ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯ ಕೋಕೊ

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಾಗಿದ ಹಳದಿ ಬಣ್ಣದ ಪಪ್ಪಾಯದ ರೀತಿ ಕಾಣುವ ಹಣ್ಣುಗಳು. ಅವನ್ನು ಒಡೆದರೆ ಬಿಳಿ ಬಣ್ಣದ ಹೊದಿಕೆಯ ಬೀಜಗಳು. ಅದನ್ನೂ ಸುಲಿದರೆ ಸಿಗುವುದೇ ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೊಲೇಟ್‌ನ ಮೂಲ ವಸ್ತು ಕೋಕೊ! ನಮ್ಮ ರಾಜ್ಯದಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಅಡಿಕೆ, ತೆಂಗಿನ ತೋಟಗಳ ನಡುವೆ ಉಪ ಕೃಷಿಯಾಗಿ ಕಂಡುಬರುತ್ತಿದ್ದ ಕೋಕೊ ಈಗ ಬಯಲು ಸೀಮೆಯ ರೈತರಿಗೂ ಆದಾಯ ತರಲು ಆರಂಭಿಸಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹರಿಹರ ತಾಲ್ಲೂಕುಗಳಲ್ಲಿ ನೀರಾವರಿ ಅನುಕೂಲವಿರುವ ಕೆಲವು ರೈತರು ಪ್ರಾಯೋಗಿಕವಾಗಿ ತಮ್ಮ ತೋಟದಲ್ಲಿ ಉಪ ಬೆಳೆಯಾಗಿ ಕೋಕೊ ಗಿಡಗಳನ್ನು ಬೆಳೆದಿದ್ದು, ಅವು ಈಗ ಫಸಲು ಬಿಡುತ್ತಿವೆ. ದಾವಣಗೆರೆ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ತಾಲ್ಲೂಕುಗಳಲ್ಲಿನ ಹವಾಗುಣ ಕೋಕೊ ಬೆಳೆಗೆ ಪೂರಕವಾಗಿದೆ. ಇದನ್ನು ಬೆಳೆಯಲು ಶೇ 40ರಿಂದ 50ರಷ್ಟು ನೆರಳು ಅತ್ಯಗತ್ಯ.

25 ಡಿಗ್ರಿಯಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಬೆಳೆಯಬಹುದು ಎನ್ನುತ್ತಾರೆ ಕೃಷಿ ತಜ್ಞರು. ಈ ಜಿಲ್ಲೆಗಳ ರೀತಿಯಲ್ಲಿ ಹವಾಗುಣ ಹೊಂದಿರುವ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ, ಆಂಧ್ರಪ್ರದೇಶದ ಪಶ್ಚಿಮ ಗೋದಾ ವರಿ, ಏಲೂರು ಮುಂತಾದ ಪ್ರದೇಶದಲ್ಲೂ 1996ರಿಂದ ಈಚೆಗೆ ಕೋಕೊ ಪ್ರಮುಖ ಉಪ ಬೆಳೆಯಾಗಿದೆ.

ಸರ್ಕಾರದಿಂದ ಸಬ್ಸಿಡಿ
‘ಕೃಷಿ ಇಲಾಖೆಯ ಸಮಗ್ರ ತೋಟಗಾರಿಕೆ ಯೋಜನೆಯಲ್ಲಿ ಕೋಕೊ ಬೆಳೆಯನ್ನೂ ಸೇರಿಸಲಾಗಿದೆ. ರೈತರು ತಮ್ಮದೇ ವ್ಯವಸ್ಥೆಯಲ್ಲಿ ಗಿಡಗಳನ್ನು ತಂದು ನೆಟ್ಟ ಬಳಿಕ ಇಲಾಖೆಯಿಂದ ಹೆಕ್ಟೇರಿಗೆ ಗರಿಷ್ಠ 12 ಸಾವಿರದವರೆಗೆ  ಸಹಾಯಧನ (ಸಬ್ಸಿಡಿ) ನೀಡಲಾಗುತ್ತದೆ. ಅವರಿಗೆ ಅಗತ್ಯ ಮಾಹಿತಿ, ಕೋಕೊ ಬೆಳೆ ಕಟಾವು, ಅದರ ಸಂಸ್ಕರಣೆ ಕುರಿತು ಇಲಾಖೆಯಿಂದ ತರಬೇತಿ ವ್ಯವಸ್ಥೆ ಮಾಡಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಮಿರ್ಜಿ.

ಆರೈಕೆ ಮತ್ತು ಮಾರುಕಟ್ಟೆ
‘ಚಾಕೊಲೇಟ್ ಉತ್ಪಾದನೆ ನಿಲ್ಲುವವರೆಗೂ ಕೋಕೊ ಬೆಳೆಗಾರರಿಗೆ ಚಿಂತೆಯಿಲ್ಲ!’ ಎನ್ನುವುದು ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿಯ ರೈತ ಶಿವಮೂರ್ತಯ್ಯ ಅವರ ಅನಿಸಿಕೆ. ತಮ್ಮ ನಾಲ್ಕು ಎಕರೆ ಅಡಿಕೆ ತೋಟದಲ್ಲಿ ಸುಮಾರು 500 ಕೋಕೊ ಗಿಡಗಳನ್ನು ಅವರು ನೆಟ್ಟಿದ್ದು, ಬೀಜ ಮಾರಾಟ ಮಾಡುತ್ತಿದ್ದಾರೆ. ‘ಗಿಡ ಚಿಕ್ಕದಿದ್ದಾಗಲೇ ನೆಟ್ಟು, ಒಂದೆರಡು ಅಡಿ ಬೆಳೆಯುವವರೆಗೆ ಸ್ವಲ್ಪ ಹಟ್ಟಿ ಗೊಬ್ಬರ ಹಾಕಿದರೆ ಸಾಕಾಗುತ್ತದೆ. ನಂತರ ಅಡಿಕೆ ಗಿಡಗಳಿಗೆ ಹಾಕಿದ ಗೊಬ್ಬರವೇ ಸಾಕಾಗುತ್ತದೆ. ಬೇಸಿಗೆಯಲ್ಲಿ ತೋಟಕ್ಕೆ ನೀರು ಹಾಯಿಸುವಾಗಲೇ ಕೋಕೊ ಗಿಡಗಳಿಗೂ ದೊರೆಯುತ್ತದೆ.

ಅಷ್ಟೂ ಅಗತ್ಯವಿದ್ದರೆ ಮಣ್ಣು ಪರೀಕ್ಷೆ ಮಾಡಿಸಿ ರಾಸಾಯನಿಕ ಗೊಬ್ಬರ ಬಳಸಬಹುದು. ಹೇಗೆ ನೋಡಿದರೂ ಗಿಡವೊಂದಕ್ಕೆ ವರ್ಷಕ್ಕೆ 25ರಿಂದ 30 ರೂಪಾಯಿಗಿಂತ ಹೆಚ್ಚಿನ ಖರ್ಚು ಬರುವುದಿಲ್ಲ’ ಎನ್ನುತ್ತಾರೆ ಅವರು. ಎರಡು ವರ್ಷದಲ್ಲಿ ಫಸಲು ಬಿಡಲು ಆರಂಭವಾಗುತ್ತದೆ. ಶಿವಮೊಗ್ಗದಲ್ಲಿ ಕ್ಯಾಂಪ್ಕೊ ಹಾಗೂ ಕ್ಯಾಡ್‌ಬರೀಸ್ ಸಂಸ್ಥೆಗಳು ಕೋಕೊ ಬೀಜ ಖರೀದಿಸುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಹಸಿ ಬೀಜಕ್ಕೆ ₨ 40ರಿಂದ 50 ಇದ್ದರೆ, ಒಣ ಬೀಜಕ್ಕೆ ₨ 120ರಿಂದ 135 ದರವಿದೆ.

ಅಡಿಕೆ ತೋಟ ಅಥವಾ ತೆಂಗಿನ ತೋಟದಲ್ಲಿ ಒಂದು ಸಾಲು ಬಿಟ್ಟು ಒಂದರಲ್ಲಿ ಕೋಕೊ ಬೆಳೆಯುವುದು ಉತ್ತಮ. ಗಿಡ ಬೆಳೆದ ಮೇಲೆ ಸುಮಾರು ಆರು ಅಡಿ ಎತ್ತರ ಹಾಗೂ ಆರು ಅಡಿ ಅಗಲ ಬೆಳೆಯಲು ಬಿಡುವುದು ಅನುಕೂಲಕರ. ಇದರಿಂದ ಕಾಯಿ ಕೊಯ್ಲಿಗೆ ಹಾಗೂ ತೋಟಕ್ಕೆ ಸಮಸ್ಯೆಯಾಗುವುದಿಲ್ಲ. ಬಯಲು ಸೀಮೆಯಲ್ಲಿ ಬೆಳೆಯಲು ಆಸಕ್ತ ರೈತರು ಮಾಹಿತಿಗೆ ಸಮೀಪದ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT