ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ಎಎಪಿ ನಿಲುವು

ಕೇಜ್ರಿವಾಲ್‌ ಜಾಮೀನು: ಉನ್ನತ ಕೋರ್ಟ್‌ಗೆ ಮೊರೆ?
Last Updated 22 ಮೇ 2014, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಟಿ­ಯಾಲ ಮೆಟ್ರೊಪಾಲಿಟನ್‌ ಮ್ಯಾಜಿ­ಸ್ಟ್ರೇಟ್‌  ಕೋರ್ಟ್‌ ಶುಕ್ರವಾರವೂ  ಅರವಿಂದ ಕೇಜ್ರಿ­ವಾಲ್‌ ಅವರ ವಿರುದ್ಧ ಆದೇಶ ನೀಡಿದಲ್ಲಿ ಮೇಲಿನ ನ್ಯಾಯಾ­ಲ­­ಯದ ಮೊರೆ ಹೋಗುವು­ದಾಗಿ  ಎಎಪಿ ಗುರುವಾರ ತಿಳಿಸಿದೆ.

ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಜಾಮೀನು ಪಡೆಯಲು ನ್ಯಾಯಾ­ಲ­ಯಕ್ಕೆ ವೈಯಕ್ತಿಕ ಬಾಂಡ್‌್ ಸಲ್ಲಿಸುವ ಸಾಧ್ಯತೆಯನ್ನು ಪಕ್ಷ ಅಲ್ಲಗಳೆದಿದೆ.

‘ಕೋರ್ಟ್‌್ ಕಲಾಪದ ವೇಳೆ ಹಾಜರಿ­ರುವುದಾಗಿ ಮುಚ್ಚಳಿಕೆ ಬರೆದು­ಕೊಡಲು ಸಿದ್ಧವಿರುವಾಗ ಬಾಂಡ್‌ ಕೊಡುವ ಅಗತ್ಯವಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದೇವೆ. ಶುಕ್ರವಾರವೂ ಕೋರ್ಟ್‌ ಮುಂದೆ ಈ ವಿಚಾರ ಇಡುತ್ತೇವೆ. ಜಾಮೀನು ಬಾಂಡ್‌ ನೀಡದೇ ಇರುವ  ಕಾರಣಕ್ಕೆ ಬಡವರು ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ’ ಎಂದು ಪಕ್ಷದ ಮುಖಂಡ, ವಕೀಲ ಪ್ರಶಾಂತ್‌ ಭೂಷಣ್‌  ತಿಳಿಸಿದರು.

‘ಬಾಂಡ್‌ ಕೊಡುವುದು ನಮ್ಮ ಸಿದ್ಧಾಂತಕ್ಕೆ ವಿರುದ್ಧವಾ­ದುದು. ಒಂದು ವೇಳೆ ಕೋರ್ಟ್‌ ಆದೇಶ ನಮ್ಮ ಪರವಾಗಿ ಇಲ್ಲದಿದ್ದರೆ ನಾವು ಅದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸು­ತ್ತೇವೆ’  ಎಂದು ಪಕ್ಷದ ಮುಖಂಡ ಸಂಜಯ್‌ ಸಿಂಗ್‌ ಹೇಳಿದರು.

‘ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 88ರ ಪ್ರಕಾರ, ಸಮನ್ಸ್‌ ಅಥವಾ ಬಂಧನ ವಾರಂಟ್‌್ ಹೊರಡಿಸುವ ಅಧಿಕಾರ ಇರುವ ನ್ಯಾಯಾಧೀಶರ ಮುಂದೆ ಆರೋಪಿ ಹಾಜರಿದ್ದ ಪಕ್ಷದಲ್ಲಿ,  ಆ ನ್ಯಾಯಾಧೀಶರು  ಭದ್ರತಾ ಠೇವಣಿ ಇಲ್ಲ­ದೆಯೂ ಬಾಂಡ್‌್  ನೀಡುವಂತೆ ಆತನನ್ನು ಕೇಳಬಹುದು. ಆದ್ದ­ರಿಂದ ಜಾಮೀನು ಬಾಂಡ್‌ ಕೇಳುವ ಅಗತ್ಯ ಇಲ್ಲ. ಬಾಂಡ್‌ ಕೇಳದೇ ಜಾಮೀನು ಕೊಟ್ಟ ನಾಲ್ಕು ಉದಾಹರಣೆ­ಗಳಿವೆ’ ಎಂದು ಹಿರಿಯ ವಕೀಲ ಶಾಂತಿ ಭೂಷಣ್‌ ಹೇಳಿದರು.

ಮನೆ ಮನೆ ಸಂಪರ್ಕ ಕಾರ್ಯಕ್ರಮ:  ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕೇಜ್ರಿವಾಲ್‌್ ಅವರು ಯಾವ ಕಾರಣಕ್ಕೆ ಬಂಧನ­ಕ್ಕೊಳಗಾದರು ಎನ್ನುವುದನ್ನು ಜನರಿಗೆ ತಿಳಿಸಲು ಮನೆ ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳು­ವುದಾಗಿ ಎಎಪಿ ತಿಳಿಸಿದೆ.  ಪ್ರತಿಭಟನೆ ಬದಲು ಈ ಕಾರ್ಯ­ಕ್ರಮ ನಡೆಸಲು ಪಕ್ಷ ಮುಂದಾಗಿದೆ. ತಿಹಾರ್‌  ಜೈಲಿನಲ್ಲಿರುವ ಕೇಜ್ರಿ­ವಾಲ್‌್ ಅವ­ರೊಂದಿಗೆ ಎಎಪಿ ಮುಖಂಡರು ಗುರುವಾರ ಬೆಳಿಗ್ಗೆ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡರು.

ಬಂಧಿತ ಮುಖಂಡರ ಬಿಡುಗಡೆ: ತಿಹಾರ್‌ ಜೈಲಿನ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿತರಾಗಿದ್ದ 59 ಕಾರ್ಯಕರ್ತ­ರು ಹಾಗೂ ಕೆಲ ನಾಯಕರನ್ನು ವೈಯಕ್ತಿಕ ಬಾಂಡ್‌್ ಮೇಲೆ ಗುರುವಾರ ಬಿಡುಗಡೆ ಮಾಡ­­ಲಾಯಿತು.

ಪಿತೃ ವಿಯೋಗ: ಸಿಸೋಡಿಯಾ ಅವರ ತಂದೆ ಗುರುವಾರ ಮೃತಪಟ್ಟರು. ಸುದ್ದಿ ತಿಳಿದ ಕೂಡಲೇ ಅವರಿಗೆ ವೈಯಕ್ತಿಕ ಬಾಂಡ್‌ ಮೇಲೆ ಜಾಮೀನು ಕೊಡಲಾಯಿತು.

ಯೋಗೇಂದ್ರ ಯಾದವ್‌ ಅವರು ಸಹ  ವೈಯಕ್ತಿಕ ಬಾಂಡ್‌ ನೀಡಲು  ಮೊದಲು ನಿರಾಕರಿಸಿದ್ದರು. ನಂತರ ಅವರನ್ನು ತೀಸ್‌ ಹಜಾರಿ ಕೋರ್ಟ್‌ ಮುಂದೆ ಹಾಜರುಪಡಿಸಲಾಯಿತು. ₨ 5,000 ವೈಯಕ್ತಿಕ ಬಾಂಡ್‌ ನೀಡುವಂತೆ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಏಕ್ತಾ ಗೌಬಾ ಅವರು ಸೂಚಿಸಿದರು. ಕೋರ್ಟ್‌ ಆದೇಶ ಒಪ್ಪಿಕೊಂಡ ಮೇಲೆ ಯಾದವ್‌ ಅವರನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT