ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಚೆಂದ ಯಾವುದಣ್ಣ?

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮನೆಯ ಅಂದ ವೃದ್ಧಿಯಲ್ಲಿ ಅದರ ಬಣ್ಣ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಮನೆಗೆ ಯಾವ ಬಣ್ಣ ಮೆರುಗು ನೀಡಬಲ್ಲುದು, ಒಳಗೆ ಯಾವ ಬಣ್ಣ, ಹೊರಗೆ ಯಾವ ಬಣ್ಣ ಇದ್ದರೆ ಚೆಂದ ಎಂಬ ಬಗ್ಗೆ ಎಲ್ಲರೂ ಸಾಕಷ್ಟು ಚಿಂತನ ಮಂಥನ ನಡೆಸುತ್ತಾರೆ. ಆದರೆ ಯಾವ ರೀತಿಯ ಬಣ್ಣ  ಬಳಸಬೇಕು ಎಂಬ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರು ಕಡಿಮೆ.

ಸ್ವಂತದ್ದೊಂದು ಮನೆ, ದೀರ್ಘ ಕಾಲ ನೆಲೆಸುವ ಆ ಸೂರಿಗೆ ಎಂಥ ಪೇಂಟ್‌ ಉತ್ತಮ, ಯಾವ ಬಗೆಯದ್ದು ಪರಿಸರಕ್ಕೂ ಮನೆಮಂದಿಯ ಆರೋಗ್ಯಕ್ಕೂ ಸೂಕ್ತ ಎಂಬ ಕುರಿತು ಗಮನಹರಿಸಬೇಕಾಗಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಈಗೀಗ ಹಸಿರು ಮನೆಗಳಿಗೆ (ಗ್ರೀನ್‌ ಹೋಮ್ಸ್‌) ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಪ್ರಕೃತಿಯ ಮೇಲೆ ಕಡಿಮೆ ದುಷ್ಪರಿಣಾಮ ಉಂಟುಮಾಡುವ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಲು ಅನೇಕರು ಮುಂದಾಗುತ್ತಿದ್ದಾರೆ.

ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ಅನೇಕರು ತಮ್ಮ ಮನೆಯನ್ನು ಸಿಂಗರಿಸಿಕೊಳ್ಳುತ್ತಿರುವುದು ಈಗಿನ ಟ್ರೆಂಡ್‌. ಇದರಿಂದ ಉಪಯೋಗಗಳು ಅನೇಕ. ಸದ್ಯ ಹೆಚ್ಚು ಬಳಕೆಯಲ್ಲಿರುವ ಪೇಂಟ್‌ ತಯಾರಿಕೆಯಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅವುಗಳನ್ನು ಆವಿಯಾಗಬಲ್ಲ ಸಾವಯವ ಸಂಯುಕ್ತಗಳು (ವಿಒಸಿ– ವೊಲೆಟೈಲ್‌ ಆರ್ಗ್ಯಾನಿಕ್‌ ಕಾಂಪೌಂಡ್‌) ಎಂದು ವಿಂಗಡಿಸಲಾಗುತ್ತದೆ. ಬಣ್ಣಗಳನ್ನು ಹಚ್ಚಲು ಸುಲಭವಾಗಬೇಕು ಎನ್ನುವ ಕಾರಣಕ್ಕೆ ಅನೇಕ ಬಗೆಯ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಪೇಂಟ್‌ ತಯಾರಿಸುತ್ತಾರೆ.

ಅಂತೆಯೇ ಟಾಕ್ಸಿಕ್‌ (ವಿಷಕಾರಿ) ಬಣ್ಣಗಳು ಕೂಡ ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಬಣ್ಣಗಳ ಬಳಕೆಯಿಂದಾಗಬಲ್ಲ ಪರಿಣಾಮಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸದೆ ಹಾಗೂ ಅರಿವು ಇಲ್ಲದೆ ಇವುಗಳನ್ನು ತಯಾರಿಸಲಾಗಿರುತ್ತದೆ. ಇವು ಮನುಷ್ಯನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಜೊತೆಗೆ ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ.  ಕ್ಯಾನ್ಸರ್‌ ಉಂಟುಮಾಡಬಲ್ಲ ಬೆಂಜೀನ್‌ ರಾಸಾಯನಿಕ ಇವುಗಳಲ್ಲಿರುತ್ತದೆ. ಅಲ್ಲದೆ ಕೆಲ ಬಗೆಯ ಭಾರವಾದ ಲೋಹಗಳು–‘ಫ್ತಲೇಟ್‌’ (ಫ್ತ್ಯಾಲಿಕ್‌ ಆಮ್ಲದ ಲವಣ) ಹೆಚ್ಚಿರುವುದರಿಂದ ಕಿಡ್ನಿ ಹಾಗೂ ಲಿವರ್‌ಗಳಿಗೆ ಗಂಭೀರ ರೀತಿಯ ಸಮಸ್ಯೆಯನ್ನು ಒಡ್ಡಬಲ್ಲುದು.

ವಿಒಸಿ ಹಾಗೂ ಟಾಕ್ಸಿಕ್‌ ಬಣ್ಣಗಳಿಗಿಂತ ವಿಭಿನ್ನವಾಗಿ ತಯಾರಿಸಲಾಗುವ ಪರಿಸರ ಸ್ನೇಹಿ ಬಣ್ಣಗಳಿಗೆ ನಾನ್‌ ಟಾಕ್ಸಿಕ್‌ ಬಣ್ಣಗಳು ಎಂದೂ ಕರೆಯಲಾಗುತ್ತದೆ. ಪರಿಸರ ಸ್ನೇಹಿ ಬಣ್ಣಗಳು ಆರೋಗ್ಯ ಸಮಸ್ಯೆಗಳನ್ನು ಒಡ್ಡುವುದಿಲ್ಲ. ವಾಸನೆ ಇಲ್ಲದ  ಈ ಬಣ್ಣಗಳನ್ನು ಬೇರೆ ಬಣ್ಣಗಳೊಂದಿಗೆ ಮಿಶ್ರಣ ಮಾಡಿ, ಇಚ್ಛೆಗೆ ಅನುಗುಣವಾದ ಶೇಡ್‌ಗಳನ್ನು ತಯಾರಿಸಿಕೊಳ್ಳಬಹುದು. ಅಲ್ಲದೆ ರಾಸಾಯನಿಕ ವಸ್ತುಗಳ ಅಲರ್ಜಿ ಇರುವವರಿಗೆ ಈ ಬಣ್ಣ ಹೆಚ್ಚು ಸೂಕ್ತ.

ಹಾಗಾದರೆ ಪರಿಸರ ಸ್ನೇಹಿ ಬಣ್ಣಗಳ ತಯಾರಿಕೆ ಹೇಗೆ ಎಂಬ ಬಗ್ಗೆ ಕುತೂಹಲ ಮೂಡುವುದು ಸಹಜ. ಈ ಬಣ್ಣಗಳ ತಯಾರಿಕೆಯಲ್ಲಿ ಸುಮಾರು 250 ಬಗೆಯ ರಾಸಾಯನಿಕ ಸಂಯುಕ್ತಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಎಲ್ಲವೂ ಸಸ್ಯ ಮೂಲಗಳು ಹಾಗೂ ಖನಿಜಗಳನ್ನು ಬಳಸಿಕೊಂಡು ನೈಸರ್ಗಿಕ ರೀತಿಯಲ್ಲಿ ಉತ್ಪಾದಿಸಿದ ರಾಸಾಯನಿಕಗಳಾಗಿವೆ.

ಪರಿಸರ ಸ್ನೇಹಿ ಬಣ್ಣಗಳು, ಥಿನ್ನರ್ಸ್‌, ಸ್ಟೇನ್ಸ್‌ ಹಾಗೂ ಮೇಣದಂಥ ವಸ್ತುಗಳನ್ನು ಕಿತ್ತಳೆ ಸಿಪ್ಪೆ ಸಾರ, ಎಣ್ಣೆ, ಬೀಜಗಳಿಂದ ಉತ್ಪಾದಿಸಿದ ಎಣ್ಣೆ, ಮರದ ಅಂಟು,  ಖನಿಜಗಳ ಮೇಲ್ಪದರ ರಕ್ಷಿಸಲು ಬಳಸುವ ಪುಡಿ, ಮರ ಹಾಗೂ ಜೇನು ಮೇಣ, ಸೀಸ ಮುಕ್ತ ಡ್ರೈಯರ್ಸ್‌, ನೈಸರ್ಗಿಕ ವರ್ಣದ್ರವ್ಯ ಮುಂತಾದ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.

ಪ್ರಾಕೃತಿಕವಾಗಿ ಅತ್ಯಂತ ಸುರಕ್ಷಿತವಾದ ಇಂಥ ಬಣ್ಣಗಳನ್ನು ಒಳಾಂಗಣದಲ್ಲಿ ಬಳಸಿಕೊಂಡರೆ ಅಲ್ಲಿ ವಾಸಿಸುವವರ ದೇಹಾರೋಗ್ಯ ಸುಧಾರಿಸುವುದಲ್ಲದೆ, ಜೀವನದ ಗುಣಮಟ್ಟ ಉತ್ತಮವಾಗುತ್ತದೆ. ಕೆಲವು ಬಣ್ಣಗಳು ಕೋಣೆಯ ತಾಪಮಾನವನ್ನು ನಿಯಂತ್ರಿಸಬಲ್ಲ ಗುಣವನ್ನೂ ಹೊಂದಿದೆ. ವಾತಾವರಣವನ್ನು ತಂಪಾಗಿಸಬಲ್ಲ ಯಾವ ಸಾಧನ ಬಳಸುವ ಅಗತ್ಯವೂ ಬೀಳುವುದಿಲ್ಲ ಎನ್ನುವುದು ಇದರ ಗುಣ.

ಈ ಬಣ್ಣದ ಬಗೆಗಳು: ಪರಿಸರ ಸ್ನೇಹಿ ಬಣ್ಣಗಳನ್ನು ಬಳಸುವ ಪ್ರಕಾರದಲ್ಲಿ 3 ಬಗೆಗಳಿವೆ.

ಲೈಮ್‌ ವಾಶ್‌: ಇದು ಪ್ರೀಮಿಯರ್‌ನಂತೆ ಕೆಲಸ ಮಾಡುತ್ತದೆ.

ಮಿಲ್ಕ್‌ ಪೇಂಟ್‌: ಕೇಸಿನ್‌ (ಹಾಲಿನಲ್ಲಿಯ ಒಂದು ಬಗೆಯ ಪ್ಲಾಸ್ಪೊ ಪ್ರೊಟೀನ್‌)ನಿಂದ ಮಾಡಲಾದ ಈ ಬಣ್ಣ ಪೌಡರ್‌ ರೂಪದಲ್ಲಿರುತ್ತದೆ. ನೀರಿನೊಂದಿಗೆ ಸರಿಯಾದ ಮಿಶ್ರಣ ಮಾಡಿ ಪೇಂಟ್‌ ಮಾಡಬೇಕಾಗುತ್ತದೆ.

ಕ್ಲೇ ಪೇಂಟ್‌: ಈ ಬಣ್ಣ ಬಹುಬೇಗ ಒಣಗಬಲ್ಲದು. ಆದರೆ ಇದರಲ್ಲಿ ಬಣ್ಣಗಳ ಆಯ್ಕೆ ತೀರಾ ಕಡಿಮೆ. ತೀರಾ ಸುಲಭವಾಗಿ ಈ ಬಣ್ಣವನ್ನು ಗೋಡೆಗೆ ಬಳಿಯಬಹುದು. ಈ ಪೇಂಟ್‌ ಬಳಸಿದ ಗೋಡೆಯ ಮೇಲಿನ ಕೊಳೆಯನ್ನು ಒದ್ದೆ ಬಟ್ಟೆ ಬಳಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅಲ್ಲದೆ ಬಣ್ಣಗೆಡುವುದಿಲ್ಲ.

ವಿಒಸಿ ಹೆಚ್ಚಿರುವ ಬಣ್ಣಗಳು ವಾತಾವರಣವನ್ನು ಬಹುಬೇಗ ಕಲುಷಿತಗೊಳಿಸುವುದಲ್ಲದೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ. ಪರಿಸರ ಸ್ನೇಹಿ ಬಣ್ಣಗಳು ವಾತಾವರಣವನ್ನು ಶುಚಿಗೊಳಿಸುವ ಶಕ್ತಿ ಹೊಂದಿವೆ. ವಿಶೇಷ ಸಿಲಿಕಾ ಅಂಶಗಳನ್ನು ಬಳಸುವುದರಿಂದ ಅವು ಮಾಲಿನ್ಯವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡಬಲ್ಲವು.

ಹೀಗೆ ಅನೇಕ ವಿಧದಲ್ಲಿ ಮಹತ್ವ ಹೊಂದಿರುವ ಪರಿಸರ ಸ್ನೇಹಿ ಬಣ್ಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಲಾಗುವುದರಿಂದ ಮನೆಯ ವಾತಾವರಣವನ್ನು ಶುಚಿಗೊಳಿಸುವುದರೊಂದಿಗೆ ಪರಿಸರಕ್ಕೂ ಪೂರಕ. ಸಾಮಾನ್ಯ ಬಣ್ಣಗಳಿಗಿಂತ ತುಸು ದುಬಾರಿ ಎನಿಸಿದರೂ ಸುರಕ್ಷಿತ ಎನ್ನುವ ಕಾರಣಕ್ಕೆ ಪರಿಸರ ಸ್ನೇಹಿ ಬಣ್ಣಗಳು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT