ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಾಣಿಸಿದ ನಗರ

Last Updated 3 ಜುಲೈ 2016, 19:30 IST
ಅಕ್ಷರ ಗಾತ್ರ

ದಶಕಗಟ್ಟಲೆ ಬೆಂಗಳೂರನ್ನು ಕಂಡವರಿಗೆ ಈ ನಗರವು ಆಪ್ತವಾದ ಯಾವುದೋ ಜಾಗವನ್ನು ಕೊಡುಗೆಯಾಗಿ ಕೊಟ್ಟಿರುತ್ತದೆ. ಆ ಜಾಗದೊಟ್ಟಿಗೆ ಬೆಸೆದುಕೊಂಡ ನೆನಪುಗಳ ಮಾತು ಮಧುರವೂ ಹೌದು, ಮರೆಯಲಾಗದವೂ ಹೌದು. ವಿವಿಧ ಕ್ಷೇತ್ರಗಳ ದಿಗ್ಗಜರು ವಾರಕ್ಕೊಮ್ಮೆ ಅಂಥ ನೆನಪುಗಳ ಮೆಲುಕು ಹಾಕುವ ಜಗಲಿ ಇದು. ಈ ವಾರ ಜಗಲಿಯ ಮೇಲೆ ಡಾ. ವಿಜಯಮ್ಮ

ಬೆಂಗಳೂರಿನಲ್ಲಿ ನನಗೆ ಒಂದೇ ಸ್ಥಳ ಆಪ್ತ ಎಂದು ಹೇಳಲಾಗದು. ಏಕೆಂದರೆ ನಾನು ಬೆಂಗಳೂರಿನಲ್ಲಿ ತುಂಬಾ ಕಡೆ ಓಡಾಡಿದ್ದೇನೆ. ನಾನು ಬೆಂಗಳೂರಿಗೆ ಬಂದದ್ದು 1959ರ ಮಾರ್ಚ್‌ 1ಕ್ಕೆ. ನಮ್ಮ ಮಾವನ ಮನೆ ಇದ್ದದ್ದು ಕಂಟೋನ್‌ಮೆಂಟ್ ಕ್ಯಾವಲ್ರಿ ರಸ್ತೆ ಪ್ರದೇಶದಲ್ಲಿ. ಆಗ ನನಗೆ ಬೆಂಗಳೂರು ಅಂತ ಕಾಣಿಸಿದ್ದು ಕಂಟೋನ್‌ಮೆಂಟ್ ಮಾತ್ರ.

ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಾಗ ಎಂ.ಜಿ. ರಸ್ತೆಯಲ್ಲಿನ ‘ಪ್ರಜಾವಾಣಿ’ ಕಚೇರಿ ಪಕ್ಕ ಒಂದು ಥಿಯೇಟರ್ ಇತ್ತು. ಅದರ ಹೆಸರು ಈಗ ನೆನಪಿಲ್ಲ. ಆಗ ಅಲ್ಲಿ ‘10 ಕಮಾಂಡ್‌ಮೆಂಟ್ಸ್‌’ ಸಿನಿಮಾ ನಡೀತಾ ಇತ್ತು. ಅದಾಗಿ ಒಂದು ವರ್ಷದ ನಂತರ ನನ್ನ ದೊಡ್ಡ ಮಗ ಹುಟ್ಟಿದ್ದ. ಅವನಿಗೆ ಮೂರು ತಿಂಗಳಿದ್ದಾಗ ಬೆಂಗಳೂರಿಗೆ ಕರೆದುಕೊಂಡು ಬಂದೆ. ಆಗಲೂ ಆ ಸಿನಿಮಾ ನಡೀತಿತ್ತು (ಸುಮಾರು ಒಂದೂವರೆ ವರ್ಷದ ನಂತರ). ಇದು ನನಗೆ ಚೆನ್ನಾಗಿ ನೆನಪಿದೆ.

ಎಂ.ಜಿ.ರಸ್ತೆಯಲ್ಲಿ ಓಡಾಡುವುದು ನನಗೆ ಖುಷಿ ಕೊಡುತ್ತಿತ್ತು. ಬೇಸರವಾಗಿದ್ದಾಗ ಎಂ.ಜಿ. ರಸ್ತೆಯಲ್ಲಿನ ಬುಲೇವಾರ್ಡ್, ಬ್ರಿಗೇಡ್‌ ರಸ್ತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಓಡಾಡುತ್ತಿದ್ದೆ. ಗಂಡನ ತಂಗಿಯ ಮಕ್ಕಳನ್ನೂ ಜೊತೆಗೆ ಕರೆತರುತ್ತಿದ್ದೆ. ಎಂ.ಜಿ. ರಸ್ತೆ ಬಿಟ್ಟರೆ ಹಲಸೂರು ಕೆರೆ ನನ್ನ ನೆಚ್ಚಿನ ತಾಣ.

ರಸೆಲ್‌ ಮಾರ್ಕೆಟ್‌ ತರಕಾರಿ ಗುಡ್ಡೆ
ರಸೆಲ್ ಮಾರ್ಕೆಟ್‌ ಪರಿಚಿತ ಸ್ಥಳ. ಅಲ್ಲಿ ತರಕಾರಿ ಗುಡ್ಡೆ ಹಾಕುತ್ತಿದ್ದರು. ಹತ್ತು ಪೈಸೆಗೆ ಒಂದು ಗುಡ್ಡೆ. ತರಕಾರಿ ಗುಡ್ಡೆ ಹೇಗೆ ಇಡುತ್ತಿದ್ದರೋ ಹಾಗೇ ತೆಂಗಿನಕಾಯಿ ಚೂರುಗಳನ್ನೂ ನೀರಿನಲ್ಲಿ ಇಟ್ಟಿರುತ್ತಿದ್ದರು.

ನಮ್ಮ ತಂದೆ ಪುರೋಹಿತರು, ಹೀಗಾಗಿ ತವರು ಮನೆಯಲ್ಲಿ ಯಾವತ್ತೂ ತೆಂಗಿನಕಾಯಿಗೆ ಬರ ಇರುತ್ತಿರಲಿಲ್ಲ. ಆದರೆ, ಬೆಂಗಳೂರಿನಲ್ಲಿ ಆ ಪರಿಸ್ಥಿತಿ ಇರಲಿಲ್ಲ. ಹಾಗಾಗಿ, ರಸೆಲ್‌ ಮಾರ್ಕೆಟ್ಟಿನಲ್ಲಿ ಗುಡ್ಡೆ ಹಾಕಿರುತ್ತಿದ್ದ ತರಕಾರಿ, ನೀರಿನಲ್ಲಿ ನೆನೆಸಿಟ್ಟ ತೆಂಗಿನಕಾಯಿ ಚೂರುಗಳನ್ನು ತಂದು ಅಡುಗೆ ಮಾಡುತ್ತಿದ್ದೆ.

ಕ್ಯಾವಲ್ರಿ ರಸ್ತೆಯ ನಂತರ ಚಾಮರಾಜಪೇಟೆಯ ತರಗಪೇಟೆಯ ಬಳಿಯ ಆಸ್ಪತ್ರೆ ಎದುರು ಸೀತಾಪತಿ ಅಗ್ರಹಾರದಲ್ಲಿ ಚಿಕ್ಕ ಮನೆ ಮಾಡಿದ್ದೆವು. ಆಗ ನನ್ನ ಪತಿ ಐಟಿಐನಲ್ಲಿ ಕೆಲಸ ಮಾಡುತ್ತಿದ್ದರು. ಅಗ್ರಹಾರದಲ್ಲಿ ಮನೆ ಮಾಡುವ ಹೊತ್ತಿಗೆ ಎರಡನೇ ಮಗ (ಬಿ. ಸುರೇಶ್‌) ಹುಟ್ಟಿದ್ದ. ಮುಂದೆ ನಾನೂ ಐಟಿಐನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಚಾಮರಾಜಪೇಟೆಯಲ್ಲೇ ಮಕ್ಕಳನ್ನು ಸ್ಕೂಲಿಗೆ ಸೇರಿಸಿದೆ.

ಓದಿಗೆ ಆಸರೆ ನೀಡಿದ ಗುಡ್ಡ
ಅಲ್ಲಿಂದ ನಂತರ ಹನುಮಂತನಗರಕ್ಕೆ ಬಂದೆವು. ಆಗಿನ್ನೂ ಬರೆಯುತ್ತಿರಲಿಲ್ಲ. ಆದರೆ,  ಓದುವ ಹುಚ್ಚು ತುಂಬಾ ಇತ್ತು. ಆಗ ನರಹರಿರಾಯ ಗುಡ್ಡ ಅಂತ ಇತ್ತು. ಅಲ್ಲಿಗೆ ಓದಲು ಹೋಗುತ್ತಿದ್ದೆ. ಹತ್ತಲಿಕ್ಕೆ ಕಷ್ಟವಾದರೂ ಗುಡ್ಡ ಹತ್ತಿ ಶಿವನ ದೇವಸ್ಥಾನದ ಬಳಿಯ ಸಣ್ಣ ಜಗಲಿಯ ಮೇಲೆ ಕುಳಿತು ನಿಶ್ಚಿಂತೆಯಿಂದ ಓದಿಕೊಳ್ಳುತ್ತಿದ್ದೆ. ಅಲ್ಲೊಂದು ಸಣ್ಣ ದೇವಸ್ಥಾನ ಇತ್ತು. ಈಗದು ಅಯ್ಯಪ್ಪಸ್ವಾಮಿ ದೇವಸ್ಥಾನ ಆಗಿದೆ. ಅಲ್ಲಿನ ದೇವಸ್ಥಾನದ ಜಗುಲಿಯ ಮೇಲೆ ಕುಳಿತು ಓದುತ್ತಿದ್ದೆ. ಅದು ಬಿಟ್ಟರೆ ಬಸವನಗುಡಿಯ ದೇವಸ್ಥಾನಕ್ಕೆ ಹೋಗಿ ನನ್ನ ಪಾಡಿಗೆ ನಾನು ಕುಳಿತು ಓದುತ್ತಿದ್ದೆ.

ಪ್ರೆಸ್‌ಕ್ಲಬ್‌ನ ಬೆಂಚು...
ಅನಿವಾರ್ಯವಾಗಿ ಪತ್ರಕರ್ತೆ ಆದೆ. ಆಗ ಸಂಬಳ ಕಡಿಮೆ. ಇರುವ ವರಮಾನಕ್ಕೆ ತಕ್ಕಂತೆ ಮನೆ ಹಿಡಿಯಬೇಕಾಗಿತ್ತು. 50, 60 ರೂಪಾಯಿ ಮನೆ ಬಾಡಿಗೆ ಇರುತ್ತಿತ್ತು. ಬರೆಯಲು, ಓದಲು ಅನುಕೂಲ ಆಗುತ್ತಿರಲಿಲ್ಲ. ಕಬ್ಬನ್ ಪಾರ್ಕ್, ಪ್ರೆಸ್‌ಕ್ಲಬ್‌ನ ಮುಂದಿನ ಬೆಂಚುಗಳ ಮೇಲೆ ಕುಳಿತು ಪುಟಗಟ್ಟಲೆ ಬರೆಯುತ್ತಿದ್ದೆ. ಬೆಂಗಳೂರಿನಿಂದ ಮಣಿಪಾಲದ ‘ಉದಯವಾಣಿ’ ಕಚೇರಿಗೆ ಲೇಖನ, ವರದಿಗಳನ್ನು ಬಸ್‌ನಲ್ಲಿ ಕಳುಹಿಸುತ್ತಿದ್ದೆ.

ತಮಿಳು ಏರಿಯಾದಲ್ಲಿ ರಾಜಕೀಯ ಪಾಠ
ಮೊದಲು ತಮಿಳು ಏರಿಯಾದಲ್ಲಿ ಇದ್ದೆವು. ಆಗ ಮನೆಯಲ್ಲಿ ಪೆರಿಯಾರ್ ಬಗ್ಗೆ ಬಹಳ ಚರ್ಚೆ ಮಾಡುತ್ತಿದ್ದೆವು. ಅವರ ಬಗ್ಗೆ ಗೌರವ ಇತ್ತು. ಅವರು ಕರ್ನಾಟಕದವರು, ಬೆಂಗಳೂರಿನವರು ಅಂತ ನನಗೆ ಬಹಳ ತಡವಾಗಿ ತಿಳಿಯಿತು. ಆಗ ಒಂದು ತಮಿಳು ಸಿನಿಮಾ ಮತ್ತೊಂದು ತಮಿಳು ಸಿನಿಮಾಗೆ ಉತ್ತರದಂತೆ ಇರುತ್ತಿತ್ತು. ಸಂಭಾಷಣೆಗಳು ರಾಜಕೀಯ ಪಕ್ಷಗಳಿಗೆ ಪ್ರಶ್ನೆ ಕೇಳಿದಂತೆ ಇರುತ್ತಿದ್ದವು. 70ರ ದಶಕದಲ್ಲಿ ‘ಪ್ರಜಾಮತ’ ಸೇರಿಕೊಂಡೆ. ಮಕ್ಕಳ, ಮಹಿಳಾ ಪುಟ ನೋಡಿಕೊಳ್ಳುತ್ತಿದ್ದೆ. ಅಲ್ಲಿ ಬಹಳಷ್ಟು ಜನರ ಪರಿಚಯವಾಯಿತು. ನಂತರ ‘ಮಲ್ಲಿಗೆ’ಗೆ ಸಹಾಯಕ ಸಂಪಾದಕಿಯಾಗಿ ಕೆಲಸಕ್ಕೆ ಸೇರಿದೆ. ಬಿ.ಎನ್.ಗುಪ್ತ, ನಾಡಿಗೇರ ಕೃಷ್ಣರಾಯರ ಪರಿಚಯವಿತ್ತು.

ಮದುವೆ ನಂತರ ಕಾಲೇಜು
ಮದುವೆಯಾಗಿ ಹತ್ತು ವರ್ಷವಾದ ನಂತರ ಆಚಾರ್ಯ ಪಾಠಶಾಲಾದ (ಎಪಿಎಸ್‌) ಸಂಜೆ ಕಾಲೇಜಿಗೆ ಸೇರಿಕೊಂಡೆ. ಬಸವನಗುಡಿ ದೇವಸ್ಥಾನದ ಹಿಂದೆ ಕೆರೆಯಿತ್ತು. ಅಲ್ಲಿಂದ ಸುತ್ತಿಕೊಂಡು ಬಂದರೆ ಅದು ಶಾರ್ಟ್ ಕಟ್‌ ಆಗುತ್ತಿತ್ತು. ಡಾ.ಸಿ.ವೀರಣ್ಣ ಅವರು ನಮಗೆ ಗುರುಗಳು. ಒಮ್ಮೊಮ್ಮೆ ವೀರಣ್ಣ ಅವರು ನನ್ನ ಜತೆ ಕಾಲೇಜಿನಿಂದ ಮನೆಯ ತನಕ ಬಂದು ಬಿಡುತ್ತಿದ್ದರು.

ಆಗ ಮೇಷ್ಟ್ರು ನವ್ಯ ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅಲ್ಲಿಯ ತನಕ ಜನಪ್ರಿಯ ಕಾದಂಬರಿಗಳನ್ನು ಮಾತ್ರ ಓದಿದ್ದ ನನಗೆ ನವ್ಯ ಸಾಹಿತ್ಯದ ಪರಿಚಯವಾಯಿತು. ಪದವಿ ಪಡೆದ 12 ವರುಷಗಳ ನಂತರ ಸ್ನಾತಕೋತ್ತರ ಪದವಿ ಪಡೆದೆ.

ಏರಿಳಿತಕ್ಕೆ ಕಾರಣವಾದ ನಗರಿ
ಬೆಂಗಳೂರು ನನ್ನ ಏರಿಳಿತಗಳಿಗೆ ಕಾರಣವಾದ ಊರು.  ನಾನು ಇವತ್ತು ನಾಲ್ಕು ಜನರ ಕಣ್ಣಿಗೆ  ವಿಜಯಮ್ಮ ಅಂತ ಏನು ಕಾಣುತ್ತಿದ್ದೇನೋ ಅದಕ್ಕೆ ಕಾರಣವಾದ ಊರು ಇದು. ನನ್ನೆಲ್ಲಾ ಕಷ್ಟಗಳಿಗೆ, ಸುಖಕ್ಕೆ, ಸಾಧನೆಗೆ ಮೆಟ್ಟಿಲಾಗಿರುವ ನಗರ. ಅದಕ್ಕೆ ನಾನು ಋಣಿ. ಕನಿಷ್ಠ ವರಮಾನ ಇರೋರು ಇಲ್ಲಿ ಜೀವನ ಮಾಡಬಹುದು. ಇದು ಬೆಂಗಳೂರಿನ ದೊಡ್ಡ ಗುಣ. ಅಂತೆಯೇ ತುಂಬಾ ಶ್ರೀಮಂತರೂ ಇಲ್ಲಿ ಬದುಕಲು ಸಾಧ್ಯ.

ನಾವು ಬೆಳೆದ ಮೇಲೆ, ನಮ್ಮ ತಿಳಿವಳಿಕೆ ಬೇರೆಯಾದ ಮೇಲೆ, ನಾವು ಯಾವ್ಯಾವ ಹಕ್ಕುಗಳಿಗೆ ಎಲ್ಲೆಲ್ಲಿ ಹೋರಾಟ ಮಾಡಿದೆವೋ, ಅಂಥ ಎಲ್ಲಾ ಹೋರಾಟಗಳಿಗೂ ಈ ನಗರ ತಳಪಾಯ ಹಾಕಿಕೊಟ್ಟಿದೆ. ಯಾವುದೋ ಬೇರೆ ಊರಿನಲ್ಲಿ ಇದ್ದಿದ್ದರೆ ಈ ರೀತಿಯ ಹೋರಾಟಕ್ಕೆ ನಾನು ಬರಲು ಆಗುತ್ತಿರಲಿಲ್ಲ. ತೆರೆದ ಮನಸು, ತೆರೆದ ವಾತಾವರಣ ಇಲ್ಲಿದೆ. ನನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ನನಗೆ ಹೋರಾಟ ಬೇಕೆನಿಸಿತು. ಅದನ್ನು ಆರಿಸಿಕೊಂಡೆ. ನನಗೆ ಬೆಂಗಳೂರು ಬೇರೆಯ ಲೋಕವನ್ನೇ ತೋರಿಸಿದೆ. ಈ ನಗರದಲ್ಲಿ ಬೇರೆಯವರ ಸಂಕಟಗಳನ್ನು ನೋಡಿದೆ. ಆಗ ನನ್ನ ಸಂಕಟ ಏನೇನೂ ಅನ್ನಿಸಲಿಲ್ಲ.

ಇಲ್ಲಿ ಹತ್ತಾರು ಥರದ ಜನರನ್ನು ನೋಡಿದ್ದೇನೆ. ಜನರ ಸಮಾಧಾನಕ್ಕೆ, ಸಂತೋಷಕ್ಕೆ ನಾನೇನು ಕೊಡಬಲ್ಲೆ ಎಂಬುದನ್ನು ಯೋಚಿಸಿದಾಗ, ನನ್ನ ಕಕ್ಷೆಗೆ ಬಂದ ಎಲ್ಲರನ್ನೂ ಕಾಪಾಡಬೇಕೆಂಬ ಮನಸ್ಸಾಯಿತು. ಅಂಥ  ಮನೋಭಾವವನ್ನು  ರೂಪಿಸಿದ್ದು ಈ ಊರು.

ಸುಂದರ ಮನಸುಗಳ ನಗರಿ
ಇಲ್ಲಿ ಸುಂದರವಾದ ಜಾಗಗಳಿವೆ. ತುಂಬಾ ಸುಂದರ ಮನಸಿನ ಜನರೂ ಇಲ್ಲಿದ್ದಾರೆ. ವಿಕೃತಿಗಳೂ ಇವೆ ಇಲ್ಲ ಅಂತಾ ನಾ ಹೇಳಲ್ಲ. ಆದರೆ, ನಾನು ಪಾಸಿಟಿವ್ ಆಗಿ ಯೋಚಿಸುವುದರಿಂದ ನನ್ನ ಕಕ್ಷೆಯೊಳಗೆ ಸುಂದರ ಮನಸಿನ ಜನರೇ ಸಿಕ್ಕರು. ಒಂಟಿ ಹೆಣ್ಣಾಗಿ, ಎರಡು ಮಕ್ಕಳನ್ನು ಒಬ್ಬಳೇ ಸಾಕಿಕೊಂಡು, ಜೀವನ ನಡೆಸಬೇಕಾಗಿ ಬಂತು.

ತವರು ಮನೆ, ಗಂಡನ ಮನೆ ಎರಡೂ ಕಡೆಯಲ್ಲೂ ಯಾರೂ ಇರಲಿಲ್ಲ. ಆಗ ನನಗೆ ಮಾಸ್ತಿ, ವಿ.ಸೀತಾರಾಮಯ್ಯ ಅವರು ರಕ್ಷಣೆ ನೀಡಿದರು. ಮಾಸ್ತಿ ಸಂಪ್ರದಾಯಸ್ಥರು ಎಂದು ಹೇಳುವವರಿದ್ದಾರೆ. ಆದರೆ, ಅವರಷ್ಟು ಪ್ರಗತಿಪರರನ್ನು ನಾನು ಇದುವರೆಗೂ ಯಾರನ್ನೂ ನೋಡಿಲ್ಲ. ನಾನು ಸಿನಿಮಾ ಫೀಲ್ಡಿನಲ್ಲಿ ತುಂಬಾ ವರುಷ ಇದ್ದೆ.

ಅಲ್ಲಿ ಒಬ್ಬರಿಂದಲೂ ನನಗೆ ಕೆಡುಕು ಆಗಲಿಲ್ಲ. ನಾನು ಅಲ್ಲಿ ವೃತ್ತಿಯಲ್ಲಿದ್ದಾಗ ನನ್ನನ್ನು ಅಂಗೈಯಲ್ಲಿಟ್ಟು ನೋಡಿ ಕೊಂಡಿದ್ದಾರೆ. ಆದರೆ, ಮುಸುಕು ಹಾಕಿಕೊಂಡಿದ್ದಾರಲ್ಲ, ಈ ಸಾಹಿತ್ಯ ವಲಯದವರು ಅವರು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಇದನ್ನೆಲ್ಲಾ ತೋರಿಸಿದ್ದು ಬೆಂಗಳೂರು.

ಎಲ್ಲವನ್ನೂ ಕೊಟ್ಟ ನಗರ
ಬೆಂಗಳೂರು ನನಗೆ ಎಲ್ಲವನ್ನೂ ಕೊಟ್ಟಿದೆ. ಏನಾದರೂ ಒಳ್ಳೆಯ ಅನುಭವ ಆಗಿದ್ದರೆ, ಗಟ್ಟಿತನವನ್ನು ಕೊಟ್ಟಿದ್ದರೆ, ಒಳ್ಳೆಯ ಮಕ್ಕಳು ಸ್ನೇಹಿತರು, ದೊರೆತಿದ್ದು ಬೆಂಗಳೂರಿನಲ್ಲಿ. ಕೆಲವನ್ನು  ಸಾಧಿಸಿದ್ದೇನೆ, ಕೆಲವೆಡೆ ವಿಫಲವಾಗಿದ್ದೇನೆ. ಆ ಮೂಲಕ ಬೆಂಗಳೂರಿನ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ, ಮುಂದೆಯೂ ಮಾಡುವೆ.                          

‘ಸಲಹುವ’ ಪರಿಚಾರಿಕೆ
ದಾವಣಗೆರೆ ಮೂಲದ ಡಾ. ವಿಜಯಾ ಬೆಂಗಳೂರನ್ನು ತಮ್ಮ ಕರ್ಮಭೂಮಿ ಆಗಿಸಿಕೊಂಡವರು; ಬೆಂಗಳೂರಿನ ಸಾಂಸ್ಕೃತಿಕ ಇತಿಹಾಸದ ಭಾಗವೂ ಆದವರು. ಸಹೃದಯರ ನಡುವೆ ‘ವಿಜಯಮ್ಮ’  ಎಂದೇ ಅವರು ಪರಿಚಿತರು (ಜನನ:ಮಾರ್ಚ್‌ 24,1942). ‘ವಿಜಯಮ್ಮ’  ಎನ್ನುವ ಆ ಒಂದು ಮಾತು ಅವರ ವ್ಯಕ್ತಿತ್ವದ ರೂಪಕವೂ ಹೌದು.

ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಪತ್ರಿಕೋದ್ಯಮ– ಎಲ್ಲ ಕ್ಷೇತ್ರಗಳಲ್ಲೂ ಡಾ. ವಿಜಯಾ ಅವರ ‘ಸಲಹುವ’ ಪರಿಚಾರಿಕೆ ಸಂದಿದೆ. ‘ಸಂಪಾದನೆ’ ಎನ್ನುವುದು ವಿಜಯಾ ಅವರ ಪಾಲಿಗೆ ಬೇರೆಯದೇ ಅರ್ಥದಲ್ಲಿ ಹೊಂದುವ ವಿಶೇಷಣ.

ಪತ್ರಿಕೆಗಳನ್ನು ರೂಪಿಸಿದ ಸಂಪಾದಕೀಯ ಕೆಲಸ ಒಂದೆಡೆಯಾದರೆ, ಬೃಹತ್‌ ಸಂಪುಟಗಳ ಸಂಪಾದನೆ ಮತ್ತೊಂದೆಡೆ.  ‘ಕನ್ನಡ ಚಲನಚಿತ್ರ ಇತಿಹಾಸ’, ‘ಬೆಂಗಳೂರು ದರ್ಶನ’, ‘ಕರ್ನಾಟಕ ಕಲಾದರ್ಶನ’– ಇವೆಲ್ಲವೂ ಅವರ ಕಟ್ಟುವ ಹಂಬಲದ ಮೂರ್ತರೂಪಗಳು. ಕನ್ನಡ ಚಳವಳಿ, ಮಹಿಳಾ ಚಳವಳಿ, ರಂಗಭೂಮಿಗೂ ಅವರ ಕೊಡುಗೆ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT