ, ಪ್ರೀತಿ, ದಯೆ, ಪರಿಶುದ್ಧತೆ, ಸಾಮರಸ್ಯ, ತಾಳ್ಮೆ, ಗೌರವ, ಕ್ಷಮೆ, ಸ್ನೇಹ ಮುಂತಾದ ಉತ್ತಮ ಗುಣಗಳನ್ನು ಈ ಬಣ್ಣ ಬೆಳೆಸುತ್ತದೆ. ರಕ್ತದೊತ್ತಡ, ಅಸ್ತಮಾ ಸೈನಸ್, ಶ್ವಾಸಕೋಶ, ಚರ್ಮದ ಸಮಸ್ಯೆಗಳನ್ನು ಹಸಿರು ಬಣ್ಣದ ವೀಕ್ಷಣೆಯಿಂದ ಗುಣಪಡಿಸಲು ಸಹಕಾರಿ. ಹಸಿರಿನ ಕೊರತೆಯಿಂದಾಗಿ ತಲೆತಿರುಗುವುದು ಹೊಟ್ಟೆಕಿಚ್ಚು, ಅನುಮಾನ, ಸ್ವಾರ್ಥ, ದ್ವೇಷ, ಹಗೆತನ, ಅಸಹಕಾರ ಭಾವ ಮುಂತಾದ ದುರ್ಗುಣಗಳು ಬೆಳೆಯುತ್ತದೆ.

ನೀಲಿ: ವಿಶುದ್ಧ ಚಕ್ರ (ಗಂಟಲಿನಲ್ಲಿದೆ)ದ ಈ ಬಣ್ಣ ಶುದ್ಧ ಸತ್ಯ, ಸೌಂದರ್ಯ, ಸಂವಹನ ಸಾಮರ್ಥ್ಯಗಳಿಗೆ, ನಂಬಿಕೆ, ಪ್ರಾಮಾಣಿಕ, ಗೌರವಾದರಗಳಿಗೆ ಪ್ರೇರಕ. ಥೈರಾಯ್ಡ್ ಸಮಸ್ಯೆ, ಗಂಟಲು ಸಂಬಂಧಿತ ಸಮಸ್ಯೆಗಳು, ಶೀತ,  ಮಾತು ಮತ್ತು ಸ್ವರದ ಕೊರತೆ, ಕಿವಿಯ ಸಮಸ್ಯೆ  ಮುಂತಾದ ತೊಂದರೆಗಳಿಗೆ ನೀಲಿ ಬಣ್ಣ ಔಷಧಿಯಾಗಿದೆ. ಆದರೆ ಈ ನೀಲಿ ಬಣ್ಣದ ಕಡಿಮೆ ವೀಕ್ಷಣೆಯಿಂದ ಅಪ್ರಮಾಣಿಕತೆ, ಪ್ರತ್ಯೇಕತಾ ಪ್ರವೃತ್ತಿ, ಅಪನಂಬಿಕೆ, ಭಿನ್ನತೆ, ದುಃಖ, ಶೀತದಂತಹ ಸಮಸ್ಯೆಗಳು ಉಂಟಾಗುತ್ತದೆ.

ಕಡು ನೀಲಿ: ಅಜ್ಞಾಚಕ್ರ (ಎರಡು ಹುಬ್ಬುಗಳ ಮಧ್ಯಭಾಗದಲ್ಲಿದೆ)ದ ಬಣ್ಣವಿದು. ಹಾರ್ಮೋನುಗಳ ಸಮತೋಲನಕ್ಕೆ, ಸ್ಥಿಮಿತ ಬುದ್ಧಿ, ಸಂಕಲ್ಪ ಸಿದ್ಧಿ, ಜ್ಞಾನೋದಯ, ದೂರದೃಷ್ಟಿ, ಬುದ್ಧಿವಂತಿಕೆ, ದಿವ್ಯಶಕ್ತಿ ಮುಂತಾದವುಗಳ ಸಂಕೇತ. ದೃಷ್ಟಿ ಸಮಸ್ಯೆ, ಶೀತ, ತಲೆನೋವು, ಗ್ಲುಕೋಮಾ, ರಾತ್ರಿ ಕುರುಡು, ಒತ್ತಡ, ಮೈಗ್ರೇನ್, ಸೈನಸ್, ಕಿವಿಯ ತೊಂದರೆ, ಮೂಢನಂಬಿಕೆ, ಸುಳ್ಳು ಹೇಳುವುದು, ಅಜಾಗ್ರತೆ ಈ ಬಣ್ಣ ನೋಡದೆ ಇದ್ದಲ್ಲಿ ಕಾಣಿಸಿಕೊಳ್ಳುತ್ತವೆ.

ನೇರಳೆ: ಸಾವಿರ ದಳಗಳ ಪುಷ್ಪವನ್ನು ಹೋಲುವ ಈ ಬಣ್ಣದ ರಚನೆ ಸಹಸ್ರಾರ ಚಕ್ರ ಎಂಬ ಹೆಸರಿನಿಂದ ಮೆದುಳಿನ ಮೇಲ್ಭಾಗದಲ್ಲಿ, ನೆತ್ತಿಯಲ್ಲಿ ಕೇಂದ್ರೀಕೃತವಾಗಿದೆ. ಆಂತರಿಕ ಬುದ್ಧಿವಂತಿಕೆ, ಆನಂದ, ಪರಮಜ್ಞಾನ, ಪ್ರಶಾಂತತೆ, ಸಹನೆ, ಇವೆಲ್ಲ ಈ ಬಣ್ಣದ ಲಕ್ಷಣಗಳು. ಒತ್ತಡ, ಮಾನಸಿಕ ದೌರ್ಬಲ್ಯ, ಕಲಿಕೆಯಲ್ಲಿ ಹಿನ್ನಡೆ, ಚರ್ಮದ ಕಾಯಿಲೆ, ಮೆದುಳಿಗೆ ಸಂಬಂಧಿಸಿದ ಕಾಯಿಲೆ ಉಳ್ಳವರು ನೇರಳೆ ಬಣ್ಣವನ್ನು ಹೆಚ್ಚು ನೋಡಬೇಕು. ಆಯಾಸ, ಮರೆವು, ಸಿಟ್ಟು ಈ ಬಣ್ಣದ ನಕಾರಾತ್ಮಕ ಗುಣಗಳು.

ಬಿಳಿ: ಬಿಳಿ ಬಣ್ಣ ಪರಿಪೂರ್ಣ ನೈರ್ಮಲ್ಯದ ಸಂಕೇತ. ಒತ್ತಡ, ಕೋಪ, ವಂಚನೆ ಗುಣಗಳನ್ನು ಇದು ದೂರ ಮಾಡುತ್ತದೆ. 

ಕಪ್ಪು: ದುಃಖ, ಬೇಸರಗಳನ್ನು ಹೀರಿಕೊಳ್ಳುವ ಗುಣವಿರುವುದರಿಂದಲೇ ದುಃಖದ ಸಂಕೇತವಾಗಿ ಕಪ್ಪು ಬಣ್ಣ ಬಳಸಲಾಗುತ್ತದೆ. ಕಪ್ಪು ದುರ್ಗುಣಗಳ ಸಂಕೇತವನ್ನು ಸಾರುತ್ತದೆ. ಮಾನಸಿಕ ಖಿನ್ನತೆಯುಳ್ಳವರು ಕಪ್ಪು ಬಣ್ಣದಿಂದ ದೂರವಿರಬೇಕು.

ಚಿಕಿತ್ಸಾ ರೂಪದಲ್ಲಿ ಬಣ್ಣಗಳನ್ನು ಸುಮಾರು 10 ರಿಂದ 20 ನಿಮಿಷ ಗಮನಿಸಬಹುದು ಅಥವಾ ಬಟ್ಟೆಗಳನ್ನು ಧರಿಸಬಹುದು. ಅಲ್ಲದೇ ಬಣ್ಣದ ಬೆಳಕನ್ನು ದೇಹಕ್ಕೆ ಹಾಯಿಸಬಹುದು. ನುರಿತ  ಶಿಕ್ಷಕರ ಮುಖಾಂತರ ಕಲಿತು  ಮಾಡಿದರೆ ಹೆಚ್ಚು ಸಮರ್ಪಕ. ನಿತ್ಯ ಜೀವನದಲ್ಲಿ ಕಂಡು ಬರುವ ಬಣ್ಣಗಳು ನೋಡಿ ಅನುಭವಿಸಿ ಆನಂದಿಸಿರಿ.

ಮಾಹಿತಿಗೆ: 9448394987

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT