ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಚಹರೆಯ ಐಪಿಎಲ್‌

Last Updated 18 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ಐಪಿಎಲ್‌ ಎಂದರೆ ಕೇವಲ ಕ್ರಿಕೆಟ್‌ ಅಲ್ಲ. ಅಲ್ಲಿ ರಂಗುರಂಗಿನ ವಾತಾವರಣವಿರುತ್ತದೆ. ಚಿಯರ್‌ ಬೆಡಗಿಯರ ನೃತ್ಯ ಪಡ್ಡೆ ಹುಡುಗರ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಯಾರೇ ಗೆದ್ದರೂ ಸಂಭ್ರಮಪಡುವ ವಿಚಿತ್ರ ಅಭಿಮಾನಿಗಳ ಗುಂಪುಗಳಿರುತ್ತವೆ. ಮೂರು ಗಂಟೆಯಲ್ಲಿ ಮುಗಿದು ಹೋಗುವ ಐಪಿಎಲ್‌ ಪಂದ್ಯಗಳ ವೇಳೆ ಕಂಡ ಸನ್ನಿವೇಶಗಳನ್ನು ಪ್ರಮೋದ್ ಜಿ.ಕೆ. ಇಲ್ಲಿ ದಾಖಲಿಸಿದ್ದಾರೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಎ.ಬಿ ಡಿವಿಲಿಯರ್ಸ್‌ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದರೆ ಗ್ಯಾಲರಿಯಲ್ಲಿದ್ದ ಕ್ರಿಕೆಟ್ ಪ್ರೇಮಿಗಳಲ್ಲಿ ಮೆಕ್ಸಿಕನ್ ಅಲೆ. ಮೊದಲ ಓವರ್‌ನಿಂದಲೇ ಶುರುವಾದ ಬೌಂಡರಿಗಳ ಅಬ್ಬರಕ್ಕೆ ಜನರು ಸಾಥ್‌ ಕೊಟ್ಟರು. ಆರ್‌ಸಿಬಿ ಇನಿಂಗ್ಸ್‌ ಮುಗಿಯುವವರೆಗೂ ಸಂಭ್ರಮದ ಅಲೆಯಲ್ಲಿ ಮಿಂದೆದ್ದರು.

ನಂತರ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಬ್ಯಾಟಿಂಗ್ ಶುರುವಾಯಿತು. ಆಗ ಕ್ವಿಂಟನ್‌ ಡಿ ಕಾಕ್ ಮತ್ತು ಕರುಣ್ ನಾಯರ್ ಬೌಂಡರಿ, ಸಿಕ್ಸರ್‌ಗಳನ್ನು ಹೊಡೆದಾಗಲೂ ಅದೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅವರಲ್ಲೂ ಕೊನೆಯವರೆಗೂ ಭರ್ಜರಿ ಸಂಭ್ರಮ! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್‌ ಪಂದ್ಯದ ವೇಳೆ ಕಂಡುಬಂದ ದೃಶ್ಯಗಳಿವು. ಅಭಿಮಾನಿಗಳ ಈ ವಿಚಿತ್ರ ಪ್ರೀತಿಗೆ ಏನೆನ್ನಬೇಕೊ ಅರ್ಥವೇ ಆಗುವುದಿಲ್ಲ.

ಅರ್ಥವೇ ಆಗದ ಕ್ರಿಕೆಟ್‌ ಪ್ರೇಮಿಗಳ ಈ ‘ಪ್ರೀತಿ’ಯನ್ನು ನೋಡಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಎರಡೂ ತಂಡಗಳಿಗೆ ಬೆಂಬಲ ನೀಡುವ ಐಪಿಎಲ್‌ ಅಭಿಮಾನಿಗಳ ನಿಜವಾದ ನೆಚ್ಚಿನ ತಂಡ ಯಾವುದು ಎನ್ನುವ ಅನುಮಾನ ಮೂಡುತ್ತದೆ. ಐಪಿಎಲ್‌ ಶುರುವಾದ ಬಳಿಕ ಕ್ರಿಕೆಟ್‌ನ ದಿಕ್ಕು ಬದಲಾಗಿದೆಯೇ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಕೆಲವರು ‘ಹೌದು’ ಎಂದರೆ, ಇನ್ನು ಕೆಲವರು ‘ಹಾಗೇನೂ ಆಗಿಯೇ ಇಲ್ಲ’ ಎಂದು ವಾದ ಮುಂದಿಡುತ್ತಾರೆ.

ಆದರೆ ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ಟೆಸ್ಟ್‌ ಪಂದ್ಯಗಳ ಆಟದ ಸೊಬಗನ್ನು ಅತ್ಯಂತ ಪ್ರೀತಿಯಿಂದ ಸವಿಯುವ ಕ್ರಿಕೆಟ್‌ ಪ್ರೇಮಿಗಳು ಐಪಿಎಲ್‌ ಅನ್ನು ಇಷ್ಟಪಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ಆಟದ ಮೇಲೆ ಪ್ರೀತಿ ಇಲ್ಲವೆಂದೇನಲ್ಲ. ಬದಲಾದ ಕ್ರಿಕೆಟ್‌ ಚಹರೆ ನೈಜ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಐಪಿಎಲ್‌ ಈಗ ಕೇವಲ ಕ್ರಿಕೆಟ್‌ ಆಗಿ ಅಷ್ಟೇ ಉಳಿದುಕೊಂಡಿಲ್ಲ. ಅಲ್ಲಿ ಝಣ ಝಣ ಕಾಂಚಾಣ ಜೋರಾಗಿಯೇ ಸದ್ದು ಮಾಡುತ್ತಿದೆ.

‘ಸಭ್ಯರ ಕ್ರೀಡೆ’ ಎಲ್ಲೋ ಹಾದಿ ತಪ್ಪುತ್ತಿದೆ. ದೇಶಕ್ಕಾಗಿ ಆಡಬೇಕಾದರೆ ಗಾಯದ ಸಮಸ್ಯೆಯನ್ನು ಮುಂದಿಡುವ ಕೆಲ ಕ್ರಿಕೆಟಿಗರು ಐಪಿಎಲ್‌ ಅಂದಾಕ್ಷಣ ಎಷ್ಟೇ ದೊಡ್ಡ ಗಾಯವಿದ್ದರೂ ಕಣಕ್ಕಿಳಿಯಲು ಸಿದ್ಧರಾಗಿಬಿಡುತ್ತಾರೆ. ಆದ್ದರಿಂದ ಈ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿ ತಲೆಕೆಡಿಸಿಕೊಳ್ಳುವುದಕ್ಕಿಂತ ಮೂರು ಗಂಟೆಯಲ್ಲಿ ಸಿಗುವ ಮಜಾವನ್ನು ಅನುಭವಿಸಬೇಕೆನ್ನುವುದಷ್ಟೇ ಈಗಿನ ಐಪಿಎಲ್‌ ಪ್ರೇಮಿಗಳ ಆಸೆ.

ತಂಡ ಯಾವುದಾದರೇನು...
ಪಂದ್ಯ ಆರಂಭವಾಗಲು ಅರ್ಧದಿನ ಬಾಕಿ ಉಳಿದಿರುವಾಗಲೇ ಅಂದವಾಗಿ ತಿದ್ದಿ ತೀಡಿ ಮುಖವನ್ನು ಶೃಂಗಾರಗೊಳಿಸುವ ‘ಕಲಾವಿದರು’ ಧುತ್ತೆಂದು ಪ್ರತ್ಯಕ್ಷವಾಗಿ ಬಿಡುತ್ತಾರೆ. ಆರ್‌ಸಿಬಿ–ಡೆಲ್ಲಿ ಪಂದ್ಯವನ್ನು ನೋಡಲು ಬಂದಿದ್ದ ಯುವತಿಯೊಬ್ಬಳು ಕಪಾಳದ ಒಂದು ಬದಿಯಲ್ಲಿ ಆರ್‌ಸಿಬಿ ತಂಡ ಹೊಂದಿರುವ ಬಣ್ಣವನ್ನು ಹಚ್ಚಿಸಿಕೊಂಡರೆ, ಇನ್ನೊಂದು ಬದಿಯಲ್ಲಿ ಡೆಲ್ಲಿ ತಂಡ ಹೊಂದಿರುವ ಬಣ್ಣ. ಹಣೆಯ ಮೇಲೆ ಮೂರು ವಿಕೆಟ್‌ನ ಚಿತ್ರ.

ಆ ಯುವತಿಯ ಬೆಂಬಲ ಯಾವ ತಂಡಕ್ಕೆ ಎನ್ನುವ ಗೊಂದಲ ನನ್ನಲ್ಲಿ. ವಿನುತಾ ಎಂಬಾ ಆ ಯುವತಿಯನ್ನು ಇದರ ಬಗ್ಗೆ ಪ್ರಶ್ನಿಸಿದರೆ ‘ನಾವು ಖುಷಿ ಪಡಬೇಕಷ್ಟೇ’ ಎನ್ನುವ ಚುಟುಕು ಉತ್ತರ. ಈ ರೀತಿಯ ಅಭಿಮಾನದಿಂದಾಗಿ ಐಪಿಎಲ್ ಆರಂಭವಾದ ಎಂಟೇ ವರ್ಷಗಳಲ್ಲಿ ವಿಶ್ವವಿಖ್ಯಾತಿ ಹೊಂದಿದೆ. ಇದು ಐಪಿಎಲ್‌ನಿಂದ ಮಾತ್ರ ಸಾಧ್ಯ. ನಮ್ಮ ದೇಶದ ಲೀಗ್‌ ಅನ್ನೇ ಅನುಕರಿಸಿ ಕೆರಿಬಿಯನ್‌ ಪ್ರೀಮಿಯರ್ ಲೀಗ್, ಲಂಕಾ ಲೀಗ್ ಮತ್ತು ಪಾಕಿಸ್ತಾನ ಕ್ರಿಕೆಟ್‌ ಲೀಗ್‌ಗಳು ಶುರುವಾಗಿವೆ. ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಷ್‌ ಲೀಗ್ ನಡೆಯುತ್ತದೆ.

ಈ ಹೆಸರಿನ ಲೀಗ್‌ಗಳು ನಡೆಯುತ್ತವೆ ಎನ್ನುವ ವಿಷಯವೇ ನಮ್ಮವರಲ್ಲಿ ಅನೇಕರಿಗೆ ಗೊತ್ತಿಲ್ಲ. ಆ ಟೂರ್ನಿಗಳು ಐಪಿಎಲ್‌ನಷ್ಟು ಖ್ಯಾತಿ ಹೊಂದಿಲ್ಲ. ಹೊಂದುವುದೂ ಸಾಧ್ಯವಿಲ್ಲ ಬಿಡಿ. ಐಪಿಎಲ್‌ನಿಂದ ಕ್ರಿಕೆಟ್‌ ವಾಣಿಜ್ಯೀಕರಣಗೊಂಡಿದೆ ನಿಜ. ಇದರಿಂದ ಹಲವರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಬಣ್ಣ ಹಚ್ಚುವ ಕಲಾವಿದ, ಟಿ–ಶರ್ಟ್‌ ಮಾರುವವ, ಗುಂಗುರು ಕೂದಲಿನ ‘ವಿಗ್‌’ ವ್ಯಾಪಾರಿ, ಚಿಯರ್‌ ಗರ್ಲ್ಸ್‌, ಪ್ರವಾಸೋದ್ಯಮ ಹೀಗೆ ಎಲ್ಲರಿಗೂ ಒಂದಲ್ಲಾ ಒಂದು ರೀತಿ ಲಾಭವೇ ಆಗಿದೆ. ಆದರೆ ಸೊರಗಿರುವುದು ಕ್ರಿಕೆಟ್‌ ಮಾತ್ರ.

ಯುವತಿಯರ ಅಚ್ಚುಮೆಚ್ಚಿನ ಟೂರ್ನಿ
2008ರಲ್ಲಿ ಐಪಿಎಲ್ ಆರಂಭವಾದಾಗ ಮೊದಮೊದಲು ಎಲ್ಲಾ ವಯಸ್ಸಿನ ಜನರನ್ನು ಟೂರ್ನಿ ತನ್ನೆಡೆಗೆ ಸೆಳೆದಿತ್ತು. ಆದರೆ ಇತ್ತೀಚಿನ ಮೂರ್ನಾಲ್ಕು ವರ್ಷಗಳಿಂದ ಇದು ಯುವತಿಯರ ಪಾಲಿಗೆ ಅಚ್ಚುಮೆಚ್ಚಿನ ಟೂರ್ನಿಯಾಗಿ ಬದಲಾಗಿದೆ. ಇದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಹೋದ ವಾರ ನಡೆದ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯಕ್ಕೆ ಟಿಕೆಟ್‌ ಮಾರಾಟ ನಡೆಯುತ್ತಿತ್ತು.

ವಿಪರೀತ ಬೇಡಿಕೆ ಇದ್ದ ಕಾರಣ ಟಿಕೆಟ್‌ ಫ್ರಾಂಚೈಸ್‌ ಒಬ್ಬರಿಗೆ ಒಂದೇ ಟಿಕೆಟ್‌ ಕೊಡಲಾಗುವುದು ಎಂದು ಫಾರ್ಮಾನು ಹೊರಡಿಸಿತ್ತು. ಟಿಕೆಟ್‌ ಕೌಂಟರ್‌ ಬಳಿ ಬಂದ ಯುವತಿಯೊಬ್ಬಳು ‘ಅಂಕಲ್‌ ನಂಗೆ ಐದು ಟಿಕೆಟ್‌ ಬೇಕು’ ಎನ್ನುವ ಬೇಡಿಕೆ ಇಟ್ಟಳು. ಆಗ ಟಿಕೆಟ್ ಮಾರುವವ ‘ಇಲ್ಲ, ಒಬ್ಬರಿಗೆ ಒಂದೇ ಟಿಕೆಟ್‌’ ಎಂದು ವಾದಿಸಿದ. ಆಗ ಆ ಯುವತಿ ‘ನಾವು (ಯುವತಿಯರು) ಇಲ್ಲದಿದ್ದರೆ ಐಪಿಎಲ್‌ ಟೂರ್ನಿಯೇ ನಡೆಯಲ್ಲಾ ಗೊತ್ತಾ. ನಮಗೆ ಕೊಡದಿದ್ದರೆ ಇನ್ಯಾರಿಗೆ ಟಿಕೆಟ್‌ ಕೊಡುತ್ತೀರಿ.

ಸುಮ್ಮನೆ ಐದು ಟಿಕೆಟ್‌ ಕೊಡಿ’ ಎಂದು ಮಾತಿನ ಪ್ರವಾಹ ಹರಿಸಿದಳು ಆ ಯುವತಿ. ಟಿಕೆಟ್‌ ಮಾರುವವನು ಮರು ಮಾತನಾಡದೇ ಐದು ಟಿಕೆಟ್‌ಗಳನ್ನು ಆಕೆಯ ಕೈಯಲ್ಲಿ ಇಟ್ಟ. ಅದರಲ್ಲೂ ವಾರದ ಕೊನೆಯ ದಿನಗಳಲ್ಲಿ ಪಂದ್ಯವಿದ್ದರಂತೂ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದಲ್ಲಿ ನೆರೆದಿರುತ್ತಾರೆ. ಬಣ್ಣಬಣ್ಣದಿಂದ ಮೊಗವನ್ನು ಅಲಂಕರಿಸಿಕೊಂಡು ಹುಡುಗರಿಗೂ ಪೋಸ್‌ ಕೊಡುತ್ತಾರೆ.

ಸಾರಿಗೆಯೂ ಜನಸ್ನೇಹಿ
ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಟೂರ್ನಿಯ ಸಂಘಟಕರು ಕೂಡ ಜನಸ್ನೇಹಿಯಾಗಿ ಬದಲಾಗಿದ್ದಾರೆ. ಅಭಿಮಾನಿಗಳಿಗೆ ತೊಂದರೆಯಾಗದಂತೆ ಭದ್ರತಾ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ಥಳೀಯ ಸಾರಿಗೆ ಸೌಲಭ್ಯವೂ ಕ್ರಿಕೆಟ್‌ ಪ್ರೇಮಿಗಳನ್ನು ಐಪಿಎಲ್‌ ಟೂರ್ನಿಗೆ ಮತ್ತಷ್ಟು ಆಪ್ತವಾಗಿಸಿದೆ. ಪಂದ್ಯ ರಾತ್ರಿ 11.30ರ ಸುಮಾರಿಗೆ ಮುಗಿಯುವುದರಿಂದ ಮನೆಗೆ ಮರಳಲು ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕಾಗಿ ಬಿಎಂಟಿಸಿ ಬಸ್‌ ವ್ಯವಸ್ಥೆ ಮಾಡುತ್ತದೆ. ಬೆಂಗಳೂರಿನ ಯಾವುದೇ ಮೂಲೆಗೆ ಹೋಗಬೇಕಾದರೂ ಒಂದಲ್ಲಾ ಒಂದು ಸಾರಿಗೆ ವ್ಯವಸ್ಥೆಯಿದೆ.

ಪಂದ್ಯದ ದಿನ ಮೆಟ್ರೊ ರೈಲು ಕೂಡ ರಾತ್ರಿಯೆಲ್ಲಾ ಕಾರ್ಯನಿರ್ವಹಿಸುತ್ತದೆ. ಇದರಿಂದ ಸಾಮಾನ್ಯ ಜನರಿಗೆ ಭಾರಿ ಅನುಕೂಲವಾಗಿದೆ. ತಡರಾತ್ರಿ ಪಂದ್ಯ ಮುಗಿಯುವುದರಿಂದ ಮನೆಗೆ ಹೋಗುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಅದೆಷ್ಟೋ ಜನ ಕ್ರೀಡಾಂಗಣದ ಹತ್ತಿರ ಬರುವ ಗೊಡವೆಗೆ ಹೋಗುತ್ತಿರಲಿಲ್ಲ. ಟೀವಿಯಲ್ಲಿಯೇ ನೋಡಿದರಾಯಿತು ಎಂದು ಅನಿವಾರ್ಯವಾಗಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಆದರೆ, ಈಗ ಹಾಗೆ ಅಂದುಕೊಳ್ಳುತ್ತಿಲ್ಲ. ಐಪಿಎಲ್‌ ಹೆಚ್ಚು ಜನರನ್ನು ತನ್ನತ್ತ ಸೆಳೆಯಲು ಸ್ಥಳೀಯ ಸಾರಿಗೆ ವ್ಯವಸ್ಥೆಯ ಕೊಡುಗೆಯೂ ಇದೆ.

ಸ್ವಂತಿ ಗುಂಗು, ಅಭಿಮಾನದ ರಂಗು...
ಯಾರಿಗೋ ಕಾಡಿ ಬೇಡಿ ಟಿಕೆಟ್‌ ಗಿಟ್ಟಿಸಿ ಕ್ರೀಡಾಂಗಣಕ್ಕೆ ಹೋದ ಬಳಿಕ ಬಹುತೇಕ ಅಭಿಮಾನಿಗಳಲ್ಲಿ ಸ್ವಂತಿ ತೆಗೆದುಕೊಳ್ಳುವ ಹಂಬಲ. ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಜನರ ಸಮೂಹದ ನಡುವೆ ಸ್ವಂತಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟು ಸಂಭ್ರಮ ಪಡುವ ಕ್ರಿಕೆಟ್‌ ಪ್ರೇಮಿಗಳಿಗೇನು ಕೊರತೆಯಿಲ್ಲ. ಪಂದ್ಯದ ವೇಳೆ ಗೆಳೆಯ ಗೆಳತಿಯರು ಒಟ್ಟಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. 

ಆದರೆ ಪಂದ್ಯ ಆರಂಭಕ್ಕೆ ಒಂದೆರೆಡು ದಿನಗಳ ಮೊದಲು ಕಂಡುಬರುವ ಸಂಭ್ರಮವೇ ಬೇರೆ. ಯಾರೋ ಪರಿಚಯಸ್ಥರ ನೆರವಿನಿಂದ ಆಟಗಾರರು ಅಭ್ಯಾಸ ನಡೆಸುವ ವೇಳೆ ಕ್ರೀಡಾಂಗಣದೊಳಕ್ಕೆ ಬರುವ ಯುವಕ–ಯುವತಿಯರು, ಚಿಣ್ಣರು ತಮ್ಮ ನೆಚ್ಚಿನ ಕ್ರಿಕೆಟ್‌ ತಾರೆಯರ ಜೊತೆ ಸ್ವಂತಿ ತೆಗೆದುಕೊಂಡು ಖುಷಿಪಡುತ್ತಾರೆ. ಅದರಲ್ಲಿಯೂ ಕೊಹ್ಲಿ, ಕ್ರಿಸ್ ಗೇಲ್‌, ಶೇನ್ ವ್ಯಾಟ್ಸನ್‌, ಡಿವಿಲಿಯರ್ಸ್‌ ಬಂದರಂತೂ ಅಭಿಮಾನಿಗಳ ಪ್ರೀತಿಯನ್ನು ಕಟ್ಟಿ ಹಾಕುವುದೇ ಕಷ್ಟ.

ಕ್ರಿಕೆಟ್‌ ಪ್ರೇಮಿಗಳ ಆಸೆಗೆ ಆಟಗಾರರೂ ನಿರಾಸೆ ಮಾಡುವುದಿಲ್ಲ. ಅಭ್ಯಾಸದ ಅವಧಿ ಮುಗಿಸಿಕೊಂಡು ಬಂದು ತಾಳ್ಮೆಯಿಂದ ಎಲ್ಲರ ಜೊತೆಗೆ ಫೋಟೊಕ್ಕೆ ಪೋಸ್ ಕೊಡುತ್ತಾರೆ. ಅದರಲ್ಲಿಯೂ ಗೇಲ್‌ ಮತ್ತು ಕೊಹ್ಲಿ ಅವರು ಮಕ್ಕಳಿಗೆ ಯಾವತ್ತೂ ನಿರಾಸೆ ಮಾಡಿಲ್ಲ. ಆಟೋಗ್ರಾಫ್‌ ಕೊಟ್ಟು, ಫೋಟೊಕ್ಕೂ ಜೊತೆಯಾಗುತ್ತಾರೆ. ಕೆಲ ಬಾರಿ ಅಭಿಮಾನಿಗಳ ಕೈಯಲ್ಲಿನ ಮೊಬೈಲ್‌ ತೆಗೆದುಕೊಂಡು ಕ್ರಿಕೆಟಿಗರೇ ಸ್ವಂತಿ ಕ್ಲಿಕ್ಕಿಸುತ್ತಾರೆ.

ಯುವಕರದ್ದೂ ಸಿಂಹಪಾಲು..
ಸ್ವಂತಿ ತೆಗೆದುಕೊಳ್ಳುವ ವಿಷಯದಲ್ಲಿ ಯುವಕರೂ ಹಿಂದೆ ಬಿದ್ದಿಲ್ಲ. ಸಾಮಾನ್ಯವಾಗಿ ಮೈದಾನದ ನಾಲ್ಕೂ ದಿಕ್ಕುಗಳಲ್ಲಿ ಚಿಯರ್‌ ಗರ್ಲ್ಸ್‌ ಇರುತ್ತಾರೆ. ತಮ್ಮ ತಂಡ ಬೌಂಡರಿ, ಸಿಕ್ಸರ್‌ ಬಾರಿಸಿದಾಗ ವೇದಿಕೆ ಮೇಲೆ ಬಂದು ಕೆಲವು ನಿಮಿಷ ಕುಣಿಯುತ್ತಾರೆ. ಈ ವೇಳೆಯೇ ಸ್ವಂತಿ ತೆಗೆದುಕೊಳ್ಳಬೇಕು ಎನ್ನುವುದು ಬಹುತೇಕ ಯುವಕರ ಆಸೆ. ಇನ್ನೂ ಕೆಲವರು ಕ್ರಿಕೆಟ್‌ ನೋಡುವುದಕ್ಕಿಂತ ಹೆಚ್ಚಾಗಿ ಕ್ರೀಡಾಂಗಣದಲ್ಲಿನ ಸಂಭ್ರಮವನ್ನು ಅನುಭವಿಸಬೇಕು.

ಚಿಯರ್ಸ್‌ ಮಾಡಬೇಕು ಎನ್ನುವ ಲೆಕ್ಕಾಚಾರದೊಂದಿಗೆ ಬಂದಿರುತ್ತಾರೆ. ಅವಕಾಶ ಸಿಕ್ಕರೆ ಚಿಯರ್‌ ಗರ್ಲ್ಸ್‌ ಜೊತೆ ಫೊಟೊ ತೆಗೆಸಿಕೊಳ್ಳುವ ಹಂಬಲ. ಚಿಯರ್‌ ಗರ್ಲ್ಸ್‌ ಕೂಡ ತಮ್ಮ ಅಭಿಮಾನಿಗಳ ಜೊತೆ ಖುಷಿಪಡುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿಯರ್‌ ಗರ್ಲ್ಸ್‌ ಜೊತೆ ಕೆಲವರು ಅಸಭ್ಯವಾಗಿ ವರ್ತಿಸುತ್ತಿರುವ ಸುದ್ದಿಗಳು ಹರಿದಾಡುತ್ತಿವೆ. ಆದ್ದರಿಂದ ಸಂಘಟಕರು ‘ಯಾರೊಂದಿಗೂ ಫೋಟೊಕ್ಕೆ ಪೋಸ್‌ ಕೊಡುವಂತಿಲ್ಲ’ ಎಂದು ಚಿಯರ್‌ ಗರ್ಲ್ಸ್‌ಗೆ ತಾಕೀತು ಮಾಡಿದ್ದಾರೆ. ಇದರಿಂದ ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿರುವುದಂತೂ ನಿಜ.

ಪೆಚ್ಚಾದ ಟಿ–ಶರ್ಟ್‌ ವ್ಯಾಪಾರಿ
ಹೋದ ವರ್ಷ ಕೆಂಪು ಬಣ್ಣದ ಪೋಷಾಕು ಹೊಂದಿದ್ದ ಆರ್‌ಸಿಬಿ ತಂಡ ಈ ಬಾರಿ ತನ್ನ ಉಡುಗೆಯ ಬಣ್ಣದಲ್ಲಿ ಬದಲಾವಣೆ ಮಾಡಿಕೊಂಡಿದೆ. ಇದನ್ನು ಅರಿಯದ ಟಿ–ಶರ್ಟ್‌ ವ್ಯಾಪಾರಿ ಉದ್ಯಾನನಗರಿಯಲ್ಲಿ ನಡೆದ ಮೊದಲ ಪಂದ್ಯಕ್ಕೆ ಹೋದ ವರ್ಷದ ಟೀ ಶರ್ಟ್‌ಗಳನ್ನೇ ಮಾರಾಟಕ್ಕೆ ಇಟ್ಟಿದ್ದರು. ಎಂ.ಜಿ. ರಸ್ತೆಯಲ್ಲಿ ಟಿ–ಶರ್ಟ್‌ ಮಾರುತ್ತಿದ್ದ ಆ ಯುವಕನಿಗೆ ಕ್ರೀಡಾಂಗಣದ ಸನಿಹ ಇನ್ನೊಬ್ಬ ವ್ಯಾಪಾರಿಯ ಪೈಪೋಟಿ.

ಕ್ರೀಡಾಂಗಣದ ಸನಿಹವಿದ್ದ  ವ್ಯಾಪಾರಿಗಳ ಸುತ್ತಲೂ ನೂರಾರು ಗಿರಾಕಿಗಳು. ಅಲ್ಲಿ ಅಭಿಮಾನಿಗಳು ತಮ್ಮ ಅಳತೆಯ ಟಿ–ಶರ್ಟ್‌ ಖರೀದಿಸಲು ಮುಗಿಬಿದ್ದಿದ್ದರು. ಆದರೆ ‘ಹಳೆಯ ವ್ಯಾಪಾರಿ’ಯ ಕಡೆ ಒಬ್ಬರೂ ಸುಳಿಯುತ್ತಿಲ್ಲ. ಈ ವ್ಯಾಪಾರಿಗೆ ಯಾರೂ ತನ್ನ ಬಳಿ ಟಿ–ಶರ್ಟ್‌ ಖರೀದಿಸುತ್ತಿಲ್ಲ ಎನ್ನುವ ಬೇಸರ ಕಾಡುತ್ತಿತ್ತು. ಪಂದ್ಯ ಆರಂಭವಾಗಲು ಅರ್ಧ ಗಂಟೆ ಮೊದಲೇ ಇನ್ನೊಬ್ಬ ವ್ಯಾಪಾರಿ ತನ್ನಲ್ಲಿದ್ದ ಎಲ್ಲಾ ಟಿ–ಶರ್ಟ್‌ಗಳನ್ನು ಮಾರಾಟ ಮಾಡಿ ಜೇಬಿಗೆ ದುಡ್ಡಿಳಿಸಿಕೊಂಡು ಕೈ ಬೀಸುತ್ತಾ ಹಾಯಾಗಿ ‘ಹಳೆಯ ವ್ಯಾಪಾರಿ’ ಬಳಿ ಬಂದ.

ಅದನ್ನು ನೋಡಿದಾಗ ಇವನಿಗೆ ಮನದಲ್ಲಿ ಮತ್ತಷ್ಟು ಬೇಸರ. ಪಂದ್ಯ ಆರಂಭವಾದ ಬಳಿಕ ಬೇರೆ ದಾರಿಯಿಲ್ಲದೆ ‘ಹಳೆಯ ವ್ಯಾಪಾರಿ’ ತನ್ನಲ್ಲಿದ್ದ ಎಲ್ಲಾ ಟಿ–ಶರ್ಟ್‌ಗಳನ್ನು ಗಂಟು ಮೂಟೆ ಕಟ್ಟಿದ. ಆಗ ಆತನ ಬಳಿ ಬಂದ ಪತ್ರಕರ್ತರೊಬ್ಬರು, ‘ಏನಪ್ಪಾ ವ್ಯಾಪಾರ ಜೋರಾ’ ಎಂದಾಗ, ‘ಒಂದೂ ವ್ಯಾಪಾರವಾಗಿಲ್ಲ’ ಎಂದು ಸಪ್ಪೆ ಮೋರೆ ಹಾಕಿದ. ಹಳೆ ಟಿ–ಶರ್ಟ್ ಇಟ್ಟರೆ ಯಾರು ತಗೋತಾರೆ ಎನ್ನುವ ಬಾಣದಂತ ಮರು ಪ್ರಶ್ನೆಗೆ ಹಳೆಯ ವ್ಯಾಪಾರಿಗೆ ಬೆಪ್ಪಾಗುವುದನ್ನು ಬಿಟ್ಟರೆ ಬೇರೆ ಹಾದಿಯೇ ಇರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT