ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಾಲಯ: ವಾಸ್ತವದ ಸವಾಲುಗಳು

Last Updated 18 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಈಗಲೂ ನಮ್ಮ ಹಳ್ಳಿಗಳಲ್ಲಿ ಮಲ, ಮೂತ್ರ ವಿಸರ್ಜನೆಗೆ ಜನರು ಬಯ­ಲನ್ನು ಆಯ್ಕೆ ಮಾಡು­ವುದು ಸಾಮಾನ್ಯ ಸಂಗತಿಯಾಗಿದೆ. ಇತ್ತೀಚೆಗೆ ‘ಲ್ಯಾನ್ಸೆಟ್’ ನಿಯತ­ಕಾಲಿಕೆ-­ಯಲ್ಲಿ ವರದಿ­ಯಾದ ಮಾಹಿತಿಯ ಪ್ರಕಾರ ಪ್ರತಿ ನಿಮಿಷಕ್ಕೆ ಸುಮಾರು ೧0.೧0 ಲಕ್ಷ ಲೀಟರ್‌­ಗಳಷ್ಟು ಮಾನವ ವಿಸರ್ಜಿತ ಕೊಳಚೆ ಗಂಗಾ ನದಿಗೆ ಸೇರುತ್ತಿದೆ. ಇಷ್ಟು ಪ್ರಮಾಣದ ಕೊಳಚೆ ನದಿಗೆ ಸೇರುತ್ತಿರುವುದು ಆಘಾತಕಾರಿ.

ಅದಕ್ಕೆ ಕಾರಣ ನಮ್ಮ ಕಣ್ಮುಂದೆಯೇ ಇದೆ. ನಮ್ಮ ದೇಶದ ಅರ್ಧದಷ್ಟು ಜನ, ಅಂದರೆ ಸುಮಾರು ೬೨.೭ ಕೋಟಿ ಜನರು ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ ಎನ್ನುವ ಸತ್ಯ­ವನ್ನು ಈ ವರದಿ ಹೊರಗೆಡವಿದೆ. ಇದು ಪ್ರಪಂಚ ದಲ್ಲಿ ಬಯಲು ಮಲ ವಿಸರ್ಜಿಸುವ ಸುಮಾರು 100 ಕೋಟಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು. ಅತಿ ಹೆಚ್ಚು ಬಯಲು ಮಲ ವಿಸರ್ಜನೆ ಮಾಡುವ ಹತ್ತು ದೇಶಗಳಲ್ಲಿ ನಮ್ಮ ದೇಶ ಅಗ್ರ ಸ್ಥಾನದ­ಲ್ಲಿದೆ. ನಮ್ಮ ದೇಶದ  ಇಷ್ಟು ದೊಡ್ಡ ಪ್ರಮಾಣದ ಜನರು ಇನ್ನೂ ಬಯಲು ಶೌಚಾಲಯ ಅವಲಂಭಿಸಿದ್ದಾರೆ ಎಂಬುದು ಕಳವಳದ ಸಂಗತಿ. 

ಬಯಲು ಮಲ ವಿಸರ್ಜನೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ೨೦೧೯ರ ಹೊತ್ತಿಗೆ ಬಯಲು ಮಲ ವಿಸರ್ಜನೆಯನ್ನು ಸಂಪೂರ್ಣ­ವಾಗಿ ನಿರ್ಮೂಲನೆ ಮಾಡಲಾಗು­ವುದು ಎಂದು  ಸರ್ಕಾರದ ಘೋಷಣೆಗಳು ಹೇಳುತ್ತಿವೆ. ಆದರೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಎಷ್ಟರ ಮಟ್ಟಿಗೆ ಇದನ್ನು ತಡೆಯಲಾಗಿದೆ ಎನ್ನುವುದನ್ನು ಒಮ್ಮೆ ನೋಡಬೇಕು. ಆಶ್ಚರ್ಯವೆಂದರೆ ಅಂಕಿ ಅಂಶಗಳ  ಪ್ರಕಾರ, ಬಯಲು ಮಲ ವಿಸರ್ಜನೆ ಮಾಡು-ವವರ ಸಂಖ್ಯೆ ಕಡಿಮೆಯಾಗಿರದೆ ೨೦೦೧­ರಿಂದ ೨೦೧೧ರವರೆಗೆ ಸುಮಾರು ೪೦ ಕೋಟಿ­­ಯಷ್ಟು  ಹೆಚ್ಚಾಗಿದೆ ಎಂಬುದು ತಿಳಿಯು­ತ್ತದೆ. ನಮ್ಮ ದೇಶದ ಪ್ರತಿ ಏಳು ಮಕ್ಕಳಲ್ಲಿ ಒಬ್ಬರಿಗೆ ಮನೆಯಲ್ಲಾಗಲೀ ಅಥವಾ ಶಾಲೆಯ­ಲ್ಲಾಗಲೀ ಶೌಚಾಲಯದ ಸೌಲಭ್ಯವಿಲ್ಲ. ಯುಪಿಎ ಸರ್ಕಾರ ರೂಪಿಸಿದ ‘ನಿರ್ಮಲ್ ಭಾರತ್ ಯೋಜನೆ’ಯಲ್ಲಿ ಶೌಚಾಲಯ ನಿರ್ಮಿಸಲು ಪ್ರತಿ ಸಂಸಾರಕ್ಕೂ ₨10 ಸಾವಿರವನ್ನು ಮೀಸಲಿಡಲಾಗಿತ್ತು. ಈಗಿನ ಸರ್ಕಾರ ೬.೫೦ ಲಕ್ಷ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಲು ಪ್ರತಿ ಹಳ್ಳಿಗೆ ₨೨೦ ಲಕ್ಷ ಮೀಸಲಿಡುವುದಾಗಿ ಘೋಷಿಸಿದೆ.

ಹಿಂದಿದ್ದ ಸರ್ಕಾರದ ಯೋಜನೆಯಂತೆ ಹಳ್ಳಿಗಳಿಗೆ ಮೀಸಲಿಡಲಾಗಿದ್ದ ಶೌಚಾಲಯ ನಿರ್ಮಾಣದ ಹಣ ದುರುಪಯೋಗಗೊಂಡಿದೆ. ಹಳ್ಳಿಗಳಲ್ಲಿ ಶೌಚಾ ಲಯಗಳು ನಿರ್ಮಾಣ­ಗೊಂಡರೂ ಅವುಗಳನ್ನು ಉಪಯೋಗಿಸುವವರ ಸಂಖ್ಯೆ ಬಹಳ ಕಡಿಮೆ. ಶೌಚಾಲಯವಿಲ್ಲದ ಅಥವಾ ಇದ್ದರೂ ಬಳಸದ ಎಷ್ಟೋ ಹಳ್ಳಿಗಳಲ್ಲಿ ಹೆಂಗಸರು ಮಲವಿಸರ್ಜನೆಗಾಗಿ ಸೂರ್ಯ ಮೂಡುವ ಮೊದಲೇ ಕತ್ತಲಲ್ಲಿ ಬಯಲ ಕಡೆ ಹೋಗಬೇಕಾದ ಅನಿವಾರ್ಯವಿದೆ. ಇದರಿಂದ ಅವರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿದ್ದು ಆ ಕುರಿತು ವರದಿಗಳೂ ಬರುತ್ತಿವೆ. ಇತ್ತೀಚೆಗೆ ಉತ್ತರ ಭಾರತದ ಖಾತ್ರ ಹಳ್ಳಿಯಲ್ಲಿ ಬಯಲು ಮಲ ವಿಸರ್ಜನೆಗೆಂದು ಹೋದ ಮಹಿಳೆ­ಯರ ಸಾಮೂಹಿಕ ಅತ್ಯಾಚಾರದ ವರದಿ ಎಂಥವ­ರನ್ನೂ ಬೆಚ್ಚಿ ಬೀಳಿಸುವಂಥದ್ದು. ಇಂತಹ ಅನಾಹು­ತ­­­ಗಳನ್ನು ತಡೆಗಟ್ಟಲು ಹೆಂಗಸರು ಸಾಮಾನ್ಯವಾಗಿ ಗುಂಪಿನಲ್ಲೇ ಬಯಲಿಗೆ ಹೋದರೂ ಅಪಾಯ ತಪ್ಪಿದ್ದಲ್ಲ. ಇಂತಹ ಘಟನೆ­ಗಳು ಹೆಚ್ಚಾಗಿ ಉತ್ತರ ಭಾರತದ ಹಳ್ಳಿಗಳಲ್ಲಿ ವರದಿಯಾದರೂ ನಮ್ಮ ರಾಜ್ಯದ ಹಳ್ಳಿಗಳಲ್ಲಿರುವ ಮಹಿಳೆಯರು ಈ ಅಪಾಯವನ್ನು ದಿನವೂ  ಎದುರಿಸಲೇಬೇಕಾಗಿದೆ. 

ಬಯಲು ಮಲ ಮೂತ್ರ ವಿಸರ್ಜನೆಯಿಂದ ಅತ್ಯಂತ ಅಪಾಯಕ್ಕೆ ಒಳಗಾಗುತ್ತಿರುವವರೆಂದರೆ ಮಕ್ಕಳು. ಇದರಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳ ಸಂಖ್ಯೆ ೫೦ಕ್ಕಿಂತಲೂ ಹೆಚ್ಚು ಎಂದು ಯುನಿಸೆಫ್ ಸಂಶೋಧಕರು ಹೇಳುತ್ತಾರೆ. ಸ್ವಚ್ಛತೆಯ ಕೊರತೆಯಿಂದ   ಪ್ರಪಂಚದಾದ್ಯಂತ ಪ್ರತಿ­ವರ್ಷ ಐದು ವರ್ಷದೊಳಗಿರುವ ಸುಮಾರು 5.80 ಲಕ್ಷ ಮಕ್ಕಳು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಭೇದಿಯಿಂದ ಅಸುನೀಗುತ್ತಿದ್ದಾರೆ. ಬಯಲು ಮಲವಿಸರ್ಜನೆಯಿಂದ ಉಂಟಾಗುವ  ಸಾವಿನ ಸಂಖ್ಯೆಯು ನಮ್ಮ ದೇಶದ ಐದು ವರ್ಷ­ದೊಳಗಿನ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅರ್ಧ­ದಷ್ಟು ಎನ್ನುವುದು ಆಘಾತಕಾರಿ ಅಂಶವಾಗಿದೆ. ಇದಲ್ಲದೇ ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡು­ಬರುವ ಪೌಷ್ಟಿಕಾಂಶದ ಕೊರತೆಗೂ ಬಯಲು ಮಲ ವಿಸರ್ಜನೆಯಿಂದ ಉಂಟಾಗುವ ನೈರ್ಮಲ್ಯದ ಕೊರತೆಯೇ ಅತಿ ಮುಖ್ಯ ಕಾರಣ. ಮಕ್ಕಳು ಬಯಲು ಮಲ ವಿಸರ್ಜನೆಯ ವೇಳೆ  ಸ್ವಚ್ಛತೆಯ ಕ್ರಮ ಗಳನ್ನು ತೆಗೆದುಕೊಳ್ಳದೆ ಇರುವು­ದರಿಂದ ಸೂಕ್ಷ್ಮಾಣು­ಜೀವಿಗಳ ಆಗರವಾಗಿರುವ ಮಲದ ಸೂಕ್ಷ್ಮ ಕಣಗಳು ಮಕ್ಕಳ ಬಾಯಿಯ ಮೂಲಕ ಹೊಟ್ಟೆಗೆ ಸೇರಿ ಕೊಳ್ಳುತ್ತವೆ. ಇದರಿಂದ ಉಂಟಾಗುವ ರೋಗಾಣುಗಳ ಸೋಂಕಿನಿಂದ ಮಕ್ಕಳ ಆಹಾರ ಸೇವನೆ ಕುಂಠಿತಗೊಳ್ಳುತ್ತದೆ. ಇದರಿಂದ ಉಂಟಾಗುತ್ತಿರುವ ಅಪೌಷ್ಟಿಕತೆಯು ಮಕ್ಕಳ ಸಂಪೂರ್ಣ ಬೆಳವಣಿಗೆಯನ್ನು ಕುಂಠಿತ­ಗೊಳಿಸುತ್ತದೆ ಎಂದು ಯುನಿಸೆಫ್ ಎಚ್ಚರಿಕೆ ನೀಡುತ್ತಲೇ ಬಂದಿದೆ. 

ಇಷ್ಟಾದರೂ ಸ್ವಚ್ಛತೆಯನ್ನು ಕುರಿತ ಕೇಂದ್ರ ಸರ್ಕಾರದ ಮಾತು ಕೇವಲ ಹೇಳಿಕೆಗಳ ಮಟ್ಟ­ದಲ್ಲೇ ನಿಂತು ಬಿಟ್ಟಿದೆ. ಕಾರ್ಯರೂಪ ತಳೆಯು­ವಲ್ಲಿ  ಸೋತಿದೆ. ಅದು ಕೇವಲ ಯೋಜನೆಗಳನ್ನು ರೂಪಿಸಿದೆಯೇ ಹೊರತು ಅದರ ಅನುಷ್ಠಾನಕ್ಕೆ ಬೇಕಾಗಿರುವ ಬದ್ಧತೆಯನ್ನು ಮರೆತಿದೆ. ಹಳ್ಳಿಯ ಜನರಿಗೆ ಶೌಚಾಲಯ ಕಟ್ಟಿಸಿಕೊಟ್ಟರೂ ಅದನ್ನು ಯಾವ ಕಾರಣಕ್ಕೆ ಉಪಯೋಗಿಸಲು ಮುಂದೆ ಬರುವುದಿಲ್ಲ ಎನ್ನು­ವು­ದನ್ನು ಅರಿಯುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಅವರ ಮನಪರಿವರ್ತನೆಗೆ ಸೂಕ್ತವಾದ ಕಾರ್ಯ­ಕ್ರಮ­ಗಳನ್ನು ರೂಪಿಸಿಲ್ಲ.

ಇದರಿಂದಾಗಿ ದೊಡ್ಡ ಮೊತ್ತದ ಯೋಜನೆಗಳು ಯಶಸ್ಸು ಕಾಣಲಾ­ಗುತ್ತಿಲ್ಲ. ಸ್ವಚ್ಛ ನೀರು– ನೈರ್ಮಲ್ಯದ ಯೋಜನೆ­ಗಳಿಗೆ ಬಯಲು ಮಲ ವಿಸರ್ಜನೆ ದೊಡ್ಡ ಪ್ರಮಾಣದ ಹೊಡೆತ ನೀಡುತ್ತಿದೆ. ಇದರಿಂದ ಉಂಟಾಗುತ್ತಿರುವ ರೋಗ ರುಜಿನಗಳು ಮತ್ತು ಮಕ್ಕಳ ಸಾವಿನಿಂದ ನಮ್ಮ ದೇಶಕ್ಕೆ ಆಗುತ್ತಿರುವ ವಾರ್ಷಿಕ ಆರ್ಥಿಕ ನಷ್ಟ ಸುಮಾರು ರೂ ೨.೪ ಲಕ್ಷ ಕೋಟಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ನ ‘ವಾಟರ್ ಮತ್ತು ಸ್ಯಾನಿಟೇಶನ್ ಯೋಜನೆಯ ವರದಿ’ ಹೇಳುತ್ತಿದೆ. ಅಂದರೆ ಇದು ನಮ್ಮ ದೇಶದ ಜಿಡಿಪಿಯ ಸುಮಾರು ಶೇಕಡ ೬.೪ರಷ್ಟು. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದಲ್ಲಿ ದೇಶದ ಆರ್ಥಿಕ ಪ್ರಗತಿ ಕೂಡ ಅಡಗಿದೆ ಎಂಬ ಸತ್ಯವನ್ನು  ಸರ್ಕಾರ ಆದಷ್ಟೂ ಬೇಗ  ತಿಳಿಯಬೇಕು. ಆಸ್ಪತ್ರೆಗಳ ಸೇವೆಗಿಂತಲೂ ಹೆಚ್ಚಾಗಿ ಸ್ವಚ್ಛ ವಾತಾವರಣದ ನಿರ್ಮಾಣದಲ್ಲಿ ದೇಶದ ಆರೋಗ್ಯ ಅಡಗಿದೆ. ಕೇವಲ ಸ್ವಚ್ಛ ಭಾರತದ ಘೋಷಣೆ ಮಾಡುತ್ತಾ ನಗರಗಳ ರಸ್ತೆಗಳನ್ನು ಗುಡಿಸುವ ಚಿತ್ರಗಳಷ್ಟೇ ನಮ್ಮ ಜನಪ್ರತಿನಿಧಿಗಳ ಸಾಧನೆಯಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT