ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಬೇಕಿದೆ ಬೇಹುಗಾರಿಕೆ

Last Updated 23 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಎಂಟು ವರ್ಷಗಳ ಹಿಂದೆ ಮುಂಬೈ ಮೇಲೆ ನಡೆದ ದಾಳಿ ಭಾರತ­ವನ್ನಷ್ಟೇ   ಅಲ್ಲ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಅಂದಿನದು ಆಧುನಿಕ ಮನುಕುಲದ ಇತಿಹಾಸದಲ್ಲಿನ ಅತ್ಯಂತ ಕರಾಳ ಭಯೋತ್ಪಾದನಾ ದಾಳಿಗಳಲ್ಲೊಂದು. ಆಗ ಆದ ಗಾಯ ಇನ್ನೂ ಮಾಸಿಲ್ಲ.

ಈ ದಾಳಿಯನ್ನು ತಪ್ಪಿ­ಸ­ಬಹುದಿತ್ತೇ, ಪ್ರಮಾದ ಆಗಿದ್ದೆಲ್ಲಿ ಎಂಬ ಬಗ್ಗೆ ಚರ್ಚೆಗಳು ಇನ್ನೂ ನಡೆ­ಯುತ್ತಲೇ ಇವೆ. ಆದರೆ ದಾಳಿಯನ್ನೇ ನಿಷ್ಫಲಗೊಳಿಸಬಹುದಾಗಿದ್ದ ಅವಕಾಶ­ವೊಂದು ಅಮೆರಿಕ, ಬ್ರಿಟನ್‌ ಮತ್ತು ಭಾರತದ ಗುಪ್ತಚರ ಸಂಸ್ಥೆಗಳ ನಡು­ವಿನ ಸಂವಹನ, ಮಾಹಿತಿ ವಿನಿಮಯದ ಕೊರತೆಯಿಂದಾಗಿ ತಪ್ಪಿ ಹೋಯಿತು ಎಂದು ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ, ಪ್ರೊ ಪಬ್ಲಿಕಾ ಮತ್ತು ಫ್ರಂಟ್‌ಲೈನ್‌ಗಳು ಸಿದ್ಧಪಡಿಸಿದ ವರದಿಯೊಂದು ಈಗ  ಬಹಿ­-ರಂಗಪಡಿಸಿದೆ.

  ಬೇಹುಗಾರಿಕೆಯ ಚರಿತ್ರೆಯಲ್ಲೇ ಇದು ಅತ್ಯಂತ ದೊಡ್ಡ ವೈಫಲ್ಯ ಎಂದರೂ ಉತ್ಪ್ರೇಕ್ಷೆಯಾಗದು. ಕಂಪ್ಯೂಟರ್‌ ಆಧಾರಿತ ನಿಗಾ ವ್ಯವಸ್ಥೆ ಮತ್ತು ಆಧುನಿಕ ಮಾಹಿತಿ ತಂತ್ರಜ್ಞಾನವನ್ನು ಸಮರ್ಥ­ವಾಗಿ ಬಳಸಿ­ಕೊಂಡು ಭಯೋತ್ಪಾದನೆ­ಯನ್ನು ಹತ್ತಿಕ್ಕುವ ಶಕ್ತಿ ಮತ್ತು ದೌರ್ಬಲ್ಯ ಎರ­ಡನ್ನೂ ಇದು ಬಯಲು ಮಾಡಿದೆ. ಅಷ್ಟಕ್ಕೂ, ಭಯೋ­ತ್ಪಾದಕರು ಭಾರತದ ದಾಳಿ ಮಾಡಬಹುದು, ಅದಕ್ಕಾಗಿ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಭಾರತ ಮತ್ತು ಬ್ರಿಟಷ್‌ ಗೂಢಚರ್ಯೆ ಸಂಸ್ಥೆ­ಳಿಗೆ ಸಾಕಷ್ಟು ಮೊದಲೇ ಸಿಕ್ಕಿತ್ತು. ದಾಳಿಯ ಸಂಚಿನಲ್ಲಿ ಲಷ್ಕರ್‌ ಎ ತಯಬಾದ ತಾಂತ್ರಿಕ ವಿಭಾಗದ ಮುಖ್ಯಸ್ಥ ಜರಾರ್‌ ಷಾ ಪ್ರಮುಖ ಪಾತ್ರ ವಹಿಸಿದ್ದ. ಇದರ ಪೂರ್ವಸಿದ್ಧತೆಗಾಗಿ ಪಾಕಿ­ಸ್ತಾನದ ಉತ್ತರ ಪರ್ವತ ಪ್ರದೇಶದಿಂದ ಅರಬ್ಬಿ ಸಮುದ್ರದ ಬಳಿಯ ಸುರ­ಕ್ಷಿತ ಸ್ಥಳದವರೆಗೂ ಅನೇಕ ಸಲ ಓಡಾ­ಡಿದ್ದ.

ಇಂಟರ್‌ನೆಟ್‌ನಲ್ಲಿ ಮುಂಬೈಯ ಎರಡು ಐಷಾ­ರಾಮಿ ಹೋಟೆಲ್‌­ಗಳು ಮತ್ತು ಯೆಹೂದಿಗಳ ತಂಗುದಾಣದ ಬಗ್ಗೆ ಜಾಲಾ­ಡಿದ್ದ. ದಾಳಿ ನಡೆಸ­ಬೇಕಾದ ಸ್ಥಳಗಳನ್ನು ತಲು­ಪುವ ಮಾರ್ಗಗಳನ್ನು ದಾಳಿ­ಕೋರರಿಗೆ ವಿವರಿ­ಸಲು ಗೂಗಲ್‌ ನಕ್ಷೆ ಬಳಸ­ಲಾಗಿತ್ತು. ಈತನ ಚಲನವಲನ­ಗಳ ಮೇಲೆ  ನಿಗಾ ಇಟ್ಟಿದ್ದ ಭಾರತ ಮತ್ತು ಬ್ರಿಟಿಷ್‌ ಬೇಹುಗಾರರು ಪ್ರತ್ಯೇಕ­ವಾಗಿ ಈ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದರು. ಆದರೆ ಒಬ್ಬರಿ­ಗೊಬ್ಬರಿಗೆ ಇದು ಗೊತ್ತಿರಲಿಲ್ಲ.  ಅಮೆರಿಕಕ್ಕೂ ಗೊತ್ತಿರಲಿಲ್ಲ. ಅದರ ಬೇಹು­ಗಾರಿಕಾ ಸಂಸ್ಥೆಗಳು ತಮ್ಮದೇ ಮೂಲ, ಸಾಧನ­ಗಳ ಮೂಲಕ ವಿಷಯ ಸಂಗ್ರಹಿಸಿ ಭಾರತದ ಭದ್ರತಾ ಸಂಸ್ಥೆಗಳಿಗೆ ಮುನ್ನೆ­ಚ್ಚರಿಕೆ ನೀಡಿದ್ದವು.

ಇಷ್ಟೆಲ್ಲ ಆದ ನಂತರದ್ದು ಮಹಾ ಪ್ರಮಾದ. ಮೂರೂ ದೇಶಗಳ ಬೇಹುಗಾರಿಕೆ ಸಂಸ್ಥೆಗಳು ಈ ಎಲ್ಲ ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡಿದ್ದರೆ ಮುಂಬೈ ದಾಳಿಯ ಇಡೀ ಸಂಚನ್ನು ವಿಫಲ­ಗೊಳಿಸ­ಬಹುದಿತ್ತು.ಇಡೀ ವಿಶ್ವವೇ ಭಯೋ­ತ್ಪಾದಕರ ದಾಳಿಗೆ ನಲುಗುತ್ತಿದೆ. ಜಗತ್ತು ಎದು­ರಿ­ಸುತ್ತಿರುವ ಈ ಸವಾಲನ್ನು ಬೇಹುಗಾರರು ಅರ್ಥ ಮಾಡಿಕೊಳ್ಳಲು ಸೋತರು. ಅದಕ್ಕಾಗಿ ದುಬಾರಿ ಬೆಲೆಯನ್ನೇ ತೆರಬೇಕಾಗಿ ಬಂತು. ಬೇಹು­ಗಾರಿಕೆ ಸಂಸ್ಥೆಗಳ ಮನೋಭಾವ, ಕೆಲಸದ ವಿಧಾನ ಬದಲಾಗಬೇಕು. ಇನ್ನೆಂದೂ ಇಂಥ ಲೋಪಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಲ್ಲ ದೇಶಗಳು ಪ್ರತಿಜ್ಞೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT