ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಮಾಯೆಯ ಮಾಟ...

ಬದುಕಿನ ಬುತ್ತಿ
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಮಸ್ಯೆ–ಸವಾಲು, ಬಡತನ, ಬೇಸರವಿದ್ದರೇನಂತೆ, ನಾವು ಬದುಕಬೇಕು ಎಂಬ ಹಂಬಲ ಅವರ ಹಟವಾಗಿತ್ತು. ಬದುಕು ಮೂರು ದಿನವಾದರೂ ಸಂತೋಷ ಜೊತೆಯಿರಬೇಕು ಎಂಬ ಛಲ ಅವರ ನಡೆನುಡಿಯಲ್ಲಿತ್ತು.

ಧಾರವಾಡದ ಟಿಕಾರಿ ರಸ್ತೆ, ಲೈನ್‌ಬಜಾರ್‌ ರಸ್ತೆ, ಠಾಕೂರ್‌ ರಸ್ತೆ ಓಡಾಡಿ ಗಾಂಧಿ ಚೌಕ್‌ ತಲುಪಿದಾಗ ಮನಸ್ಸಿಗೆ ಅನ್ನಿಸುತ್ತಿದದ್ದು ಒಂದೇ ಮಾತು: ‘ಬದುಕು ಅದೆಷ್ಟು ಚೆಂದ’. ರಸ್ತೆಯ ಒಂದು ಮೂಲೆಯಲ್ಲಿ ಬದುಕಿನ ಭವಿಷ್ಯ ಹೇಳುವ ಜ್ಯೋತಿಷಿಯಿದ್ದರೆ, ಆತನ ಪಕ್ಕದಲ್ಲೇ ಬದುಕಲು ಪ್ಯಾರಲಕಾಯಿ ಬುಟ್ಟಿ ಮುಂದೆ ಅಜ್ಜಿ ಕೂತಿರುತ್ತಿದ್ದಳು. ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಗಿರಿಮಿಟ್ಟು–ಮಿರ್ಚಿ ಬಜ್ಜಿ ವಾಸನೆ, ಅದರ ಹಿಂಬದಿಯೇ ಅಜ್ಜನೊಬ್ಬ ಬಿಸಿಬಿಸಿ ತವೆಯಲ್ಲಿ ಕರೆದಿದ್ದ ಉಪ್ಪು ಮಿಶ್ರಿತ ಶೇಂಗಾ ಮಾರುತ್ತಿದ್ದ. 

ಬದುಕಿನ ಕುರಿತು ಪಿಎಚ್‌.ಡಿ, ಥೀಸಿಸ್‌, ಎಂಬಿಬಿಎಸ್‌ ಕಲಿತವರು ಅಲ್ಲದೇ ಮಹನೀಯರು ಹೇಳಿದ ಗಂಭೀರ ಮಾತು ತಲೆಯಲ್ಲಿ ತುಂಬಿಕೊಂಡು ಹೊರಟವರ ಎದುರು ಅನಾವರಣಗೊಳ್ಳುತ್ತಿದ್ದುದ್ದೇ ಬೇರೆಯದ್ದೇ ಬದುಕು. ‘ಈ ಕ್ಷಣ ಬದುಕಬೇಕು ಅಷ್ಟೇ. ಮುಂದೇನಾಗುವುದೋ ಆಗಲಿ’ ಎಂಬುದು ಯಾರೂ ಸಹ ನೇರ ಹೇಳುತ್ತಿರಲಿಲ್ಲ. ಆದರೆ ಆ ಸಾಲನ್ನು ಅರಿತವರಂತೆ ರಸ್ತೆ ಬದಿಯಲ್ಲಿ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸು ಯಾವ ಸಂಶಯವಿಲ್ಲದೇ ಗೋಚರವಾಗುತಿತ್ತು.

‘ಮಗನಿಗೆ ಮದುವೆ ಮಾಡಿದೆ. ಹೆಂಡ್ತಿ ಜೊತೆ ಬ್ಯಾರೆ ಮನಿ ಮಾಡಿದ. ವಯಸ್ಸಾಗಿದ್ದಕ್ಕೆ ಮಗ ದೂರ ಹ್ವಾದ, ವಯಸ್ಸಾದರೂ ಪ್ಯಾರಲಕಾಯಿ ನನ್ನ ಕೈಬಿಡಲಿಲ್ಲ. ವಯಸ್ಸು 70 ಆದರೇನಂತೆ, ಪರಲೋಕಕ್ಕೆ ಹೋಗೋ ಮನಸ್ಸಿಲ್ಲ. 30 ವರ್ಷದಿಂದ ಇಲ್ಲೇ ಕೂತ ವ್ಯಾಪಾರ ಮಾಡಾಕತ್ತೀನಿ. ನಸೀಬು ಇರೋ ತನಕ ನಕ್ಕೊಂತ ಬದುಕಬೇಕೊ ತಮ್ಮಾ....’ ಎಂದು ಮಲ್ಲಮ್ಮ ಬೊಚ್ಚುಬಾಯಿಯಲ್ಲಿ ನಗ್ತಾ ಕೈಯಲ್ಲಿ ಎರಡು ಪ್ಯಾರಲಕಾಯಿ ಇತ್ತಾಗ ಕಣ್ಣಂಚಿನಲ್ಲಿ ನೀರು.

‘ಎರಡು ವರ್ಷದಾಗ, ನಿನ್ನ ಕೈಯಾಗ್ ಲಕ್ಷಾಂತರ ರೂಪಾಯಿ ರೊಕ್ಕ ಬರತೈತೋ. ಚೆಂದ ಹುಡುಗಿ ನಿನ್ನ ಕೈ ಹಿಡೀತಾಳ. ಮುಟ್ಟಿದ್ದೆಲ್ಲ ಬಂಗಾರ ಆಕೈತ್ತಿ. ಮುಂದ ನೀನ ದೊಡ್ಡ ಒಡೆಯನಾಗದಿದ್ದರೆ, ನಂಗ್‌ ಮುಖಾನೆ ತೋರಿಸಬೇಡ’ ಅಂತ ಜ್ಯೋತಿಷಿ ಚನ್ನಬಸಪ್ಪ ಮಾತು ಕೇಳಿ ಆತ ಖುಷಿಯಿಂದ 10 ರೂಪಾಯಿಯಿಟ್ಟ. ‘ಸೌಕಾರ, ನಾ  ಬದ್ಕೋದು ಬ್ಯಾಡೇನು? ಬೆಳಿಗ್ಗೆ ತಿಂಡಿ ತಿಂದಿಲ್ಲ. 20 ರೂಪಾಯಿ ಜಾಸ್ತಿ ಕೊಡೊ’ ಅಂತ ಜ್ಯೋತಿಷಿ ಇನ್ನೊಬ್ಬರ ಬದುಕಿನ ಕತೆ ಹೇಳಿ ತನ್ನ ಬದುಕಿಗೆ ಹಂಬಲಿಸುತ್ತಿದ್ದ. 100 ರೂಪಾಯಿ ನೋಟು ಕೈಯಲ್ಲಿ ಹಿಡಿದು 10 ರೂಪಾಯಿ ಬಿಸಿಬಿಸಿ ಶೇಂಗಾ ಕೇಳಿದಾಗ, ಲಕಲಕ ಹೊಳೆದ ಧರ್ಮಣ್ಣನ ಮುಖ ಮರುಕ್ಷಣವೇ ಬಾಡಿತು. ಆದರೆ ಉತ್ಸಾಹ ಕುಂದಲಿಲ್ಲ. ‘ಇನ್ನೂ ಚಿಲ್ಲರೆ ಬಂದಿಲ್ಲೊ ತಮ್ಯಾ. ನೀ ಇನ್ನೂ ಸಣ್ಣಾಂವ. ಖಾಲಿ ಕೈಯಾಗ್ ಕಳಸೂ ಮನಸ್ಸಿಲ್ಲ. ತೊಗೋ ಶೇಂಗಾ, ತಿನ್ಕೋಂತ್‌ ಹೋಗು. ರೊಕ್ಕ ಇವತ್‌ ಕೊಡಬೇಡ. ನಾಳೆ ತಂದುಕೊಡ. ನಾನರ ಎಲ್ಲಿ ಹೋಗಾಂವ್‌ ಅದೀನಿ... ಇಲ್ಲೇ ಇರ್ತೀನಿ.’ ಎಂದ ಧರ್ಮಣ್ಣ ಕಲಿಸಿದ ಬದುಕಿನ ಪಾಠವೇ ಬೇರೆಯಿತ್ತು. ಬತ್ತದ ಭರವಸೆಯ ಸೆಲೆ ಹುಡುಕಿ ಕೊಟ್ಟಿದ್ದ ಧರ್ಮಣ್ಣ... ನಂಬಿಕೆಯದ್ದು.

ದೊಡ್ಡ ದೊಡ್ಡ ಕೆಜಿಗಟ್ಟಲೇ ತೂಕದ ಪುಸ್ತಕಗಳಲ್ಲಿ ಇಂಗ್ಲಿಷ್‌ ಪದಗಳನ್ನು ಅಂದವಾಗಿ ಜೋಡಿಸಿಕೊಂಡು ಮಹನೀಯರು ಹೇಳಿದ ಬದುಕಿನ ವ್ಯಾಖ್ಯಾನಕ್ಕಿಂತ ಕಟ್ಟಕಡೆ ಕ್ಷಣದವರೆಗೂ ಬದುಕನ್ನು ಕಟ್ಟಿಕೊಂಡು ಬದುಕುತ್ತಿರುವ ಈ ಸರಳಜೀವಿಗಳ ಬದುಕೇ ಮಾದರಿ ಆಯಿತು. ಸಮಸ್ಯೆ–ಸವಾಲು, ಬಡತನ, ಬೇಸರವಿದ್ದರೇನಂತೆ, ನಾವು ಬದುಕಬೇಕು ಎಂಬ ಹಂಬಲ ಅವರ ಕಂಗಳಲ್ಲಿತ್ತು. ಬದುಕು ಮೂರು ದಿನವಾದರೂ ಸಂತೋಷ ಜೊತೆಯಿರಬೇಕು ಎಂಬ ಭಾವ ಅವರಲ್ಲಿ ವ್ಯಕ್ತವಾಗುತಿತ್ತು.

ಇಷ್ಟೆಲ್ಲವೂ ಸುರಿಮಳೆಯಂತೆ ನೆನಪಾಗಲು ಕಾರಣವಾಗಿದ್ದು, ಅಮೂಲ್ಯ ಸಂಗ್ರಹ ಎಂಬಂತೆ ಸಿಕ್ಕ ಕಪ್ಪು ಬಿಳುಪಿನ ಚಿತ್ರಗಳು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುವಾಗ, ಡಾ. ಎ.ಎಸ್.ಬಾಲಸುಬ್ರಮಣ್ಯ ಅವರು ನೀಡಿದ ಅಸೈನ್‌ಮೆಂಟು ಈ ಅಪರೂಪದ ಚಿತ್ರಗಳು.

ಛಾಯಾಚಿತ್ರ ಪತ್ರಿಕೋದ್ಯಮ ಕೂಡ ಅಧ್ಯಯನದ ಭಾಗವಾಗಿದ್ದರಿಂದ ‘ಬದುಕು–ಬಡತನ’ ಕುರಿತು ಛಾಯಾಚಿತ್ರಗಳನ್ನು ಸೆರೆ ಹಿಡಿಯುವಂತೆ ಗುರುಗಳು ಹೇಳಿದ್ದರು. ಅದೇ ಟಿಕಾರಿ ರಸ್ತೆ, ಲೈನ್‌ಬಜಾರ್‌ ರಸ್ತೆ, ಠಾಕೂರ್‌ ರಸ್ತೆ ಓಡಾಡುತ್ತ ಸಾಗಿದಾಗ, ಮಲ್ಲಮ್ಮ, ಚನ್ನಬಸಪ್ಪ ಮತ್ತು ಧರ್ಮಣ್ಣ ಜೊತೆ ಭಿಕ್ಷೆ ಬೇಡುವ ಮಕ್ಕಳು, ಶೂ ಪಾಲಿಶ್‌ ಮಾಡೋ ಹುಡುಗ, ಚಿಂದಿ ಆಯುವ ಪುಟಾಣಿಗಳು, ಏಕಾಂತ ಬದುಕಿನ ಅಜ್ಜ ಮತ್ತು ಬೇರೆಯವರೂ ಮಾತಿಗೆ ಸಿಕ್ಕರು. ಎಲ್ಲರೂ ಪ್ರೀತಿ, ಕರುಣೆ ತೋರಿದರು. ಇದೆಲ್ಲವೂ ನಡೆದದ್ದು 2003ರ ಮಾರ್ಚ್ ತಿಂಗಳಲ್ಲಿ. ಅಂದ್ರೆ ಈ ತಿಂಗಳಿಗೆ ಸರಿಯಾಗಿ 12 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT