ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲ ಮತ್ತು ಚರಕ...

ಸಂಗತ
Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬರಗಾಲದಂಥ ಸಂಕಟದಿಂದ ಪಾರಾಗುವುದಕ್ಕೆ, ಚರಕವು ಪ್ರತಿಪಾದಿಸುವ ಸ್ವಾವಲಂಬಿ ಸಮಾಜ ವ್ಯವಸ್ಥೆಯ ಜಾರಿಗೆ ಸರ್ಕಾರ ಪ್ರಯತ್ನಿಸಬೇಕು.

ರಾಜ್ಯದಲ್ಲಿ ಬಂದಿರುವ ಬರಗಾಲದ ನಿರ್ವಹಣೆಯಲ್ಲಿ ಸರ್ಕಾರದ ಪರಿಹಾರಕ್ಕಿಂತಲೂ ಗಾಂಧೀಜಿ ಪ್ರತಿಪಾದಿಸಿದ್ದ ಚರಕ ಹೆಚ್ಚು ಪರಿಣಾಮಕಾರಿ ಮತ್ತು ಶಾಶ್ವತ.

ದೇಶದಲ್ಲಿದ್ದ ಮತ್ತು ಇರುವ ಬಡತನದ ನಿರ್ವಹಣೆಗಾಗಿ, ವರ್ಷದಲ್ಲಿ ಕೆಲವೇ ತಿಂಗಳು ವ್ಯವಸಾಯ ಮಾಡುವ ರೈತರಿಗೆ ಬಿಡುವಿನ ವೇಳೆಯಲ್ಲಿ ಪರ್ಯಾಯ ಉದ್ಯೋಗಕ್ಕೆ ಮತ್ತು ಹಣ ಸಂಪಾದನೆಗೆ ಪೂರಕವಾಗಲೆಂದೇ ಗಾಂಧೀಜಿ ನೂರು ವರ್ಷಗಳ ಹಿಂದೆ ಚರಕದ ವಿಚಾರವನ್ನು ದೇಶದ ಮುಂದೆ ಇಟ್ಟಿದ್ದರು. ಚರಕದ ಮೂಲಕ ತಯಾರಾಗುವ ನೂಲಿನಿಂದ ನೇಯ್ಗೆಯಾದ ಖಾದಿಯನ್ನು ಎಲ್ಲರೂ ಧರಿಸಬೇಕೆಂದು ತಿಳಿಸಿದ್ದರು.

ಅಂದಿನ ಏಕೈಕ ರಾಷ್ಟ್ರೀಯ ಸಂಘಟನೆಯಾಗಿದ್ದ ಕಾಂಗ್ರೆಸ್‌ ಪಕ್ಷ ಚರಕ ಮತ್ತು ಖಾದಿಯನ್ನು ಸ್ವಾತಂತ್ರ್ಯ ಚಳವಳಿಯ ಅಹಿಂಸಾತ್ಮಕ ಸಾಧನವನ್ನಾಗಿ ಸ್ವೀಕರಿಸುವಂತೆ ಮಾಡಿದ್ದರು. ಗಾಂಧಿ ತನ್ನವರೆಂದೇ ಪ್ರತಿಪಾದಿಸುವ ಕಾಂಗ್ರೆಸ್ ಸರ್ಕಾರ ಅವರ ಈ ಕಾರ್ಯಕ್ರಮವನ್ನು ಮರೆತೇಬಿಟ್ಟಿದೆ!

1974ರಲ್ಲಿ ಜಯಪ್ರಕಾಶ್‌ ನಾರಾಯಣರು ದೇಶದಲ್ಲಿದ್ದ ಅಂದಿನ ಕಾಲದ ಎಲ್ಲ ಬಗೆಯ ಸಮಸ್ಯೆಗಳ ನಿವಾರಣೆಗೆ ‘ಸಂಪೂರ್ಣ ಕ್ರಾಂತಿ’ಗಾಗಿ ಕರೆ ನೀಡಿದ್ದರು; ಗುಜರಾತಿನಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಪಟೇಲ್ ಜನಾಂಗದ ಚಳವಳಿ 1930ರಲ್ಲಿ ಗಾಂಧೀಜಿ ಮಾಡಿದ್ದ ದಂಡಿ ಯಾತ್ರೆಯನ್ನು ಮಾಡಹೊರಟಿದೆ; ಒಂದೆರಡು ವರ್ಷಗಳ ಹಿಂದೆ ಅಣ್ಣಾ ಹಜಾರೆ ಭ್ರಷ್ಟಾಚಾರ ನಿರ್ಮೂಲನೆಗೆ ಉಪವಾಸ ಸತ್ಯಾಗ್ರಹ ಕೈಗೊಂಡು ರಾಷ್ಟ್ರವ್ಯಾಪಿ ಚಳವಳಿಯನ್ನು ಪ್ರಾರಂಭಿಸಿದ್ದರು. ಹೀಗೆ ಗಾಂಧೀಜಿ ಕೊಟ್ಟಿದ್ದ ವಿಚಾರಗಳ ಮರು ಅನುಕರಣೆ ಆಗುತ್ತಿರುವ ಸಂದರ್ಭದಲ್ಲಿ, ಗಾಂಧೀಜಿ ಸೂಚಿಸಿದ್ದ ಚರಕದ ಕಾರ್ಯಕ್ರಮವನ್ನು ಜನ ಏಕೆ ಕೈಗೆತ್ತಿಕೊಳ್ಳಬಾರದು?

ಸ್ವಾತಂತ್ರ್ಯಪೂರ್ವದಲ್ಲಿ ಬರಗಾಲ ಬಿದ್ದಾಗ ಇಂಗ್ಲಿಷ್ ಸರ್ಕಾರವೂ ಸಂಕಷ್ಟದಲ್ಲಿದ್ದ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡುತ್ತಿತ್ತು. ಆದರೆ ಜನರಿಗೆ ಆದಾಯ ತಂದುಕೊಡಬಹುದಾದ ಉದ್ಯೋಗವನ್ನು ಮಾತ್ರ ಸೃಷ್ಟಿಸುತ್ತಿರಲಿಲ್ಲ. ಕಷ್ಟದಲ್ಲಿದ್ದ ರೈತರ ಕಂದಾಯವನ್ನು ವಜಾ ಮಾಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಗಾಂಧೀಜಿ ಸತ್ಯಾಗ್ರಹ ಮಾಡುತ್ತಿದ್ದರು.

ಈಗ ರಾಜ್ಯದಲ್ಲಿ ಅಂಥದ್ದೇ ಸ್ಥಿತಿಯುಂಟಾಗಿದೆ. ಬ್ರಿಟಿಷರಿಲ್ಲದ ಬ್ರಿಟಿಷ್ ಸರ್ಕಾರ ನಮ್ಮ ರಾಜ್ಯದಲ್ಲಿ ಇದೆಯೆನೋ ಎಂದು ಭಾಸವಾಗುತ್ತಿದೆ. ಸರ್ಕಾರದ ಆಡಳಿತ ವೈಖರಿ ಬ್ರಿಟಿಷ್ ಸರ್ಕಾರದ ಆಡಳಿತ ವೈಖರಿಗಿಂತ ಭಿನ್ನವಾಗಿಲ್ಲ. ಅದೇ ತಾತ್ಕಾಲಿಕ ಪರಿಹಾರದ ಚಿಂತನೆ. ಎಲ್ಲರಿಗೂ ವರ್ಷವಿಡೀ ಉದ್ಯೋಗ ಕೊಡದಂಥ, ದೈತ್ಯಾಕಾರದ ಬಂಡವಾಳ ಹೂಡಿಕೆ ಕೇಳುವ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವತ್ತ ಸರ್ಕಾರ ಗಮನ ಕೊಡುತ್ತಿದೆಯೇ ವಿನಾ ವಿಕೇಂದ್ರಿತ, ಕಡಿಮೆ ಬಂಡವಾಳದ, ಮಾನವಶಕ್ತಿಯಾಧಾರಿತ, ಪರಿಸರ ಸ್ನೇಹಿ ಉದ್ಯೋಗಗಳ ಸ್ಥಾಪನೆಯ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಎಲ್ಲರನ್ನೂ ಕಾಡುತ್ತಿರುವುದು ಪರಿಸರ ಹಾನಿಯ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆ. ಜೀವನ್ಮರಣದ ಈ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಚರಕಕ್ಕಿದೆ. ಚರಕ ಕೇವಲ ಉತ್ಪಾದನೆಯ ಸಾಧನವಲ್ಲ. ಅದೊಂದು ಸುಸ್ಥಿರ ಜೀವನ ಪದ್ಧತಿಯ ಹುಡುಕಾಟ. ಪ್ರಕೃತಿಯನ್ನು ಉಳಿಸುವ, ಬೆಳೆಸುವ ಸಾಧನ. ಆದ್ದರಿಂದ ಚರಕದ ಸರ್ವತ್ರ ಉಪಯೋಗಕ್ಕೆ ಜನ ಪ್ರಯತ್ನಿಸಬೇಕು ಮತ್ತು ಸರ್ಕಾರ ಯೋಜಿಸಬೇಕು.

ಬರಗಾಲ ಉಂಟಾಗುವುದಕ್ಕೆ ಹವಾಮಾನದಲ್ಲಿಯ ವೈಪರೀತ್ಯ ಮೂಲ ಕಾರಣವಾಗಿದೆ ಎಂಬ ವಿಷಯ  ಸರ್ಕಾರಕ್ಕೆ ಗೊತ್ತಿಲ್ಲದೇ ಇಲ್ಲ. ಹವಾಮಾನದಲ್ಲಿಯ ವೈಪರೀತ್ಯಕ್ಕೆ ಅರಣ್ಯಗಳ ಅವ್ಯಾಹತ ನಾಶ, ವಾಹನ ಮತ್ತು ಕೈಗಾರಿಕೆಗಳಿಂದ ಹೊರಹೊಮ್ಮುವ ಮಾಲಿನ್ಯ, ಅತಿಯಾದ ನಗರೀಕರಣ ಕಾರಣಗಳೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೂ ಸರ್ಕಾರ ಅಂಥ ಕೃತ್ಯಗಳಲ್ಲಿ ತೊಡಗಿರುವುದು ವಿಷಾದನೀಯ ಮತ್ತು ಖಂಡನೀಯ.

ಗಾಂಧೀಜಿ ಚರಕದ ಪ್ರಚಾರ ಮಾಡಿದ ಮೇಲೆ ಮತ್ತು ಖಾದಿಧಾರಿ ಸ್ವಯಂಸೇವಕರು ಹತ್ತಾರು ಹೋರಾಟ ಮಾಡಿದ ನಂತರ ಸುಮಾರು ಇಪ್ಪತ್ತೆಂಟು ವರ್ಷಗಳ ತರುವಾಯ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಖಾದಿಯನ್ನು ‘ಭಾರತ ಸ್ವಾತಂತ್ರ್ಯದ ಸಮವಸ್ತ್ರ’ ಎಂದು ಕರೆದರು. ಅವರು ಹೇಳಿದ ಆ ಮಾತನ್ನು ಇವತ್ತಿನ ಜಾಗತೀಕರಣದ ಸಂದರ್ಭದಲ್ಲಿ ವಾಸ್ತವವಾಗಿಸಬೇಕಾದುದು ಅಗತ್ಯವಾಗಿದೆ. ಜಾಗತೀಕರಣ ರೈತರಿಗೆ ಮರಣ ಶಾಸನವಾಗಿದೆ. ಒಂದು ದೇಶದ ಆರ್ಥಿಕತೆಯನ್ನು ಬಿಂಬಿಸುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಏನು ಮಾಡಬಹುದೋ ಅದೆಲ್ಲವನ್ನೂ ಬೇಗ ಮಾಡುವುದು ಉಚಿತ.

ಯಾವ ರಾಜ್ಯ ಅಂತರ ರಾಷ್ಟ್ರೀಯ ಉದ್ಯಮಿಗಳನ್ನು ಆಕರ್ಷಿಸಲು ಉತ್ತಮವಾಗಿದೆ ಎಂಬ ಪ್ರಶಸ್ತಿಯನ್ನು ವಿಶ್ವಬ್ಯಾಂಕ್ ಕೊಡುವ ದುಃಸ್ಥಿತಿಯಿಂದ ಪಾರಾಗಬೇಕಾದರೆ, ಚರಕದ ಹಿಂದಿರುವ ಸಿದ್ಧಾಂತವನ್ನು ಅರಿತುಕೊಂಡು ಎಲ್ಲ ಜನರು ಮತ್ತು ಸಂಘ ಸಂಸ್ಥೆಗಳು ಕೆಲಸ ಮಾಡಬೇಕು. ದೇಶದ ಎಲ್ಲ ತಾಂತ್ರಿಕ ಶಾಲೆಗಳಲ್ಲಿ ನೂಲುಗಾರಿಕೆ, ನೇಕಾರಿಕೆ ಕಲಿಸುವ ವ್ಯವಸ್ಥೆ ಮಾಡಬೇಕು.

ಬರಗಾಲದ ಬಿಸಿ ತಟ್ಟದಂತಹ ಸ್ಥಿತಿಯನ್ನು ಕಾಪಾಡಿಕೊಂಡು ಬರುವ ಒಂದು ವಿಶಿಷ್ಟ ಸಾಧನವಾಗಿದೆ ಚರಕ. ವಿದೇಶಗಳಿಂದ ಬಹುರಾಷ್ಟ್ರೀಯ ಕೈಗಾರಿಕಾ ಕಂಪೆನಿಗಳನ್ನು ಆಹ್ವಾನಿಸುತ್ತಿರುವ ಸರ್ಕಾರಗಳು ದೇಶದಲ್ಲಿ ಇನ್ನೂ ಹೆಚ್ಚು ಬರಗಾಲದ ಸ್ಥಿತಿ ಉಂಟಾಗುವಂತೆ ಮಾಡುತ್ತಿವೆ.

ಪ್ರತಿ ವ್ಯಕ್ತಿಯ ಉದ್ಯೋಗಕ್ಕಾಗಿ ತಲಾ ಕೋಟ್ಯಂತರ ರೂಪಾಯಿ ಖರ್ಚಾಗುವಂಥ,  ಅತಿಯಾದ ಭೂಮಿ ಮತ್ತು ವಿದ್ಯುತ್‌ ಕೇಳುವಂಥ ಕಾರ್ಖಾನೆಗಳನ್ನು ಸ್ಥಾಪಿಸಿ ಅಭಿವೃದ್ಧಿ ಮಾಡುವ ವಿಚಾರವನ್ನು ಇಟ್ಟುಕೊಂಡಿವೆ. ವಿದೇಶಿ ಕಂಪೆನಿಗಳಿಗೆ ಅತಿಯಾದ ರಿಯಾಯಿತಿಗಳನ್ನು ಮತ್ತು ಸವಲತ್ತುಗಳನ್ನು ಸರ್ಕಾರಗಳು ಕೊಡುತ್ತಿವೆ. ಇಷ್ಟೆಲ್ಲ ಆದ ಮೇಲೂ ದೇಶದಲ್ಲಿ ಉಂಟಾಗುವ ಬರಗಾಲದ ಸ್ಥಿತಿಯನ್ನು ತಪ್ಪಿಸಲು ಇವುಗಳಿಗೆ ಸಾಧ್ಯವಾಗಿಲ್ಲ; ಜನರ ಬವಣೆ ತಪ್ಪಿಲ್ಲ.

ಸರ್ಕಾರಗಳು ಕೂಡ ಒಂದು ರೀತಿಯ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿವೆ. ಹಣಕಾಸಿನ ಅತಿಯಾದ ಹೊರೆ ಅವುಗಳ ಮೇಲೆ ಬೀಳುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುವ ರಿಯಾಯಿತಿಗಳೊಂದಿಗೆ, ಬರಗಾಲದ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇಂಥ ಧರ್ಮಸಂಕಟದಿಂದ ಸರ್ಕಾರಗಳು ಪಾರಾಗಬೇಕಿದ್ದರೆ ಸ್ವದೇಶಿ ವಿಚಾರ, ಅಂದರೆ ಎಲ್ಲ ವಿಷಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಕಾರ್ಯಕ್ರಮದ ಅಂಗವಾಗಿರುವ ಚರಕವು ಪ್ರತಿಪಾದಿಸುವ ಸಮಾಜ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸಬೇಕು.

‘ನನ್ನ ಕೈಗೆ ಖಾದಿ ಕೊಡಿ. ನಾನು ನಿಮ್ಮ ಕೈಗೆ ಸ್ವರಾಜ್ಯ ಕೊಡುವೆನು’ ಎಂದು ಮಹಾತ್ಮ ಗಾಂಧಿ ಹೇಳಿದ ಮಾತನ್ನು ನಿಜ ಮಾಡಲು ಸರ್ಕಾರಗಳು ಪ್ರಯತ್ನಿಸಲಿ. ಚರಕವನ್ನು ತಮ್ಮದಾಗಿಸಿಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT