ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿ ಬಂದ ಯೋಧ ಕೊಪ್ಪದ

ಮೈನಸ್ 45 ಡಿಗ್ರಿಯಲ್ಲೂ ಜೀವ ಹಿಡಿದುಕೊಂಡ ಧೀರ * ಮುಂದಿನ 48 ಗಂಟೆ ನಿರ್ಣಾಯಕ
Last Updated 10 ಫೆಬ್ರುವರಿ 2016, 17:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಆರು ದಿನಗಳ ಹಿಂದೆ ಹಿಮಪಾತಕ್ಕೆ ಸಿಲುಕಿ ಪವಾಡಸದೃಶವಾಗಿ ಬದುಕುಳಿದ ಕುಂದಗೋಳ ತಾಲ್ಲೂಕು ಬೆಟದೂರಿನ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ ಅವರನ್ನು ದೆಹಲಿಯ ಸೇನಾ ಆಸ್ಪತ್ರೆಗೆ (ರಿಸರ್ಚ್‌ ಎಂಡ್‌ ರೆಫರಲ್‌ ಆಸ್ಪತ್ರೆ) ಮಂಗಳವಾರ ದಾಖಲಿಸಲಾಗಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಮುಂದಿನ 48 ತಾಸು ಅತ್ಯಂತ ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರನ್ನು ಸಿಯಾಚಿನ್‌ ನೀರ್ಗಲ್ಲು ಪ್ರದೇಶದ ಬೇಸ್‌ಕ್ಯಾಂಪ್‌ಗೆ ಕರೆತರಲಾಯಿತು. ನಂತರ ವಿಶೇಷ ಆಂಬುಲೆನ್ಸ್‌ ವಿಮಾನದಲ್ಲಿ ದೆಹಲಿಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿದೆ. 

ಸಿಯಾಚಿನ್‌ನ ಸಮುದ್ರ ಮಟ್ಟದಿಂದ 19,600 ಅಡಿ ಎತ್ತರದ  ಸೋನಮ್‌ ಪ್ರದೇಶದಲ್ಲಿ ಕೊಪ್ಪದ ಮತ್ತು ಅವರ ಜತೆಗಿದ್ದ ಇತರ ಒಂಬತ್ತು ಯೋಧರು ಫೆ. 3ರಂದು ಹಿಮಪಾತಕ್ಕೆ ಸಿಕ್ಕಿದ್ದರು. ಈ ಪ್ರದೇಶದಲ್ಲಿ ಈಗಿನ ಉಷ್ಣತೆ –45 ಡಿಗ್ರಿ ಸೆಲ್ಸಿಯಸ್‌. ಪಾಕಿಸ್ತಾನ ಜತೆಗಿನ ಗಡಿ ನಿಯಂತ್ರಣ ರೇಖೆಗೆ ಅತ್ಯಂತ ಸಮೀಪದಲ್ಲಿ ಈ ಪ್ರದೇಶ ಇದೆ.

ಕೈಚೆಲ್ಲದ ಕೆಚ್ಚು: ಸಿಯಾಚಿನ್‌ ಬೇಸ್‌ಕ್ಯಾಂಪ್‌ನಲ್ಲಿ ಇರುವ ಅಧಿಕಾರಿಗಳು ಮತ್ತು ರಕ್ಷಣಾ ಕಾರ್ಯಕರ್ತರು ಅಸಾಧ್ಯ ಎನ್ನುವಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪ್ರಯತ್ನ ಕೈಬಿಡದಿರಲು ನಿರ್ಧರಿಸಿದ್ದರು. ಸೋಮವಾರದ ಹೊತ್ತಿಗೆ ಸತತ ಐದು ದಿನಗಳ ಹುಡುಕಾಟ ಅವರ ಧೃತಿಗೆಡಿಸಲಿಲ್ಲ.

ಯೋಧರು ಒಂದು ವೇಳೆ ಗಟ್ಟಿ ಫೈಬರ್‌ನ ಟೆಂಟ್‌ನೊಳಗೆ ಸಿಕ್ಕಿಕೊಂಡಿದ್ದರೆ ಅವರು ಬದುಕುಳಿದಿರುವ ಸಾಧ್ಯತೆ ಇದ್ದೇ ಇದೆ ಎಂದು ಅವರು ನಂಬಿದ್ದರು.

ಅಸಾಧ್ಯ ಪ್ರತಿಕೂಲ ಪರಿಸ್ಥಿತಿ: ಹಿಮಪಾತಕ್ಕೆ ಸಿಕ್ಕಿ ಮೃತಪಟ್ಟಿರುವ ಯೋಧರ ದೇಹಗಳನ್ನು ಮಂಜುಗಡ್ಡೆ ಅಡಿಯಿಂದ ಹೊರಗೆ ತೆಗೆಯಲು ಇನ್ನಷ್ಟು ಸಮಯ ಬೇಕು ಎಂದು ಸೇನೆಯ ಮೂಲಗಳು ತಿಳಿಸಿವೆ.

ಸೋನಮ್‌ ಕಾವಲು ಠಾಣೆ ಪ್ರದೇಶದಲ್ಲಿ ಹಿಮಗಾಳಿ ಅತ್ಯಂತ ಜೋರಾಗಿ ಬೀಸುತ್ತಿದೆ. ಅತಿ ನಿಪುಣ ಮತ್ತು ಈ ವಾತಾವರಣಕ್ಕೆ ಅತಿ ಬೇಗ ಹೊಂದಿಕೊಳ್ಳಬಲ್ಲ ರಕ್ಷಣಾ ಕಾರ್ಯಕರ್ತರು ಕೂಡ ಸತತವಾಗಿ 30 ನಿಮಿಷಕ್ಕಿಂತ ಹೆಚ್ಚು ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲ. ಹಲವು ರಕ್ಷಣಾ ತಂಡಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರಲ್ಲಿ ಜಗತ್ತಿನ ಅತ್ಯಂತ ಪರಿಣತ ರಕ್ಷಣಾ ಕಾರ್ಯಕರ್ತರಿದ್ದಾರೆ.

ಒಂದು ತಂಡ ಮಂಜುಗಡ್ಡೆ ಅಗೆದು ಬಸವಳಿದಾಗ ಮತ್ತೊಂದು ತಂಡ ಕೆಲಸಕ್ಕೆ ಇಳಿಯುತ್ತದೆ.  ಉಸಿರಾಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇರುವ ಈ ಪ್ರದೇಶದಲ್ಲಿ ಮಂಜುಗಡ್ಡೆ ಅಗೆಯುವುದು ರಕ್ಷಣಾ ಕಾರ್ಯಕರ್ತರಿಗೆ ಭಾರಿ ಸವಾಲಾಗಿದೆ.

ಸಾವಿರ ಅಡಿಯ ಬಂಡೆ: ಯೋಧರ ಶಿಬಿರದ ಮೇಲೆ ಸಾವಿರ ಅಡಿ ಅಗಲ ಮತ್ತು 600 ಅಡಿಗೂ ಹೆಚ್ಚು ಎತ್ತರದ ಮಂಜುಗಡ್ಡೆಯ ಭಾರಿ ಬಂಡೆ ಕುಸಿದಿತ್ತು.

ದೆಹಲಿಗೆ ಕುಟುಂಬ: ಇಲ್ಲಿಯ ಸೇನಾ ಆಸ್ಪತ್ರೆಯಲ್ಲಿರುವ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬ ಸದಸ್ಯರು ಮಂಗಳವಾರ ರಾತ್ರಿ ಧಾರವಾಡ ತಾಲೂಕಿನ ಬೆಟದೂರಿನಿಂದ ದೆಹಲಿಗೆ ಧಾವಿಸಿದರು.

ಗೋವಾದಿಂದ ವಿಮಾನದಲ್ಲಿ ಆಗಮಿಸಿದ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಕೊಪ್ಪದ, ಅವರ ಎರಡು ವರ್ಷದ ಪುತ್ರಿ ನೇತ್ರ, ತಾಯಿ ಬಸಮ್ಮ ಕೊಪ್ಪದ, ಸಂಬಂಧಿಗಳಾದ ಸುಭಾಷ್‌, ಗೋವಿಂದ ಹಾಗೂ ರಾಮಪ್ಪ ಅವರು ತನ್ನ ಅತಿಥಿಗಳೆಂದು ರಾಜ್ಯ ಸರ್ಕಾರ ಪ್ರಕಟಿಸಿದೆ.

ಮಿಡಿಯುತ್ತಿದ್ದ ಹೃದಯ
ಕೊಪ್ಪದ ಅವರನ್ನು ಪತ್ತೆ ಮಾಡಿದಾಗ ಅವರು 25 ಅಡಿ ಮಂಜುಗಡ್ಡೆ ರಾಶಿಯ ಅಡಿ ಸಿಲುಕಿದ್ದರು. ಗಟ್ಟಿ ಫೈಬರ್‌ ಟೆಂಟ್‌ನೊಳಗಿದ್ದ ಅವರಿಗೆ ಪ್ರಜ್ಞೆ ಇರಲಿಲ್ಲ. ಆದರೆ ಹೃದಯ ಅತ್ಯಂತ ಕ್ಷೀಣವಾಗಿ ಬಡಿಯುತ್ತಿತ್ತು. ರಕ್ಷಣಾ ತಂಡದಲ್ಲಿದ್ದ ವೈದ್ಯರೊಬ್ಬರು ಸತತ ಪ್ರಯತ್ನ ನಡೆಸಿ ಕೊಪ್ಪದ ಅವರ ಹೃದಯ ಬಡಿತದ ವೇಗವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.

ಗಂಭೀರ ಸ್ಥಿತಿ
ಹನುಮಂತಪ್ಪ ಕೊಪ್ಪದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ಆಸ್ಪತ್ರೆಯು ಮಾಹಿತಿ ನೀಡಿದೆ. ಅದೃಷ್ಟವಶಾತ್‌, ಅತಿ ಶೀತಕ್ಕೆ ತೆರೆದುಕೊಳ್ಳುವುದರಿಂದ ಉಂಟಾಗುವ ಹಿಮ ಕಡಿತ ಅಥವಾ ಎಲುಬು ಮುರಿತ ಅವರಿಗೆ ಆಗಿಲ್ಲ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದರಿಂದ ಶ್ವಾಸಕೋಶ ಮತ್ತು ಶ್ವಾಸನಾಳಗಳನ್ನು ರಕ್ಷಿಸುವುದಕ್ಕಾಗಿ ಕೊಪ್ಪದ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ದೇಹವನ್ನು ಬೆಚ್ಚಗಾಗಿಸುವ ಮತ್ತು ತಣ್ಣಗಾಗಿ ಹೋಗಿರುವ ದೇಹದ ಭಾಗಗಳಿಗೆ ರಕ್ತ ಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಹೊಂದಿಕೊಳ್ಳಲು ದೇಹ ಶ್ರಮಿಸುವಾಗ ಕೆಲವು ಸಮಸ್ಯೆಗಳು ಉಂಟಾಗಬಹುದು.

ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದು ರಕ್ತದೊತ್ತಡ ಅತ್ಯಂತ ಕಡಿಮೆ ಇದೆ. ಪಿತ್ತಜನಕಾಂಗ ಮತ್ತು ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇಹದಲ್ಲಿ ತೇವಾಂಶ ಇಲ್ಲ, ದೇಹದ ಉಷ್ಣತೆ, ರಕ್ತದಲ್ಲಿನ ಸಕ್ಕರೆ ಅಂಶ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಮತ್ತು  ಆಮ್ಲಜನಕ ಕೊರತೆ ತೀವ್ರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲು ಪ್ರಕ್ರಿಯೆ
*ಸೋಮವಾರ ಸಂಜೆ ಸೋನಮ್‌ ಪ್ರದೇಶದಲ್ಲಿ ಕೊಪ್ಪದ ಜೀವಂತವಾಗಿರುವುದು ಪತ್ತೆ
* ಮಂಗಳವಾರ ಬೆಳಗ್ಗೆ ಹೆಲಿಕಾಪ್ಟರ್‌ ಮೂಲಕ ಸಿಯಾಚಿನ್‌ ಬೇಸ್‌ಕ್ಯಾಂಪ್‌ಗೆ ರವಾನೆ
* ಅಲ್ಲಿಂದ ಥಾಯಿಸ್‌ ವಾಯು ನೆಲೆಗೆ
* ವಾಯುಪಡೆ ವಿಶೇಷ ವಿಮಾನದಲ್ಲಿ ತುರ್ತು ಆರೈಕೆ ತಜ್ಞರ ಜತೆ ದೆಹಲಿಗೆ, ಸೇನಾ ಆಸ್ಪತ್ರೆಗೆ ದಾಖಲು
* ದೆಹಲಿಗೆ ಕುಟುಂಬ ಸದಸ್ಯರು

ಅಪ್ರತಿಮ ಯೋಧ: ಪ್ರಧಾನಿ ಬಣ್ಣನೆ
ಸಿಯಾಚಿನ್‌ ಹಿಮಪಾತದಲ್ಲಿ ಸಿಲುಕಿ ಬದುಕಿ ಬಂದಿರುವ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ ‘ಅಪ್ರತಿಮ ಯೋಧ’ ಮತ್ತು ಅವರ ‘ತಾಳಿಕೊಳ್ಳುವ ಶಕ್ತಿ ಮತ್ತು ಯಾವ ಪರಿಸ್ಥಿತಿಯಲ್ಲಿಯೂ ಎದೆಗುಂದದ ಸ್ಫೂರ್ತಿ’ಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ರಿಸರ್ಚ್‌ ಎಂಡ್‌ ರೆಫರಲ್‌ ಆಸ್ಪತ್ರೆಗೆ ಬಂದು ಕೊಪ್ಪದ ಅವರನ್ನು  ನೋಡಿದ ನಂತರ ಪ್ರಧಾನಿ ಅವರು ಹೀಗೆ ಟ್ವೀಟ್‌ ಮಾಡಿದ್ದಾರೆ.

‘ಲ್ಯಾನ್ಸ್‌ ನಾಯಕ್ ಹನುಮಂತಪ್ಪ ಅವರಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಅವರ ಚೇತರಿಕೆಗೆ ನಾವೆಲ್ಲರೂ ಹಾರೈಸುತ್ತಿದ್ದೇವೆ ಮತ್ತು ಪ್ರಾರ್ಥಿಸುತ್ತಿದ್ದೇವೆ’ ಎಂದು ಪ್ರಧಾನಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಆಸ್ಪತ್ರೆಗೆ ತೆರಳುವುದಕ್ಕೆ ಮೊದಲು ಟ್ವೀಟ್‌ ಮಾಡಿದ್ದ ಪ್ರಧಾನಿ, ‘ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಅವರನ್ನು ನೋಡಲು ಹೋಗುತ್ತಿದ್ದೇನೆ. ಇಡೀ ದೇಶದ ಪ್ರಾರ್ಥನೆ ನನ್ನೊಂದಿಗಿದೆ’ ಎಂದು ಹೇಳಿದ್ದರು.

ಸೇನಾ ಮುಖ್ಯಸ್ಥ ಜನರಲ್ ದಲ್ಬಿರ್‌ ಸಿಂಗ್‌ ಸುಹಾಗ್‌ ಅವರೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

****
ಕೊಪ್ಪದ ಅಪ್ರತಿಮ ಯೋಧ. ಎಂತಹ ಕಷ್ಟವನ್ನಾದರೂ ತಾಳಿಕೊಳ್ಳುವ ಶಕ್ತಿ, ಎದೆಗುಂದದ ಸ್ಫೂರ್ತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT