ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಭಾರವಲ್ಲ....

Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕಲ್ಪನಾ ಸರೋಜ್‌

ಕಲ್ಪನಾಗೆ ಆಗಿನ್ನೂ 22ರ ಹರೆಯ. ಇಬ್ಬರು ಮಕ್ಕಳ ತಾಯಿಯಾಗಿದ್ದ ಆಕೆಗೆ ಬದುಕು ದುಸ್ತರವಾಗಿತ್ತು. ಗಂಡನ ಮನೆಯಲ್ಲಿ ನೆಮ್ಮದಿ ಇರಲಿಲ್ಲ, ಅಪ್ಪನ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಸಾಮಾಜಿಕವಾಗಿಯೂ ಗೌರವ ಇಲ್ಲದ ಜೀವನ. ಕಷ್ಟಪಟ್ಟು ಬದುಕು ಸಾಗಿಸುವುದಕ್ಕಿಂತಲೂ ಹತ್ತಾರು ಕ್ಷಣ ನೋವು ತಿಂದು ಸಾಯುವುದೇ ಲೇಸು ಎಂದುಕೊಂಡ ಕಲ್ಪನಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಹೀಗೆ ಸಾವಿನ ಮನೆ ಸೇರಲು ಹೊರಟಿದ್ದ ಕಲ್ಪನಾ ಬದುಕಿದ್ದು ಒಂದು ಪವಾಡ! ಮುಂದೆ ನೂರಾರು ಕೋಟಿ ರೂಪಾಯಿಗಳ ಒಡತಿಯಾಗಿ ಬೆಳೆದದ್ದು ಸಾಧನೆಯ ಫಲದಿಂದ! ಇದು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ದಲಿತ ಮಹಿಳೆ ಕಲ್ಪನಾ ಸರೋಜ್‌ ಅವರ ಸಾಧನೆಯ ಕಥೆ.

‘ಅಪ್ಪ ಪೊಲೀಸ್‌ ಆಗಿದ್ದರೂ ನಮ್ಮ ಮೇಲೆ ಕಾಳಜಿ ಹೊಂದಿರಲಿಲ್ಲ. ಅವರಿಗೆ ಕುಡಿತವೇ ಪ್ರಪಂಚವಾಗಿತ್ತು. ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಎಲ್ಲಾ ಮಕ್ಕಳಂತೆ ಆಡುವ ವಯಸ್ಸಿನಲ್ಲಿ ನಾನು ಬಾಲ್ಯ ವಿವಾಹಕ್ಕೆ ಹರಕೆಯ ಕುರಿಯಾದೆ. ಗಂಡನ ಮನೆಯಲ್ಲಿ ಬದುಕುವುದು ದುಸ್ತರವಾದಾಗ ಅಪ್ಪನ ಮನೆ ಸೇರಿದೆ. ನಂತರ ಚಿಕ್ಕಮ್ಮನ ನೆರವಿನಿಂದ ಮುಂಬೈ ತಲುಪಿದೆ. ಅಲ್ಲಿ ಟೈಲರಿಂಗ್‌ ಕಲಿತು ಬಟ್ಟೆ ಹೊಲಿಯುವ ಕೆಲಸ ಆರಂಭಿಸಿದೆ. ನನ್ನ ಮಕ್ಕಳು ಮತ್ತು ಮದುವೆಯಾಗದ ತಂಗಿಯರನ್ನು ಮುಂಬೈಗೆ ಕರೆತಂದು ಪುಟ್ಟ ಮನೆಯಲ್ಲಿ ಸಂಸಾರ ಹೂಡಿದೆ. ಬಟ್ಟೆ ಹೊಲಿಯುವುದು ಹೊಟ್ಟೆ ತುಂಬಿಸುತ್ತಿರಲಿಲ್ಲ. ಹಾಗಾಗಿ ಸ್ಥಳೀಯ ಬ್ಯಾಂಕ್‌ನಲ್ಲಿ ಸಾಲ ಮಾಡಿ ಪೀಠೋಪಕರಣಗಳ ಅಂಗಡಿ ತೆರೆದೆ. ಇದರ ಜೊತೆಗೆ ಬಡವರಿಗೆ ಸಾಲದ ಕುರಿತು ಮಾಹಿತಿ ನೀಡುವ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿದೆ. ಇದರ ವಹಿವಾಟು ಚೆನ್ನಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹೆಸರಾಂತ ಉದ್ಯಮಿ ರಾಮ್‌ಜೀಬಾಯಿ ಕಮಾನಿ ಅವರ ಪರಿಚಯವಾಯಿತು. ಅವರ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಅಲ್ಲಿನ ಕಾರ್ಮಿಕ ಸಂಘದ ನಾಯಕಿಯಾದೆ. ಪ್ರಗತಿಪರರಾಗಿದ್ದ ಕಮಾನಿ ಅವರು ಕಂಪೆನಿಯ ಮಾಲೀಕತ್ವವನ್ನು ಕಾಮಿರ್ಕರ ಸಂಘದ ಹೆಸರಿಗೆ ಬರೆದಿದ್ದರು. ಮುಂದೆ ಅವರ ಮಕ್ಕಳು ತಗಾದೆ ತೆಗೆದು ಸುಪ್ರೀಂಕೋರ್ಟ್‌ ಮೊರೆ ಹೋದರು. ಕೋರ್ಟ್‌ನಲ್ಲಿ ತೀರ್ಪು ಕಾರ್ಮಿಕರ ಪರವಾಗಿ ಬಂತು. ಈಗ ನಾನೇ ಕಂಪೆನಿಯನ್ನು ನಡೆಸುತ್ತಿದ್ದೇನೆ. ಅಂದು ಮುಂಬೈಗೆ ವಲಸೆ ಬರದಿದ್ದರೆ ನಾನು ಕೂಡ ಕೋಟ್ಯಂತರ ಮಹಿಳೆಯರಲ್ಲಿ ಒಬ್ಬಳಾಗಿ ಉಳಿಯುತ್ತಿದ್ದೆ’ ಎನ್ನುತ್ತಾರೆ ಕಲ್ಪನಾ. www.kamaniindustries.in

ಕರಣ್‌ ಬಂಗೇರಾ

ಮುಂಬೈನ ಕರಣ್‌ ಬಂಗೇರಾ ಯುವ ಕಲಾವಿದ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸ್ವಂತವಾಗಿ ತನ್ನ ಕ್ಷೇತ್ರದಲ್ಲೇ ಉದ್ಯಮ ಅಥವಾ ವ್ಯಾಪಾರ ಮಾಡುವ ಬಯಕೆ. ಕೂಡಿಟ್ಟ ಹಣದಲ್ಲಿ ಹಳೆಯ ಕಾಲದ ಮಾದರಿಯ ಪೀಠೋಪಕರಣಗಳ ಅಂಗಡಿ ತೆರೆಯುವ ಆಲೋಚನೆ ಹೊಳೆಯಿತು. ಇದಕ್ಕೆ ಸಾಕಷ್ಟು ಬಂಡವಾಳ ತೊಡಗಿಸಬೇಕಾದ್ದರಿಂದ ಆ ಆಲೋಚನೆಯನ್ನು ಕೈಬಿಟ್ಟರು. ಪತ್ನಿ ಮೈಥಿಲಿ ಜೊತೆ ಸೇರಿ ಮುಂಬೈನ ಗಲ್ಲಿ ಗಲ್ಲಿಗಳನ್ನು ಸುತ್ತಿದರು. ಆಗ ಅವರಿಗೆ ಕಂಡಿದ್ದು ಮಹಿಳೆಯರಿಗೆಂದೇ ಅತಿ ಹೆಚ್ಚು ಸಂಖ್ಯೆಯ್ಲಲಿದ್ದ ಶಾಪ್‌ಗಳು. ಅರ್ಥಾತ್‌ ಬ್ಯೂಟಿ ಪಾರ್ಲರ್‌, ಉಡುಪಿನ ಶಾಪ್‌ಗಳು. ಈ ಹಂತದಲ್ಲಿ ಬಂಗೇರಾಗೆ ಪುರುಷರ ಫ್ಯಾಷನ್‌ಗೆ ಸಂಬಂಧಿಸಿದ ಅಂಗಡಿಯೊಂದನ್ನು ತೆರೆಯುವ ಆಲೋಚನೆ ಹೊಳೆಯಿತು. ಕೂಡಲೇ ವಿಂಟೇಜ್ ಎಂಬ ಅಂಗಡಿಯನ್ನು ಆರಂಭಿಸಿದರು. ಇದರಲ್ಲಿ ಎಲ್ಲಾ ರೀತಿಯ ಹಳೇ ಕಾಲದ ಮಾದರಿಯ ವಸ್ತುಗಳು ಸೇರಿದಂತೆ ಪುರುಷರು ಬಳಸುವ ವಾಚ್‌, ಬ್ರೇಸ್‌ಲೆಟ್‌, ಕೂಲಿಂಗ್‌ ಗ್ಲಾಸ್‌ಗಳು, ಹಳೇ ಕಾಲದ ವಿನ್ಯಾಸವಿರುವ ಟಿ–ಶರ್ಟ್‌, ಶರ್ಟ್‌ ಪ್ಯಾಂಟ್‌ಗಳು ದೊರೆಯುತ್ತವೆ.

ಕೇವಲ ಆರು ತಿಂಗಳ ಹಿಂದೆ ಆರಂಭವಾದ ಈ ವಿಂಟೇಜ್ ಅಂಗಡಿ ಉತ್ತಮ ವಹಿವಾಟು ನಡೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇದರ  ಅಬ್ಬರ ಜೋರಾಗಿದೆ. ‘‘ಜೆಂಟಲ್‌ಮನ್‌ ಕಮ್ಯುನಿಟಿ’ ಎಂಬ ಫೇಸ್‌ಬುಕ್‌ ಪುಟ ತೆರೆದಿದ್ದು, ಯುವಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’’ ಎನ್ನುತ್ತಾರೆ ಬಂಗೇರಾ. ‘ದೇಶದ ವಿವಿಧ ಮೂಲೆಗಳಿಂದ ಯುವಕರಿಗಾಗಿ ಅತ್ಯಾಕರ್ಷಕ ವಸ್ತುಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಹಾಗೂ ಪ್ಯಾರಿಸ್‌ಗೂ ತೆರಳಿ ಅಲ್ಲಿನ ಪುರಾತನ ಫ್ಯಾಷನ್ ಸರಕುಗಳನ್ನು ತರುವ ಯೋಜನೆ ರೂಪಿಸಿದ್ದೇವೆ’ ಎಂದು ಮೈಥಿಲಿ ಹೇಳುತ್ತಾರೆ. ಕೆಲಸಕ್ಕೆ ರಾಜೀನಾಮೆ ನೀಡಿರುವ ಬಂಗೇರಾಗೆ ಈಗ ವಿಂಟೇಜ್ ಪೂರ್ಣಾವಧಿ ಕೆಲಸವಾಗಿದೆ.  TheGentleman’s Commnity/facebook page

ಮೇಘಾ ಗುಪ್ತಾ

ಮುಂಬೈ ಮೂಲದ ಯುವ ಪತ್ರಕರ್ತೆ ಮೇಘಾ ಗುಪ್ತಾ ಅವರ ಯಶಸ್ಸಿನ ಕಥೆ ಇದು. ಪತ್ರಿಕೋದ್ಯಮ ಪದವಿ ಪಡೆದ ಬಳಿಕ ಮೇಘಾ 2006ರಲ್ಲಿ ಮಿಡ್‌–ಡೇ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಕೆಲಸಕ್ಕೆ ಸೇರಿದರು. ಇಲ್ಲಿನ ಧಾರವಿ ಕೊಳೆಗೇರಿಯಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಬರೆಯುತ್ತಿದ್ದರು. ಸರಣಿ ಲೇಖನಗಳು ಪ್ರಕಟವಾದರೂ ಸ್ಥಳೀಯ ಸರ್ಕಾರಗಳು ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಆ ಭಾಗದ ಜನರ ಸ್ಥಿತಿಗತಿಯೂ ಸುಧಾರಣೆಯಾಗಲಿಲ್ಲ. ಇದರಿಂದ ಬೇಸತ್ತ ಮೇಘಾ ಕೆಲಸಕ್ಕೆ ರಾಜೀನಾಮೆ ನೀಡಿದರು. ಲಂಡನ್‌ಗೆ ತೆರಳಿ ಅಲ್ಲಿ ನಗರ ನಿರ್ಮಾಣ ಕುರಿತ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿ ಭಾರತಕ್ಕೆ ಮರಳಿದರು. ಮತ್ತೆ ಧಾರವಿ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಿರಲಿಲ್ಲ. ಆದರೆ ಸ್ಥಳೀಯರು ತಾವೇ ತಯಾರಿಸಿದ್ದ ಕರಕುಶಲ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ಫುಟ್‌ಪಾತ್‌ ಮೇಲೆ ಮಾರುತ್ತಿರುವುದು ಗಮನಕ್ಕೆ ಬಂತು. ಕುಶಲಕರ್ಮಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ‘ಧಾರವಿ ಮಾರ್ಕೆಟ್‌.ಕಾಮ್‌’ ಎಂಬ ಇ–ಕಾಮರ್ಸ್‌ ಸಂಸ್ಥೆಯನ್ನು ಆರಂಭಿಸಿದರು. ಇದಕ್ಕಾಗಿ ಅಪ್ಲಿಕೇಶನ್‌ (ಮೊಬೈಲ್‌) ಸಿದ್ಧಪಡಿಸಿದರು. 100 ಜನ ಕುಶಲಕರ್ಮಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರು ತಯಾರಿಸಿದ 902 ವಸ್ತುಗಳನ್ನು ಮೊಟ್ಟ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಿದರು.

ಸಂಸ್ಥೆಯ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡರು. ಕೊಳೆಗೇರಿ ಜನರು ತಯಾರಿಸಿದ ಉತ್ಕೃಷ್ಟ ವಸ್ತುಗಳನ್ನು ಕೊಳ್ಳಲು ಗ್ರಾಹಕರು ಆನ್‌ಲೈನ್‌ನಲ್ಲಿ ಮುಗಿಬಿದ್ದರು. ದೆಹಲಿ, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ವಿದೇಶಗಳಿಂದಲೂ ಗ್ರಾಹಕರು ವಸ್ತುಗಳಿಗಾಗಿ ಬುಕ್‌ ಮಾಡಲು ಆರಂಭಿಸಿದರು. ಹೀಗೆ ಆರಂಭವಾದ ಈ ಧಾರವಿ ಮಾರುಕಟ್ಟೆ ಸಂಸ್ಥೆ ಇಂದು ಬೃಹತ್ತಾಗಿ ಬೆಳೆದಿದೆ. ಧಾರವಿ ಪ್ರದೇಶದ ಜನರು ತಯಾರಿಸುವ ಸರಕುಗಳಿಗೆ ಹೆಚ್ಚಿನ ಬೇಡಿಕೆ ಇದೆ. ‘ಅಲ್ಲಿನ ಜನರಿಗೆ ಮೂಲ ಸೌಕರ್ಯ ಕೊಡಿಸುವ ಹೋರಾಟದಲ್ಲಿ ಯಶಸ್ವಿಯಾಗಲಿಲ್ಲ ನಿಜ, ಆದರೆ ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಯಶಸ್ಸು ಕಾಣುತ್ತಿದ್ದೇನೆ’ ಎನ್ನುತ್ತಾರೆ ಮೇಘಾ.   www.dharavimarket.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT