ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಟ್ಟಿಕೊಟ್ಟ ಅಮೃತಾ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತ ವರ್ಷಿಣಿ’ ಧಾರಾವಾಹಿಯ ಮೂಲಕ ರಾಜ್ಯದ ಮನೆಮಾತಾದವರು ರಜಿನಿ. ಈಗವರು ಬಡ್ತಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಚಲನಚಿತ್ರದಲ್ಲಿ ಅಭಿನಯಿ ಸುತ್ತಿದ್ದಾರೆ. ಹಿರಿಯ ನಿರ್ದೇಶಕ  ಬರ ಗೂರು ರಾಮಚಂದ್ರಪ್ಪ ನಿರ್ದೇಶನ  ‘ಮರಣ ದಂಡನೆ’  ಚಿತ್ರದಲ್ಲಿ  ನಟ ಶ್ರೀಕಾಂತ್‌(ಶ್ರೀಕಿ) ಸಹೋದರಿಯಾಗಿ ಅಭಿನಯಿಸಿದ್ದಾರೆ.

ಮರಣದಂಡನೆ ದೆಹಲಿಯ ಹೆಬಿಟೇಟ್‌ ಚಿತ್ರೋತ್ಸವ ಹಾಗೂ ಮುಂಬಯಿಯ ‘ಏಷಿಯನ್‌ ಚಿತ್ರೋತ್ಸವ  ಗಳಲ್ಲಿ ಪ್ರದರ್ಶನ ಕಂಡಿದೆ. ಜೈಪುರದಲ್ಲಿ ನಡೆದ ‘ರಾಜಸ್ತಾನ ಚಿತ್ರೋತ್ಸವ’ದಲ್ಲೂ  ತೆರೆಕಂಡಿದೆ. ಹೀಗೆ ರಾಜ್ಯದಲ್ಲಿ ಬಿಡುಗಡೆಯಾಗದಿದ್ದರೂ ಅಪಾರ ನಿರೀಕ್ಷೆ ಹುಟ್ಟಿಸಿದೆ. ಇಂತಹ ಸಿನಿಮಾದಲ್ಲಿ ನಟಿಸಿರುವ ರಜನಿ ಅವರಿಗೂ ಇದೊಂದು ಮಹತ್ವದ ಚಿತ್ರ. ನೃತ್ಯ, ಗಾಯನ ಬಲ್ಲ ಅವರದು ಬಹುಮುಖ ಪ್ರತಿಭೆ. ತಮ್ಮ ಸಿನಿಮಾ ಹಾಗೂ ಕಿರುತೆರೆ ಪಯಣದ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*ಓದಿದ್ದು, ಬಣ್ಣದ ಬದುಕಿನ ನಂಟಿನ ಬಗ್ಗೆ ಹೇಳಿ...
ನಮ್ಮೂರು ತುಮಕೂರು ಬಳಿಯ ಅರಳೆಪೇಟೆ. ನಾನು ಬಿಕಾಂ ಓದಿದ್ದೇನೆ.  ಆಗ ಒಂದು ಆ್ಯಡ್‌ಗೆ ಶೂಟ್‌ ಮಾಡ್ತಾ ಇದ್ದೆ. ಆ ವೇಳೆ ರವಿ ಗರಣಿ ಅವರು ಮಾಡುತ್ತಿದ್ದ ಧಾರಾವಾಹಿಗೆ ಹೀರೋಯಿನ್‌ ಪಾತ್ರಕ್ಕೆ ಬೇಕಾಗಿದ್ದಾರೆ ಎಂದು ತಿಳಿಯಿತು. ಆಡಿಶನ್‌ನಲ್ಲಿ ಭಾಗವಹಿಸಿದೆ. ಆಯ್ಕೆಯೂ ಆದೆ. ಹೀಗೆ ಸೀರಿಯಲ್‌ ಪ್ರಪಂಚಕ್ಕೆ ಎಂಟ್ರಿ. ಅಮೃತವರ್ಷಿಣಿ ನನ್ನ ಮೊದಲ ಧಾರಾವಾಹಿ. ಈಗಾಗಲೇ 1160 ಎಪಿಸೋಡ್‌ಗಳು ಬಂದಿವೆ.

*ತರಬೇತಿ ಇಲ್ಲದೆ ನಟನೆಗೆ ಧುಮುಕಿದ್ರಿ, ಕಷ್ಟವಾಗಲಿಲ್ಲವೇ?
ಆರಂಭದಲ್ಲಿ ಕಷ್ಟವಾಯ್ತು. ಹೋಗ್ತಾ ಹೋಗ್ತಾ ತಿಳಿಕೊಂಡೆ. ಎಲ್ಲ ಸಹ ಕಲಾವಿದರು ಬೆಂಬಲ ನೀಡಿದರು. ಎಪಿಸೋಡ್‌ ನಿರ್ದೇಶಕ ಕುಮಾರ್‌ ಹಾಗೂ ನಿರ್ದೇಶಕ ರವಿ ಗರಣಿ ಅವರು  ಹೇಳಿಕೊಟ್ಟರು. ಇದೆಲ್ಲದರಿಂದಾಗಿ ನನಗೆ ಮೂರು ವರ್ಷ ಬೆಸ್ಟ್‌ ಹೀರೊಯಿನ್‌, ಮೀಡಿಯಾ ಎಚಿವ್‌ಮೆಂಟ್‌ ಅವಾರ್ಡ್‌ ಬಂತು.

*ಮರಣದಂಡನೆ ಸಿನಿಮಾದ ಅನುಭವ ಹೇಗಿತ್ತು?
ನನಗೆ ಸೀರಿಯಲ್ ನಟನೆ ಗೊತ್ತಿತ್ತು. ಆದರೆ ಸಿನಿಮಾ ಹೊಸದು. ಅಲ್ಲೂ ಸೀರಿಯಲ್‌ ಹಾಗೆ ಅಭಿನಯಿಸುತ್ತಿದ್ದೆ. ಆಗ  ಬರಗೂರು ಅವರು ‘ಇದು ಸೀರಿಯಲ್ ಅಲ್ಲ’ ಅಂತ ನೆನಪು ಮಾಡಿಕೊಡುತ್ತಿದ್ದರು. ಎಲ್ಲರು ಫ್ರೆಂಡ್ಲಿ ಆಗಿ ಹೇಳಿಕೊಟ್ಟರು. ಇದರಲ್ಲಿ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯಿ ಮುಂತಾದ ಹಿರಿಯ ನಟರು ಇದ್ದಾರೆ. ಈ ಸಿನಿಮಾವನ್ನು ಕಮಲ್‌ ಹಾಸನ್ ಅವರೇ ಹೊಗಳಿದ್ದಾರೆ.

*ಸೀರಿಯಲ್‌ನಿಂದ ಫಿಲ್ಮ್‌ಗೆ ಹೋಗುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅದೇನೂ ದೊಡ್ಡ ವಿಷಯ ಅಲ್ಲ. ಎಲ್ಲರಿಗೂ ದೊಡ್ಡ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇರುತ್ತೆ. ನನಗೂ 15 ರಿಂದ 20 ಫಿಲ್ಮ್‌ಗೆ ಆಫರ್ ಬಂದಿತ್ತು. ಆದರೆ ನಾನು ಹೋಗಲಿಲ್ಲ. ನಟಿಸಬೇಕು ಎಂಬ ಒಂದೇ ಕಾರಣದಿಂದ ಅಲ್ಲಿಗೆ ಹೋಗಬಾರದು. ಒಳ್ಳೆ ಕಥೆ, ನಿರ್ದೇಶಕ, ಸಹ ನಟರು ಸಿಗಬೇಕು. ಧಾರಾವಾಹಿ ಹಾಗಲ್ಲ. ಇಲ್ಲಿ ಫ್ಯಾಮಿಲಿ ಆಡಿಯನ್ಸ್‌ ಇದಾರೆ. ಸಿನಿಮಾದಲ್ಲಿ ಹಾಗಲ್ಲ. ನಾನೀಗ ಎಲ್ಲಿ ಹೋದರೂ ನೀವು ಅಮೃತಾ ಅಲ್ವಾ ಅಂತ ಗುರುತಿಸುತ್ತಾರೆ. ಇಂತಹ ಸೊಸೆ, ಮಗಳು ಸಿಗಬೇಕು ಎಂದು ಬಯಸುತ್ತಾರೆ.  ಹಣ, ಜನಪ್ರಿಯತೆ ಆಸೆಗೆ ಬೀಳಬಾರದು. ಬರಗೂರು ಖ್ಯಾತ ನಿರ್ದೇಶಕರು ಎಂಬ ಕಾರಣಕ್ಕೆ ಒಪ್ಪಿಕೊಂಡೆ. ನಾವು ಮಾಡೊ ಪಾತ್ರಕ್ಕೆ ವೇಟ್‌ ಇರಬೇಕು.

*ಡಾನ್ಸಿಂಗ್ ಸ್ಟಾರ್‌ ಜರ್ನಿ ಹೇಗಿತ್ತು?
ಅದೊಂದು awesome ಜರ್ನಿ. ಲೈಫ್‌ನಲ್ಲಿ ಮರೆಯಲಾಗದ ಪಯಣ. ಒಮ್ಮೆಯಾದರೂ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದೆ. ನನಗೆ ಅಮೃತಾ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಡಾನ್ಸಿಂಗ್ ಸ್ಟಾರ್‌ನಲ್ಲಿ ಛಾಲೆಂಜ್‌ ಇತ್ತು. ನಾನು ಡಾನ್ಸ್‌ ಕಲಿತಿರಲಿಲ್ಲ. ಆದರೂ ಅಲ್ಲಿ ಎಲ್ಲ ರೀತಿಯ ಡಾನ್ಸ್ ಮಾಡಿದೆವು.  ಆದರೆ ಅದೃಷ್ಟ ಇರಲಿಲ್ಲ. ಫೈನಲ್‌ಗೆ ಎರಡು ವಾರ  ಇತ್ತು ಆಗ ನನ್ನ ಕಾಲು ಕೈ ಕೊಡ್ತು. ಕಾಲು ಮುರಿದ ಮೇಲೂ ಡಾನ್ಸ್‌ ಮಾಡಿದೆ.

ಆದರೆ ಆಗಲಿಲ್ಲ. ನಾನು ಮುಂದುವರಿ ಸಲಾಗದೆ ಬಿಡಬೇಕಾಯಿತು. ರಾತ್ರಿ  2.30 ರವರೆಗ ಪ್ರಾಕ್ಟೀಸ್‌ ಮಾಡ್ತಾ ಇದ್ವಿ. ನಾನು ಗೆಲುವು ಸಾಧಿಸುವ ಎಲ್ಲ ಸಾಧ್ಯತೆ ಇತ್ತು. ನನಗೆ ವೋಟಿಂಗ್ ಸಹ  ಶೇ100  ಬಂದಿತ್ತು. ಅನಿವಾರ್ಯವಾಗಿ ಶೋನಿಂದ ಹೊರಬಂದೆ. ಆಗ ಎಷ್ಟು ಬೇಸರವಾಗಿತ್ತು ಎಂದರೆ ಎಲ್ಲ Performance ನೆನಪಿಸಿಕೊಂಡು ಅತ್ತಿದ್ದೆ. ನನ್ನ ತಂದೆ ತೀರಿ ಹೋದಾಗಲೂ ನಾನು ಅಷ್ಟು ಅತ್ತಿರಲಿಲ್ಲ. ಆದರೆ ಡಾನ್ಸಿಂಗ್ ಸ್ಟಾರ್ ಆಗೊ ಅದೃಷ್ಟ ನನಗೆ  ಇರಲಿಲ್ಲ.

*ಅಲ್ಲಿಂದ ಮುಂದೆ ನಿರೂಪಣೆ, ಮಜಾ ಟಾಕೀಸ್‌ ಬಗ್ಗೆ ಹೇಳಿ?
ಡಾನ್ಸಿಂಗ್ ಸ್ಟಾರ್ ಆದ ಮೇಲೆ ಪುಟಾಣಿ ಪಂಟ್ರು ನಿರೂಪಣೆ ಮಾಡಿದೆ. ಆದರೆ ಅಲ್ಲಿ ತುಂಬಾ ಸಮಯ ಉಳಿಯಲಿಲ್ಲ. ಆನಂತರ ಮಜಾ ಟಾಕೀಸ್‌ನಲ್ಲಿ ಸೃಜನ್‌ ಲೋಕೇಶ್‌ ಅವಕಾಶ ನೀಡಿದರು. ನಾಲ್ಕು ವರ್ಷದಿಂದ ಅಮೃತವರ್ಷಿಣಿ ಮಾಡಿ ಮನಾಟನಸ್‌ ಆಗಿತ್ತು. ಅಲ್ಲಿ ಅಳುಮುಂಜಿ  ಪಾತ್ರ, ಇಲ್ಲಿ ಕಾಮಿಡಿ. 2–3 ತಿಂಗಳಿಂದ ಮಜಾ ಟಾಕೀಸ್ ಜರ್ನಿ ಖುಷಿಯಾಗಿದೆ. ದೊಡ್ಡ ದೊಡ್ಡ ಕಲಾವಿದರ ಜತೆ ನಟಿಸೋದು ಹೆಮ್ಮೆ ತಂದಿದೆ.

*ಮನೆಯವರ ಸಹಕಾರ ಹೇಗಿದೆ?
ನನ್ನೆಲ್ಲ ಕೆಲಸಗಳಿಗೆ ನನ್ನ ಅಮ್ಮ ಪ್ರೋತ್ಸಾಹ ನೀಡಿದ್ದಾರೆ. ತುಮಕೂರಿನ ಬಾಡಿಗೆ ಮನೆಯಲ್ಲಿ ಇದ್ದ ನನಗೆ ಬೆಂಗಳೂರು  ಅನ್ನ ನೀಡಿದೆ. ಅಮೃತ ಪಾತ್ರ ಬದುಕು ಕಟ್ಟಿಕೊಟ್ಟಿದೆ.  ಮೊದಲ ಧಾರಾವಾಹಿಯಲ್ಲೇ ಇಷ್ಟು ವರ್ಷದಿಂದ ಉಳಿದಿದ್ದೇನೆ. ಸಾಮಾನ್ಯವಾಗಿ ಧಾರಾವಾಹಿಗಳನ್ನು 100 ಇಲ್ಲವೇ 200 ಕಂತು ಮಾಡಿ ಮುಗಿಸುತ್ತಾರೆ. ಆದರೆ ಅಮೃತ ವರ್ಷಿಣಿ ಮನೆ ಮಾತಾಗಿದೆ. ಸಹ ಕಲಾವಿದರಾದ ಜಯಂತಿ, ಹೇಮಾಚೌಧರಿ, ರಕ್ಷಿತ್‌ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನನಗೆ ಅವರು ಶೂಟಿಂಗ್‌ಗೆ ಕಾಯುವಂತೆ ಮಾಡಿಲ್ಲ. ಕುಮಾರ್, ರವಿ ಗರಣಿ ಅವರಿಗೆ ನಾನು ಆಭಾರಿಯಾಗಿದ್ದೇನೆ.

*ಭವಿಷ್ಯದ ಪ್ಲಾನ್‌ ಬಗ್ಗೆ ಹೇಳಿ
ನಾನು ಸ್ಟಾರ್ ಸಿಂಗರ್‌ನಲ್ಲೂ ಭಾಗ ವಹಿಸಿ ಒಂಬತ್ತು ವಾರ ಟಾಪ್‌ನಲ್ಲಿದ್ದೆ. ಮುಂದೆ ನಟನೆಯಲ್ಲೇ ಹೆಸರು ಮಾಡಬೇಕು ಎಂಬ ಆಸೆ ಇದೆ. ಇಲ್ಲೇ ಸಾಧನೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT