ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯ ತುಡಿತ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆಫ್ಘಾನಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ನಡೆದ ಪ್ರಜಾತಾಂತ್ರಿಕ ಅಧ್ಯಕ್ಷೀಯ ಚುನಾವಣೆಯ ಮತದಾನದಲ್ಲಿ ಜನರು ಅತ್ಯುತ್ಸಾಹ­ದಿಂದ ಭಾಗವಹಿಸಿದ್ದಾರೆ.

ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡು­ತ್ತಿರುವ ತಾಲಿಬಾನ್‌ ಉಗ್ರರ ಬೆದರಿಕೆಯ ಹೊರತಾಗಿಯೂ ಜನರು ಅತ್ಯಧಿಕ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿರುವುದು ಸ್ವಾಗತಾರ್ಹ. ಕಳೆದ 13 ವರ್ಷಗಳಿಂದ ಆಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿರುವ ಅಮೆರಿಕ ನೇತೃ­ತ್ವದ ಮಿತ್ರಪಕ್ಷಗಳ ಸೇನೆ, ದೇಶದಿಂದ ಹೊರಹೋಗಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇದು ಮಹತ್ವದ ಚುನಾವಣೆ.

ಮತದಾನದಲ್ಲಿ ಜನರು ನಿರ್ಭೀ­ತಿ­ಯಿಂದ ಪಾಲ್ಗೊಳ್ಳುವಂತೆ ಮಾಡುವಲ್ಲಿ ಅಲ್ಲಿನ ಸ್ವತಂತ್ರ ಚುನಾವಣಾ ಆಯೋಗ ಮತ್ತು ಈಗಿನ ಅಧ್ಯಕ್ಷ ಹಮೀದ್‌ ಕರ್ಜೈ ಸರ್ಕಾರದ ಪ್ರಯತ್ನ ಯಶಸ್ವಿಯಾಗಿದೆ. ಚಳಿ ಮತ್ತು ಮಳೆಯನ್ನೂ ಲೆಕ್ಕಿಸದೆ ಸುಮಾರು 600 ಮತಗಟ್ಟೆಗಳಲ್ಲಿ ಲಕ್ಷಾಂತರ ಜನರು ಮತದಾನದಲ್ಲಿ ಭಾಗವಹಿಸಿದ್ದಾರೆ.

ವಾಹನ ಸಂಚಾರವೂ ಸಾಧ್ಯವಾಗದ ಗಡಿಭಾಗದ ದುರ್ಗಮ ಪರ್ವತ ಪ್ರದೇಶಗಳ ನೂರಾರು ಮತಗಟ್ಟೆಗಳಿಗೆ ಮತಪೆಟ್ಟಿಗೆ ಮತ್ತು ಮತಪತ್ರಗಳನ್ನು ಒಯ್ಯಲು ಆಯೋಗವು ಸುಮಾರು 2000 ಕತ್ತೆಗಳನ್ನು ಬಳಸಿತ್ತು. ಎಲ್ಲೆಡೆ ಸುಮಾರು 4 ಲಕ್ಷ ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಿತ್ತು. ಜನರ ಉತ್ಸಾಹ ಎಷ್ಟಿತ್ತೆಂದರೆ ಗಡಿಭಾಗದ ಕೆಲವು ಮತಗಟ್ಟೆಗಳಲ್ಲಿ  ಮತಪತ್ರಗಳ ಕೊರತೆ ಉಂಟಾದವು ಎಂದೂ ವರದಿಗಳು ತಿಳಿಸಿವೆ.

ಉಗ್ರಗಾಮಿಗಳು ಒಂದು ಮತಗಟ್ಟೆಯಲ್ಲಿ ಬಾಂಬ್‌ ದಾಳಿ ನಡೆಸಿ ಒಬ್ಬ ಸಾವಿಗೀಡಾಗಿದ್ದು ಹಾಗೂ ಪ್ರಚಾರದ ವೇಳೆಯಲ್ಲಿ  ಉಗ್ರರ ದಾಳಿಗೆ ಒಬ್ಬ ವಿದೇಶಿ ಪತ್ರಕರ್ತೆ ಸಾವಿಗೀಡಾದದ್ದು ಬಿಟ್ಟರೆ ಬೇರೆ ದುರ್ಘಟನೆಗಳು ನಡೆ­ದಿಲ್ಲ.  ಚುನಾವಣೆಯ ನಿರ್ವಹಣೆಗೆ ಒಂದು ಆಯೋಗ ಮತ್ತು ಚುನಾವ­ಣೆಯ ಬಳಿಕದ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ವಿಚಾರಿಸಲು ಇನ್ನೊಂದು ಸ್ವತಂತ್ರ ಆಯೋಗವನ್ನು ನೇಮಿಸಿರುವುದು ಕೂಡಾ ಚುನಾವಣೆ­ಯನ್ನು ಪಾರದರ್ಶಕವಾಗಿ ನಿರ್ವಹಿಸಲು ಸರ್ಕಾರ ಹೊಂದಿರುವ ಬದ್ಧತೆ­ಯನ್ನು ಎತ್ತಿ ತೋರಿಸಿದೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು 27 ಜನರು ಮುಂದಾ­ಗಿದ್ದರೂ,  ನಿಯಮಗಳನ್ನು ಪಾಲಿಸದ 16 ಜನರನ್ನು ಚುನಾವಣಾ ಆಯೋ­ಗವು ಅನರ್ಹಗೊಳಿಸಿದೆ.

ಉಳಿದವರಲ್ಲೂ ಮೂವರು ಸ್ಪರ್ಧೆಯಿಂದ ನಿವೃತ್ತ­ರಾಗಿದ್ದು, 11 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಶೇಕಡಾ 50ಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಏ.24­ರಂದು ಪೂರ್ವಭಾವಿ ಫಲಿತಾಂಶಗಳು ಪ್ರಕಟವಾಗಲಿದ್ದು ಮೇ 14ರ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು. ಆಪ್ಘಾನಿಸ್ತಾನದಲ್ಲಿ ಪೂರ್ಣ ಪ್ರಜಾ­ಪ್ರಭು­ತ್ವ­ವಾದಿ ವ್ಯವಸ್ಥೆ ಅಧಿಕಾರಕ್ಕೆ ಬಂದರೆ, ನೆರೆರಾಷ್ಟ್ರವಾದ ಭಾರತಕ್ಕೆ ಒಳ್ಳೆ­ಯದೇ. ಶಾಂತಿ ಹಾಗೂ ಸುಭದ್ರತೆಯ ಹೊಸ ಪರ್ವದ ಮೂಲಕ ಆಫ್ಘಾನಿ­ಸ್ತಾನ ಅಭಿವೃದ್ಧಿಯ ಹೊಸ ಮಜಲನ್ನು ತಲುಪಲು ಸಾಧ್ಯವಿದೆ.

ಧಾರ್ಮಿಕ ಅಥವಾ ಇನ್ಯಾವುದೋ ರೀತಿಯ ಉಗ್ರವಾದದಿಂದ ಉತ್ತಮ ದೇಶ­ವೊಂದನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವುದು ಆಫ್ಘಾನಿಸ್ತಾನದ ಹೆಚ್ಚು ಹೆಚ್ಚು ಜನರಿಗೆ ಇದೀಗ ಅರಿವಾದಂತಿದೆ. ಹಾಗಾಗಿಯೇ ಎಲ್ಲ ಬೆದರಿಕೆಗಳನ್ನೂ ಮೆಟ್ಟಿ­ನಿಂತು ಜನರು ಮತದಾನದಲ್ಲಿ ಅತ್ಯುತ್ಸಾಹ ತೋರಿದ್ದಾರೆ. ಉಪಖಂಡದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುವ ಎಲ್ಲ ಪ್ರಕ್ರಿಯೆಗಳಿಗೂ ಭಾರತವು ದೃಢ ಬೆಂಬಲ ನೀಡಬೇಕು. ತನ್ಮೂಲಕ ಪರಸ್ಪರ ಸಂಬಂಧವನ್ನು ವೃದ್ಧಿಸಿ, ವಾಣಿಜ್ಯ ವಹಿವಾಟುಗಳನ್ನು ಬಲಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT