ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಜಮೀನಲ್ಲಿ ‘ಬಂಗಾರ’ ಸೃಷ್ಟಿ

ನೆಲದ ನಂಟು-11
Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸುತ್ತಲೂ ಒಣ ಭೂಮಿ. ಮಧ್ಯೆ 20 ಎಕರೆಯಷ್ಟು ಪ್ರದೇಶದಲ್ಲಿ ನಳನಳಿಸುತ್ತಿರುವ ಕಬ್ಬಿನ ಬೆಳೆ. ಸುಮಾರು ಆರಿಂಚು ಅಗೆದರೂ ಕಲ್ಲು ಬಂಡೆಗಳೇ ತಾಗುವ ಈ ಬರಡು ಭೂಮಿಯಲ್ಲೂ ಹುಲುಸಾದ ಬೆಳೆ. ಒಳಹೊಕ್ಕು ನೋಡಿದರೆ, ಅಲ್ಲೊಂದು ಕೃಷಿ ಪಾಠಶಾಲೆಯೇ ತೆರೆದುಕೊಳ್ಳುತ್ತದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿಯೇ ತಾಂತ್ರಿಕತೆಯನ್ನು ಅಳವಡಿಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಸಾಧ್ಯ ಎಂಬ ಸತ್ಯ ಅರಿವಿಗೆ ಬರುತ್ತದೆ.

ಹೌದು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಚಿಕ್ಕಲವಾಳ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಪದವೀಧರ ಮಹೇಶ ಪಾಂಡುರಂಗ ಪಾಟೀಲ ಅಂತಹ ಕೃಷಿಯಲ್ಲಿ ತೊಡಗಿದ್ದಾರೆ. ಮಹಾರಾಷ್ಟ್ರದ ರಾಹುರಿಯ ಮಹಾತ್ಮ ಪುಲೆ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಬಿ.ಟೆಕ್‌  ಎಂಜಿನಿಯರಿಂಗ್ ಪದವಿ ಪಡೆದಿರುವ ಮಹೇಶ ಪಾಟೀಲ ಅವರು ಹಾಲೆಂಡ್‌, ಇಸ್ರೇಲ್‌ ಸೇರಿದಂತೆ ಹಲವು ದೇಶಗಳನ್ನು ಸುತ್ತಾಡಿ ಕೃಷಿ ಆವಿಷ್ಕಾರಗಳ ಅಧ್ಯಯನ ಮತ್ತು ತರಬೇತಿ ಪಡೆದು ಬಂದಿದ್ದಾರೆ. ಇಂತಹ ತರಬೇತಿ ನಂತರ ಸರ್ಕಾರ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಅತ್ಯುನ್ನತ ಹುದ್ದೆ ಏರುವ ಅವಕಾಶ ಇದ್ದರೂ ಅದನ್ನು ಆಯ್ಕೆ ಮಾಡಿಕೊಳ್ಳದೇ ಕೃಷಿ ಹಾದಿ ಹಿಡಿದ್ದಾರೆ.

ಕೃಷಿ ಸಾಧನೆಯ ಹಾದಿ
1987ರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆ ಕೃಷಿ ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿ, ಜರ್ಬೆರಾ, ಅಂಥೋರಿಯಂ ಪುಷ್ಪ ಕೃಷಿ, ಸಾವಯವ ಕೃಷಿ, ಹಸಿರು ಮನೆ ಅಳವಡಿಕೆ, ಕೃಷಿ ಭೂಮಿ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ರೈತಾಪಿ ಜನರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಈ ವೃತ್ತಿಯಲ್ಲಿ ಅವರಿಗೆ ಕೃಷಿ ಕ್ಷೇತ್ರದ ಪ್ರಗತಿಯ ಸಂತೃಪ್ತಿಯೂ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಉದ್ಯಮದಲ್ಲಿ ಸಬ್ಸಿಡಿ ಸಂಸ್ಕೃತಿ ಆವರಿಸಿದ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಭೂಮಿಯಲ್ಲಿಯೇ ಕೃಷಿ ಕ್ಷೇತ್ರದ ವೈಭವೀಕರಣ ಉಂಟು ಮಾಡುವ ಉದ್ದೇಶದಿಂದ ಸ್ವಗ್ರಾಮ ಚಿಕ್ಕಲವಾಳ ಗ್ರಾಮ ವ್ಯಾಪ್ತಿಯಲ್ಲಿ 2008ರಲ್ಲಿ ಕೃಷಿಗೆ, ನಿರುಪಯುಕ್ತ ಎನ್ನಬಹುದಾದ 21 ಎಕರೆ ಬರಡು ಭೂಮಿಯನ್ನು ಖರೀದಿಸಿ ಅಭಿವೃದ್ಧಿಪಡಿಸಿದ್ದಾರೆ. ಈಗ ಅದು ನಂದನವನವಾಗಿ ಕಂಗೊಳಿಸುತ್ತಿದೆ.

ಹೊಲದಲ್ಲಿ ಒಂದು ಎಕರೆ ವಿಸ್ತಾರದಲ್ಲಿ 1.30 ಕೋಟಿ ಲೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯದ ತೆರೆದ ನೀರಿನ ಕೊಳ ನಿರ್ಮಿಸಿಕೊಂಡಿದ್ದು, ವೇದಗಂಗಾ ನದಿಯಿಂದ 8,830 ಮೀಟರ್‌ ಕೊಳವೆ ಮಾರ್ಗ ಅಳವಡಿಸಿ ಕೃಷಿಗೆ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಳಿಜಾರು, ತಗ್ಗುದಿನ್ನೆಗಳಿಂದ ಕೂಡಿರುವ ಭೂಮಿಯನ್ನು ಸಮತಟ್ಟೂ ಮಾಡಿಲ್ಲ. ಬೇರೆ ಕಡೆಯಿಂದ ಹಿಡಿ ಮಣ್ಣನ್ನೂ ತಂದು ಹಾಕಿಲ್ಲ. ಇರುವ ಸಹಜ ಭೂಮಿಯಲ್ಲಿಯೇ ಕೃಷಿ ಮಾಡುತ್ತಿದ್ದಾರೆ.

ಆಡುಗಳು, ಹಸುಗಳ ಸಾಕಣೆಯನ್ನೂ ಆರಂಭಿಸಿದ್ದಾರೆ. ಇಡೀ 20 ಎಕರೆ ಭೂಮಿಗೂ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದು, ನಿಯಮಿತವಾಗಿ ನೀರು ಹಾಗೂ ರಸಗೊಬ್ಬರವನ್ನೂ ಹನಿ ನೀರಾವರಿ ಮೂಲಕವೇ ಬೆಳೆಗೆ ನೀಡುತ್ತಾರೆ. ಕಳೆದ ಹಂಗಾಮಿನಲ್ಲಿ ಎಕರೆಯೊಂದಕ್ಕೆ ಸರಾಸರಿ 50 ರಿಂದ 60 ಟನ್‌ ಕಬ್ಬು ಇಳುವರಿ ಪಡೆದಿದ್ದಾರೆ. ಎಕರೆಯೊಂದಕ್ಕೆ ಕಬ್ಬು ಬೆಳೆಸಲು ಇವರು ರೂ.25 ಸಾವಿರದಷ್ಟು ಖರ್ಚು ಮಾಡುತ್ತಾರಂತೆ.

ಅಭಿವೃದ್ಧಿ ಪರಿ
‘2008ರಲ್ಲಿ ಭೂಮಿಯನ್ನು ಖರೀದಿಸಿದಾಗ ನಾಲ್ಕಾರು ಇಂಚು ಅಗೆದರೂ ಕಲ್ಲು ಬಂಡೆಗಳೇ ತಾಗುತ್ತಿದ್ದವು. ಇಂತಹ ಭೂಮಿಯಲ್ಲಿ ನೆಲವನ್ನೇ ಸೀಳುವ ಮಾಗನಿ ಬೇರು ಎಂಬ  ಬೆಳೆ ಹಾಕಿದೆ. ಈ ಬೆಳೆಯಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬಂತಾದರೂ ಭೂಮಿ ಮೃದುವಾಯಿತು. ಜೊತೆಗೆ ತಂಬಾಕು ಬೆಳೆಗೆ ಪರ್ಯಾಯವಾಗಿ ಮಾಗನಿ ಬೇರಿನಿಂದ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಕಲಿತುಕೊಂಡೆ. ಮೇಲಾಗಿ ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಸೃಷ್ಟಿಯಾದರೆ, ಮಾಗನಿ ಬೇರಿನಲ್ಲಿ ಕ್ಯಾನ್ಸರ್‌ ನಿರೋಧಕ ಔಷಧಿ ಗುಣವಿರುವುದರಿಂದ ಈ ಬೆಳೆಯನ್ನು ಬೆಳೆದೆ’ ಎನ್ನುತ್ತಾರೆ ಮಹೇಶ.

ನಂತರದ ವರ್ಷಗಳಲ್ಲಿ ಕಬ್ಬು ಬೆಳೆಯನ್ನು ಆಯ್ದುಕೊಂಡು ಯೋಚನಾಬದ್ಧವಾಗಿ ಕೃಷಿ ಮಾಡತೊಡಗಿದ ಮಹೇಶ, ಅಂತರಬೆಳೆಯಾಗಿ ಸೋಯಾ ಅವರೆಯನ್ನು ಬೆಳೆಯುತ್ತಾರೆ.

‘ಕೃಷಿಯಲ್ಲಿ ಪ್ರಯೋಗಶೀಲತೆ ಇರಲಿ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಯನ್ನೇ ಬೆಳೆಯುವುದು ಅಗತ್ಯ. ಏಕೆಂದರೆ ರೈತ ಬದುಕಬೇಕಾಗಿದೆ. ಕೃಷಿಯಲ್ಲಿ ದೂರದೃಷ್ಟಿ ಇರಬೇಕು. ಯಾವುದೇ ಬೆಳೆ ಬೆಳೆಯುವ ಪೂರ್ವದಲ್ಲಿ ಅದರ ಲಾಭ–ನಷ್ಟ ಅವಲೋಕನ ನಡೆಸಬೇಕು. ಬೆಳೆಗೆ ಹಿತಮಿತವಾಗಿ ನೀರು ಮತ್ತು ಗೊಬ್ಬರ ನೀಡಬೇಕು. ಬೇಸಿಗೆಯಲ್ಲಿ ಕಬ್ಬು ಬೆಳೆಗೆ ಎಕರೆಯೊಂದಕ್ಕೆ ಹನಿ ನೀರಾವರಿ ಮೂಲಕ 7 ಮಿ.ಮಿ, ಅಂದರೆ 28 ರಿಂದ 30 ಸಾವಿರ ಲೀಟರ್ ನೀರು ನೀಡಿದರೆ ಸಾಕು. ತಾವು ಕಬ್ಬಿಗೆ ಹನಿ ನೀರಾವರಿ ಮೂಲಕವೇ ದಿನವೊಂದಕ್ಕೆ 1 ಕೆ.ಜಿ. ಮಾತ್ರವೇ ರಸಗೊಬ್ಬರ ನೀಡುತ್ತೇವೆ. ಇದರಿಂದ ಭೂಮಿಯ ಫಲವತ್ತತೆಯೂ ಹಾಳಾಗುವುದಿಲ್ಲ’ ಎಂಬುದು ಮಹೇಶ ಅವರ ಅನುಭವದ ಮಾತು.

‘ಕೃಷಿ ಅಭಿವೃದ್ಧಿಗಾಗಿ ಬ್ಯಾಂಕ್‌ನ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ಕೃಷಿ ಅಭಿವೃದ್ಧಿಗೆ ಕುತ್ತು ತಂದಾಗ ‘ಹೆಸ್ಕಾಂ’ನ ಮಠಪತಿ ಎಂಬ ಅಧಿಕಾರಿ ವಿಶೇಷ ಮುತುವರ್ಜಿ ವಹಿಸಿ ಕೃಷಿಗಾಗಿಯೇ ಎಕ್ಸ್‌ಪ್ರೆಸ್‌ ಫೀಡರ್‌ವೊಂದನ್ನು ಮಂಜೂರು ಮಾಡಿದ ಪರಿಣಾಮ ತಾವು ಇಲ್ಲಿ ಕೃಷಿ ಪ್ರಗತಿ ಉಂಟು ಮಾಡಲು ಸಾಧ್ಯವಾಯಿತು’ ಎಂದು ಮಹೇಶ ಪಾಟೀಲ ಸ್ಮರಿಸುತ್ತಾರೆ.    

ಹಿಂದೊಂದು ಕಾಲದಲ್ಲಿ ಎಲ್ಲ ವೃತ್ತಿಗಳಲ್ಲಿ ‘ಶ್ರೇಷ್ಠ’ವೆನಿಸಿದ್ದ ಕೃಷಿ ಇಂದು ‘ಕನಿಷ್ಠ ’ ಎಂಬ ಭಾವನೆ ಬೆಳೆದು ಬಿಟ್ಟಿದೆ. ಆದರೆ, ಕಾಲಬದ್ಧ ಮತ್ತು ಕ್ರಮಬದ್ಧವಾಗಿ ತಾಂತ್ರಿಕತೆಯನ್ನು ಒಳಗೊಂಡ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಬರಡು ಭೂಮಿಯಲ್ಲೂ ಬಂಗಾರದ ಬೆಳೆ ಬೆಳೆದು ಕನಿಷ್ಠವೆಂದು ಪರಿಗಣಿಸಲಾಗುತ್ತಿರುವ ಕೃಷಿಯನ್ನು ಮತ್ತೆ ಶ್ರೇಷ್ಠತೆಯ ಉತ್ತುಂಗಕ್ಕೇರಿಸಬಹುದು ಎಂಬುದನ್ನು ಮಹೇಶ ಪಾಟೀಲ ಸಾಧಿಸ ಹೊರಟಿದ್ದಾರೆ. ಸಂಪರ್ಕಕ್ಕೆ : 94220 44498.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT