ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಬಣ್ಣ

ಮೃದುಲಾ : ಹೆಣ್ಣೊಬ್ಬಳ ಒಡಲಾಳದ ದನಿ
Last Updated 29 ಮಾರ್ಚ್ 2014, 19:30 IST
ಅಕ್ಷರ ಗಾತ್ರ

‘ಹಬ್ಬಕ್ಕ ಸೀರಿ ತೊಗೋತೀನಿ. ಯಾವ ಬಣ್ಣಾ ಬೇಕು?’ ಅಮ್ಮ ಕೇಳಿದ ಕೂಡ್ಲೆ ಸಣ್ಣದೊಂದು ಪಟ್ಟಿ ಸುರು ಆಗ್ತದ. ಈ ಸಲ ಗುಲಾಬಿ ನೋಡು.

‘ಗುಲಾಬಿ ಅಂದ್ರ ಯಾವುದು ತಿಳಿನಾ? ರಾಣಿನಾ?’ ‘ಅಲ್ಲಲ್ಲ, ಅವೆರಡೂ ಬ್ಯಾಡ... ಒಂದು ನಮೂನಿ ಮ್ಯಾಲೆ ಕೇಸರಿ ಇರಬೇಕು. ಆದ್ರ ಕೇಸರಿ ಅಲ್ಲ, ಅದರ ಜೊತಿಗೆ ಗುಲಾಬಿ ಇರಬೇಕು. ಒಂಥರಾ, ಬಿಳೀ ಪಾರಿವಾಳದ ಪಾದದ ತುದಿ ಬಣ್ಣಾ... ಇರ್ತದಲ್ಲ, ಅಂಥಾದ್ದು.  ಸಿಗ್ತದೇನು ನೋಡು...’

ನಮ್ಮಮ್ಮ ‘ಆಯ್ತು. ಮೊದಲ ಪಾರಿವಾಳ ಹುಡಕ್ತೀನಿ. ಆಮ್ಯಾಲೆ ಸೀರಿ ಹುಡುಕೂನಂತ’ ಅಂಥೇಳಿ ಫೋನು ಇಟ್ರು.
ಸೀರಿ ಬಣ್ಣ ಅಂದಕೂಡ್ಲೆ ಹೆಣ್ಮಕ್ಕಳು ಬಿಸಿ ಎಣ್ಣ್ಯಾಗ ಹಾಕಿದ ಹಪ್ಪಳದ್ಹಂಗ ಅರಳ್ತಾರ. ಬ್ರಹ್ಮಗೂ ಅಷ್ಟು ಬಣ್ಣ ಗೊತ್ತದಾವೋ ಇಲ್ಲೋ... ಬಟ್ಟಿ ಬಣ್ಣದ ಬಗ್ಗೆ ಮಾತ್ರ ಹೆಣ್ಮಕ್ಕಳಿಗೆ ಬ್ರಹ್ಮಾಂಡ ಜ್ಞಾನ ಮತ್ತು ಬಯಕಿ.

ಈ ಏಪ್ರಿಲ್‌ ತಿಂಗಳು ಬಂತಂದ್ರ ಸಾಕು, ಸೀರಿ ಖರೀದಿ ಜೋರೆ ಆಗ್ತದ. ಯುಗಾದಿಗೂ ಬೇಕು. ಮದಿವಿ ಸೀಸನ್ನು. ದೊಡ್ಡ ಕುಟುಂಬ. ಯಾರ್ದರೆ ಮದಿವಿ ಇದ್ದೇ ಇರ್ತದ. ಹಂಗಾಗಿ ಸೀರಿ ಖರೀದಿ ನಡೀತದ. ಅವಾಗೆಲ್ಲ ಮಾತಿನ ಚಕ್ರ ಸುತ್ತೂದೇ ಬಣ್ಣದ ಸುತ್ತ.

‘ಒಮ್ಮೆ ನವಿಲಿನ ಕಂಠದ ಕೆಳಗಿನ ನೀಲಿ ಬಣ್ಣದ ಸೀರಿ ಕೇಳಿದ್ರ, ಇನ್ನೊಮ್ಮೆ ಕಂಠದ ನಂತರ ಬರ್ತದಲ್ಲ, ಕಡುಹಸಿರು ಬಣ್ಣ ಹಂತಾದ ಸೀರಿ ನೋಡ್‌ಬೆ’ ಅನ್ನೂದು.ಸೀರಿ ಹುಡುಕಾಕ ಇರುವ  ಸಹನೆಯಾಗಲಿ ಸಂಯಮವಾಗಲಿ ನಂಗಿಲ್ಲ. ಹಿಂಗಾಗಿ ಅಮ್ಮನ ಖರೀದಿನೆ ನಂದು. ಆದ್ರ ಹೇಳಿದ್ರ ಮಾತ್ರ ಇಂಥಾವೇ ಬಣ್ಣ ಹೇಳೂದು.ಒಮ್ಮೆಯಂತೂ ಈರುಳ್ಳಿ ಸಿಪ್ಪಿ ಬಣ್ಣ ಹುಡುಕಾಕ ಹೇಳಿದ್ದೆ. ಹಸೀದೋ, ಒಣಗಿದ್ದೋ ಅಂತ ಕೇಳಕ್ಕಿ ನಮ್ಮವ್ವ.

ನಂದು ನಮ್ಮಮ್ಮನ ಸೀರಿ ಖರೀದಿ ಹಿಂಗ ಸಾಗ್ತದ. ಆದ್ರ ಭಾಳಷ್ಟು ಗಂಡು ಮಕ್ಕಳಿಗೆ ಈ ಬಣ್ಣಗಳ ಪ್ರಪಂಚ ತಿಳಿಯೂದೇ ಇಲ್ಲ. ಅವರಿಗೆ ನೀಲಿ ಅಂದ್ರ ಒಂದೇ ನೀಲಿ. ನಮಗ ಹಂಗಲ್ಲ, ಆನಂದಿ ನೀಲಿ ಬ್ಯಾರೆ, ಈಜುಕೊಳದ ನೀರಿನ ನೀಲಿ ಬ್ಯಾರೆ, ಗಾಢ ನೀಲಿ ಬ್ಯಾರೆಯಾದ್ರ, ಮತ್ತ ಅದರೊಳಗೇ ರಾಯಲ್‌ ಬ್ಲೂ, ಎಲೆಕ್ಟ್ರಿಕ್‌ ಬ್ಲೂ, ಸಫೈರ್‌ ಬ್ಲೂ ಅಂತೆಲ್ಲ ಹೆಸರು ಹೇಳ್ತೀವಿ.
ಒಮ್ಮೆ ಹಿಂಗಾತು ದಾಳಿಂಬಿ ಕಾಳಿನ ಬಣ್ಣದ ಸೀರಿ ಹುಡಕಬೇಕಾಗಿ ಬಂತು. ಅಂಗಡಿಯಂವಾ ಒಂದೆರಡಲ್ಲ, ನಲ್ವತ್ತು ಬಣ್ಣ ತೋರಿಸಿದ. ಒಂದು ಭಾಳ ಹಣ್ಣಾದ್ಹಂಗ ಗಾಢ ಬಣ್ಣಾದ್ರ, ಇನ್ನೊಂದು ಕಿಸಗಾಯಿಯಂಥ ತಿಳಿಬಣ್ಣ. ಹಿಂಗೇ ಕಾಯಿಯಿಂದ ಮಾಗಿ ಹಣ್ಣಾಗುತನಾನೂ ಬಣ್ಣಾ ಹುಡುಕೂದು ನಡದಿತ್ತು. ಬ್ಯಾಸತ್ತು ಅಂಗಡಿಯಂವಾ, ‘ಹಣ್ಣು ಉದುರಿ ಹೋತರಿ ಬಾಯರ... ಇನ್ನ ತೊಗೊಳಾಕ ಬಂದಿಲ್ಲ ನೀವು’ ಅನ್ನೂದ..?

ನಮ್ಮನ್ಯಾಗ ನಮ್ಮಮ್ಮ, ದೊಡ್ಡಮ್ಮ, ಚಿಕ್ಕಮ್ಮ ಇವರೆಲ್ಲಾರೂ ಭಾಳ ಜೀವನಪ್ರೀತಿ ಇರೋರು. ಪ್ರತಿ ಸೀರಿಗೂ ಮ್ಯಾಚಿಂಗ್ ಬಯಸೋರು. ಕಿವ್ಯಾಗಿನ ಹರಳಿನಿಂದ, ಮೂಗುಬೊಟ್ಟಿನಿಂದ ಹಿಡಕೊಂಡು ಅವರ ಮ್ಯಾಚಿಂಗ್‌ ಪ್ರೀತಿ ಗೊತ್ತಾಗ್ತಿತ್ತು. ಬಳಿ ತೊಗೊಳ್ಳೂರು. ಸೀರಿಯೊಳಗ ಇರುವಷ್ಟು ಬಣ್ಣಾನೂ ಹುಡುಕೋರು.

ಕೈಗೆ ಹಿಂದ ಪಾಟ್ಲಿ, ನಡಕ ಕಾಜಿನ ಬಳಿ, ಬಿಲ್ವಾರ, ಮುಂದ ತೋಡೆ, ಇವಿಷ್ಟೂ ಹಾಕ್ಕೊಳ್ಳೋರು. ಒಂದು ಬಳಿ ಹಾಕ್ಕೊಂಡು ಹೆಣ್ಮಕ್ಕಳ ಮ್ಯಾಲೆ ಉಪಕಾರ ಮಾಡದೋರಹಂಗ ಇರೂ ನನಗ ಇವೆಲ್ಲ ಅಗ್ದಿ ಮಜಾ ಅನಸೂದು. ದಿನಾಲೂ ತಗದು ಮತ್ತ ಬಳಿ ಹಾಕೊಳ್ಳಾಕ ಒಂದಿನಿತೂ ಬ್ಯಾಸರ ಇಲ್ಲ ಇವರಿಗೆ.

ಹಿಂಗ ಬಳಿ ವಿಷಯ ಹೇಳುಮುಂದ ನೆನಪಾತು ನೋಡ್ರಿ. ಡಾ. ಶಾಲಿನಿ ರಜನೀಶ್‌ ಐಎಎಸ್‌ ಅಧಿಕಾರಿ. ಅವರ ಜೀವನ ಪ್ರೀತಿನೂ ಮೆಚ್ಚುಹಂತಾದ್ದ. ಸೀರಿಬಣ್ಣ, ಬಿಂದಿ ಬಣ್ಣ ಯವಾಗಲೂ ಒಂದೇ. ಬಿಂದಿ ತೊಗೊಂಡು ಸೀರಿ ಹುಡುಕ್ತಿದ್ರೋ... ಸೀರಿ ತೊಗೊಂಡು, ಬಿಂದಿ ಮಾಡಸ್ತಿದ್ರೋ ಅನ್ನೂವಷ್ಟು ‘ಡಿಟ್ಟೋ ಡಿಟ್ಟೋ ಸೇಮ್‌ ಸೇಮ್‌’ ಕಲರ್‌ ಕುಂಕುಮ ಹಚ್ಗೊಳ್ಳೋರು.

ನಮ್ಮ ವೈನಿನೂ ಬಣ್ಣದ ಮ್ಯಾಲೆ ಬಲು ಹುಚ್ಚಿರೋರು. ನಮ್ಮಣ್ಣಗ ಬಣ್ಣಗುರುಡು. ಕೆಂಪು, ನೀಲಿ, ಹಸಿರು ಎಲ್ಲಾ ಹಿಂದಮುಂದನ ಹೇಳಾಂವ. ಇಡೀ ದೇಶ ಕೆಲಸದ ಮ್ಯಾಲೆ ಓಡ್ಯಾಡಂವ. ‘ನೀ ಇರಲಾರ್ದಾಗ ಮಕ್ಕಳಿಗೆ ನೋಡ್ಕೋಳ್ಳೂದಿಲ್ಲೇನು, ಖಾಲಿ ಕೈಯ್ಯಾಗ ಬರೂಹಂಗಿಲ್ಲ. ಯಾ ಊರಿಗೆ ಹೋದ್ರೂ ಅಲ್ಲಿ ವಿಶೇಷ ಸೀರಿಯರೆ, ಬಟ್ಟಿಯರೆ ತರಾಕಬೇಕು’ ಅನ್ನೂದೊಂದು ಅಲಿಖಿತ ನಿಯಮ. ಹಿಂಗಾಗಿ ಅಣ್ಣ ಒಮ್ಮೆ ಕನಕಾಂಬರ ಬಣ್ಣದ್ದು ತಂದು ಕೊಟ್ಟ. ಅದು ನಮ್ಮ ವೈನಿಗೆ ಭಾಳ ಸೇರತು. ಮುಂದೆಲ್ಲ ಅವೇ ಬಣ್ಣದ್ದ ತರ್ತಿದ್ದ.

ನಮ್ಮ ವೈನಿ ಬ್ಯಾಸತ್ತು ಕಡೀಕ ನೀ ಬಣ್ಣದ್ದು ತರೂಮೊದ್ಲು ನಂಗ ಕೇಳು ಅಂದ್ಲು. ಆಮೇಲೆ ಸುರು ಆತು ನೋಡ್ರಿ. ಹಸರಂದ್ರ, ಕೆಂಪು ಬರೂದು. ಕೆಂಪಂದ್ರ ನೀಲಿ ಬರೂದು... ಪ್ರತಿ ಸಲೆ ತಂದಾಗಲೂ ವಾದ. ಅದಕ್ಕ ಇನ್ನೊಮ್ಮೆ ‘ನಾ ಏನು ತಂದ್ರೂ ಬಿಳೇದರೆ, ಕರೇದರೆ ತರ್ತೀನಿ’ ಅಂತ ಘೋಷಿಸಿದ.

ಅದಕ್ಕ ನಮ್ಮ ವೈನಿ, ‘ನೀರಿನ ಬಿಳೇದು ಬ್ಯಾಡ. ಹಾಲಿನ ಬಿಳೇದು ತೊಗೊಂಡು ಬಾ. ಮೊಸರು ಮ್ಯಾಲೆ ನಿಂತ ತಿಳಿ ಹಳದಿ ಬಿಳೇದು ಇದ್ರು ಅಡ್ಡಿ ಇಲ್ಲ. ಇಲ್ಲಾಂದ್ರ ಹಿಂಗ ಮಾಡು, ವಿಭೂತಿ ಬಿಳೀದು ಸಿಕ್ತದೇನು ನೋಡು. ಮುಗಿಲು ಬಿಳಿಗೆ ಮುಗಿಲಿನ ನೀಲಿ ಕಾಂಬಿನೇಷನ್‌ ಹುಡುಕು...’ ಹಿಂಗ ಬಿಳಿಬಣ್ಣದ ಪಟ್ಟಿ ಉದ್ದ ಬೆಳೀತಿತ್ತು.

ಕರೇದು ತರ್ತೀನಿ ಅಂದ. ಅವಾಗ ಅದಕ್ಕೂ ಅಮಾಸಿ ರಾತ್ರಿ ಕರೀದು ನೋಡು. ಬೆಳದಿಂಗಳ ರಾತ್ರಿ ಮುಗಲು ಇರ್ತದಲ್ಲ, ಒಂದು ನಮೂನಿ ನೀಲಿ ಮಿಶ್ರಿತ ಕರಿ ಅಂಥಾದು ಸಿಗ್ತದೇನು ನೋಡು.. ಜಾಂಬಳಾ ಕರಿ... ಬದನಿಕಾಯಿ ನೀಲಿ ಬಣ್ಣದ ನಡು ಕಾಣ್ತದಲ್ಲ ಅಂಥ ಕರೀದು...

ಹೌದು, ಈ ಪಟ್ಟಿ ಇನ್ನಾ ಬೆಳೀತದ. ಹೆಣ್ಮಕ್ಕಳ ಕಣ್ಣೊಳಗಿನ ಬಣ್ಣ ನೂರು ಥರಾ. ನವಿಲಿನ ಕಣ್ಣಿದ್ಹಂಗ. ಎಲ್ಲಕ್ಕೂ ಒಂದೊಂದು ಶೇಡ್‌. ಎಲ್ಲಕ್ಕೂ ಒಂದೊಂದು ಮೂಡ್‌.ಸೀಮಂತಕ್ಕಂತೂ ಹಸಿರು ಸೀರೀನೇ ತೊಗೋಬೇಕು, ಅಂಚು, ಒಡಲು, ಸೆರಗು ಎಲ್ಲಾ ಹಸರಿದ್ರ ಶ್ರೇಷ್ಠ ಅಂತ ಯಾರೋ ಹೇಳಿದ ಕೂಡ್ಲೆ ಸುರು ಆಗಿತ್ತು. ಮತ್ತ ಪಟ್ಟಿ. ಹುಣಸಿ ಮರದ್ದ ಎಲಿ ಬಣ್ಣದ ಒಡಲು ಇರಲಿ. ಚಿಗುರೆಲಿ ಬಣ್ಣದ್ದು ಸೆರಗು ಅಂಚಿರಲಿ... ಮಾವಿನೆಲಿ ಹಸಿರು ಕಂದು ಆಗ್ತದ್ದಲ್ಲ... ಅಂಥಾದ್ದು ಸಿಗ್ತದೇನು ನೋಡು...
ಹಸರು, ಕೆಂಪಿನಷ್ಟು ಹೇರಳವಾದ ಆಯ್ಕೆ ಯಾವತ್ತೂ ಸಿಗೂದಿಲ್ಲ.

ಜಗತ್ತಿನಾಗ ಇದ್ದಷ್ಟು ಬಣ್ಣದ್ದ ಸೀರಿ ಬೇಕಂದ್ರ ಒಂದು ಜನಮ ಸಾಲೂದಿಲ್ಲ. ಆದ್ರ ಈ ಬಣ್ಣ ಬರೇ ಕಣ್ಣು ತುಂಬಕೊಳ್ಳೂದಕ್ಕಲ್ಲ. ಬದುಕಿಗೆ ಬಣ್ಣಾ ತುಂಬಾಕ. ಅವ್ವ ತಂದ ಸೀರಿ ಗಲ್ಲಕ್ಕ ಮುಟ್ಕೊಂಡಾಗ... ಅದೇ ನವಿರು ಸ್ಪರ್ಶದ ಅನುಭವ. ಗಂಡ ತಂದ ಸೀರಿ ಹೆಗಲಿಗೆ ಹಾಕ್ಕೊಂಡು ಅಂವನ ಕಡೆಯೊಮ್ಮೆ, ಕನ್ನಡಿ ಕಡೆಯೊಮ್ಮೆ ನೋಡಿದ್ರ, ಹೇಳಲಾರದ ಆತ್ಮೀಯ ಭಾವ ಆವರಸ್ತದ. ಅಣ್ಣ ತಂದ ಸೀರಿ ಕೈಯ್ಯಾಗ ಹಿಡದ್ರ, ಕಣ್ತುಂಬಿ ಬರ್ತಾವ. ಮಕ್ಕಳು ತಂದು ಕೊಟ್ಟಾಗಂತೂ ಸಾರ್ಥಕ್ಯದ ಭಾವ. ಹೆಣ್ಮಕ್ಕಳು ಬಣ್ಣಾ ಆರಸ್ತಾರ. ತಂದು ಕೊಟ್ಟ ಗಂಡುಮಕ್ಕಳು ಅವಕ್ಕ ಖರೇನ ಬಣ್ಣಾ , ತುಂಬ್ತಾರ.
ಬದುಕಿಗೆ ಬಣ್ಣ ಬರೂದೇ ಈ ಇಬ್ಬರ ಸಾಂಗತ್ಯ ಮತ್ತು ಲಾಲಿತ್ಯದಿಂದ. ಇಲ್ಲಾಂದ್ರ ಬಣ್ಣಿಲ್ಲದ ಬದುಕು ಆಗ್ತದ. ಬರೇ ಬಿಸಿಲಿದ್ಹಂಗ. ಖರೇ ಬಿಸಿಲಿದ್ಹಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT