ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಅಲ್ಪ ವಿರಾಮ ಸಾವು ಪೂರ್ಣ ವಿರಾಮ

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಬಿಳಿ ಹಲಗೆ ಮೇಲೆ ಹಾಕಲಾಗಿದ್ದ ಉಸುಕಿನಲ್ಲಿ ಮರಳು ಶಿಲ್ಪ ಕಲಾವಿದ ರಾಘವೇಂದ್ರ ಅವರು ಮೊದಲು ಅಲ್ಪವಿರಾಮ ಚಿಹ್ನ, ಬಳಿಕ ಇನ್ನಿತರ ವಿವರಗಳನ್ನು ಬರೆಯುತ್ತಿದ್ದಂತೆ, ಪ್ರೊಜೆಕ್ಟರ್ ಮೂಲಕ ಅದು ಬೃಹತ್ ಪರದೆ ಮೇಲೆ ಕಾಣಿಸಿತು!

ನಿರ್ದೇಶಕ ಜಿಯಾವುಲ್ಲಾ ಖಾನ್, ನಿರ್ಮಾಪಕಿ ಬಿ.ಎನ್. ವಾಣಿ ಕಾಂತರಾಜು ಸೇರಿದಂತೆ ಸಭಿಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಜಿಯಾವುಲ್ಲಾ ಖಾನ್ ಅವರ ಹೊಸ ಸಿನಿಮಾದ ಶೀರ್ಷಿಕೆ ಅನಾವರಣದ ಆ ಸಮಾರಂಭ ಹೀಗೆ ವಿಭಿನ್ನವಾಗಿತ್ತು.

ಈ ಮೊದಲು ‘ಪ್ರವಾದಿ’ ಎಂಬ ಸಿನಿಮಾ ಮಾಡಲು ಖಾನ್ ಮುಂದಾಗಿದ್ದರು. ಆದರೆ ಅದೇಕೋ ಅರ್ಧಕ್ಕೇ ಸ್ಥಗಿತಗೊಂಡಿತು. ಈಗ ಬರೀ ಚಿಹ್ನೆಯನ್ನೇ ಶೀರ್ಷಿಕೆಯಾಗಿಸಿಕೊಂಡ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ‘ವಿದ್ಯುತ್ ಬಲ್ಬ್ ಕಂಡು ಹಿಡಿಯುವ ಮೊದಲಿಗೆ ಥಾಮಸ್ ಆಲ್ವಾ ಎಡಿಸನ್ ಐನೂರಕ್ಕೂ ಹೆಚ್ಚು ಪ್ರಯತ್ನಗಳಲ್ಲಿ ವಿಫಲನಾಗಿದ್ದ. ಹಾಗೆಂದು ಆತ ತನ್ನ ಸಂಶೋಧನೆ ನಿಲ್ಲಿಸಲಿಲ್ಲ. ಹೀಗಾಗಿ ಪ್ರಯತ್ನಕ್ಕೆ ಕಾಮಾ ಹಾಕಬೇಕೇ ಹೊರತೂ ಫುಲ್‌ ಸ್ಟಾಪ್‌ ಅಲ್ಲ’ ಎಂದು ನಿರ್ದೇಶಕ ಜಿಯಾವುಲ್ಲಾ ಖಾನ್ ಸ್ಪಷ್ಟನೆ ನೀಡಿದರು. ಅವರ ಸಿನಿಮಾದ ಶೀರ್ಷಿಕೆಯೇ ಒಂದು ಚಿಹ್ನೆ. ಅದು ಕಾಮಾ– ಅಂದರೆ ಅಲ್ಪ ವಿರಾಮ. ಆ ಬಗ್ಗೆಯೇ ಅವರು ಸುದೀರ್ಘ ವಿವರಣೆ ಕೊಟ್ಟರು.

ಸಿನಿಮಾದ ಟ್ಯಾಗ್‌ಲೈನ್‌ ‘ಪ್ರೀತಿ ಹಾಗೂ ಸೆಕ್ಸ್‌ ನಡುವಿನ ಸಮರ. ಬದುಕು ಅಲ್ಪ ವಿರಾಮ, ಸಾವು ಪೂರ್ಣ ವಿರಾಮ’. ಈ ಚಿತ್ರ ಆರಂಭಕ್ಕೂ ಮುನ್ನ ಖಾನ್ ಹಲವು ಅಡ್ಡಿ ಆತಂಕ ಎದುರಿಸಬೇಕಾಯಿತಂತೆ. ಹಾಗಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಅವರು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಸಿನಿಮಾ ತೆರೆಕಂಡ ಮೇಲೆ ಅದು ಬರೀ ಕನ್ನಡ ಮಾತ್ರವಲ್ಲ ಜಾಗತಿಕ ಚಿತ್ರರಂಗದಲ್ಲಿ ಮಹತ್ವದ ಪಾತ್ರ ಗಳಿಸಲಿದೆ ಎಂಬ ವಿಶ್ವಾಸ ಅವರದು.

ಖಾನ್‌ ಅವರ ನಿರೂಪಣಾ ಶೈಲಿ ಮೆಚ್ಚಿ, ವಾಣಿ ಕಾಂತರಾಜು ಹಣ ಹಾಕಲಿದ್ದಾರೆ. ‘ಫೆಬ್ರುವರಿ 16ರಂದು ಸಿನಿಮಾದ ಮುಹೂರ್ತ ನೆರವೇರಲಿದೆ. ಅವತ್ತು ನಟ–ನಟಿಯರ ಆಯ್ಕೆಯನ್ನು ಪ್ರಕಟಿಸಲಾಗುವುದು’ ಎಂದು ವಾಣಿ ಹೇಳಿದರು. ಸಂಗೀತ ಸಂಯೋಜಿಸುವ ಕೆಲಸ ಕೀರ್ತನ್ ಅವರದು. ಬೆಂಗಳೂರು, ಮಡಿಕೇರಿ, ಆಗ್ರಾ, ರಾಜಸ್ತಾನದ ಜತೆ ಪಾಕಿಸ್ತಾನದಲ್ಲೂ ಚಿತ್ರೀಕರಣ ನಡೆಸುವ ಯೋಜನೆ ಖಾನ್ ಅವರದು. ಕಲಾವಿದರಾದ ಮನದೀಪ್‌ ರಾಯ್‌, ಆದಿ ಲೋಕೇಶ್, ಗಾಯಕ ಗುರುರಾಜ ಹೊಸಕೋಟೆ, ವಿತರಕ ಕೆ.ವಿ.ನಾಗೇಶಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT